ತೇರ್ಗಡೆಯೊಂದೇ ಗುರಿಯಾಗದಿರಲಿ
ಅಂಕಗಳ ಇಳಿಕೆ ಕೇವಲ ಅಂಕಿಅಂಶಗಳ ಏರಿಕೆಗೆ ಸೀಮಿತವಾಗಬಾರದು, ವಿದ್ಯಾರ್ಥಿಗಳಿಗೆ ಅಗತ್ಯ ವಿರುವ ವಿಷಯಾಧಾರಿತ eನವನ್ನು ನೀಡುವಲ್ಲಿ ನಮ್ಮ ಶಿಕ್ಷಣ ಕೊರತೆಯಾಗಿ ಕಾಡಬಾರದು. ಸ್ಫರ್ಧಾ ತ್ಮಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಕಠಿಣ ಪರಿಶ್ರಮ, ಓದು ಅತ್ಯಗತ್ಯ. ನೆರೆಯ ಆಂಧ್ರಪ್ರದೇಶ, ತೆಲಂಗಾಣ, ತಮಿಳು ನಾಡು, ಕೇರಳದಂತಹ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಯುವ ಸಮೂಹ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹಿಂದುಳಿದಿರುವುದು ತಿಳಿಯದ ವಿಷಯವೇನಲ್ಲ.
-
ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ನಡೆಸಿದ ಪಿಯುಸಿ ಪರೀಕ್ಷೆಯಲ್ಲಿ ಈ ಬಾರಿ ದಾಖಲೆ ಪ್ರಮಾಣದ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ತೇರ್ಗಡೆಗೆ ಅಗತ್ಯವಿರುವ ಕನಿಷ್ಠ ಅಂಕಗಳನ್ನು ಶೇಕಡಾ 35 ರಿಂದ 33ಕ್ಕೆ ಇಳಿಸಿರುವುದು ಇದಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಿ ಸಲಾಗಿದೆ.
ಶಿಕ್ಷಣ ಸಚಿವರು, ಆಯಾ ಜಿಲ್ಲೆಯ ಶಿಕ್ಷಣ ಅಧಿಕಾರಿಗಳು ಮತ್ತು ಬೋಧಕ ವೃಂದಕ್ಕೆ ಇದು ಸಂತಸದ ಸಂಗತಿಯಾಗಿರಬಹುದು. ಆದರೆ ಇದರ ಆಳವಾದ ಪರಿಣಾಮಗಳ ಬಗ್ಗೆ ಅವಲೋಕನ ಅಗತ್ಯ. ಕನಿಷ್ಠ ಅಂಕಗಳ ಇಳಿಕೆಯು ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವರದಾನವಾಗಿದೆ.
ಕೇವಲ ಎರಡು ಅಂಕಗಳ ಅಂತರದಲ್ಲಿ ಅನುತ್ತೀರ್ಣರಾಗಿ ಶಿಕ್ಷಣವನ್ನು ಅರ್ಧಕ್ಕೆ ಬಿಡುತ್ತಿದ್ದ ಮಕ್ಕಳ ಸಂಖ್ಯೆಯನ್ನು ತಗ್ಗಿಸಲು ಇದು ನೆರವಾಗಿದೆ. ಇದು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ತುಂಬುವ ಜೊತೆಗೆ, ಅವರು ಮುಂದಿನ ವೃತ್ತಿಪರ ತರಬೇತಿ ಅಥವಾ ಪದವಿ ಶಿಕ್ಷಣಕ್ಕೆ ಸೇರ್ಪಡೆ ಗೊಳ್ಳಲು ದಾರಿಯಾಗಿದೆ.
ಇದನ್ನೂ ಓದಿ: Vishwavani Editorial: ವಿನಾಶಕಾರಿ ಯುದ್ಧ ನಿಲ್ಲಲಿ
ಆದರೆ, ಕೇವಲ ತೇರ್ಗಡೆ ಪ್ರಮಾಣವನ್ನು ಹೆಚ್ಚಿಸುವುದೇ ಶಿಕ್ಷಣದ ಅಂತಿಮ ಗುರಿಯಾಗಬಾರದು. ತೇರ್ಗಡೆಯ ಮಾನದಂಡಗಳನ್ನು ಸಡಿಲಗೊಳಿಸುವುದರಿಂದ ವಿದ್ಯಾರ್ಥಿಗಳಲ್ಲಿ ಕಠಿಣ ಪರಿಶ್ರಮ ಪಡುವ ಮನೋಭಾವ ಕುಂಠಿತವಾಗುವ ಅಪಾ ಯವಿದೆ. ಪಿಯುಸಿಯಲ್ಲಿ ಸುಲಭವಾಗಿ ಉತ್ತೀರ್ಣ ರಾದ ವಿದ್ಯಾರ್ಥಿಗಳು ಪದವಿ ಅಥವಾ ತಾಂತ್ರಿಕ ಶಿಕ್ಷಣದ ಕಠಿಣ ಪಠ್ಯಕ್ರಮವನ್ನು ಎದುರಿಸಲು ಸಮರ್ಥರಿದ್ದಾರೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಅಂಕಗಳ ಇಳಿಕೆ ಕೇವಲ ಅಂಕಿಅಂಶಗಳ ಏರಿಕೆಗೆ ಸೀಮಿತವಾಗಬಾರದು, ವಿದ್ಯಾರ್ಥಿಗಳಿಗೆ ಅಗತ್ಯ ವಿರುವ ವಿಷಯಾಧಾರಿತ ಜ್ಞಾನ ನೀಡುವಲ್ಲಿ ನಮ್ಮ ಶಿಕ್ಷಣ ಕೊರತೆಯಾಗಿ ಕಾಡಬಾರದು. ಸ್ಫರ್ಧಾ ತ್ಮಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಕಠಿಣ ಪರಿಶ್ರಮ, ಓದು ಅತ್ಯಗತ್ಯ. ನೆರೆಯ ಆಂಧ್ರಪ್ರದೇಶ, ತೆಲಂಗಾಣ, ತಮಿಳು ನಾಡು, ಕೇರಳದಂತಹ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಯುವ ಸಮೂಹ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹಿಂದುಳಿದಿರುವುದು ತಿಳಿಯದ ವಿಷಯವೇನಲ್ಲ.
ಸರಕಾರ ತೇರ್ಗಡೆ ಅಂಕಗಳನ್ನು ಇಳಿಸಿರುವುದನ್ನು ಕೇವಲ ಒಂದು ತಾತ್ಕಾಲಿಕ ಉಪಶಮನವಾಗಿ ನೋ ಡಬೇಕು. ನಿಜವಾದ ಸುಧಾರಣೆ ಬರಬೇಕಿರುವುದು ಬೋಧನಾ ಕ್ರಮದಲ್ಲಿ. ಶಾಲಾ ಹಂತದ ಗುಣಮಟ್ಟದ ಶಿಕ್ಷಣ ನೀಡಿದ್ದಲ್ಲಿ, ಇಂತಹ ರಿಯಾ ಯಿತಿಗಳ ಅಗತ್ಯವೇ ಇರುವುದಿಲ್ಲ. ಶಿಕ್ಷಣದ ಗುರಿ ಕೇವಲ ‘ಪಾಸು’ ಮಾಡು ವುದಾಗಿರದೆ, ವಿದ್ಯಾರ್ಥಿಯನ್ನು ಬದುಕಿಗೆ ಸಿದ್ಧಪಡಿಸುವುದಾಗಿರಬೇಕು. ಅಂಕಗಳ ಪಟ್ಟಿಯಲ್ಲಿರುವ ಏರಿಕೆ, ವಿದ್ಯಾರ್ಥಿಯ ಜ್ಞಾನದ ಮಟ್ಟದಲ್ಲೂ ಪ್ರತಿಫಲಿಸಿದಾಗ ಮಾತ್ರ ಈ ನೀತಿ ಅರ್ಥಪೂರ್ಣವಾಗುತ್ತದೆ.