ಪ್ರಜಾಸೇವೆಯಲ್ಲಿ ದಕ್ಷತೆ ಬೇಕು
ಇಲಾಖೆಗೆ ಪ್ರತ್ಯೇಕ ಸಚಿವರು, ಸಚಿವಾಲಯ, ಅಧಿಕಾರಿಗಳು ಇರುತ್ತಾರೆ. ಈಗಿರುವ ಸಕಾಲ, ಇ- ಆಡಳಿತ ದಂತಹ ಇಲಾಖೆಗಳನ್ನು ಇದರಲ್ಲಿ ವಿಲೀನಗೊಳಿಸುವ ಇರಾದೆ ಇದೆ. ಇದರ ಹಿಂದಿರುವ ಉದ್ದೇಶ ಉತ್ತಮವಾಗಿದೆ. ಯಾವುದೇ ಇಲಾಖೆಗೆ ಹೋದರೂ ಅಲ್ಲಿ ಕೆಲಸವಾಗದೆ ಬಳಲುವ, ಕೆಲಸ ಮಾಡಿಸಿ ಕೊಳ್ಳಲು ಕಂಬ ಕಂಬ ಸುತ್ತುವ, ಲಂಚ ನೀಡಿದರೂ ಕೆಲಸವಾಗದ ಜನಸಾಮಾನ್ಯರನ್ನು ಕಾಣಬಹುದು.
-
ರಾಜ್ಯದಲ್ಲಿ ‘ಪ್ರಜಾಸೇವೆ’ ಎಂಬ ಪ್ರತ್ಯೇಕ ಇಲಾಖೆಯನ್ನು ಆರಂಭಿಸಲು ಸರಕಾರ ಮುಂದಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ದೊರೆತಿದೆ. ಸರಕಾರದ ಮಟ್ಟದಲ್ಲಿ ಹಾಗೂ ಅ ಧಿಕಾರಿಗಳ ಮಟ್ಟದಲ್ಲಿ ಅಹವಾಲು ಹೊತ್ತುಕೊಂಡು ಬರುವ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವುದು, ಪ್ರತಿಭಟನೆಗಳ ಉಪಶಮನ, ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ಬರುವ ಸಮಸ್ಯೆಗಳನ್ನು ಎತ್ತಿಕೊಂಡು ಅವುಗಳಿಗೆ ತಾರ್ಕಿಕ ಪರಿಹಾರ ಒದಗಿಸುವುದು ಈ ಇಲಾಖೆ ಯ ಗುರಿ.
ಇಲಾಖೆಗೆ ಪ್ರತ್ಯೇಕ ಸಚಿವರು, ಸಚಿವಾಲಯ, ಅಧಿಕಾರಿಗಳು ಇರುತ್ತಾರೆ. ಈಗಿರುವ ಸಕಾಲ, ಇ- ಆಡಳಿತದಂತಹ ಇಲಾಖೆಗಳನ್ನು ಇದರಲ್ಲಿ ವಿಲೀನಗೊಳಿಸುವ ಇರಾದೆ ಇದೆ. ಇದರ ಹಿಂದಿರುವ ಉದ್ದೇಶ ಉತ್ತಮವಾಗಿದೆ. ಯಾವುದೇ ಇಲಾಖೆಗೆ ಹೋದರೂ ಅಲ್ಲಿ ಕೆಲಸವಾಗದೆ ಬಳಲುವ, ಕೆಲಸ ಮಾಡಿಸಿಕೊಳ್ಳಲು ಕಂಬ ಕಂಬ ಸುತ್ತುವ, ಲಂಚ ನೀಡಿದರೂ ಕೆಲಸವಾಗದ ಜನಸಾಮಾನ್ಯರನ್ನು ಕಾಣಬಹುದು.
ಇದನ್ನೂ ಓದಿ: Vishwavani Editorial: ಪೊಲೀಸ್ ಇಲಾಖೆಗೆ ಬೇಕು ಸುಧಾರಣೆ
ಪ್ರಭಾವ ಹಾಗೂ ಲಂಚ ಇಲ್ಲದೆ ಯಾವುದೇ ಸರಕಾರಿ ಕೆಲಸ ಇಂದು ಮಾಡಿಸಿಕೊಳ್ಳಲು ಸಾಧ್ಯ ವಾಗುತ್ತದೆ ಎಂಬುದೇ ಅನುಮಾನಾಸ್ಪದ. ಹೀಗಿರುವಾಗ, ಪ್ರಜೆಗಳ ಸೇವೆಗಾಗಿಯೇ ಒಂದು ಇಲಾಖೆ, ಮಂತ್ರಿ ಹಾಗೂ ಸಿಬ್ಬಂದಿ ಎಂಬುದು ಏಕಕಾಲಕ್ಕೆ ಒಂದು ಆದರ್ಶವಾಗಿ, ಅದೇ ಕಾಲಕ್ಕೆ ವ್ಯಂಗ್ಯ ವಾಗಿಯೂ ಕಾಣಿಸುತ್ತದೆ.
ಸಕಾಲದಂಥ ವ್ಯವಸ್ಥೆಗಳು ಬಂದುದೇ ಇಂಥ ಹಲವು ಸಮಸ್ಯೆಗಳಿಗೆ ಏಕಕಿಂಡಿ ವ್ಯವಸ್ಥೆಯಾಗಿ ಕೆಲಸ ಮಾಡಲೆಂದು. ಕಾಲಮಿತಿಯಲ್ಲಿ ಕೆಲಸ ಮಾಡುವುದು, 100ಕ್ಕೂ ಹೆಚ್ಚು ಇಲಾಖೆಗಳ ಸೇವೆ ನೀಡುವುದು ಇದರ ಗುರಿಯಾಗಿತ್ತು. ಆದರೆ ಸಕಾಲಕ್ಕೆ ದುಷ್ಕಾಲ ಆವರಿಸಿತು. ಅದರ ಅನುಷ್ಠಾನ ಸರಿಯಾಗದೆ ಅದು ಮಣ್ಣುಗೂಡುವಂತಾಯಿತು. ಇವುಗಳ ಅಂಗವಾಗಿ ತಂದ ಕಾವೇರಿ, ಭೂಮಿ ಮೊದಲಾದ ತಂತ್ರಾಂಶಗಳದೂ ಇದೇ ಕತೆ.
ಸಾರ್ವಜನಿಕರ ಕೈಗೆ ಗರಿಷ್ಠ ಅಧಿಕಾರ ನೀಡಿದ ಮಾಹಿತಿ ಹಕ್ಕು ಕಾಯಿದೆಯನ್ನೂ ನಿಧಾನವಾಗಿ ಮಣ್ಣು ಮಾಡಲಾಗಿದೆ. ಹೀಗಿರುವಾಗ, ಹೊಸ ಖಾತೆಯ ಮೇಲೆ ಜನಸಾಮಾನ್ಯರು ಯಾವ ಕಾರಣ ದಿಂದ ಭರವಸೆ ಇಟ್ಟುಕೊಳ್ಳಬೇಕು ಎಂಬುದು ತಿಳಿಯದಾಗಿದೆ. ದಕ್ಷ ಸಚಿವರು, ದಕ್ಷ ಅಧಿಕಾರಿಗಳು ಇದ್ದಾಗ ಇಂಥ ಆಶಯಗಳಿಗೆ ಚೈತನ್ಯ ನೀಡಬಹುದು. ನಮ್ಮಲ್ಲಿ ಜನಸೇವೆಯ ಕಾಯಿದೆಗಳಿಗೆ ಬರವಿಲ್ಲ.
ಅನುಷ್ಠಾನದ್ದೇ ಸಮಸ್ಯೆ. ಪ್ರತ್ಯೇಕ ಮಂತ್ರಿ, ಸಚಿವಾಲಯ ಇತ್ಯಾದಿಗಳ ಮೂಲಕ ಕಾಲಕ್ರಮೇಣ ಇದೊಂದು ಬಿಳಿಯಾನೆ ಆಗದೇ ಇದ್ದರೆ ಸಾಕು. ಹೆಸರಿಗೆ ತಕ್ಕಂತೆ ಸೇವೆ ನೀಡುವ ಬದ್ಧತೆ ಈ ಕಾರ್ಯಕ್ರಮದ್ದಾಗಿರಲಿ. ದಕ್ಷ ಕೈಗಳಲ್ಲಿ ಈ ವ್ಯವಸ್ಥೆಯನ್ನು ಕೊಡಿ. ಪರಿವರ್ತನೆ ಹಿಂಬಾಲಿಸುತ್ತದೆ.