ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಶ್ರೇಷ್ಠತೆಗೆ ಮೌಲ್ಯ ಇದ್ದೇ ಇದೆ

ವಿವಿಧ ವಯೋಮಾನಗಳ ಪ್ರೇಕ್ಷಕರು ಈ ಚಲನಚಿತ್ರದ ವೀಕ್ಷಣೆಗೆಂದು ಚಿತ್ರಮಂದಿರಗಳಿಗೆ ದಾಂಗುಡಿ ಯಿಟ್ಟು ಬರುತ್ತಿರುವುದು, ನಂತರದಲ್ಲಿ ಅವರಿಂದ ಮೆಚ್ಚುಗೆಯ ಮಾತುಗಳು ಹೊಮ್ಮುತ್ತಿರುವುದು ಈ ಅಭಿಪ್ರಾಯಕ್ಕೆ ಪುಷ್ಟಿ ನೀಡುತ್ತವೆ. ಹಾಗಂತ ಇದು ಸದರಿ ಸಿನಿಮಾದ ಆಕಸ್ಮಿಕ/ಅನಿರೀಕ್ಷಿತ ಸಾಧನೆ ಯೇನಲ್ಲ; ಅದರ ಕಲಾವಿದರು ಮತ್ತು ತಾಂತ್ರಿಕ ವರ್ಗದವರು ಸಾಕಷ್ಟು ಬೆವರು ಸುರಿಸಿ, ಸೃಜನಶೀಲತೆ ಯನ್ನು ಮೆರೆದು ಹೆಣೆದುಕೊಟ್ಟಿರುವ ಚಿತ್ರವಿದು.

Vishwavani Editorial: ಶ್ರೇಷ್ಠತೆಗೆ ಮೌಲ್ಯ ಇದ್ದೇ ಇದೆ

-

Ashok Nayak Ashok Nayak Oct 6, 2025 12:51 PM

ಕನ್ನಡದ ಪ್ರೇಕ್ಷಕರು ಈಚೀಚೆಗೆ ಚಿತ್ರಮಂದಿರಗಳ ಕಡೆಗೇ ಮುಖ ಹಾಕುತ್ತಿಲ್ಲ, ಓಟಿಟಿ ಹಾಗೂ ಇತರ ಮಾಧ್ಯಮಗಳನ್ನು ನೆಚ್ಚಿಕೊಂಡು ಬಿಟ್ಟಿದ್ದಾರೆ ಎಂಬುದು ಕನ್ನಡ ಚಿತ್ರರಂಗದ ಕೆಲವಷ್ಟು ಘಟಾನು ಘಟಿಗಳು ಆಗಾಗ ಅಲವತ್ತುಕೊಳ್ಳುವ ಪರಿ. ಆದರೆ ಇದು ಸಂಪೂರ್ಣ ಸತ್ಯವಲ್ಲ ಎಂಬುದನ್ನು ‘ಕಾಂತಾರ-1’ ಚಲನಚಿತ್ರ ತೋರಿಸಿಕೊಟ್ಟಿದೆ.

ವಿವಿಧ ವಯೋಮಾನಗಳ ಪ್ರೇಕ್ಷಕರು ಈ ಚಲನಚಿತ್ರದ ವೀಕ್ಷಣೆಗೆಂದು ಚಿತ್ರಮಂದಿರಗಳಿಗೆ ದಾಂಗುಡಿಯಿಟ್ಟು ಬರುತ್ತಿರುವುದು, ನಂತರದಲ್ಲಿ ಅವರಿಂದ ಮೆಚ್ಚುಗೆಯ ಮಾತುಗಳು ಹೊಮ್ಮುತ್ತಿರುವುದು ಈ ಅಭಿಪ್ರಾಯಕ್ಕೆ ಪುಷ್ಟಿ ನೀಡುತ್ತವೆ. ಹಾಗಂತ ಇದು ಸದರಿ ಸಿನಿಮಾದ ಆಕಸ್ಮಿಕ/ಅನಿರೀಕ್ಷಿತ ಸಾಧನೆ ಯೇನಲ್ಲ; ಅದರ ಕಲಾವಿದರು ಮತ್ತು ತಾಂತ್ರಿಕ ವರ್ಗದವರು ಸಾಕಷ್ಟು ಬೆವರು ಸುರಿಸಿ, ಸೃಜನಶೀಲತೆಯನ್ನು ಮೆರೆದು ಹೆಣೆದುಕೊಟ್ಟಿರುವ ಚಿತ್ರವಿದು.

ಇದನ್ನೂ ಓದಿ: Vishwavani Editorial: ಈ ಶಿಸ್ತು ಮೇಲ್ಪಂಕ್ತಿಯಾಗಲಿ

ಹೀಗಾಗಿ ಫಲಿತವೂ ಉತ್ತಮವಾಗಿಯೇ ಇದೆ. ‘ಸಂತೆಯ ಹೊತ್ತಿಗೆ ಮೂರು ಮೊಳ ನೇಯವಂತೆ’ ರೀಲು ಸುತ್ತುವ ಪರಿಪಾಠದವರು ಈ ಮೇಲ್ಪಂಕ್ತಿಯನ್ನು ತಾವೂ ಮೈಗೂಡಿಸಿಕೊಳ್ಳುವಂತಾಗಲಿ ಎಂಬುದು ಚಿತ್ರಪ್ರೇಮಿಗಳ ಆಶಯ ಮತ್ತು ನಿರೀಕ್ಷೆ. ‘ಸ್ಯಾಂಡಲ್‌ವುಡ್/ಚಂದನವನ’ ಎಂದೇ ಕರೆಯಲ್ಪಡುವ ಕನ್ನಡ ಚಿತ್ರರಂಗಕ್ಕೆ ಅದರದ್ದೇ ಆದ ಗತವೈಭವವಿದೆ.

ಹುಣಸೂರು ಕೃಷ್ಣಮೂರ್ತಿಯವರು, ಪುಟ್ಟಣ್ಣ ಕಣಗಾಲರು, ಸಿದ್ಧಲಿಂಗಯ್ಯರಂಥ ನಿರ್ದೇಶಕರು, ಡಾ.ರಾಜ್‌ಕುಮಾರ್‌ರಂಥ ಮೇರು ಕಲಾವಿದರು ತಮ್ಮ ಸ್ಪಷ್ಟ ಹೆಜ್ಜೆಗುರುತುಗಳನ್ನು ಮೂಡಿಸಿರು ವಂಥ ರಂಗವಿದು. ಆದರೆ ವೃತ್ತಿಪರತೆ ಮತ್ತು ಬದ್ಧತೆಗಳ ಕೊರತೆಯಿಂದಾಗಿ, ‘ಚಂದನವನ’ ಆಗೊಮ್ಮೆ ಈಗೊಮ್ಮೆ ಸೊರಗುವುದುಂಟು.

ಅಂಥ ವೇಳೆ, ಚಿತ್ರೋದ್ಯಮಿಗಳು ಮಾತ್ರವಲ್ಲದೆ ಚಿತ್ರರಸಿಕರೂ ಬೇಸರಿಸಿಕೊಳ್ಳುವುದುಂಟು. ಆದರೆ ‘ಕಾಂತಾರ’ದಂಥ ಚಿತ್ರಗಳು ಮರುಭೂಮಿಯಲ್ಲಿನ ಓಯಸಿಸ್‌ನಂತೆ ಆಹ್ಲಾದವನ್ನು ನೀಡಿದಾಗ, ಮತ್ತೆ ಭರವಸೆ ಚಿಗುರುವುದುಂಟು. ಈ ಭರವಸೆಯು ಭರವಸೆಯಾಗಿಯೇ ಉಳಿಯದೆ ವಾಸ್ತವವಾಗಿ ಬದಲಾಗಲಿ ಎಂಬುದು ಸಹೃದಯಿಗಳ ಬಯಕೆ.