ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani Editorial: ಹೊಸ ಮೆಡಿಕಲ್ ಕಾಲೇಜು

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಕೋಲಾರ ಹಾಗೂ ವಿಜಯಪುರ. ಇವುಗಳ ಆರಂಭಕ್ಕೂ ಎನ್‌ಎಂಸಿಗೆ ಪ್ರಸ್ತಾವನೆ ಸಲ್ಲಿಸಲು ಸರಕಾರ ಸಿದ್ಧವಾಗಿದೆ. ಆದರೆ ಅರ್ಹತೆ, ಮಾನದಂಡಗಳ ಪೂರೈಕೆ ಸರಿಯಾಗಿ ಆಗದಿದ್ದರೆ ಅವುಗಳಿಗೂ ಇದೇ ಗತಿ ಆಗಲಿದೆ. ರಾಜ್ಯಕ್ಕೆ ಹೊಸ ಮೆಡಿಕಲ್ ಕಾಲೇಜುಗಳು ಇನ್ನಷ್ಟು ಬೇಕು. ರಾಜಕೀಯ ನಾಯಕರು ಅವು ತಮ್ಮ ಊರಲ್ಲಿ ಆಗಲಿ ಎಂದು ಬಯಸುತ್ತಾರೆ. ಆದರೆ ಶೈಕ್ಷಣಿಕ- ಇತರ ಮೂಲಸೌಕರ್ಯಗಳ ಬಗ್ಗೆ ಯಾರೂ ಗಮನ ಹರಿಸುವುದಿಲ್ಲ.

Vishwavani Editorial: ಹೊಸ ಮೆಡಿಕಲ್ ಕಾಲೇಜು

-

Profile
Ashok Nayak Jul 8, 2026 6:00 AM

ಹೊಸದಾಗಿ ಮೂರು ಸರಕಾರಿ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸುವ ರಾಜ್ಯ ಸರಕಾರದ ಪ್ರಸ್ತಾವನೆಯನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ ತಿರಸ್ಕರಿಸಿದೆ. ರಾಮನಗರ, ಕನಕಪುರ ಹಾಗೂ ಬಾಗಲಕೋಟೆಗಳಲ್ಲಿ ಕಾಲೇಜು ಸ್ಥಾಪನೆಗೆ ರಾಜ್ಯ ಪ್ರಸ್ತಾಪ ಸಲ್ಲಿಸಿತ್ತು. ಅನುಮತಿ ನಿರಾಕರಣೆಗೆ ಆಯೋಗ ನೀಡಿರುವ ಕಾರಣ ಸಿಬ್ಬಂದಿ ಅಭಾವ, ಮೂಲಸೌಕರ್ಯಗಳ ಕೊರತೆ. ಇದಲ್ಲದೇ ಇನ್ನೂ ಮೂರು ಮೆಡಿಕಲ್ ಕಾಲೇಜುಗಳನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಕೋಲಾರ ಹಾಗೂ ವಿಜಯಪುರ. ಇವುಗಳ ಆರಂಭಕ್ಕೂ ಎನ್‌ಎಂಸಿಗೆ ಪ್ರಸ್ತಾವನೆ ಸಲ್ಲಿಸಲು ಸರಕಾರ ಸಿದ್ಧವಾಗಿದೆ. ಆದರೆ ಅರ್ಹತೆ, ಮಾನದಂಡಗಳ ಪೂರೈಕೆ ಸರಿಯಾಗಿ ಆಗದಿದ್ದರೆ ಅವುಗಳಿಗೂ ಇದೇ ಗತಿ ಆಗಲಿದೆ. ರಾಜ್ಯಕ್ಕೆ ಹೊಸ ಮೆಡಿಕಲ್ ಕಾಲೇಜುಗಳು ಇನ್ನಷ್ಟು ಬೇಕು. ರಾಜಕೀಯ ನಾಯಕರು ಅವು ತಮ್ಮ ಊರಲ್ಲಿ ಆಗಲಿ ಎಂದು ಬಯಸುತ್ತಾರೆ. ಆದರೆ ಶೈಕ್ಷಣಿಕ- ಇತರ ಮೂಲಸೌಕರ್ಯಗಳ ಬಗ್ಗೆ ಯಾರೂ ಗಮನ ಹರಿಸುವುದಿಲ್ಲ.

ಇದನ್ನೂ ಓದಿ: Vishwavani Editorial: ಮಹತ್ವದ ಪ್ರಧಾನಿ ಭೇಟಿ

ರಾಜ್ಯದಲ್ಲಿ ಸದ್ಯಕ್ಕೆ ರಾಷ್ಟ್ರ ದರ್ಜೆಯ ಸರಕಾರಿ ಮೆಡಿಕಲ್ ಕಾಲೇಜುಗಳು ಒಂದೆರಡು ಮಾತ್ರ. ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳು ಮೊದಲ ಆಯ್ಕೆಯಾಗಿ ಬೆಂಗಳೂರು ಅಥವಾ ತಪ್ಪಿದರೆ ಮೈಸೂರು ಮೆಡಿಕಲ್ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅನಿವಾರ್ಯ ಆದರೆ ಮಾತ್ರ ಬೇರೆ ಕಡೆಗೆ ತೆರಳುತ್ತಾರೆ. ಇತರ ಕಡೆಗಳ ಕಾಲೇಜುಗಳು ಅವರಿಗೆ ಕನಿಷ್ಠ ಆದ್ಯತೆ. ತಪ್ಪಿದರೆ ಖಾಸಗಿ ಕಾಲೇಜುಗಳಿಗೆ ಹೋಗುತ್ತಾರೆ. ಇದಕ್ಕೂ ಕಾರಣ ಮೇಲೆ ಹೇಳಿದ್ದೇ. ಮೆಡಿಕಲ್ ಕಾಲೇಜಿಗೆ ಸಮರ್ಪಕವಾದ ವಿಸ್ತಾರವಾದ ಕಟ್ಟಡ ಬೇಕು.

ಅಡ್ವಾನ್ಸ್ಡ್ ಪ್ರಯೋಗಾಲಯಗಳು, ವೈದ್ಯಕೀಯ ಮಾದರಿಗಳನ್ನು ಸಂಗ್ರಹಿಸುವ ಸಂಗ್ರಹಾಲಯ ಗಳು ಬೇಕು. ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳ ವ್ಯವಸ್ಥೆ ಆಗಬೇಕು. ಸುಸಜ್ಜಿತ ಗ್ರಂಥಾಲಯ ಹಾಗೂ ಉನ್ನತ ಮಟ್ಟದ ಬೋಧಕ ಸಿಬ್ಬಂದಿ, ಪೂರಕ ಸಿಬ್ಬಂದಿಗಳಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಬೋಧನಾ ಆಸ್ಪತ್ರೆ ಇರಬೇಕು. ಜೊತೆಯಲ್ಲಿ ಆಸ್ಪತ್ರೆ ಇಲ್ಲದೇ ಹೋದರೆ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ಪಡೆಯಲು ಸಾಧ್ಯವಾಗುವುದಿಲ್ಲ.

ಸರಕಾರ ಇದನ್ನೆಲ್ಲ ಗಮನಿಸಿ ಪ್ರಸ್ತಾವನೆ ಸಲ್ಲಿಸಬೇಕಿದೆ. ನಮ್ಮ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುವುದು, ಅಲ್ಲಿ ಎಲ್ಲ ಬಗೆಯ ಚಿಕಿತ್ಸೆಗಳನ್ನು ಒದಗಿಸಿ ಪರಿಣತ ವೈದ್ಯಕೀಯ ಸಿಬ್ಬಂದಿಯನ್ನು ನೇಮಿಸುವುದರಿಂದ ಈ ಕೊರತೆ ನಿವಾರಣೆ ಆಗಲು ಸಾಧ್ಯವಿದೆ. ಮೆಡಿಕಲ್ ಶಿಕ್ಷಣ ಬಲು ನಿಖರ ವಾದ (ಕಟ್ಟಿಂಗ್ ಎಡ್ಜ್) ತಜ್ಞತೆ, ಶೈಕ್ಷಣಿಕ ಸೌಲಭ್ಯಗಳನ್ನು ಬೇಡುತ್ತದೆ. ಅದನ್ನು ಒದಗಿಸಿಕೊಂಡು ಮುಂದುವರಿಯಲು ನಮ್ಮ ಸರಕಾರಕ್ಕೆ ಸಾಧ್ಯವಿದೆ.