ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani Editorial: ನ್ಯಾಯಾಂಗ ಸುಧಾರಣೆ

ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಅಗಾಧ ಪ್ರಮಾಣದ ಪ್ರಕರಣಗಳ ಹಿನ್ನೆಲೆಯಲ್ಲಿ, ಅವು ಗಳನ್ನು ಸೂಕ್ತ ಅವಧಿಯ ಒಳಗೆ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಈ ಕ್ರಮಗಳು ಉಪಯುಕ್ತವಾಗಿವೆ. ಸುಪ್ರೀಂ ಕೋರ್ಟ್, ಹೈಕೋರ್ಟ್‌ಗಳು ಹಾಗೂ ಅಧೀನ ನ್ಯಾಯಾಲಯಗಳಲ್ಲಿ 2 ದಶಕಗಳಿಂದ 11.73 ಲಕ್ಷಕ್ಕೂ ಅಧಿಕ ಪ್ರಕರಣಗಳು ಇತ್ಯರ್ಥ ಆಗದೆ ಬಾಕಿ ಉಳಿದಿವೆ.

Vishwavani Editorial: ನ್ಯಾಯಾಂಗ ಸುಧಾರಣೆ

-

Profile
Ashok Nayak Sep 7, 2026 10:42 AM

ಜಿಲ್ಲಾ ನ್ಯಾಯಾಲಯಗಳ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು 60 ರಿಂದ 62 ವರ್ಷಗಳಿಗೆ ಏರಿಕೆ ಮಾಡುವಂತೆ ಸುಪ್ರೀಂ ಕೋರ್ಟ್ ಏಳು ರಾಜ್ಯಗಳಿಗೆ ನಿರ್ದೇಶನ ನೀಡಿದೆ. ಅನುಭವಿ ಹಾಗೂ ಪ್ರತಿಭಾವಂತ ನ್ಯಾಯಾಧೀಶರ ನಿರ್ಗಮನವನ್ನು ತಡೆಗಟ್ಟುವುದು ಹಾಗೂ ನ್ಯಾಯದ ಲಭ್ಯತೆ ಯನ್ನು ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿದೆ ಎಂಬುದನ್ನು ಗಮನಿಸಿ ಸುಪ್ರೀಂ ಕೋರ್ಟ್ ಈ ಸೂಚನೆ ನೀಡಿದೆ. ಕರ್ನಾಟಕವೂ ಈ ಆದೇಶದ ವ್ಯಾಪ್ತಿಯಲ್ಲಿ ಬರಲಿದೆ.

ಉಚ್ಚ ನ್ಯಾಯಾಲಯದಿಂದ ಮಾನ್ಯತೆ ಪಡೆದ ನಂತರ ಜಡ್ಜ್‌ಗಳು ಈ ಅವಧಿ ವಿಸ್ತರಣೆ ಪಡೆಯ ಲಿದ್ದಾರೆ. ನ್ಯಾಯಾಂಗವನ್ನು ಬಲಿಷ್ಠಪಡಿಸುವಲ್ಲಿ ಇದು ಇನ್ನೊಂದು ನಡೆ. ಇತ್ತೀಚೆಗೆ, ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಕಾಯ್ದೆಗೆ ತಿದ್ದುಪಡಿ ತಂದು, ನ್ಯಾಯಾಧೀಶರ ಸಂಖ್ಯೆಯನ್ನು 33ರಿಂದ 37ಕ್ಕೆ ಹೆಚ್ಚಿಸಲಾಗಿತ್ತು.

ಇದನ್ನೂ ಓದಿ: Transfer of Judges: ರಾಜ್ಯಾದ್ಯಂತ 365 ನ್ಯಾಯಾಧೀಶರ ವರ್ಗಾವಣೆ

ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಅಗಾಧ ಪ್ರಮಾಣದ ಪ್ರಕರಣಗಳ ಹಿನ್ನೆಲೆಯಲ್ಲಿ, ಅವುಗಳನ್ನು ಸೂಕ್ತ ಅವಧಿಯ ಒಳಗೆ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಈ ಕ್ರಮಗಳು ಉಪಯುಕ್ತ ವಾಗಿವೆ. ಸುಪ್ರೀಂ ಕೋರ್ಟ್, ಹೈಕೋರ್ಟ್‌ಗಳು ಹಾಗೂ ಅಧೀನ ನ್ಯಾಯಾಲಯಗಳಲ್ಲಿ 2 ದಶಕ ಗಳಿಂದ 11.73 ಲಕ್ಷಕ್ಕೂ ಅಧಿಕ ಪ್ರಕರಣಗಳು ಇತ್ಯರ್ಥ ಆಗದೆ ಬಾಕಿ ಉಳಿದಿವೆ.

ಭಾರತದಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಗೆ ಸುಮಾರು 19 ನ್ಯಾಯಾಧೀಶರಿದ್ದಾರೆ. ಇದು ಅಗತ್ಯಕ್ಕಿಂತ ತೀರಾ ಕಡಿಮೆ. ಸರಕಾರವೇ ಅತಿ ದೊಡ್ಡ ದಾವೆದಾರನಾಗಿದ್ದು, ಹಲವು ಬಾರಿ ಕ್ರಮಗಳನ್ನು ವಿಳಂಬಗೊಳಿಸುತ್ತದೆ ಅಥವಾ ಅಂತ್ಯವಿಲ್ಲದಂತೆ ಮೇಲ್ಮನವಿಗಳನ್ನು ಸಲ್ಲಿಸುತ್ತಲೇ ಇರುತ್ತದೆ. ವರ್ಷಗಳು ಅಥವಾ ದಶಕಗಳ ಕಾಲ ಕಾಯಬೇಕಾದ ಪರಿಸ್ಥಿತಿಯಿಂದಾಗಿ, ಸಂತ್ರಸ್ತರಿಗೆ ನ್ಯಾಯ ತಡವಾಗಿ ದೊರೆಯುತ್ತದೆ ಅಥವಾ ಅವರ ಜೀವಿತಾವಧಿಯಲ್ಲಿ ದೊರೆಯುವುದೇ ಇಲ್ಲ. ತಡವಾಗಿ ಸಿಕ್ಕ ನ್ಯಾಯ, ನ್ಯಾಯವೇ ಅಲ್ಲ ಎಂಬ ಮಾತಿದೆ.

ವಿಚಾರಣಾಧೀನ ಕೈದಿಗಳಾಗಿರುವ ಲಕ್ಷಾಂತರ ಮಂದಿ ದೀರ್ಘಕಾಲದವರೆಗೆ ಜೈಲಿನಲ್ಲಿಯೇ ಇದ್ದು ತಮ್ಮ ಅಮೂಲ್ಯವಾದ ಬದುಕಿನ ಅವಧಿಯನ್ನು ಕಳೆದುಕೊಳ್ಳುತ್ತಾರೆ. ವಕೀಲರ ಶುಲ್ಕ ಹಾಗೂ ನ್ಯಾಯಾಲಯದ ಅಲೆದಾಟಕ್ಕಾಗಿ ಕೋಟಿಗಟ್ಟಲೆ ಹಣ ವ್ಯಯಿಸಲಾಗುತ್ತದೆ. ಇದು ಸಾಮಾನ್ಯ ಮನುಷ್ಯರ ಮಾನಸಿಕತೆಯ ಮೇಲೆ ಬೀರುವ ದುಷ್ಪರಿಣಾಮ ಊಹಿಸಲೂ ಆಗದು. ಇದೆಲ್ಲವೂ ಈ ಜಡ್ಜ್‌ಗಳ ಅವಧಿ ವಿಸ್ತರಣೆಯಿಂದ ಪರಿಹಾರ ಆಗುತ್ತದೆ ಎಂದಲ್ಲ. ಆದರೆ ಪೆಂಡಿಂಗ್ ಕೇಸುಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಮಾಡುವಲ್ಲಿ, ಸೂಕ್ತ ಸಮಯದಲ್ಲಿ ನ್ಯಾಯದ ಲಭ್ಯತೆಯಲ್ಲಿ ಇದು ನೆರವಾದೀತು ಎನ್ನುವ ವಿಶ್ವಾಸ.