ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ, 6 ಮಂದಿಯ ರಕ್ಷಣೆ
ಮಂಗಳೂರಿನ ಸಮುದ್ರದಲ್ಲಿ ಐಎಫ್‌ಬಿ ಮಂಜುಮಾತಾ ಮೀನುಗಾರಿಕಾ ಬೋಟ್ ಒಂದು ಮುಳುಗಿ ಅವಘಡ ಸಂಭವಿಸಿದೆ. ಸದ್ಯ ಭಾರತೀಯ ಕರಾವಳಿ ರಕ್ಷಣಾ ಪಡೆ ಆರು ಜನ ಮೀನುಗಾರರ ರಕ್ಷಣೆ ಮಾಡಿದೆ. ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಅರಬ್ಬಿ ಸಮುದ್ರದ ಮಧ್ಯೆ ಭೀಕರ ಅಲೆಗಳ ಅಬ್ಬರಕ್ಕೆ ಸಿಲುಕಿ ಮೀನುಗಾರಿಕಾ ಬೋಟ್ ಮುಳುಗಡೆಯಾಗಿದೆ.
ಸಂಗ್ರಹ ಚಿತ್ರ -
ದಕ್ಷಿಣ ಕನ್ನಡ: ಮಂಗಳೂರಿನ (Manglore) ಸಮುದ್ರದಲ್ಲಿ ಐಎಫ್‌ಬಿ ಮಂಜುಮಾತಾ ಮೀನುಗಾರಿಕಾ ಬೋಟ್ ಒಂದು ಮುಳುಗಿ ಅವಘಡ ಸಂಭವಿಸಿದೆ. ಸದ್ಯ ಭಾರತೀಯ ಕರಾವಳಿ ರಕ್ಷಣಾ ಪಡೆ ಆರು ಜನ ಮೀನುಗಾರರ ರಕ್ಷಣೆ ಮಾಡಿದೆ. ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಅರಬ್ಬಿ ಸಮುದ್ರದ ಮಧ್ಯೆ ಭೀಕರ ಅಲೆಗಳ ಅಬ್ಬರಕ್ಕೆ ಸಿಲುಕಿ ಮೀನುಗಾರಿಕಾ ಬೋಟ್ ಮುಳುಗಡೆಯಾಗಿದೆ. ರಕ್ಷಿಸಲ್ಪಟ್ಟ ಮೀನುಗಾರರನ್ನು ಸುರಕ್ಷಿತವಾಗಿ ನ್ಯೂ ಮಂಗಳೂರು ಬಂದರಿಗೆ ಕರೆತರಲಾಗಿದೆ.
ಮಂಗಳೂರಿನ ಆಳ ಸಮುದ್ರದಲ್ಲಿ 'ಐಎಫ್‌ಬಿ ಮಂಜುಮಾತಾ' ಎಂಬ ಹೆಸರಿನ ದೋಣಿಯಲ್ಲಿ ಆರು ಜನ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು. ದೈತ್ಯ ಅಲೆಗಳ ಹೊಡೆತಕ್ಕೆ ಸಿಲುಕಿ ಬೋಟ್ ಒಳಗಡೆ ಭಾರಿ ಪ್ರಮಾಣದಲ್ಲಿ ನೀರು ನುಗ್ಗಲಾರಂಭಿಸಿದೆ. ನೀರಿನ ಒತ್ತಡ ಹೆಚ್ಚಾಗುತ್ತಿದ್ದಂತೆ ಬೋಟ್ ಸಮುದ್ರದಲ್ಲಿ ಮುಳುಗಲು ಶುರುವಾಗಿ, ಮೀನುಗಾರರು ಸಂಕಷ್ಟಕ್ಜೆ ಸಿಲುಕಿದರು. ಮಾಹಿತಿ ಸಿಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿ, ತಕ್ಷಣವೇ ಕಡಲ ಕಾವಲು ಪಡೆಯ ಅತ್ಯಾಧುನಿಕ ಹಡಗು 'ಐಸಿಜಿಎಸ್ ಸಚೇತ್' ಮೂಲಕ ಸ್ಥಳಕ್ಕೆ ಧಾವಿಸಿದರು. ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದ್ದರಿಂದ ದೋಣಿಯ ಹತ್ತಿರ ಹೋಗುವುದು ಸವಾಲಾಗಿತ್ತು.
ಈ ಸಂದರ್ಭದಲ್ಲಿ ಕೋಸ್ಟ್ ಗಾರ್ಡ್ ಸಿಬ್ಬಂದಿ ಅತ್ಯಾಧುನಿಕ ತಂತ್ರಜ್ಞಾನವಾದ ರಿಮೋಟ್-ಆಪರೇಟೆಡ್ ಲೈಫ್‌ಬಾಯ್‌ಗಳನ್ನು ಬಳಸಿದರು. ಮುಳುಗುತ್ತಿದ್ದ ಬೋಟ್‌ನಲ್ಲಿದ್ದ ಮೀನುಗಾರರ ಬಳಿಗೆ ಈ ರಿಮೋಟ್ ಚಾಲಿತ ಲೈಫ್‌ಬಾಯ್‌ಗಳನ್ನು ಕಳುಹಿಸಿ, ಅವರ ನೆರವಿನೊಂದಿಗೆ ಆರು ಮಂದಿ ಮೀನುಗಾರರನ್ನು ಯಶಸ್ವಿಯಾಗಿ ರಕ್ಷಿಸಿದರು. ಸುರಕ್ಷಿತವಾಗಿ ರಕ್ಷಿಸಲ್ಪಟ್ಟ ಆರು ಮಂದಿ ಮೀನುಗಾರರನ್ನು ಪ್ರಾಥಮಿಕ ಚಿಕಿತ್ಸೆ, ಆಹಾರ ಹಾಗೂ ಅಗತ್ಯ ನೆರವಿಗಾಗಿ ಮಂಗಳೂರಿನ ನ್ಯೂ ಮಂಗಳೂರು ಬಂದರಿಗೆ ಯಶಸ್ವಿಯಾಗಿ ಕರೆತರಲಾಗಿದೆ. ಸದ್ಯ ಎಲ್ಲಾ ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದು, ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರಾವಳಿ- ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆ ಎಚ್ಚರಿಕೆ; ಆರೆಂಜ್ ಅಲರ್ಟ್ ಘೋಷಣೆ
ಕರಾವಳಿಯಲ್ಲಿ ಭಾರೀ ಮಳೆ
ಕರಾವಳಿ ತೀರದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಹಾಗೂ ಅತಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಮಳೆಯೊಂದಿಗೆ ಗಂಟೆಗೆ 30-40 ಕಿ.ಮೀ ವೇಗದಲ್ಲಿ ನಿರಂತರ ಗಾಳಿ ಬೀಸುವ ಸಂಭವವಿದೆ.