ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಉಗ್ರರ ದಮನಕ್ಕೆ ದೇಶವೇ ಒಂದಾಗಲಿ

ಕಾಶ್ಮೀರ ವಿಚಾರದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಒಂದಾಗಬೇಕು. ಎಲ್‌ಒಸಿಯಿಂದ 200 ಕಿ.ಮೀ. ದೂರವಿರುವ ಪಹಲ್ಗಾಮ್‌ಗೆ ಉಗ್ರರು ಬರಬೇಕೆಂದರೆ ಸ್ಥಳೀಯರಲ್ಲಿ ಕೆಲವರು ಸಹಕಾರ ನೀಡಿರಲೇ ಬೇಕು. ಇವರು ಯಾರೇ ಆಗಿರಲಿ ಹೆಡೆಮರಿ ಕಟ್ಟಿ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು. ಉಗ್ರರ ದುಷ್ಟಕೂಟ ವನ್ನು ದಮನ ಮಾಡುವಲ್ಲಿ ಇಡೀ ದೇಶ ಒಂದಾಗಬೇಕು.

ಉಗ್ರರ ದಮನಕ್ಕೆ ದೇಶವೇ ಒಂದಾಗಲಿ

Profile Ashok Nayak Apr 24, 2025 5:49 AM

ಜಮ್ಮು-ಕಾಶ್ಮೀರವು ಪ್ರವಾಸಿಗರ ಪಾಲಿನ ಭೂಲೋಕದ ಸ್ವರ್ಗ. 90ರ ದಶಕದಲ್ಲಿ ಕಾಶ್ಮೀರಿ ಪಂಡಿತರನ್ನು ಅಲ್ಲಿಂದ ಬಲವಂತವಾಗಿ ಹೊರದಬ್ಬುವುದರೊಂದಿಗೆ ಆರಂಭವಾದ ಹಿಂಸಾಚಾರ ತಾರಕಕ್ಕೇರಿತ್ತು. ಕೆಲ ವರ್ಷಗಳ ಹಿಂದಿನವರೆಗೂ ಕಾಶ್ಮೀರಕ್ಕೆ ಪ್ರವಾಸಿಗರು ಹೋಗಲು ಭಯಪಡುವ ಪರಿಸ್ಥಿತಿ ಇತ್ತು. ಕಾಶ್ಮೀರ ರಾಜ್ಯದ ವಿಂಗಡನೆ ಮತ್ತು 370ನೇ ವಿಧಿ ರದ್ದಾದ ಬಳಿಕ, ಉಗ್ರರ ಸತತ ದಮನ ಕಾರ‍್ಯಾಚರಣೆಯೊಂದಿಗೆ ಅಲ್ಲಿನ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತ್ತು.

ಕಳೆದ ವರ್ಷ ಉಗ್ರರ ಬೆದರಿಕೆಯ ನಡುವೆಯೇ ಅಲ್ಲಿನ ಜನತೆ ವಿಧಾನಸಭೆ ಚುನಾವಣೆಯಲ್ಲಿ ಭಾಗವಹಿಸಿ ಉಮರ್ ಅಬ್ದುಲ್ಲಾ ಸರಕಾರವನ್ನು ಮತ್ತೆ ಅಧಿಕಾರಕ್ಕೆ ತಂದಿದ್ದರು. ಇತ್ತೀಚೆಗೆ ಗಡಿ ಭಾಗದಲ್ಲಿ ಉಗ್ರರೊಂದಿಗಿನ ಚಕಮಕಿ ಹೊರತಾಗಿಯೂ ಸಾವಿರಾರು ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದರು.

ಇದನ್ನೂ ಓದಿ: Vishwavani Editorial: ಅರಿವಿಲ್ಲದಿದ್ದರೆ ಅಪಾಯ ಖಾತ್ರಿ!

ಕಾಶ್ಮೀರ ತನ್ನ ಗತ ವೈಭವಕ್ಕೆ ಮರಳುತ್ತಿದೆ ಎನ್ನುವಷ್ಟರಲ್ಲಿ ಪಾಕ್ ಬೆಂಬಲಿತ ಉಗ್ರರು ಮತ್ತೆ ಪೈಶಾಚಿಕ ಕೃತ್ಯ ಮೆರೆದಿದ್ದಾರೆ. ಬೇಸಿಗೆ ರಜೆ ಕಳೆಯಲೆಂದು ಬಂದ ಅಮಾಯಕ ಪ್ರವಾಸಿಗರ ಮೇಲೆ ಉಗ್ರರು ಎರಗಿದ್ದಾರೆ. ಹಿಂದೂ ಧರ್ಮದವರನ್ನೇ ಗುರಿಯಾಗಿಸಿಕೊಂಡು ಕುಟುಂಬದ ಸದಸ್ಯರ ಮುಂದೆಯೇ ಪುರುಷರ ಮೇಲೆ ದಾಳಿ ನಡೆಸಿದ್ದಾರೆ. ಕರ್ನಾಟಕದ ಮೂವರೂ ಸೇರಿದಂತೆ 28 ಮಂದಿ ಈ ದಾಳಿಯಲ್ಲಿ ಪ್ರಾಣ ಕಳೆದು ಕೊಂಡಿದ್ದಾರೆ. 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿ ದ್ದಾರೆ.

ಪಾಕ್ ಪ್ರೇರಿತ ಟಿಆರ್‌ಎಫ್ ಉಗ್ರ ಸಂಘಟನೆ ಈ ದಾಳಿಯನ್ನು ತಾನೇ ನಡೆಸಿದ್ದಾಗಿ ಒಪ್ಪಿಕೊಂಡಿದೆ. ಲಷ್ಕರ್-ಎ-ತೊಯ್ಬಾದ ಅಂಗಸಂಸ್ಥೆ ಎಂದು ಕರೆಯಲ್ಪಡುವ ಟಿಆರ್‌ಎಫ್, ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದಾದ ಬಳಿಕ ಅಸ್ತಿತ್ವಕ್ಕೆ ಬಂದ ಸಂಘಟನೆಯಾಗಿದೆ. ಅನ್ಯ ರಾಷ್ಟ್ರಗಳ ಬೆಂಬಲ ವಿಲ್ಲದೆ ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲು ಸಾಧ್ಯವಿಲ್ಲ.

ಈ ದಾಳಿಯ ಹಿಂದಿನ ಶಕ್ತಿ ಪಾಕಿಸ್ತಾನ ಎನ್ನುವುದು ಇಡೀ ವಿಶ್ವಕ್ಕೆ ಗೊತ್ತು. ವಿಶ್ವದ ಬಹುತೇಕ ದೇಶಗಳು ಈ ದಾಳಿಯನ್ನು ಖಂಡಿಸಿ ಭಾರತಕ್ಕೆ ಬೆಂಬಲ ಘೋಷಿಸಿವೆ. ಇದೀಗ ಅಂತಾರಾಷ್ಟ್ರೀಯ ಸಮುದಾಯ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸಿ ಎಲ್ಲ ನೆರವನ್ನು ತಡೆ ಹಿಡಿಯುವಂತೆ ಭಾರತ ಒತ್ತಡ ಹೇರಬೇಕು. ಕಾಶ್ಮೀರ ವಿಚಾರದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಒಂದಾಗಬೇಕು. ಎಲ್‌ಒಸಿಯಿಂದ 200 ಕಿ.ಮೀ. ದೂರವಿರುವ ಪಹಲ್ಗಾಮ್‌ಗೆ ಉಗ್ರರು ಬರಬೇಕೆಂದರೆ ಸ್ಥಳೀಯರಲ್ಲಿ ಕೆಲವರು ಸಹಕಾರ ನೀಡಿರಲೇ ಬೇಕು. ಇವರು ಯಾರೇ ಆಗಿರಲಿ ಹೆಡೆಮರಿ ಕಟ್ಟಿ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು. ಉಗ್ರರ ದುಷ್ಟಕೂಟವನ್ನು ದಮನ ಮಾಡುವಲ್ಲಿ ಇಡೀ ದೇಶ ಒಂದಾಗಬೇಕು.