Vishwavani Editorial: ಎಸ್‌ಐಆರ್ ಸುಗಮವಾಗಲಿ
ರಾಜ್ಯದಲ್ಲಿ 2002ರಲ್ಲಿ ನಡೆದಿದ್ದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ ದಾಖಲೆಗಳನ್ನು ಈಗಿನ ಎಸ್‌ಐಆರ್‌ನಲ್ಲಿ ಉಲ್ಲೇಖವಾಗಿ ಪರಿಗಣಿಸಲಾಗುತ್ತಿದೆ. ಹೀಗಾಗಿ 2002ರ ನಂತರ ಸ್ಥಳ ಬದಲಾಯಿಸಿದ, ಬೇರೆ ಊರುಗಳಿಗೆ ಹೋದ ಮತದಾರರಿಗೆ ಹಾಗೂ 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಗೆ ಒಳಗಾದ ಸಾವಿರಾರು ಮತದಾರರಿಗೆ ತಮ್ಮ 23 ವರ್ಷ ಹಳೆಯ ಮಾಹಿತಿ ಹುಡುಕುವ ಸವಾಲು ಎದುರಾಗಿದೆ.
-
ಇಂದಿನಿಂದ (ಜೂ.30) ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ನಡೆಯಲಿದೆ. ನಕಲಿ ಮತದಾರರಿಗೆ ಬ್ರೇಕ್ ಹಾಕಲು ಭಾರತೀಯ ಚುನಾವಣಾ ಆಯೋಗ ಎಸ್‌ಐಆರ್ ಪ್ರಕ್ರಿಯೆ ಆರಂಭಿಸುತ್ತಿದೆ. ಆಗಸ್ಟ್ 5ರಂದು ಮತದಾರರ ಕರಡು ಪಟ್ಟಿ ಪ್ರಕಟ ಆಗಲಿದ್ದು, ಅಕ್ಟೋಬರ್ 7ಕ್ಕೆ ಎಲ್ಲಾ ಆಕ್ಷೇಪಣೆಗಳ ಇತ್ಯರ್ಥದ ಬಳಿಕ ಅಧಿಕೃತ ಅಂತಿಮ ಮತದಾರರ ಪಟ್ಟಿ ಪ್ರಕಟ ಆಗಲಿದೆ.
ರಾಜ್ಯದಲ್ಲಿ 2002ರಲ್ಲಿ ನಡೆದಿದ್ದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ ದಾಖಲೆಗಳನ್ನು ಈಗಿನ ಎಸ್‌ಐಆರ್‌ನಲ್ಲಿ ಉಲ್ಲೇಖವಾಗಿ ಪರಿಗಣಿಸಲಾಗುತ್ತಿದೆ. ಹೀಗಾಗಿ 2002ರ ನಂತರ ಸ್ಥಳ ಬದಲಾಯಿಸಿದ, ಬೇರೆ ಊರುಗಳಿಗೆ ಹೋದ ಮತದಾರರಿಗೆ ಹಾಗೂ 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಗೆ ಒಳಗಾದ ಸಾವಿರಾರು ಮತದಾರರಿಗೆ ತಮ್ಮ 23 ವರ್ಷ ಹಳೆಯ ಮಾಹಿತಿ ಹುಡುಕುವ ಸವಾಲು ಎದುರಾಗಿದೆ. ಪ್ರಕ್ರಿಯೆಯಲ್ಲಿ ಎಲ್ಲ ಮತದಾರರಿಗೂ ಎನ್ಯುಮರೇಷನ್ ಅರ್ಜಿ ವಿತರಿಸಲಿದ್ದು, ಅರ್ಜಿಯಲ್ಲಿ ಮತದಾರರು 2002ರಲ್ಲಿ ನಡೆದ ಎಸ್‌ಐಆರ್ ವೇಳೆಯ ಗುರುತಿನ ಚೀಟಿಯ ಮಾಹಿತಿ ಭರ್ತಿ ಮಾಡಬೇಕು. ಆ ಸಂದರ್ಭದಲ್ಲಿ 18 ವರ್ಷ ಆಗಿರದೇ ಇದ್ದವರು ಈಗ ಎನ್ಯುಮರೇಷನ್ ಅರ್ಜಿಯಲ್ಲಿ ತಮ್ಮ ತಂದೆಯ 2002ರ ಅವಧಿಯ ಗುರುತಿನ ಚೀಟಿಯ ಮಾಹಿತಿ ತುಂಬಬೇಕು.
ಇದನ್ನೂ ಓದಿ: Karnataka SIR: ಪ್ರತಿಯೊಬ್ಬರೂ ಎನ್ಯುಮರೇಷನ್ ಅರ್ಜಿ ತುಂಬಿ, ಮತದಾನದ ಹಕ್ಕು ಉಳಿಸಿಕೊಳ್ಳಿ: ಸಿಎಂ ಡಿಕೆಶಿ ಕರೆ
ಹಳೆಯ ದಾಖಲೆ, ಮಾಹಿತಿಯನ್ನು ತೆಗೆದಿಟ್ಟುಕೊಂಡು ನೀಡಬೇಕಾದದ್ದು ಮತದಾರರ ಕರ್ತವ್ಯ. ಆದರೂ ಈ ಬಗ್ಗೆ ಮಾಹಿತಿ ಇಲ್ಲದವರಿಗೆ ಗೊಂದಲ ಆಗಬಹುದು. ಯಾಕೆಂದರೆ ಎಲ್ಲರೂ ಇದರ ಸಂಪೂರ್ಣ ಮಾಹಿತಿ ಇರುವವರು, ಡಿಜಿಟಲ್ ಸಾಕ್ಷರರು ಆಗಿರುವುದಿಲ್ಲ. ಇಂಥವರಿಗೆ ಸರಿಯಾಗಿ ಮಾಹಿತಿ ನೀಡಿ, ಅವರ ಹೆಸರು ಕೈತಪ್ಪಿಹೋಗದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಕರ್ತವ್ಯ. ರಾಜ್ಯದಲ್ಲಿ 2008ರಲ್ಲಿ ವಿಧಾನಸಭಾ ಮತಕ್ಷೇತ್ರಗಳ ಪುನರ್ ವಿಂಗಡಣೆ ಆಗಿದೆ. ವಿಧಾನಸಭಾ ಕ್ಷೇತ್ರಗಳ ಗಡಿ ಬದಲಾಗಿವೆ.
ಮತದಾರರ ಮತಗಟ್ಟೆ ಸಂಖ್ಯೆಯಲ್ಲೂ ವ್ಯತ್ಯಾಸ ಆಗಿವೆ. 23 ವರ್ಷಗಳ ಹಿಂದಿನ ಮತಗಟ್ಟೆ, ವಿಧಾನಸಭಾ ಕ್ಷೇತ್ರದ ಸಂಖ್ಯೆ ಎಲ್ಲವನ್ನೂ ಪತ್ತೆ ಮಾಡಿ ಎನ್ಯುಮರೇಷನ್‌ನಲ್ಲಿ ತುಂಬಬೇಕು. ಆ ಮಾಹಿತಿ ಪತ್ತೆ ಮಾಡಲೆಂದೇ ಚುನಾವಣಾ ಆಯೋಗ 2002ರ ಮತದಾರರ ಪಟ್ಟಿಯನ್ನು ಆಯೋಗದ ಆನ್‌ಲೈನ್‌ನಲ್ಲಿ ಪ್ರಕಟಿಸಿದೆ. ಯಾರಿಗೂ ಅನ್ಯಾಯ ಆಗಬಾರದು.
ಅರ್ಹರ ಹೆಸರುಗಳು ಪಟ್ಟಿಯಿಂದ ಕೈಬಿಟ್ಟು ಹೋಗಬಾರದು. ಪಶ್ಚಿಮ ಬಂಗಾಳದಲ್ಲಿ ಆದಂತೆ ಗೊಂದಲ ಆಗುವಂತಿಲ್ಲ. ಮತದಾರರ ಪಟ್ಟಿಯಿಂದ ಹೆಸರು ಹೋದರೆ ಗ್ಯಾರಂಟಿ ಸೌಲಭ್ಯ ಇಲ್ಲ ಎಂದು ರಾಜ್ಯ ಸರಕಾರ ಕೂಡ ಅಂಜಿಸಿದೆ. ಕೊನೆಗೂ ಇದು ರಾಜಕೀಯ ಆಟ ಆಗಬಾರದು. ಚುನಾವಣಾ ಆಯೋಗದ ಸುಗಮ ಕಾರ್ಯಕ್ಕೆ ಪೂರಕವಾಗಬೇಕು.