Vishwavani Editorial: ಅರಿವಿಲ್ಲದಿದ್ದರೆ ಅಪಾಯ ಖಾತ್ರಿ!
ಮೊಬೈಲ್ ಮಡಿಲಿಗೆ ದಂಡಿಯಾಗಿ ಬಂದು ಬೀಳುವ ಬಹುಮಾನ ನೀಡಿಕೆಯಂಥ ಆಮಿಷಗಳಿಗೆ ಬಲಿಯಾಗದಿರುವ, ಅಪರಿಚಿತ ಸಂಖ್ಯೆಗಳಿಂದ ಬಂದ ಲಿಂಕ್ ಅನ್ನು ಒತ್ತದಿರುವ ಜಾಣ್ಮೆಯನ್ನು ಜನರು ತೋರಬೇಕಿದೆ. ಜತೆಗೆ, ಸೈಬರ್ ವಂಚಕರನ್ನು ಬಲಿ ಹಾಕುವ ವಿಷಯದಲ್ಲಿ ಪೊಲೀಸರೂ ಮತ್ತಷ್ಟು ಚುರುಕಾಗಬೇಕಿದೆ.


ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಆಧ್ಯಾತ್ಮಿಕ ಸಂಸ್ಥೆಯೊಂದರ ಕಾರ್ಯದರ್ಶಿಯನ್ನು ‘ಡಿಜಿಟಲ್ ಅರೆಸ್ಟ್’ ಮೂಲಕ ಬೆದರಿಸಿದ ದುರುಳರು ಅವರ ಬ್ಯಾಂಕ್ ಖಾತೆಯಿಂದ ಹಣ ಕೊಳ್ಳೆ ಹೊಡೆದಿರುವುದು ವರದಿಯಾಗಿದೆ. ಈ ಸಂತ್ರಸ್ತರ ಖಾತೆಯಿಂದ ಒಟ್ಟು 26 ದಿನಗಳ ಅವಧಿಯಲ್ಲಿ ಎರಡೂವರೆ ಕೋಟಿ ರುಪಾಯಿ ಹಣ ದೋಚಲ್ಪಟ್ಟಿದ್ದು ಈ ಸಂಬಂಧವಾಗಿ ನಾಲ್ವರು ಸೈಬರ್ ವಂಚಕರನ್ನು ಮಾತ್ರವಲ್ಲದೆ ಖಾಸಗಿ ಬ್ಯಾಂಕ್‌ನ ಇಬ್ಬರು ಸಿಬ್ಬಂದಿಯನ್ನೂ ಬಂಧಿಸಲಾಗಿದೆ ಎಂಬುದು ಲಭ್ಯ ಸುದ್ದಿ.
ಅಮಾಯಕರನ್ನು ವಂಚಿಸಲು ದುರುಳರು ಕಂಡುಕೊಂಡಿರುವ ‘ಡಿಜಿಟಲ್ ಅರೆಸ್ಟ್’ ಎಂಬ ವಾಮಮಾರ್ಗದ ಕುರಿತು ಎಚ್ಚರದಿಂದಿರುವಂತೆ ಆಳುಗರು ಮತ್ತು ಪೊಲೀಸ್ ಇಲಾಖೆಯವರು ಕಾಲಾನುಕಾಲಕ್ಕೆ ಎಚ್ಚರಿಸುತ್ತಿದ್ದರೂ ಇಂಥ ಪ್ರಕರಣಗಳ ಸಂಖ್ಯೆ ತಗ್ಗುತ್ತಿಲ್ಲ ಎಂಬುದು ವಿಷಾದ ನೀಯ.
ಇದನ್ನೂ ಓದಿ: Vishwavani Editorial: ಇದು ನಮ್ಮವರಿಗೆ ಪಾಠವಾಗಬೇಕು
‘ವ್ಯಕ್ತಿಯೊಬ್ಬನು ಅಹಿತಕರ ಸಂಗತಿ ಅಥವಾ ಸನ್ನಿವೇಶದ ಬಗ್ಗೆ ತಿಳಿದಿಲ್ಲದಿದ್ದರೆ, ಅದರಿಂದ ತೊಂದರೆಗೊಳಗಾಗಲು ಸಾಧ್ಯವಿಲ್ಲ’ ಎಂಬರ್ಥದ ಮಾತು ಪಾರಮಾರ್ಥಿಕ ನೆಲೆಯಲ್ಲಿ ಸ್ವೀಕಾ ರಾರ್ಹವೇನೋ? ಆದರೆ ಲೌಕಿಕ ಬದುಕಿನಲ್ಲಿ ಇದನ್ನು ನೆಚ್ಚಲಾಗದು. ಏಕೆಂದರೆ, ಅಹಿತಕರ ಮತ್ತು ಕೆಟ್ಟ ಪರಿಸ್ಥಿತಿಗಳ ಕುರಿತು ಮಾಹಿತಿವಂತರಾಗಿದ್ದು, ಒಂದೊಮ್ಮೆ ಅವು ಎರಗಿದರೆ ತಪ್ಪಿಸಿಕೊಳ್ಳುವು ದಕ್ಕಿರುವ ಮಾರ್ಗೋಪಾಯವನ್ನೂ ಅರಿತಿರಬೇಕಾದ್ದು ವರ್ತಮಾನದ ಅನಿವಾರ್ಯತೆ ಯಾಗಿದೆ.
ಏಕೆಂದರೆ, ಸ್ಮಾರ್ಟ್ ಫೋನ್ ತಂತ್ರಜ್ಞಾನವು ಕಾಲಕ್ರಮೇಣ ಸುಧಾರಣೆಗೊಳ್ಳುತ್ತ, ದಿನಕ್ಕೊಂದ ರಂತೆ ಹೊಸ ವೈಶಿಷ್ಟ್ಯಗಳ ರೆಕ್ಕೆ-ಪುಕ್ಕಗಳನ್ನು ಜೋಡಿಸಿಕೊಂಡು ಬರುತ್ತಿರುವಂತೆಯೇ, ಇಂಥ ಫೋನುಗಳ ಬಳಕೆದಾರರನ್ನು ಮೋಸದ ಬಲೆಗೆ ಕೆಡವಬಲ್ಲ ಹೊಸ ಕುತಂತ್ರ ಮಾರ್ಗಗಳನ್ನೂ ಸೈಬರ್ ವಂಚಕರು ಕಂಡುಕೊಳ್ಳುತ್ತಿದ್ದಾರೆ. ಆದ್ದರಿಂದ, ‘ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ’ ಎಂಬ ಆಧುನಿಕ ನೀತಿಪಾಠವನ್ನು ಮನನ ಮಾಡಿ ಕೊಂಡು ಇಂಥ ವಂಚಕರ ಬಲೆಗೆ ಬೀಳದಂತೆ ಜನರು ಜಾಗೃತರಾಗಬೇಕಿದೆ.
ಮೊಬೈಲ್ ಮಡಿಲಿಗೆ ದಂಡಿಯಾಗಿ ಬಂದು ಬೀಳುವ ಬಹುಮಾನ ನೀಡಿಕೆಯಂಥ ಆಮಿಷಗಳಿಗೆ ಬಲಿಯಾಗದಿರುವ, ಅಪರಿಚಿತ ಸಂಖ್ಯೆಗಳಿಂದ ಬಂದ ಲಿಂಕ್ ಅನ್ನು ಒತ್ತದಿರುವ ಜಾಣ್ಮೆಯನ್ನು ಜನರು ತೋರಬೇಕಿದೆ. ಜತೆಗೆ, ಸೈಬರ್ ವಂಚಕರನ್ನು ಬಲಿ ಹಾಕುವ ವಿಷಯದಲ್ಲಿ ಪೊಲೀಸರೂ ಮತ್ತಷ್ಟು ಚುರುಕಾಗಬೇಕಿದೆ.