Vastu Tips: ಮನೆಯ ಯಾವ ದಿಕ್ಕಿನಲ್ಲಿ ಅಕ್ವೇರಿಯಂ ಇಡುವುದು ಶುಭ?
ವಾಸ್ತು ಶಾಸ್ತ್ರದಲ್ಲಿ ಅಕ್ವೇರಿಯಂಗೆ ವಿಶೇಷ ಮಹತ್ವವಿದೆ. ಇದನ್ನು ಮನೆಯಲ್ಲಿಟ್ಟರೆ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಮೀನುಗಳನ್ನುಇಡಲು ಅನೇಕ ನಿಯಮಗಳಿದೆ. ಎಷ್ಟು ಮೀನುಗಳು ಇರಬೇಕು, ಯಾವ ದಿಕ್ಕಿನಲ್ಲಿ ಇಡಬೇಕು ? ಮುಂತಾದ ನಿಮ್ಮ ಗೊಂದಲಗಳಿಗೆ ಇಲ್ಲಿದೆ ಉತ್ತರ.

ಅಕ್ವೇರಿಯಂ.

ಬೆಂಗಳೂರು: ವಾಸ್ತು ಶಾಸ್ತ್ರದಲ್ಲಿ ಮನೆಯ ಸಂತೋಷ, ಸಮೃದ್ಧಿ, ಯಶಸ್ಸು ಮತ್ತು ಧನಾತ್ಮಕ ಶಕ್ತಿಗಾಗಿ ವಿವಿಧ ಪರಿಹಾರಗಳನ್ನು ವಿವರಿಸಲಾಗಿದೆ. ವಾಸ್ತು ಪ್ರಕಾರ ಕೆಲವು ನಿರ್ದಿಷ್ಟ ವಸ್ತುಗಳನ್ನು ನಿರ್ದಿಷ್ಟ ದಿಕ್ಕಿನಲ್ಲಿಟ್ಟರೆ ಮನೆಗೆ ಒಳ್ಳೆಯದಾಗುತ್ತದೆ ಎಂದು ಉಲ್ಲೇಖಿಸಲಾಗಿದೆ (Vastu Tips). ಮನೆಯಲ್ಲಿಡುವ ಒಂದೊಂದು ವಸ್ತುಗಳ ವಾಸ್ತುವಿನ ಮೇಲೆ ಆ ಗೃಹದ ಸುಖ, ಶಾಂತಿ, ನೆಮ್ಮದಿ, ಅದೃಷ್ಟ ಅವಲಂಬಿತ ಎಂಬ ನಂಬಿಕೆ ಇದ್ದು, ಕೆಲವೊಂದು ವಸ್ತುಗಳನ್ನು ಮನೆಯಲ್ಲಿಟ್ಟರೆ ಅದು ಕುಟುಂಬ ಸದಸ್ಯರಿಗೆ ಧನಾತ್ಮಕ ಶಕ್ತಿಯನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಅಂತಹ ವಸ್ತುಗಳ ಪೈಕಿ ನಾವು ಮನೆಯ ಅಲಂಕಾರಕ್ಕೆಂದು ಇಡುವ ಅಕ್ವೇರಿಯಂ ಕೂಡ ಒಂದಾಗಿದ್ದು, ಮನೆಯಲ್ಲಿ ಮೀನುಗಳ ಟ್ಯಾಂಕ್ ಇಡುವುದು ತುಂಬಾ ಅದೃಷ್ಟ ಎಂದು ಪರಿಗಣಿಸಲಾಗುತ್ತದೆ.
ಹೌದು, ಮನೆಯ ಅಂದ ಹೆಚ್ಚಿಸಲು ಬಳಸುವ ಫಿಶ್ ಬೌಲ್ ಅಥವಾ ಅಕ್ವೇರಿಯಂಗೂ ವಿಶೇಷ ಮಹತ್ವವಿದೆ. ವಾಸ್ತು ಶಾಸ್ತ್ರದಲ್ಲಿ, ಮನೆಯಲ್ಲಿ ಮೀನಿನ ಅಕ್ವೇರಿಯಂ ಇಡುವುದು ತುಂಬಾ ಮಂಗಳಕರವೆಂದು ಹೇಳಲಾಗುತ್ತದೆ. ಇದರಿಂದ ಮನೆಯಲ್ಲಿನ ಅನೇಕ ಸಮಸ್ಯೆಗಳು ನಿವಾರಣೆ ಆಗಲಿದ್ದು, ಸುಖ, ಸಮೃದ್ಧಿ, ಸಂಪತ್ತು ನೆಲೆಸುತ್ತದೆ ಎಂದು ನಂಬಲಾಗಿದೆ. ಆದರೆ ಇದನ್ನು ಸರಿಯಾದ ದಿಕ್ಕಿನಲ್ಲಿ ಇಡಬೇಕಾಗಿದ್ದು ಬಹಳ ಮುಖ್ಯ. ಹಾಗಾದ್ರೆ ವಾಸ್ತು ಪ್ರಕಾರ ಫಿಶ್ ಅಕ್ವೇರಿಯಂ ಯಾವ ದಿಕ್ಕಿನಲ್ಲಿಡಬೇಕು? ಅಕ್ವೇರಿಯಂ ಇಡುವಾಗ ಯಾವೆಲ್ಲ ನಿಯಮಗಳನ್ನು ಪಾಲಿಸಬೇಕು? ಇಲ್ಲಿದೆ ಮಾಹಿತಿ.
ಈ ದಿಕ್ಕುಗಳಲ್ಲಿ ಅಕ್ವೇರಿಯಂ ಇಡುವುದು ಶುಭ
ವಾಸ್ತು ಪ್ರಕಾರ ಅಕ್ವೇರಿಯಂ ಅನ್ನು ಮನೆಯ ಪೂರ್ವ ದಿಕ್ಕಿನಲ್ಲಿ ಅಥವಾ ಉತ್ತರ ದಿಕ್ಕಿನಲ್ಲಿ ಇಡಬಹುದಾಗಿದೆ. ಪೂರ್ವ ದಿಕ್ಕಿನಲ್ಲಿ ಅಕ್ವೇರಿಯಂ ಇಟ್ಟರೆ ಜೀವನದಲ್ಲಿ ಸಂತೋಷ ಸಿಗಲಿದೆ. ಜತೆಗೆ ಮನೆಯಲ್ಲಿ ಉತ್ತಮ ವಾತಾವರಣ ಇರಲಿದೆ. ಹಾಗೇ ಉತ್ತರ ದಿಕ್ಕಿನಲ್ಲಿ ಅಕ್ವೇರಿಯಂ ಇಡುವುದರಿಂದ ವೃತ್ತಿ ಜೀವನ ಅಭಿವೃದ್ಧಿಯಾಗಲಿದ್ದು, ಕೆಲಸ ಕಾರ್ಯಗಳಲ್ಲಿ ಪ್ರಗತಿ ಲಭಿಸುತ್ತದೆ ಎನ್ನಲಾಗಿದೆ.
ತಪ್ಪಿಯೂ ಈ ದಿಕ್ಕಿನಲ್ಲಿ ಇಡಬೇಡಿ
ವಾಸ್ತು ಪ್ರಕಾರ ಮಲಗುವ ಕೋಣೆಯಲ್ಲಿ ಅಕ್ವೇರಿಯಂ ಇಡಲೇಬಾರದು. ಅಕ್ವೇರಿಯಂ ಬೆಡ್ ರೂಮಲ್ಲಿ ಇಟ್ಟರೆ ಅಶಾಂತಿ ಉಂಟಾಗಲಿದ್ದು, ವೈವಾಹಿಕ ಜೀವನಕ್ಕೆ ತೊಂದರೆ ಉಂಟಾಗಬಹುದಾಗಿದೆ. ಅಲ್ಲದೇ ತಪ್ಪು ದಿಕ್ಕಿನಲ್ಲಿ ಅಕ್ವೇರಿಯಂಗಳನ್ನು ಇರಿಸಿಸುವುದರಿಂದ ದುರದೃಷ್ಟ ಬೆನ್ನತ್ತಲಿದ್ದು, ಅಡುಗೆಮನೆಯಲ್ಲಿಯೂ ಅಕ್ವೇರಿಯಂಗಳನ್ನು ಇಡಬಾರದು. ಒಂದು ವೇಳೆ ಇಟ್ಟರೆ ಮನೆಯ ಸದಸ್ಯರಿಗೆ ಅನಾರೋಗ್ಯ ಸಮಸ್ಯೆ ಕಾಡಲಿದೆ.
Vastu Tips: ಮನೆಯ ಈ ದಿಕ್ಕಿನಲ್ಲಿ ನವಿಲುಗರಿ ಇಟ್ಟರೆ ಒಲಿಯುತ್ತದೆ ಅದೃಷ್ಟ; ಆದ್ರೆ ವಾಸ್ತು ನಿಯಮ ತಪ್ಪದೇ ಪಾಲಿಸಿ
ನೀರನ್ನು ಬದಲಾಯಿಸುವುದು ಅವಶ್ಯ
ಅಕ್ವೇರಿಯಂನಲ್ಲಿನ ನೀರನ್ನು ಆಗಾಗ ಬದಲಾಯಿಸುವುದು ಅತ್ಯವಶ್ಯವಾಗಿದ್ದು, ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಅದರಲ್ಲಿ ನೀರಿನ ಖಾಲಿಯಾಗದಂತೆ ಹಾಗೂ ಮಲೀನವಾಗದಂತೆ ನೋಡಿಕೊಳ್ಳಿ. ಒಂದು ಪಕ್ಷ ಅಕ್ವೇರಿಯಂನಲ್ಲಿ ನೀರಿನ ಹರಿವು ನಿಂತರೆ ಇದು ಆರ್ಥಿಕ ಪ್ರಗತಿ ಮೇಲೆ ಪರಿಣಾಮವನ್ನು ಬೀರುವುದಲ್ಲದೆ, ತೀವ್ರ ಸಂಕಷ್ಟ ತಂದೊಡ್ಡಬಲ್ಲದು. ಇದರೊಳಗೆ ಪಾಚಿ ಕಟ್ಟಲು ಬಿಡಬಾರದು. ಹಾಗಾದರೆ ಮಾಡುವ ಪ್ರತಿಯೊಂದು ಕೆಲಸದಲ್ಲೂ ಅಡಚಣೆಯನ್ನು ಎದುರಿಸಬೇಕಾದೀತು.
ಎಷ್ಟು ಮೀನುಗಳಿರಬೇಕು?
ಅಕ್ವೇರಿಯಂನಲ್ಲಿ ಎಷ್ಟು ಮೀನುಗಳಿರಬೇಕು ಎಂಬುದನ್ನು ಸಹ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿತವಾಗಿದೆ. ಬೆಸ ಸಂಖ್ಯೆಯಲ್ಲಿ ಮೀನುಗಳಿದ್ದರೆ ಶುಭವೆಂದು ಪರಿಗಣಿಸಲಾಗುತ್ತದೆ. 9 ಮೀನುಗಳನ್ನಿಟ್ಟರೆ ಬಹಳ ಒಳ್ಳೆಯದು ಎನ್ನಲಾಗಿದ್ದು, ಇವುಗಳಲ್ಲಿ 8 ಗೋಲ್ಡ್ ಫಿಶ್, 1 ಬ್ಲ್ಯಾಕ್ ಫಿಶ್ ಇರಬೇಕು. ಇದರಿಂದ ಪಾಸಿಟಿವ್ ಎನರ್ಜಿ ಹೆಚ್ಚಲಿದೆ.