ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani Editorial: ಗೃಹಜ್ಯೋತಿ ಸಮೀಕ್ಷೆ ಗೊಂದಲ

ಆಧಾರ್ ಕಾರ್ಡ್, ಫೋಟೋ, ವೋಟರ್ ಐಡಿ, ಮನೆ ಬಾಡಿಗೆ ಅಥವಾ ಮಾಲಿಕತ್ವದ ದಾಖಲೆ ನೀಡಬೇಕಿದೆ. ಆದರೆ ಜಾತಿ ಪ್ರಮಾಣ ಪತ್ರ ಹಾಗೂ ಪ್ಯಾನ್ ಕಾರ್ಡ್‌ಗಳನ್ನು ಕೂಡ ಅಗತ್ಯ ದಾಖಲೆಗಳ ಪಟ್ಟಿಯಲ್ಲಿ ಸೇರಿಸಿರುವುದು ಅನುಮಾನ ಮೂಡಿಸುತ್ತಿದೆ. ಎಸ್ಕಾಂನವರು ಪ್ಯಾನ್ ಕಾರ್ಡ್ ವಿವರ ತೆಗೆದುಕೊಂಡು ಏನು ಮಾಡಬೇಕಿದೆ? ತೆರಿಗೆ ಪಾವತಿದಾರರನ್ನು ಯೋಜನೆಯಿಂದ ಹೊರಗಿ ಡುವ ಚಿಂತನೆ ಇದೆಯೇ ಎಂಬುದನ್ನು ಸರಕಾರ ಸ್ಪಷ್ಟಪಡಿಸಿಲ್ಲ.

Vishwavani Editorial: ಗೃಹಜ್ಯೋತಿ ಸಮೀಕ್ಷೆ ಗೊಂದಲ

-

Profile
Ashok Nayak Jul 23, 2026 6:00 AM

ರಾಜ್ಯದಲ್ಲಿ ‘ಗೃಹಜ್ಯೋತಿ ಯೋಜನೆ’ಯ ಫಲಾನುಭವಿಗಳ ಸಮೀಕ್ಷೆ ನಡೆಯುತ್ತಿದೆ. ಆದರೆ ಬಹುತೇಕ ಮಂದಿಗೆ ಈ ಬಗ್ಗೆ ತಿಳಿದೇ ಇಲ್ಲ. ಇನ್ನೊಂದು ಕಡೆ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಡೆಯುತ್ತಿದ್ದು, ಹೆಚ್ಚಿನ ಮಂದಿ ಅದನ್ನು ಸರಿಪಡಿಸುವ ಧಾವಂತದಲ್ಲಿ ಇರುವಾಗಲೇ, ಗೃಹಜ್ಯೋತಿ ಪಟ್ಟಿಯ ಸಮೀಕ್ಷೆಯನ್ನು ತರಾತುರಿಯಲ್ಲಿ ಮುಗಿಸಲು ಸರಕಾರ ಮುಂದಾಗಿದೆ.

ಇದಕ್ಕೆ ಡೆಡ್‌ಲೈನ್ ಆಗಿ ಜುಲೈ 30ನ್ನು ನಿಗದಿಪಡಿಸಲಾಗಿದೆಯಾದರೂ, ಇದರ ಬಗ್ಗೆ ಹೆಚ್ಚಿನವರಿಗೆ ಅರಿವಿಲ್ಲ ಎಂಬುದೇ ಈ ಸಮೀಕ್ಷೆಯ ಉದ್ದೇಶವನ್ನು ಪ್ರಶ್ನಿಸುವಂತೆ ಮಾಡಿದೆ. ಅರಿವು ಮೂಡಿಸ ಬೇಕಾದ ಎಸ್ಕಾಂ ಅಧಿಕಾರಿಗಳು ಕೂಡ ಈ ಬಗ್ಗೆ ಮುಗುಂ ಆಗಿದ್ದಾರೆ. ಮೊದಲು ಗೃಹಲಕ್ಷ್ಮಿ ಯೋಜನೆಯ ಸಮೀಕ್ಷೆಯಾಯಿತು, ಇದೀಗ ಗೃಹಜ್ಯೋತಿ. ನಕಲಿ ಫಲಾನುಭವಿಗಳು ಇದ್ದಾರೆ ಎಂಬುದು ಸರಕಾರದ ಅಂಬೋಣ ಮತ್ತದನ್ನು ಸರಿಪಡಿಸಬೇಕಿರುವುದು ಸರಕಾರದ ಹೊಣೆ ಕೂಡ.

ಆದರೆ ಫಲಾನುಭವಿಗಳನ್ನು ಕತ್ತಲಲ್ಲಿಟ್ಟು ಸಮೀಕ್ಷೆ ನಡೆಸುತ್ತಿರುವುದು ಯಾಕೋ ತಿಳಿಯುತ್ತಿಲ್ಲ. ಎಸ್ಕಾಂ ಸಿಬ್ಬಂದಿ ಮನೆಮನೆಗೆ ಭೇಟಿ ನೀಡಿ ಅಗತ್ಯ ದಾಖಲೆ ಪರಿಶೀಲಿಸಬೇಕು. ಆದರೆ ಬಹಳಷ್ಟು ಗ್ರಾಹಕರ ಬಳಿಗೆ ಯಾರೂ ಭೇಟಿ ನೀಡಿಲ್ಲ. ಜುಲೈ 1ರಿಂದ ಸಮೀಕ್ಷೆ ಶುರುವಾಗಿದ್ದು, ಇನ್ನೂ ಶೇ.50ರಷ್ಟು ಕೂಡ ಆಗಿಲ್ಲ.

ಇದನ್ನೂ ಓದಿ: Gruha Jyothi Scheme: ಗೃಹ ಜ್ಯೋತಿ ಯೋಜನೆ; ಬಾಡಿಗೆದಾರರು ಆತಂಕ ಪಡಬೇಕಾಗಿಲ್ಲ: ಬೆಸ್ಕಾಂ ಸ್ಪಷ್ಟನೆ

ಆಧಾರ್ ಕಾರ್ಡ್, ಫೋಟೋ, ವೋಟರ್ ಐಡಿ, ಮನೆ ಬಾಡಿಗೆ ಅಥವಾ ಮಾಲಿಕತ್ವದ ದಾಖಲೆ ನೀಡಬೇಕಿದೆ. ಆದರೆ ಜಾತಿ ಪ್ರಮಾಣ ಪತ್ರ ಹಾಗೂ ಪ್ಯಾನ್ ಕಾರ್ಡ್‌ಗಳನ್ನು ಕೂಡ ಅಗತ್ಯ ದಾಖಲೆ ಗಳ ಪಟ್ಟಿಯಲ್ಲಿ ಸೇರಿಸಿರುವುದು ಅನುಮಾನ ಮೂಡಿಸುತ್ತಿದೆ. ಎಸ್ಕಾಂನವರು ಪ್ಯಾನ್ ಕಾರ್ಡ್ ವಿವರ ತೆಗೆದುಕೊಂಡು ಏನು ಮಾಡಬೇಕಿದೆ? ತೆರಿಗೆ ಪಾವತಿದಾರರನ್ನು ಯೋಜನೆಯಿಂದ ಹೊರಗಿ ಡುವ ಚಿಂತನೆ ಇದೆಯೇ ಎಂಬುದನ್ನು ಸರಕಾರ ಸ್ಪಷ್ಟಪಡಿಸಿಲ್ಲ.

ಸದ್ಯ ರಾಜ್ಯದ ಬಹುತೇಕ ಎಲ್ಲ ಜನತೆ ಫಲಾನುಭವಿಗಳಾಗಿರುವ ಗ್ಯಾರಂಟಿ ಯೋಜನೆಯೆಂದರೆ ಗೃಹಜ್ಯೋತಿ ಮಾತ್ರ. ಇದೀಗ, ಗ್ರಾಹಕರು ದಾಖಲೆ ನೀಡಲು ನಿರಾಕರಿಸಬಹುದು, ಅಂಥದೊಂದು ಅವಕಾಶವನ್ನು ಅರ್ಜಿಯಲ್ಲಿ ನೀಡಲಾಗಿದೆಯಂತೆ. ಆದರೆ ಅದಕ್ಕೆ ಕಠಿಣ ಶರತ್ತು ಇದೆ. ಅಂಥವರಿಗೆ ಸಿಗುವ ಉಚಿತ ವಿದ್ಯುತ್ ಸೌಲಭ್ಯವನ್ನು ತಕ್ಷಣವೇ ಸ್ಥಗಿತಗೊಳಿಸಲಾಗುತ್ತದಂತೆ.

ಇದೊಂದು ಚೋದ್ಯವೇ ಸರಿ. ಸೌಲಭ್ಯ ಕಡಿತಗೊಳಿಸುವ ಇರಾದೆ ಇದ್ದರೆ, ಅದಕ್ಕೊಂದು ಮಾನ ದಂಡ ನಿಗದಿಪಡಿಸಬೇಕು. ಈ ರೀತಿ ಒಮ್ಮೆ ಉಚಿತವಾಗಿ ಎಲ್ಲ ಒದಗಿಸುತ್ತೇವೆ ಎನ್ನುವುದು, ಗ್ಯಾರಂಟಿಯ ಭಾರದಿಂದ ಖಜಾನೆ ತತ್ತರಿಸ ತೊಡಗಿದಾಗ ಫಲಾನುಭವಿಗಳ ಸಂಖ್ಯೆ ಕಡಿತ ಮಾಡಲು ಉಪಕ್ರಮ ಹಮ್ಮಿಕೊಳ್ಳುವುದು ಸರಿಯಲ್ಲ. ಇದು ಒಟ್ಟಾರೆ ಗ್ಯಾರಂಟಿಯ ಆಶಯವನ್ನೇ ಮಣ್ಣುಪಾಲು ಮಾಡುತ್ತದೆ.