ಮುಂದಿನ ವರ್ಷದಿಂದ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ವಿತರಣೆ: ಸಚಿವ ಮಧು ಬಂಗಾರಪ್ಪ
Madhu Bangarappa: ಈ ಶೈಕ್ಷಣಿಕ ಸಾಲಿನಿಂದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೂ ಉಚಿತವಾಗಿ ಪಠ್ಯಪುಸ್ತಕ ವಿತರಿಸುತ್ತಿದ್ದೇವೆ. ಮುಂದಿನ ಶೈಕ್ಷಣಿಕ ಸಾಲಿನಿಂದ ಉಚಿತವಾಗಿ ನೋಟ್ ಬುಕ್ ವಿತರಿಸುವ ಉದ್ದೇಶವೂ ಇದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
-
ಶಿವಮೊಗ್ಗ, ಆ.22: ನಗರದ ಸೈನ್ಸ್ ಮೈದಾನದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಸರ್ಕಾರಿ ಪದವಿ ಪೂರ್ವ ಕಾಲೇಜಿನ ʻಕಲಾಂ ಸೆಂಟರ್ʼ ಗೆ ಭೇಟಿ ನೀಡಿ, ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಆತ್ಮೀಯ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ವಿದ್ಯಾರ್ಥಿಗಳೊಂದಿಗೆ ಬೆರೆತು ಅವರ ಮಾತುಗಳನ್ನು ಕೇಳಿಸಿಕೊಂಡೆ. ಶೈಕ್ಷಣಿಕ ಚಟುವಟಿಕೆ, ಕಾಲೇಜಿನಲ್ಲಿ ತಾವು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಧೈರ್ಯವಾಗಿ ಹಂಚಿಕೊಂಡರು. ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲೇ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಕರ್ತವ್ಯ. ಆದರೆ ಎಲ್ಲವನ್ನೂ ಒಮ್ಮೆಲೆ ಮಾಡಲಾಗುವುದಿಲ್ಲ. ಹಂತ ಹಂತವಾಗಿ ರಾಜ್ಯದ ಎಲ್ಲಾ ಶಾಲೆ-ಪಿಯು ಕಾಲೇಜುಗಳಲ್ಲಿಯೂ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡುತ್ತೇವೆ. ಇದಕ್ಕೆ ಅಗತ್ಯ ಎಲ್ಲ ಸೌಕರ್ಯಗಳನ್ನು ಒದಗಿಸುವುದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಈ ಶೈಕ್ಷಣಿಕ ಸಾಲಿನಿಂದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೂ ಉಚಿತವಾಗಿ ಪಠ್ಯಪುಸ್ತಕ ವಿತರಿಸುತ್ತಿದ್ದೇವೆ. ಮುಂದಿನ ಶೈಕ್ಷಣಿಕ ಸಾಲಿನಿಂದ ಉಚಿತವಾಗಿ ನೋಟ್ ಬುಕ್ ವಿತರಿಸುವ ಉದ್ದೇಶವೂ ಇದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದೆ. ಇದನ್ನು ಕೇಳಿ ಅವರು ಖುಷಿಪಟ್ಟರು ಎಂದು ತಿಳಿಸಿದರು.
Analogue Paneer Ban: ಕರ್ನಾಟಕದಲ್ಲಿ ಕೃತಕ ಪನೀರ್ ತಯಾರಿಕೆ, ಮಾರಾಟ ನಿಷೇಧ: ರಾಜ್ಯ ಸರ್ಕಾರ ಆದೇಶ
ಮಕ್ಕಳೊಂದಿಗೆ ಸಂವಾದ ನಡೆಸುವುದು ನನಗೆ ಯಾವಾಗಲೂ ಖುಷಿಯ ವಿಷಯ. ನಾವು ನಿರೀಕ್ಷಿಸದೇ ಇರುವ ಪ್ರಶ್ನೆ, ಸಮಸ್ಯೆಗಳನ್ನು ಅವರು ನಮ್ಮ ಮುಂದಿಡುತ್ತಾರೆ. ಲವಲವಿಕೆಯ ವಾತಾವರಣ ನಿರ್ಮಿಸುತ್ತಾರೆ. ಇಂದು ಕೂಡ ಅದೇ ಆಯಿತು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.