ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani Editorial: ಸಂಪುಟ ವಿಸ್ತರಿಸಲಿ

ಪ್ರಸ್ತುತ 34 ಸದಸ್ಯರ ಸಾಮರ್ಥ್ಯ ಇರುವ ಸಚಿವ ಸಂಪುಟದಲ್ಲಿ ಕೇವಲ 13 ಮಂದಿ ಸಚಿವರಷ್ಟೇ ಖಾತೆಗಳ ಹೊಣೆಗಾರಿಕೆ ವಹಿಸಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಇಬ್ಬರು ಹೊಸಬರು ಹಾಗೂ ಉಳಿದವರು ಹಳಬರು. ಒಬ್ಬೊಬ್ಬರ ಬಳಿ ಎರಡು ಮೂರು ಖಾತೆಗಳಿವೆ. ಕೃಷಿ ಮತ್ತು ಶಿಕ್ಷಣದಂಥ ಪ್ರಮುಖ ಇಲಾಖೆಗಳಿಗೆ ಇನ್ನೂ ಪೂರ್ಣಾವಧಿ ಸಚಿವರ ನೇಮಕ ಆಗಿಲ್ಲ. ಈ ಖಾತೆಗಳು ಮುಖ್ಯಮಂತ್ರಿ ಯ ಬಳಿಯೇ ಇವೆ. ಜಿಲ್ಲೆಗೊಬ್ಬರಂತೆ ಉಸ್ತುವಾರಿ ಸಚಿವರನ್ನು ನೇಮಿಸಬೇಕಾಗಿತ್ತು

Vishwavani Editorial: ಸಂಪುಟ ವಿಸ್ತರಿಸಲಿ

-

Profile
Ashok Nayak Jul 6, 2026 6:00 AM

ಡಿ.ಕೆ ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಒಂದು ತಿಂಗಳು ಪೂರೈಸಿ ದ್ದಾರೆ. ರಾಜ್ಯದ ಜನತೆ ಮಳೆಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದರೆ, ಶಾಸಕರು ಸಚಿವ ಸಂಪುಟ ವಿಸ್ತರಣೆಗಾಗಿ ಹಾಗೆಯೇ ಕಾಯುತ್ತಿದ್ದಾರೆ. ಅನುಭವಿಯಾದರೂ ಸಚಿವ ಸಂಪುಟ ವಿಸ್ತರಣೆ ಡಿಕೆಶಿ ಅವರಿಗೆ ಸವಾಲೇ ಆಗಿದೆ.

ಪ್ರಸ್ತುತ 34 ಸದಸ್ಯರ ಸಾಮರ್ಥ್ಯ ಇರುವ ಸಚಿವ ಸಂಪುಟದಲ್ಲಿ ಕೇವಲ 13 ಮಂದಿ ಸಚಿವರಷ್ಟೇ ಖಾತೆಗಳ ಹೊಣೆಗಾರಿಕೆ ವಹಿಸಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಇಬ್ಬರು ಹೊಸಬರು ಹಾಗೂ ಉಳಿದವರು ಹಳಬರು. ಒಬ್ಬೊಬ್ಬರ ಬಳಿ ಎರಡು ಮೂರು ಖಾತೆಗಳಿವೆ. ಕೃಷಿ ಮತ್ತು ಶಿಕ್ಷಣದಂಥ ಪ್ರಮುಖ ಇಲಾಖೆಗಳಿಗೆ ಇನ್ನೂ ಪೂರ್ಣಾವಧಿ ಸಚಿವರ ನೇಮಕ ಆಗಿಲ್ಲ. ಈ ಖಾತೆಗಳು ಮುಖ್ಯಮಂತ್ರಿಯ ಬಳಿಯೇ ಇವೆ. ಜಿಲ್ಲೆಗೊಬ್ಬರಂತೆ ಉಸ್ತುವಾರಿ ಸಚಿವರನ್ನು ನೇಮಿಸಬೇಕಾಗಿತ್ತು.

ಇದನ್ನೂ ಓದಿ: Vishwavani Editorial: ಕ್ವಾರಿಗಳನ್ನು ಪರಿಶೀಲಿಸಿ

ಪ್ರಸ್ತುತ ಒಬ್ಬೊಬ್ಬರ ಬಳಿ ಎರಡು ಮೂರು ಜಿಲ್ಲೆಗಳಿವೆ. ಇವೆಲ್ಲವೂ ಸರಕಾರದ ಆಡಳಿತಾತ್ಮಕ ಸಾಮರ್ಥ್ಯವನ್ನು ಸದ್ಯಕ್ಕೆ ಕುಂಠಿತಗೊಳಿಸಿವೆ. ಸರಕಾರದ ಮುಂದೆ ಈಗಿರುವ ಕಠಿಣ ಸವಾಲು ಎಂದರೆ ರಾಜ್ಯದಲ್ಲಿರುವ ಬರ ಪರಿಸ್ಥಿತಿ. ಜೂನ್‌ನಲ್ಲಿ ಶೇ.30ರಷ್ಟೇ ಮಳೆಯಾಗಿದೆ. ಜುಲೈನಲ್ಲೂ ಮಳೆ ಕೊರತೆ ಖಚಿತವಾಗಿದೆ. ಕೆಲವು ಕಡೆ ಮಾತ್ರ ಪ್ರವಾಹ ಪರಿಸ್ಥಿತಿ ಕಂಡುಬಂದಿದೆ. ಈ ಅಸಮಾನ ಪರಿಸ್ಥಿತಿ ಹಾಗೂ ಮಳೆ ಕೊರತೆಯಿಂದ ಅಣೆಕಟ್ಟುಗಳಲ್ಲಿ ತಲೆದೋರಿರುವ ನೀರಿನ ಸಂಗ್ರಹದ ಕೊರತೆ ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ರೈತರಿಗೂ ಇತರೆಲ್ಲರಿಗೂ ಸಂಕಷ್ಟಮಯ ಪರಿಸ್ಥಿತಿ ತಂದೊಡ್ಡಲಿದೆ.

ಬರಗಾಲ ನಿಭಾಯಿಸಲು ಕೇಂದ್ರದಿಂದ ಪರಿಹಾರ ತರಬೇಕಿದೆ. ಉಲ್ಬಣಗೊಳ್ಳಬಹುದಾದ ಕಾವೇರಿ ನೀರಿನ ಸಮಸ್ಯೆ ನಿಭಾಯಿಸಲು ಚತುರ ನೀರಾವರಿ ತಜ್ಞರು, ಅಧಿಕಾರಿಗಳನ್ನು ಮುಂದಿಟ್ಟುಕೊಂಡು ಕಾರ್ಯವಿಧಾನ ರೂಪಿಸಬೇಕು. ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಗೊಂದಲಗಳಿದ್ದು, ಅದನ್ನು ಸರಿಪಡಿಸಬೇಕಿದೆ. ಬಿಡದಿಯಲ್ಲಿ ಕೈಗೊಂಡಿರುವ ಟೌನ್‌ಶಿಪ್ ಯೋಜನೆ ಗೊಂದಲದ ಗೂಡಾಗಿದ್ದು, ರೈತರ ವಿರೋಧವನ್ನು ಪರಿಗಣಿಸಿ ಪರಿಹರಿಸಬೇಕಿದೆ.

ಒಬ್ಬ ಮಂತ್ರಿ ಹಲವು ಖಾತೆಗಳನ್ನು ನಿರ್ವಹಿಸಲು ಪ್ರಯತ್ನಿಸಿದರೆ ಗೊಂದಲಗಳೇ ಹೆಚ್ಚಬಹುದು. ಸಚಿವರ ಮೇಲ್ವಿಚಾರಣೆ ಇಲ್ಲದೆ ಹೋದರೆ ಅಧಿಕಾರಿಗಳು ಆಡಿದ್ದೇ ಆಟ ಆಗುತ್ತದೆ. ಈಗ ಇದು ಕಾಂಗ್ರೆಸ್ ಸಮಸ್ಯೆಯಾಗಿಯಷ್ಟೇ ಉಳಿಯದೆ, ರಾಜ್ಯದ ಸಮಸ್ಯೆ ಆಗಿದೆ. ಹೀಗಾಗಿ ತಮ್ಮ ಮುಂದಿನ ಬಣ ರಾಜಕೀಯವನ್ನೆಲ್ಲ ನಿವಾರಿಸಿಕೊಂಡು, ರಾಜ್ಯದ ಜನತೆಯ ಹಿತದೃಷ್ಟಿಯಿಂದ ಸಚಿವ ಸಂಪುಟ ವಿಸ್ತರಣೆಯನ್ನು ಆದ್ಯತೆಯಾಗಿ ಮಾಡಿ ಮುಗಿಸುವ ಹೊಣೆ ಮುಖ್ತಮಂತ್ರಿಗಳದ್ದಾಗಿದೆ.