ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಿಡದಿ ರೈತರ ಹಿತ ಮುಖ್ಯ

ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಯೋಜನೆಯನ್ನು ವಿರೋಧಿಸಿ ರೈತರ ಬೆನ್ನಿಗೆ ನಿಂತಿವೆ. ರಾಹುಲ್ ಗಾಂಧಿಗೆ ಪತ್ರ ಚಳುವಳಿ ನಡೆಯುತ್ತಿದೆ. ವಿಚಿತ್ರ ಎಂದರೆ, ಅಧಿಕಾರದಲ್ಲಿದ್ದಾಗ ಇದೇ ಯೋಜನೆಯನ್ನು ಜೆಡಿಎಸ್ ಹಾಗೂ ಬಿಜೆಪಿ ಅನುಮೋದಿಸಿದ್ದವು. ಅಂದರೆ, ಯೋಜನೆಯ ಕುರಿತ ವಿರೋಧ ರಾಜಕೀಯ ನೆಲೆಯಲ್ಲಿಯಷ್ಟೇ ನಡೆಯುತ್ತಿದೆ ಎಂದು ಅರ್ಥವಾಗುತ್ತದೆ.

ಬಿಡದಿ ರೈತರ ಹಿತ ಮುಖ್ಯ

-

Profile
Ashok Nayak Jun 19, 2026 1:18 PM

ಬಿಡದಿ ಟೌನ್‌ಶಿಪ್ ವಿಚಾರ ರಾಜಕೀಯ ಪಕ್ಷಗಳ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿದೆ. ಹೊಸ ಸಚಿವ ಸಂಪುಟ ಇನ್ನೂ ಸಂಪೂರ್ಣವಾಗಿ ಕಾರ್ಯಾಚರಿಸಲು ಮುನ್ನವೇ, ಬಿಡದಿ ಟೌನ್‌ಶಿಪ್‌ನ ಸಮರ್ಥನೆಗೆ ನಿಂತಿದೆ. ರಾಜ್ಯ ಸರಕಾರ ಯೋಜನಾ ವ್ಯಾಪ್ತಿಯ 9 ಕಂದಾಯ ಗ್ರಾಮಗಳ ಪೈಕಿ ಪ್ರಾರಂಭಿಕವಾಗಿ 3 ಗ್ರಾಮಗಳ 518 ಎಕರೆ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಪ್ರಕಟ ಮಾಡಿದೆ.

ರೈತರು ಸೂಕ್ತ ದಾಖಲೆ ಸಲ್ಲಿಸಿ ಪರಿಹಾರ ಪಡೆದುಕೊಳ್ಳುವಂತೆ ನಗರಾಭಿವೃದ್ಧಿ ಇಲಾಖೆ ಸೂಚನೆ ನೀಡಿದ್ದು, ಪ್ರತಿ ಎಕರೆಗೆ ಕನಿಷ್ಠ 2.14 ಕೋಟಿ ರೂ. ದರ ನಿಗದಿ ಮಾಡಿದೆ. ಭೂಮಿ ನೀಡುವ ರೈತರಿಗೆ ಹಣ ಹಾಗೂ ಅಭಿವೃದ್ಧಿ ಮಾಡಿದ ಜಾಗ ನೀಡುವ ಭರವಸೆ ನೀಡಿದೆ. ಆದರೆ ಕಳೆದ ಒಂದೂವರೆ ವರ್ಷದಿಂದ ಅನೇಕ ರೈತರು ಈ ಯೋಜನೆಯನ್ನು ವಿರೋಧಿಸಿ ಹೋರಾಡುತ್ತಿದ್ದಾರೆ.

ಇದನ್ನೂ ಓದಿ:Bidadi Township: ಬಿಡದಿ ಟೌನ್‌ಶಿಪ್‌ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ: ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್

ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಯೋಜನೆಯನ್ನು ವಿರೋಧಿಸಿ ರೈತರ ಬೆನ್ನಿಗೆ ನಿಂತಿವೆ. ರಾಹುಲ್ ಗಾಂಧಿಗೆ ಪತ್ರ ಚಳುವಳಿ ನಡೆಯುತ್ತಿದೆ. ವಿಚಿತ್ರ ಎಂದರೆ, ಅಧಿಕಾರದಲ್ಲಿದ್ದಾಗ ಇದೇ ಯೋಜನೆಯನ್ನು ಜೆಡಿಎಸ್ ಹಾಗೂ ಬಿಜೆಪಿ ಅನುಮೋದಿಸಿದ್ದವು. ಅಂದರೆ, ಯೋಜನೆಯ ಕುರಿತ ವಿರೋಧ ರಾಜಕೀಯ ನೆಲೆಯಲ್ಲಿಯಷ್ಟೇ ನಡೆಯುತ್ತಿದೆ ಎಂದು ಅರ್ಥವಾಗುತ್ತದೆ.

ಪಕ್ಷಗಳು ತಮಗೆ ಲಾಭವಾಗುವಂತೆ ಯೋಜನೆಯನ್ನು ಸಮರ್ಥಿಸುವುದು ಅಥವಾ ವಿರೋಧಿ ಸುವುದು ಅರ್ಥಹೀನ. ಈ ಸಂದರ್ಭದಲ್ಲಿ ರೈತರ ಹಿತಾಸಕ್ತಿಗೆ ಏನಾಗುತ್ತಿದೆ ಎಂದು ನೋಡಬೇಕು. ಟೌನ್‌ಶಿಪ್ ಯೋಜನೆಯಲ್ಲಿ ಏನು ಮಾಡಲಾಗುತ್ತಿದೆ, ಇದರಿಂದ ಸ್ಥಳೀಯರಿಗೆ ನಿಜವಾಗಿಯೂ ಹಿತವಿದೆಯೇ, ಭೂಮಿ ಕಳೆದುಕೊಳ್ಳುವ ರೈತರಿಗೆ ಸೂಕ್ತ ಪರಿಹಾರ ಹಾಗೂ ಪರ್ಯಾಯ ಜಾಗ ಸಿಗುತ್ತದೆಯೇ, ಸ್ಥಳದಲ್ಲಿ ಯೋಜಿತ ಅಭಿವೃದ್ಧಿ ಆಗಲಿದೆಯೇ, ಸ್ಥಳೀಯರಿಗೆ ಕೆಲಸ ಸಿಗುತ್ತದೆಯೇ ಎಂಬಿತ್ಯಾದಿ ವಿಚಾರಗಳು ಚರ್ಚೆ ಆಗಬೇಕು ಹಾಗೂ ಸ್ಥಳೀಯರ, ರೈತರ ಹಿತವನ್ನು ಕಾಯ್ದು ಕೊಳ್ಳುವ ಕೆಲಸ ಆಗಬೇಕು.

ಟೌನ್‌ಶಿಪ್ ಯೋಜನೆ ಎಂದ ಮೇಲೆ ರಿಯಾಲ್ಟಿ ಕ್ಷೇತ್ರದ ಬೆಳವಣಿಗೆಯಾಗಿ ಲ್ಯಾಂಡ್ ಮಾಫಿಯಾ ಪ್ರವೇಶವಾಗಲಿದೆ. ಇದು ದುರ್ಬಲ ರೈತರ ಹಿತಾಸಕ್ತಿಗೆ ಹಾನಿಕರ. 60:40 ಅನುಪಾತದಲ್ಲಿ ರೈತರ ಹಿತ ಕಾಯ್ದುಕೊಳ್ಳಲಾಗುವುದು ಎಂದು ಸರಕಾರ ಹೇಳಿದೆ. ಇದು ಕಾಗದದ ಮೇಲಿನ ಅಂಕಿಅಂಶವಷ್ಟೇ ಆಗಬಾರದು. ಹಾಗೆಯೇ ರಾಜ್ಯದ ಇತರ ಕಡೆಗಳಲ್ಲಿ ಭೂಮಾಫಿಯಾದಿಂದ ಕಿರುಕುಳಕ್ಕೆ ಒಳಗಾಗು ತ್ತಿರುವ ಸಣ್ಣ ಜಮೀನುದಾರರ ಕುರಿತೂ ಸರಕಾರ ಕಾಳಜಿ ವಹಿಸಬೇಕು. ಅಭಿವೃದ್ಧಿಯ ಹೆಸರಿನಲ್ಲಿ ವಿನಾಶ ಹಿಂಬಾಲಿಸಬಾರದು. ಇಲ್ಲಿ ಆಗಮಿಸುವ ಕೈಗಾರಿಕೆಗಳು ಸ್ಥಳೀಯ ನೆಲಜಲದಸುರಕ್ಷತೆ ಕಾಪಾಡಿಕೊಳ್ಳುವಂತೆ ಸರಕಾರ ಹೆಚ್ಚಿನ ಆಸ್ಥೆ ವಹಿಸಬೇಕು.