Vishwavani Editorial: ಮೆಟ್ರೋ ‘ನಮ್ಮ’ದಾಗಲಿ
ಮೊದಲು ಶೇ. 47ರಷ್ಟು ಏರಿಕೆಯಾಗಿದೆ ಎಂದು ಮೆಟ್ರೋ ಹೇಳಿಕೊಂಡಿತ್ತು. ಆದರೆ ಕೆಲವು ಸ್ಟೇಜ್‌ಗಳಲ್ಲಿ ಶೇ. 100ರಷ್ಟು ದರ ಏರಿಸಲಾಗಿತ್ತು. ಈ ತಪ್ಪುಗಳನ್ನು ತಿದ್ದಿಕೊಂಡಿರುವ ಮೆಟ್ರೋ, ದರ ಇಳಿಸಿದ ನಾಟಕವಾಡಿದೆ. ಮೆಟ್ರೋ ಕಾಯ್ದೆ 2002ರ ಸೆಕ್ಷನ್ 34ರ ಪ್ರಕಾರ ಟಿಕೆಟ್ ಏರಿಕೆ ಸಂಬಂಧ ಪ್ರಸ್ತಾವನೆ ಸಲ್ಲಿಸುವ ಅಧಿಕಾರ ರಾಜ್ಯಕ್ಕಿದೆ


ಬೆಂಗಳೂರಿನ ‘ನಮ್ಮ ಮೆಟ್ರೋ’ ಯಾರಿಗೆ ಸೇರಿದ್ದು ಎನ್ನು ವಿಚಾರದಲ್ಲಿ ರಾಜ್ಯ ಇಲ್ಲವೇ ಕೇಂದ್ರ ಸರಕಾರದ ಅಧೀನಕ್ಕೆ ಒಳಪಡದ ಸ್ವತಂತ್ರ ತನಿಖಾ ಸಂಸ್ಥೆಯೊಂದರಿಂದ ತನಿಖೆ ಅಗತ್ಯವಿದೆ. ಇದುವರೆಗೂ ಮೆಟ್ರೋ ನಮ್ಮದು ಎನ್ನುತ್ತಿದ್ದ ಬಿಜೆಪಿಗರು ಮತ್ತು ಕಾಂಗ್ರೆಸ್ಸಿ ಗರು ದುಬಾರಿ ಟಿಕೆಟ್ ದರದ ವಿಚಾರ ಬಂದಾಗ ಮೆಟ್ರೋ ನಮ್ಮ ಅಧೀನದಲ್ಲಿಲ್ಲ ಎಂದು ನುಣುಚಿಕೊಳ್ಳುತ್ತಿದ್ದಾರೆ. 2 ವಾರಗಳ ಹಿಂದೆ ಮೆಟ್ರೋ ಅತಾರ್ಕಿಕವಾಗಿ ಬೆಲೆ ಏರಿಸಿದ ಬಳಿಕ ರಾಜ್ಯ ಸರಕಾರ ಇದಕ್ಕೆ ಕೇಂದ್ರ ಹೊಣೆ ಎಂದು ದಿಲ್ಲಿಯತ್ತ ಬೊಟ್ಟು ಮಾಡಿದರೆ, ಇದು ರಾಜ್ಯ ಸರಕಾರದ ಕೆಲಸ ಎಂದು ಕೇಂದ್ರದ ಬಿಜೆಪಿ ನಾಯಕರು ಸಿದ್ದರಾಮಯ್ಯ ಸರಕಾರದತ್ತ ಬೊಟ್ಟು ಮಾಡುತ್ತಿದ್ದಾರೆ.
ಇದನ್ನೂ ಓದಿ: Vishwavani Editorial: ಸಮೂಹ ಸಾರಿಗೆ ಬಳಕೆಗೆ ಉತ್ತೇಜಿಸಬೇಕಿದೆ
ಇಲ್ಲಿ ಕಾಂಗ್ರೆಸ್ ನಾಯಕರು ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿಗರನ್ನು ದೂರಿದರೆ, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಬೆಂಗಳೂರಿನಲ್ಲಿಯೇ ಪತ್ರಿಕಾಗೋಷ್ಠಿ ನಡೆಸಿ ಎಲ್ಲವೂ ರಾಜ್ಯ ಸರಕಾರದ ಕೈಯಲ್ಲಿದೆ ಎಂದಿದ್ದಾರೆ.
ದಿಲ್ಲಿ, ಕೋಲ್ಕತ್ತಾ, ಚೆನ್ನೈ ಸೇರಿದಂತೆ ದೇಶದ ಯಾವುದೇ ಮೆಟ್ರೋ ರೈಲಿನಲ್ಲಿ ಇಲ್ಲದ ಟಿಕೆಟ್ ದರ ಬೆಂಗಳೂರಿನಲ್ಲಿ ಏಕೆ ಎಂಬ ಪ್ರಶ್ನೆಗೆ ಯಾರೊಬ್ಬರೂ ಉತ್ತರಿಸುತ್ತಿಲ್ಲ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಬೆಲೆ ಇಳಿಸುವಂತೆ ಬಿಎಂಆರ್‌ಸಿಎಲ್‌ಗೆ ಪತ್ರ ಬರೆದಿದ್ದಾರೆ. ಇದಕ್ಕೆ ಉತ್ತರವಾಗಿ ಇಳಿಕೆಯಾಗಿರುವ ಟಿಕೆಟ್ ದರದಲ್ಲೂ ಬೆಂಗಳೂರು ಮೆಟ್ರೋ ಅಧಿಕಾರಿಗಳು ಜಾಣ್ಮೆ ಮೆರೆದಿದ್ದಾರೆ.
ಮೊದಲು ಶೇ. 47ರಷ್ಟು ಏರಿಕೆಯಾಗಿದೆ ಎಂದು ಮೆಟ್ರೋ ಹೇಳಿಕೊಂಡಿತ್ತು. ಆದರೆ ಕೆಲವು ಸ್ಟೇಜ್‌ಗಳಲ್ಲಿ ಶೇ. 100ರಷ್ಟು ದರ ಏರಿಸಲಾಗಿತ್ತು. ಈ ತಪ್ಪುಗಳನ್ನು ತಿದ್ದಿಕೊಂಡಿರುವ ಮೆಟ್ರೋ, ದರ ಇಳಿಸಿದ ನಾಟಕವಾಡಿದೆ. ಮೆಟ್ರೋ ಕಾಯ್ದೆ 2002ರ ಸೆಕ್ಷನ್ 34ರ ಪ್ರಕಾರ ಟಿಕೆಟ್ ಏರಿಕೆ ಸಂಬಂಧ ಪ್ರಸ್ತಾವನೆ ಸಲ್ಲಿಸುವ ಅಧಿಕಾರ ರಾಜ್ಯಕ್ಕಿದೆ. ಹಾಗಿದ್ದ ಮೇಲೆ ಏರಿಕೆ ಸಂಬಂಧ ಆಕ್ಷೇಪಿಸುವ ಅಧಿಕಾರವೂ ರಾಜ್ಯಕ್ಕಿದೆ ಎಂದರ್ಥ.
ಒಂದು ವೇಳೆ ದರ ಪರಿಷ್ಕರಣೆಗೆ ತಾನು ನೇಮಿಸಿದ ಸಮಿತಿಯ ನಿರ್ಧಾರ ಅತಾರ್ಕಿಕ ಎಂದಾದರೆ ಕೇಂದ್ರವು ಇದೇ ಸಮಿತಿಗೆ ಮರುಪರಿಶೀಲಿಸಿ ವರದಿ ನೀಡಲು ಏಕೆ ಸೂಚಿಸ ಬಾರದು? ಇಲ್ಲಿ ಬೇಕಿರುವುದು ಜನಪರ ನಿಲುವು. ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ರಾಜಕೀಯದಾಟ ಮುಂದುವರಿಸಿದರೆ, ಮೆಟ್ರೋದ ನಿಜವಾದ ವಾರಸುದಾರರಾದ ಪ್ರಯಾ ಣಿಕರೇ ತಕ್ಕ ಪಾಠ ಕಲಿಸಬೇಕಾಗುತ್ತದೆ. ಮೆಟ್ರೋದಿಂದ ಜನ ದೂರವುಳಿದರೆ ನಾಯಕರ, ಅಧಿಕಾರಿಗಳ ‘ಮದ’ ಇಳಿಯಲೇಬೇಕು.