Vishwavani Editorial: ಹತಾಶೆಯಲ್ಲಿ ಸಿಲುಕಿರುವ ಪಾಕ್
ಭಾರತವನ್ನು ವಿನಾ ಕಾರಣ ಕೆರಳಿಸಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದ್ದ ಪಾಕಿಸ್ತಾನ ಅದಕ್ಕೆ ಬೆಲೆ ತೆರಬೇಕಾದ ಕಾಲ ಸನ್ನಿಹಿತವಾದಂತೆ ತೋರುತ್ತಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅಬಾಧಿತವಾಗಿ ಏರುತ್ತಿರುವ ಹಣದುಬ್ಬರ, ಇಂಧನಗಳ ಬೆಲೆ ಹಾಗೂ ಇದರಿಂದಾಗಿ ದೈನಂದಿನ ಜೀವನ ನಿರ್ವಹಣೆ ದುಸ್ತರವಾಗಿರುವ ಕಾರಣಕ್ಕೆ ಅಲ್ಲಿನ ಜನರು ಸರಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ.

-

ಮತ್ತೊಂದೆಡೆ ಬಲೂಚಿಸ್ತಾನದ ಬಂಡುಕೋರರ ಹೋರಾಟದಿಂದಾಗಿ ಪಾಕಿಸ್ತಾನ ಸರಕಾರ ನಿದ್ರೆಗೆಡುವಂತಾಗಿದೆ. ಹೀಗಾಗಿ ಹತಾಶೆಯಲ್ಲಿ ಸಿಲುಕಿರುವ ಪಾಕಿಸ್ತಾನ ಈ ಉಸಿರುಕಟ್ಟುವ ಸ್ಥಿತಿಯಿಂದ ಹೊರಬರಲು ತನ್ನ ಆಪದ್ಬಾಂಧವ ಅಮೆರಿಕದೆಡೆಗೆ ದೈನ್ಯತೆಯ ನೋಟವನ್ನು ಬೀರುತ್ತಿದೆ.
ಇದನ್ನೂ ಓದಿ: Vishwavani Editorial: ಇದು ಬಲವಂತದ ಮಾಘಸ್ನಾನವೇ?
ಅಮೆರಿಕದ ಸಹಯೋಗದೊಂದಿಗೆ ಪಾಕಿಸ್ತಾನವು ತನ್ನ ನೆಲದಲ್ಲಿ ತೈಲನಿಕ್ಷೇಪಗಳ ಅಭಿವೃದ್ಧಿಗೆ ಕೈಹಾಕಲಿದೆ ಎಂದು ಕೆಲ ದಿನಗಳ ಹಿಂದೆ ಸುದ್ದಿಯಾಗಿತ್ತು. ಇದು ಎಷ್ಟರಮಟ್ಟಿಗೆ ನಿಜ ಎಂಬು ದನ್ನು ಮುಂಬರುವ ದಿನಗಳಷ್ಟೇ ಹೇಳಬಲ್ಲವು. ಈ ನಡುವೆ, ಪಾಕಿಸ್ತಾನದಲ್ಲಿ ಲಭ್ಯವಿರುವ ಅಪರೂಪದ ಖನಿಜಗಳ ಕುರಿತು ಅಮೆರಿಕಕ್ಕೆ ಮನವರಿಕೆ ಮಾಡಿಕೊಟ್ಟು, ಪಾಕ್‌ನಲ್ಲಿ ಬಂಡವಾಳ ಹೂಡಿಕೆಗೆ ಟ್ರಂಪ್‌ರ ಮನವೊಲಿಸಲು ಅಲ್ಲಿನ ಪ್ರಧಾನಿ ಶಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಕಸರತ್ತು ನಡೆಸಿರುವುದೂ ಸುದ್ದಿಯಾಗಿದೆ.
ಯಾವುದೇ ದೇಶವು ಇಂಥ ಚಟುವಟಿಕೆಯಲ್ಲಿ ತೊಡಗುವುದರಲ್ಲಿ ಮತ್ತು ಅದಕ್ಕಾಗಿ ಮತ್ತೊಂದು ರಾಷ್ಟ್ರದ ನೆರವು ಕೋರುವುದರಲ್ಲಿ ತಪ್ಪೇನಿಲ್ಲ; ಆದರೆ, ಇಂಥ ಸಕಾರಾತ್ಮಕ ಉಪಕ್ರಮಗಳಿಗೆ ಮುಂದಾಗುವ ಬದಲು ಪಾಕಿಸ್ತಾನವು ಭಾರತದ ವಿರುದ್ಧ ಏಕಪ್ರಕಾರವಾಗಿ ಕತ್ತಿ ಮಸೆದುಕೊಂಡೇ ಬಂದಿದ್ದೇಕೆ? ಎಂಬುದು ಯಕ್ಷಪ್ರಶ್ನೆ.
ಒಂದೊಮ್ಮೆ ಪಾಕಿಸ್ತಾನವು, ದಶಕಗಳಿಂದಲೂ ತಾನು ಮಾಡಿಕೊಂಡೇ ಬಂದ ಕುಯುಕ್ತಿಗಳನ್ನು ಕೈಬಿಟ್ಟು, ಸಕಾರಾತ್ಮಕವಾಗಿ ಚಿಂತನೆ ನಡೆಸಿದ್ದಿದ್ದರೆ, ಪ್ರಸ್ತುತ ಅದು ಎದುರಿಸುತ್ತಿರುವ ಆರ್ಥಿಕ ಕುಸಿತ, ಅರಾಜಕತೆ ಮುಂತಾದ ಸ್ಥಿತಿಗಳುಎದುರಾಗುತ್ತಿರಲಿಲ್ಲವೇನೋ? ಆದರೆ, ಮತ್ತೊಬ್ಬರ ಬಟ್ಟೆಗೆ ಮೆತ್ತಲೆಂದೇ ಕೆಸರಿನಲ್ಲಿ ಕೈ ಅದ್ದಿಕೊಂಡು ಕೂತವರಿಗೆ ಅಂಥ ಚಿಂತನೆ ಹೇಗೆ ಹೊಮ್ಮಬೇಕು?!