Roopa Gururaj Column: ನರಿಯ ಕ್ರೌರ್ಯವೇ ಅದರ ಜಾಣತನ
Roopa Gururaj Column: ನರಿಯ ಕ್ರೌರ್ಯವೇ ಅದರ ಜಾಣತನ
Ashok Nayak
December 30, 2024
ಒಂದೊಳ್ಳೆ ಮಾತು
ರೂಪಾ ಗುರುರಾಜ್
ಒಮ್ಮೆ ಸಿಂಹಕ್ಕೆ ಜೋರಾಗಿ ಹಸಿವೆಯಾಯ್ತು, ಪಕ್ಕದಲ್ಲಿದ್ದ ನರಿಯೊಂದಿಗೆ ಹೇಳಿತು: ‘ನನಗೇನಾದರು ತಿನ್ನಲು ತಂದು ಕೊಡು, ಇಲ್ಲದಿದ್ದರೆ ನಾನು ನಿನ್ನನ್ನು ಕೊಂದು ತಿನ್ನುತ್ತೇನೆ.’ ನರಿ ನೇರ ಒಂದು ಕತ್ತೆಯ ಬಳಿ ಹೋಗಿಹೇಳಿತು: ‘ಸಿಂಹ ನಿನ್ನನ್ನು ರಾಜನನ್ನಾಗಿ ಮಾಡ್ತಾನಂತೆ, ಬಾ ನನ್ನ ಜೊತೆ.’ ಕತ್ತೆಯನ್ನು ಕಂಡಾಗ ಸಿಂಹ ಅದರಮೇಲೆ ಆಕ್ರಮಿಸಿತು, ಕಿವಿಯನ್ನು ಕಚ್ಚಿ ಕತ್ತರಿಸಿತು, ಆದರೆ ಕತ್ತೆ ಹೇಗೋ ತಪ್ಪಿಸಿಕೊಂಡು ಅಲ್ಲಿಂದ ಓಡಿ ಹೋಯಿತು… ಕತ್ತೆ ನರಿಯೊಂದಿಗೆ ಕೇಳಿತು, ‘ನೀನು ನನಗೆ ಮೋಸ ಮಾಡಿ ಬಿಟ್ಟೆ ಅಲ್ವಾ?…!’ ನರಿ ಹೇಳಿತು: ‘ಮುಠ್ಠಾಳನಂತೆ ಮಾತಾಡ್ಬೇಡ, ನಿನ್ನ ತಲೆಗೆ ಕಿರೀಟ ತೊಡಿಸಲು ನಿನ್ನ ಕಿವಿಯನ್ನು ಕತ್ತರಿಸಿದ್ದು.’ ಕತ್ತೆ ಅದುಸತ್ಯವಾಗಿರಬಹುದು ಎಂದು ಭಾವಿಸಿ ಮತ್ತೆ ಸಿಂಹದ ಬಳಿ ಹೋಯಿತು…
ಸಿಂಹ ಪುನಃ ಕತ್ತೆಯನ್ನು ಆಕ್ರಮಿಸಿ ಕಚ್ಚಿ ಬಾಲವನ್ನು ಕತ್ತರಿಸಿ ಹಾಕಿತು..! ಕತ್ತೆ ಮತ್ತೊಮ್ಮೆ ಪಾರಾಗಿ ಹೋಗಿ ನರಿಯೊಂದಿಗೆ ಕೇಳಿತು ‘ನೀನು ನನ್ನಲ್ಲಿ ಸುಳ್ಳು ಹೇಳಿದ್ದಲ್ವಾ?!…’ ನರಿ ಹೇಳಿತು: ‘ಅಯ್ಯೋ ಪೆದ್ದುಮುಂಡೇದು, ನಿನಗೆಸಿಂಹಾಸನದಲ್ಲಿ ಆರಾಮವಾಗಿ ಕುಳಿತುಕೊಳ್ಳಲು ಬೇಕಾಗಿ ತಾನೇ ನಿನ್ನ ಬಾಲವನ್ನು ಕತ್ತರಿಸಿದ್ದು…’ಕತ್ತೆ ವಾಪಸ್ ಸಿಂಹದ ಬಳಿ ಹೋಗುವಂತೆ ಮನವೊಲಿಸಿತು ನರಿ… ಈಗ ಸಿಂಹ ಕತ್ತೆಯನ್ನು ಹಿಡಿದುಕೊಂದು ಹಾಕಿತು…!
ಸಿಂಹ ನರಿಯೊಂದಿಗೆ ಹೇಳಿತು: ‘ನೀನು ಒಳ್ಳೆಯ ಕೆಲಸ ಮಾಡಿದೆ, ವೆಲ್‌ಡನ್, ಇನ್ನು ಹೋಗಿ ಇದರ ಚರ್ಮ ಸುಲಿದು ತಾ…’ ನರಿ ಕತ್ತೆಯ ಚರ್ಮ ಸುಲಿದು, ಕತ್ತೆಯ ಮೆದುಳನ್ನು ತಿಂದು ಅದರ ಹೃದಯ, ಕರುಳು, ಶ್ವಾಸಕೋಶವನ್ನು ಸಿಂಹದ ಮುಂದೆ ತಂದಿಟ್ಟಿತು… ಸಿಂಹ ಕೋಪದಿಂದ ಕೇಳಿತು: ‘ಇದರ ಮೆದುಳು ಎಲ್ಲಿ…?’ ನರಿ ಉತ್ತರಿಸಿತು: ‘ಅದಕ್ಕೆ ಮೆದುಳು ಎಂಬುದು ಇರಲಿಲ್ಲ ಪ್ರಭು… ಅದು ಇದ್ದಿದ್ದರೆ ಕಿವಿ ಬಾಲ ಕಚ್ಚಿ ಕತ್ತರಿಸಿದ ನಂತರವೂ ನಿಮ್ಮ ಬಳಿ ವಾಪಸ್ ಬರ್ತಿತ್ತಾ?’ ಸಿಂಹ ನರಿಯ ಮಾತಿಗೆ ತಲೆದೂಗಿ ಸುಮ್ಮನಾಯಿತು.
ಕೆಲವರು ತಮ್ಮ ಜೀವನದಲ್ಲಿ ಬದುಕುವುದೇ ಮತ್ತೊಬ್ಬರನ್ನು ಬಲಿಪಶುವಾಗಿಸುವುದರ ಮೂಲಕ. ಅವರಿಗೆ ಅದರ ಬಗ್ಗೆ ಯಾವ ಪಾಪ ಪ್ರeಯೂ ಇರುವುದಿಲ್ಲ. ಅವರು ತಮ್ಮ ಮೋಸದ ವಂಚನೆಯ ಜಾಲವನ್ನು ಅದೆಷ್ಟುಆತ್ಮವಿಶ್ವಾಸದಿಂದ ಅಮಾಯಕರ ಮೇಲೆ ಬೀಸುತ್ತಾರೆ ಎಂದರೆ, ಅವರ ಸವಿಯಾದ ನಡವಳಿಕೆ ಮತ್ತು ಮಾತಿಗೆ ಜನರು ಸೋತೆ ಹೋಗುತ್ತಾರೆ. ಸಂಪೂರ್ಣವಾಗಿ ಅವರಿಂದ ಹಾಳಾಗುವವರೆಗೆ ಆ ಜನರಿಗೆ ಎಚ್ಚೆತ್ತುಕೊಳ್ಳಲು ಸಾಧ್ಯವೇ ಆಗುವುದಿಲ್ಲ. ಪ್ರತಿ ಬಾರಿ ತಪ್ಪು ಮಾಡಿದಾಗಲೂ ಅದಕ್ಕೆ ಸರಿಯಾದ ಸಮಜಾಯಿಸಿಕೊಡುವ ತಾಕತ್ತು ಅವರಿಗಿರುತ್ತದೆ. ಅವರು ಸುಳ್ಳುಗಳನ್ನು ಅದೆಷ್ಟು ಖಂಡಿತವಾಗಿ ಹೇಳುತ್ತಾರೆ ಎಂದರೆ ಎಂತಹವರಿಗೂ ಅವರ ವಾದ ಸರಿಯನಿಸಬೇಕು.
ಹೀಗಾಗಿಯೇ ಒಮ್ಮೆ ಮೋಸ ಹೋದವರು ಮತ್ತೆ ಮತ್ತೆ ಅವರ ಬಳಿ ಮೋಸ ಹೋಗುತ್ತಾರೆ. ನೆನಪಿಡಿ ವಿತಂಡವಾದ, ಅನಗತ್ಯವಾಗಿ ನಮಗೆ ಒಳಿತು ಮಾಡುವ ನಮ್ಮನ್ನು ಜೀವನದಲ್ಲಿ ಮೇಲೇರಿಸುವ ಯಾರದೇ ಪ್ರಯತ್ನ ಅವರ ಸ್ವಂತ ಲಾಭವಿಲ್ಲದೆ ಇರುವುದಿಲ್ಲ. ಆ ದಾರಿಯಲ್ಲಿ ನಮಗೇನಾದರೂ ಹಾನಿಯಾಯಿತೋ ಅದನ್ನು ನಮ್ಮ ತಪ್ಪು ಎಂದು ನಮ್ಮ ತಲೆಗೆ ಹೊರೆಸಿ, ನುಣುಚಿಕೊಳ್ಳುವ ಜಾಣತನ ಅವರಿಗಿರುತ್ತದೆ.
ಯಾವುದೇ ಸಂಬಂಧವನ್ನು ಅತಿಯಾಗಿ ನಂಬಬಾರದು. ಒಮ್ಮೆ ಯಾರಾದರೂ ನಮಗೆ ಕೇಡುಂಟು ಮಾಡಿದರೆ ದ್ರೋಹ ಬಗೆದರೆ, ಅವರನ್ನು ಜೀವನದಲ್ಲಿ ಮತ್ತೆಂದೂ ನಂಬಬಾರದು. ಕೆಟ್ಟವರು ಗೊತ್ತಿದ್ದು ಕೆಟ್ಟತನ ಮಾಡು ವವರು ತಿದ್ದುಕೊಳ್ಳುವ ಅವಕಾಶಗಳು ಇಲ್ಲವೇ ಇಲ್ಲ. ಅವರಿಗೆ ಅವರ ಕೆಟ್ಟತನವೇ ಒಂದು ಚಟ ವಾಗಿರುತ್ತದೆ. ಅದಕ್ಕೆ ಯಾರನ್ನು ಬಲಿಕೊಡಲು ಕೂಡ ಅವರು ಹಿಂದೆ ಮುಂದೆ ಯೋಚಿಸುವುದಿಲ್ಲ. ಕಷ್ಟಪಟ್ಟು ಕಟ್ಟಿಕೊಂಡ ಜೀವನವನ್ನು ಮತ್ತೊಬ್ಬರ ಸ್ವಾರ್ಥಕ್ಕಾಗಿ ಹಾಳು ಮಾಡಿಕೊಳ್ಳದೆ ಜಾಣತನದಿಂದ ಬದುಕೋಣ.
ಇದನ್ನೂ ಓದಿ: #RoopaGururaj