ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vishwavani Editorial: ಮೂಗು ಹಿಡಿದರೆ ಬಾಯಿ ಬಿಟ್ಟೀತು

ಗೊಡ್ಡು ಬೆದರಿಕೆಗಳಿಗೆ ಸೊಪ್ಪು ಹಾಕದ ಭಾರತ ಎಂದಿನಂತೆ ‘ನಿರ್ಲಿಪ್ತ ರಾಜ ತಂತ್ರ’ವನ್ನು ಮೆರೆಯತೊಡಗಿತು ಹಾಗೂ ಪರ್ಯಾಯ ಆಯ್ಕೆಗಳತ್ತ ಮುಖ ಮಾಡ ತೊಡಗಿತು. ಆಗ ಮುನ್ನೆಲೆಗೆ ಬಂದಿದ್ದೇ ಐರೋಪ್ಯ ಒಕ್ಕೂಟದ ಜತೆಗಿನ ‘ಮುಕ್ತ ವ್ಯಾಪಾರ ಒಪ್ಪಂದ’ (ಎಫ್‌ʼಟಿಎ). ಇದು ಕೈಗೂಡುತ್ತಿದ್ದಂತೆಯೇ ಎಚ್ಚೆತ್ತುಕೊಂಡು ತಮ್ಮ ರಾಗವನ್ನು ಬದಲಿಸಿರುವ ಟ್ರಂಪ್, ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜತೆಗೆ ದೂರವಾಣಿ ಯಲ್ಲಿ ಮಾತುಕತೆ ನಡೆಸಿ, ಹೊಸ ವ್ಯಾಪಾರ ಒಪ್ಪಂದವನ್ನೂ ಘೋಷಿಸಿದ್ದಾರೆ

Vishwavani Editorial: ಮೂಗು ಹಿಡಿದರೆ ಬಾಯಿ ಬಿಟ್ಟೀತು

-

Ashok Nayak
Ashok Nayak Feb 4, 2026 9:09 AM

ರಷ್ಯಾದಿಂದ ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ಭಾರತವು ತನ್ಮೂಲಕ, ಉಕ್ರೇನ್ ಜತೆಗಿನ ರಷ್ಯಾದ ಯುದ್ಧಕ್ಕೆ ಪರೋಕ್ಷವಾಗಿ ಆರ್ಥಿಕ ಸಂಪನ್ಮೂಲವನ್ನು ಒದಗಿಸಿದೆ ಎಂಬ ಕುಂಟುನೆಪವನ್ನು ಒಡ್ಡಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಮೇಲೆ ಕೆಂಗಣ್ಣು ಬೀರಿದ್ದು ಗೊತ್ತಿರುವ ಸಂಗತಿಯೇ.

ಅಷ್ಟಕ್ಕೇ ಸುಮ್ಮನಾಗದ ಟ್ರಂಪ್ ಮಹಾಶಯರು, ಭಾರತದಿಂದ ಅಮೆರಿಕಕ್ಕೆ ಬಂದುಬೀಳುವ ವೈವಿಧ್ಯಮಯ ಸರಕುಗಳ ಮೇಲೆ ಅತಿರೇಕದ ಪ್ರಮಾಣದಲ್ಲಿ ಸುಂಕ ಹೇರಿ ಐಲುಪೈಲು ಆಟವನ್ನು ಮೆರೆದಿದ್ದರು. ಇಂಥ ಧಮಕಿಯಿಂದಾಗಿ ಭಾರತವು ಅಮೆರಿಕದ ಎದುರು ಮೊಣ ಕಾಲು ಊರುತ್ತದೆ ಎಂಬುದು ಟ್ರಂಪ್‌ರ ಲೆಕ್ಕಾಚಾರವಾಗಿತ್ತು.

ಇದನ್ನೂ ಓದಿ: Vishwavani Editorial: ಪುಸ್ತಕಗಳ ಓದು ಹೆಚ್ಚಾಗಲಿ

ಆದರೆ, ಇಂಥ ಗೊಡ್ಡು ಬೆದರಿಕೆಗಳಿಗೆ ಸೊಪ್ಪು ಹಾಕದ ಭಾರತ ಎಂದಿನಂತೆ ‘ನಿರ್ಲಿಪ್ತ ರಾಜ ತಂತ್ರ’ವನ್ನು ಮೆರೆಯತೊಡಗಿತು ಹಾಗೂ ಪರ್ಯಾಯ ಆಯ್ಕೆಗಳತ್ತ ಮುಖ ಮಾಡ ತೊಡಗಿತು. ಆಗ ಮುನ್ನೆಲೆಗೆ ಬಂದಿದ್ದೇ ಐರೋಪ್ಯ ಒಕ್ಕೂಟದ ಜತೆಗಿನ ‘ಮುಕ್ತ ವ್ಯಾಪಾರ ಒಪ್ಪಂದ’ (ಎಫ್‌ʼಟಿಎ). ಇದು ಕೈಗೂಡುತ್ತಿದ್ದಂತೆಯೇ ಎಚ್ಚೆತ್ತುಕೊಂಡು ತಮ್ಮ ರಾಗವನ್ನು ಬದಲಿಸಿರುವ ಟ್ರಂಪ್, ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜತೆಗೆ ದೂರವಾಣಿ ಯಲ್ಲಿ ಮಾತುಕತೆ ನಡೆಸಿ, ಹೊಸ ವ್ಯಾಪಾರ ಒಪ್ಪಂದವನ್ನೂ ಘೋಷಿಸಿದ್ದಾರೆ.

ಸಾಲದೆಂಬಂತೆ, ಭಾರತದ ಸರಕುಗಳ ಮೇಲೆ ಹೇರಿದ್ದ ದುಬಾರಿ ಸುಂಕವನ್ನು ಶೇ.25ರಿಂದ ಶೇ.18ಕ್ಕೆ ಇಳಿಸಿದ್ದಾರೆ. ಕ್ಷೇತ್ರತಜ್ಞರು ಹೇಳುವಂತೆ ಈ ಸುಂಕಮಟ್ಟದಲ್ಲಿ ಮತ್ತಷ್ಟು ಇಳಿಕೆ ಯಾಗುವ ಸಾಧ್ಯತೆಯೂ ಇದೆಯಂತೆ. ಅಲ್ಲಿಗೆ, ‘ಮೂಗನ್ನು ಗಟ್ಟಿಯಾಗಿ ಹಿಡಿದರೆ, ಬಾಯಿ ತಾನಾಗೇ ತೆರೆದುಕೊಳ್ಳುತ್ತದೆ’ ಎಂಬ ಜಾಣನುಡಿಗೆ ತಾಜಾ ಪುರಾವೆ ಸಿಕ್ಕಂತಾಯಿತು.

ಅಮೆರಿಕದ ಈ ನಿರ್ಧಾರದಿಂದ ಭಾರತಕ್ಕೆ ಹಲವು ನೆಲೆಗಟ್ಟಿನ ಪ್ರಯೋಜನಗಳಾಗಲಿವೆ ಎನ್ನಲಾಗುತ್ತಿದೆ. ಹಾಗಂತ ನಾವು ಮೈಮರೆಯುವಂತಿಲ್ಲ; ಹೇಳಿ ಕೇಳಿ ಐಲುಪೈಲು ದೊರೆ ಎನಿಸಿಕೊಂಡಿರುವ ಟ್ರಂಪ್ ಯಾವಾಗ ಬೇಕಿದ್ದರೂ ‘ದೋಸೆ ಮಗುಚುವ’ ಸಾಧ್ಯತೆ ಇರುತ್ತದೆ ಯಾದ್ದರಿಂದ ಭಾರತವು ತನ್ನ ಹುಷಾರಿನಲ್ಲಿ ತಾನು ಇರಬೇಕು. ದೇಶದ ನಾಯಕತ್ಲಕ್ಕೆ ಇದು ಗೊತ್ತಿರುವಂಥದ್ದೇ ಬಿಡಿ!