ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial; ಔಷಧವೇ ವಿಷವಾಗದಿರಲಿ

ತಮಿಳುನಾಡಿನ ಸ್ರೇಸನ್ ಫಾರ್ಮಾ ಎಂಬ ಕಂಪನಿ ತಯಾರಿಸಿದ್ದ ಕೋಲ್ಡ್ರಿಫ್ ಎಂಬ ಕೆಮ್ಮಿನ ಸಿರಪ್ ಸೇವನೆಯಿಂದಾಗಿ ಮಧ್ಯಪ್ರದೇಶದಲ್ಲಿ ೨೦ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿರುವ ಘಟನೆ ದೇಶವನ್ನೇ ಬೆಚ್ಚಿಬೀಳಿಸುವಂತೆ ಮಾಡಿದೆ. ಸಂಜೀವಿನಿ ಆಗಬೇಕಿದ್ದ ಔಷಧವೇ ಜೀವ ತೆಗೆದಿರುವುದು ಹಣ ಮಾಡುವ ಹಪಹಪಿಯ ಖಾಸಗಿ ಕಂಪನಿಗಳು ಹಾಗೂ ಭ್ರಷ್ಟ ಸರಕಾರಿ ವ್ಯವಸ್ಥೆಗೆ ಹಿಡಿದ ಕೈಗನ್ನಡಿ.

Vishwavani Editorial; ಔಷಧವೇ ವಿಷವಾಗದಿರಲಿ

-

Ashok Nayak Ashok Nayak Oct 9, 2025 8:12 AM

ತಮಿಳುನಾಡಿನ ಸ್ರೇಸನ್ ಫಾರ್ಮಾ ಎಂಬ ಕಂಪನಿ ತಯಾರಿಸಿದ್ದ ಕೋಲ್ಡ್ರಿಫ್ ಎಂಬ ಕೆಮ್ಮಿನ ಸಿರಪ್ ಸೇವನೆಯಿಂದಾಗಿ ಮಧ್ಯಪ್ರದೇಶದಲ್ಲಿ 20ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿರುವ ಘಟನೆ ದೇಶವನ್ನೇ ಬೆಚ್ಚಿಬೀಳಿಸುವಂತೆ ಮಾಡಿದೆ. ಸಂಜೀವಿನಿ ಆಗಬೇಕಿದ್ದ ಔಷಧವೇ ಜೀವ ತೆಗೆದಿರುವುದು ಹಣ ಮಾಡುವ ಹಪಹಪಿಯ ಖಾಸಗಿ ಕಂಪನಿಗಳು ಹಾಗೂ ಭ್ರಷ್ಟ ಸರಕಾರಿ ವ್ಯವಸ್ಥೆಗೆ ಹಿಡಿದ ಕೈಗನ್ನಡಿ. ದೇಶದಲ್ಲಿ ಔಷಧಗಳ ಗುಣಮಟ್ಟದ ಮೇಲೆ ನಮ್ಮ ಸರಕಾರಿ ವ್ಯವಸ್ಥೆ ಹೇಗೆ ನಿಗಾ ವಹಿಸುತ್ತಿದೆ ಎಂಬುದರ ದ್ಯೋತಕ ಇದು.

ಈ ಘಟನೆ ಸಂಭವಿಸುತ್ತಿದ್ದಂತೆ ಕೋಲ್ಡ್ರಿ- ಸಿರಪ್ ಕುರಿತು ನಿಗಾ ವಹಿಸುವಂತೆ ರಾಜ್ಯದಲ್ಲಿ ಔಷಧ ನಿಯಂತ್ರಣ ಅಧಿಕಾರಿಗಳಿಗೆ ಸರಕಾರವು ಸಕಾಲದಲ್ಲಿ ಸೂಚಿಸಿರುವುದು ಸ್ವಾಗತಾರ್ಹ. ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಈ ಸಿರಪ್ ಬಳಕೆ ಆಗುತ್ತಿಲ್ಲ ಎಂದೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸ್ಪಷ್ಟಪಡಿಸಿದ್ದಾರೆ.

ಆದರೆ ಖಾಸಗಿಯಾಗಿ ಬಳಕೆಯಾಗುತ್ತಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಆ ಕುರಿತು ಸಮಗ್ರ ತನಿಖೆ ಮಾಡಬೇಕಾದ ಅಗತ್ಯವಿದೆ. ಔಷಧಗಳ ಗುಣಮಟ್ಟದ ವಿಷಯದಲ್ಲಿ ಬೇರೆಲ್ಲಾ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಔಷಧಗಳ ಪರೀಕ್ಷೆ ಹೆಚ್ಚಾಗಿ ನಡೆಯುತ್ತಿದ್ದು, ಕರ್ನಾಟಕದ ಮಾದರಿಯನ್ನು ಅನುಸರಿಸಲು ಕೇಂದ್ರವು ಇತರ ರಾಜ್ಯಗಳಿಗೆ ಸಲಹೆ ನೀಡಿದೆ.

ಇದನ್ನೂ ಓದಿ: Vishwavani Editorial: ಶ್ರೇಷ್ಠತೆಗೆ ಮೌಲ್ಯ ಇದ್ದೇ ಇದೆ

ಆದರೆ ಇದೆಲ್ಲವೂ ಮಕ್ಕಳ ಪ್ರಾಣ ಪಕ್ಷಿ ಹಾರಿಹೋದ ನಂತರವೇ ಮಾಡಬೇಕೆ? ಅನಾರೋಗ್ಯ ಪೀಡಿತ ವ್ಯಕ್ತಿಯೊಬ್ಬ ತನ್ನ ಪ್ರಾಣ ಉಳಿಸುವ ಸಂಜೀವಿನಿ ಎಂದುಕೊಂಡೇ ಸೇವಿಸುವ ಔಷಧಗಳ ಗುಣಮಟ್ಟ ಪರೀಕ್ಷಿಸುವಲ್ಲಿಯೂ ಈ ರೀತಿಯ ಅಸಡ್ಡೆ ತೋರಿರುವುದು ಕ್ಷಮೆಗೆ ಅರ್ಹವೇ? ಯಾವುದೇ ರಾಜ್ಯದಲ್ಲಿ ಯಾವುದೇ ಔಷಧಿ ಬಳಕೆಯಾಗುವ ಮುನ್ನ ಸೂಕ್ತ ಪರೀಕ್ಷೆಗೆ ಒಳಗಾಗುವ ವ್ಯವಸ್ಥೆ ಕಟ್ಟುನಿಟ್ಟಾಗಿ ಜಾರಿಗೆ ಬರಬೇಕು.

ರಾಜ್ಯಗಳಲ್ಲಿ ನಡೆಯುವ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗುವ ಔಷಧಗಳ ಕುರಿತು ಆಯಾ ಕ್ಷಣವೇ ಇತರ ರಾಜ್ಯಗಳ ಗಮನಕ್ಕೆ ತರಬೇಕು. ಕಳಪೆ ಔಷಧ ತಯಾರಿಸುವ ಕಂಪನಿಗಳ ಮೇಲೆ ನಿಷೇಧ ಹೇರಿ, ಅವುಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಔಷಧ ಕಂಪನಿಗಳು ಹಾಗೂ ಔಷಧ ನಿಯಂತ್ರಕರ ನಡುವೆ ಇರುವ ಅಕ್ರಮ ವ್ಯವಹಾರಗಳಿಗೆ ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ಅಮಾಯಕ ಜೀವಗಳು ಬಲಿಯಾಗಬೇಕಾಗುತ್ತದೆ.