Vishwavani Editorial: ಮತ್ತೆ ಕದನದ ಕಳವಳ
ಯುದ್ಧದ ಹಿನ್ನೆಲೆಯಲ್ಲಿ ಸತತವಾಗಿ ಏರಿದ್ದ ತೈಲ ಬೆಲೆಗಳು ಇತ್ತೀಚೆಗೆ ಒಂದು ಹದಕ್ಕೆ ಬಂದಿದ್ದವು. ಆದರೆ ಮತ್ತೆ ಅವು ಏರಲಿದ್ದು, ಹಣದುಬ್ಬರದ ಭೂತ ಮತ್ತೆ ತಲೆದೋರುತ್ತಿದೆ. ಕದನವಿರಾಮ ಒಪ್ಪಂದವನ್ನು ಇರಾನ್ ಉಲ್ಲಂಸಿದೆ ಎಂಬುದು ಅಮೆರಿಕ ಆರೋಪ. ಆದರೆ ಅಮೆರಿಕ ಹಾಗೂ ಇಸ್ರೇಲ್ ಕೂಡ ಮತ್ತೊಂದು ದೇಶದ ಮುಖ್ಯಸ್ಥನನ್ನು ಹೊಡೆದುರುಳಿಸಿ ಅಂತಾರಾಷ್ಟ್ರೀಯ ಕಾನೂನನ್ನು ಬಹು ಹಿಂದೆಯೇ ಉಲ್ಲಂಘಿಸಿವೆ.
-
ಒಂದು ತಾರ್ಕಿಕ ಅಂತ್ಯಕ್ಕೆ ತಲುಪಿತೆಂದು ಭಾವಿಸಲಾಗಿದ್ದ ಅಮೆರಿಕ- ಇರಾನ್- ಇಸ್ರೇಲ್ ಯುದ್ಧ ಮತ್ತೆ ಉಲ್ಬಣಿಸು ಭೀತಿ ಹುಟ್ಟುಹಾಕಿದೆ. ಯುದ್ಧ ವಿರಾಮ ಒಪ್ಪಂದ ಮಾತುಕತೆಯ ನಡುವೆ ಇರಾನ್‌ನ ಬಂದರು ಮತ್ತು ಮಿಲಿಟರಿ ತಾಣಗಳ ಮೇಲೆ ಅಮೆರಿಕ ದಾಳಿ ನಡೆಸಿದೆ. ಹೊರ್ಮುಜ್ ಜಲಸಂಧಿಯಲ್ಲಿ ಮೂರು ಸರಕು ಹಡಗುಗಳ ಮೇಲೆ ಹಾಗೂ ಸುತ್ತ ಇರುವ ಅಮೆರಿಕದ ಮಿತ್ರ ರಾಷ್ಟ್ರಗಳಲ್ಲಿರುವ ಅದರ ಮಿಲಿಟರಿ ಕೇಂದ್ರಗಳ ಮೇಲೆ ಇರಾನ್ ದಾಳಿ ನಡೆಸಿದ ಬಳಿಕ ಅಮೆರಿಕ ಈ ಆಕ್ರಮಣ ನಡೆಸಿದೆ.
ಒಂದು ಕಡೆಯಲ್ಲಿ ಇರಾನ್‌ನಲ್ಲಿ ನಡೆಯುತ್ತಿರುವ ಖಮೇನಿ ಅಂತ್ಯಕ್ರಿಯೆಯಲ್ಲಿ ‘ಟ್ರಂಪ್‌ನನ್ನು ಕೊಲ್ಲಿ’ ಎಂಬ ಘೋಷಣೆಗಳು ಮೊಳಗುತ್ತಿದ್ದರೆ, ಇನ್ನೊಂದು ಕಡೆ ಟ್ರಂಪ್ ‘ಇರಾನನ್ನು ನಾಶಪಡಿಸುತ್ತೇವೆ’ ಎಂದು ಗುಡುಗಿದ್ದಾರೆ.
ಅಂತೂ ಇಬ್ಬರು ವಿಕೃತ ಮನಸ್ಕರ ನಡುವೆ ಸಿಕ್ಕಿ ಇಡೀ ಜಗತ್ತು ನಲುಗುವಂತಾಗಿದೆ. ಕಳೆದ ಫೆಬ್ರವರಿ ತಿಂಗಳಾಂತ್ಯದಲ್ಲಿ ಪ್ರಾರಂಭವಾಗಿರುವ ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವಿನ ಯುದ್ಧ ಸತತ ಮಾತುಕತೆಯ ಪರಿಣಾಮವಾಗಿ ಕದನ ವಿರಾಮದ ಹಂತ ತಲುಪಿತ್ತು. ಆದರೆ ಇದೀಗ ಮತ್ತೆ ದಾಳಿ ಆರಂಭವಾಗಿರುವುದರಿಂದ ಒಪ್ಪಂದ ಮಾತುಕತೆಗಳ ಖಂಡಿತವಾಗಿಯೂ ನಿಲ್ಲಲಿದೆ. ಈ ದಾಳಿಗಳು ಆರಂಭವಾದ ಕೂಡಲೇ ಕಚ್ಚಾ ತೈಲ ಬೆಲೆ ಮತ್ತೆ ಏರಲಾರಂಭಿಸಿದೆ.
ಇದನ್ನೂ ಓದಿ: Vishwavani Editorial: ಹೊಸ ಮೆಡಿಕಲ್ ಕಾಲೇಜು
ಯುದ್ಧದ ಹಿನ್ನೆಲೆಯಲ್ಲಿ ಸತತವಾಗಿ ಏರಿದ್ದ ತೈಲ ಬೆಲೆಗಳು ಇತ್ತೀಚೆಗೆ ಒಂದು ಹದಕ್ಕೆ ಬಂದಿದ್ದವು. ಆದರೆ ಮತ್ತೆ ಅವು ಏರಲಿದ್ದು, ಹಣದುಬ್ಬರದ ಭೂತ ಮತ್ತೆ ತಲೆದೋರುತ್ತಿದೆ. ಕದನವಿರಾಮ ಒಪ್ಪಂದವನ್ನು ಇರಾನ್ ಉಲ್ಲಂಘಿಸಿದೆ ಎಂಬುದು ಅಮೆರಿಕ ಆರೋಪ. ಆದರೆ ಅಮೆರಿಕ ಹಾಗೂ ಇಸ್ರೇಲ್ ಕೂಡ ಮತ್ತೊಂದು ದೇಶದ ಮುಖ್ಯಸ್ಥನನ್ನು ಹೊಡೆದುರುಳಿಸಿ ಅಂತಾರಾಷ್ಟ್ರೀಯ ಕಾನೂನನ್ನು ಬಹು ಹಿಂದೆಯೇ ಉಲ್ಲಂಘಿಸಿವೆ.
ಇವೆಲ್ಲದರಿಂದ ತೊಂದರೆ ಆಗುತ್ತಿರುವುದು ಇತರ ದೇಶಗಳಿಗೆ. ಬೆಲೆ ಏರಿಕೆಯು ಎಲ್ಲ ದೇಶಗಳ ಬಡ, ಮಧ್ಯಮವರ್ಗದವರನ್ನು ನಾಶ ಮಾಡುತ್ತದೆ. ಕದನದ ದುಷ್ಪರಿಣಾಮ ಬಹಳ ವರ್ಷಗಳ ಕಾಲ ಮುಂದುವರಿಯುತ್ತದೆ. ಮುಂದಿನ ತಲೆಮಾರುಗಳೂ ಇದರ ದುರ್ಭರತೆಯನ್ನು ಅನುಭವಿಸ ಬೇಕಾ ಗುತ್ತದೆ. ಒಮ್ಮೆ ಆರಂಭವಾದ ಯುದ್ಧ ಎಂದೂ ನಿಲ್ಲದೆ ಬೇರೆ ಬೇರೆ ಅವತಾರಗಳಲ್ಲಿ ಮುಂದುವರಿ ಯುತ್ತದೆ.
ಅಂತಾರಾಷ್ಟ್ರೀಯ ಸಮುದಾಯ ಈ ಕ್ಷಣ ಮಧ್ಯ ಪ್ರವೇಶಿಸಿ ಕದನ ನಿಲ್ಲಿಸದಿದ್ದರೆ ಉಳಿಗಾಲವಿಲ್ಲ. ವಿಶ್ವಸಂಸ್ಥೆಯೂ ತನ್ನ ಹೊಣೆಗಾರಿಕೆಯನ್ನು ಮರೆತಂತೆ ಮೌನ ತಾಳಿರುವುದು ಕ್ಷಮಾರ್ಹವಲ್ಲ. ಈ ಹಿಂದೆ ನಮ್ಮ ಪ್ರಧಾನಿ ಮೋದಿಯವರು ಸೂಚಿಸಿದಂತೆ ಮಿತವ್ಯಯದ ಹಾದಿಯನ್ನು ನಾವು ಹಿಡಿಯದಿದ್ದರೆ ನಮಗೂ ಸಂಕಷ್ಟ ಕಾದಿದೆ.