Vishwavani Editorial: ಸಿಜೆಪಿ ಕಲಿಸಿದ ಪಾಠ
ಸೋರಿಕೆ ತಿಳಿದು ಬಂದಾಗಲೇ ಕೇಂದ್ರ ಸಿಬಿಐ ತನಿಖೆ, ಮರುಪರೀಕ್ಷೆ ಸೇರಿದಂತೆ ಕೆಲವು ಕ್ರಮಗಳನ್ನು ತೆಗೆದುಕೊಂಡಿದ್ದು ನಿಜ. ಆದರೆ ವಿದ್ಯಾರ್ಥಿಗಳೊಂದಿಗೆ ಮಾತುಕತೆಗೆ ಬಾರದ, ಸೋನಂ ವಾಗ್ಚುಕ್ ಸತ್ಯಾಗ್ರಹ ನಿರತರಾಗಿ 20 ದಿನ ಕಳೆದರೂ ಉಸಿರೆತ್ತದ ಕೇಂದ್ರ ಸರಕಾರದ ಮೌನವೇ ಅದಕ್ಕೆ ದುಬಾರಿ ಯಾಗಿಬಿಟ್ಟಿದೆ.
-
ರಾಜಧಾನಿ ದೆಹಲಿ ಹಾಗೂ ದೇಶಾದ್ಯಂತ ಕಾಕ್ರೋಚ್ ಜನತಾ ಪಾರ್ಟಿಯ ನೇತೃತ್ವದಲ್ಲಿ ವಿದ್ಯಾರ್ಥಿ ಗಳು ನಡೆಸಿದ ಪ್ರತಿಭಟನೆಗೆ ತಾರ್ಕಿಕ ಅಂತ್ಯ ದೊರೆತಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಇದು ಸಿಜೆಪಿ ಪ್ರಮುಖ ಬೇಡಿಕೆಯಾಗಿತ್ತು. ಪ್ರತಿಭಟನೆಯಲ್ಲಿ ಭಾಗಿಯಾಗಿ ನೀಟ್ ಪರೀಕ್ಷೆಗೆ ಸಂಬಂಧಿಸಿ ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಹಾಗೂ ಪ್ರತಿಭಟನಾನಿರತರ ಮೇಲಿನ ಕೇಸ್ ವಾಪಸ್ ಎಂಬ ಇನ್ನೆರಡು ಬೇಡಿಕೆಗಳಿಗೂ ಸರಕಾರ ಒಪ್ಪಿದೆ. ಇದು ಆಳುವ ಸರಕಾರಗಳಿಗೆ ಒಂದು ಪಾಠವನ್ನಂತೂ ಕಲಿಸಿದೆ.
ನೀಟ್ ಪರೀಕ್ಷೆಯಲ್ಲಿ ನಡೆದ ಅಕ್ರಮಗಳಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆಯಾಗಲಿದೆ ಎಂಬ ಭರವಸೆಯನ್ನು ಇದು ಮೂಡಿಸಿದೆ. ಪ್ರತಿಭಟನೆ ನಿರತ ವಿದ್ಯಾರ್ಥಿಗಳು ಸದ್ಯ ಮನೆಗೆ ಮರಳಿದ್ದು, ನಿರೀಕ್ಷಿಸಿದ ಸುಧಾರಣೆ ಕಾಣದಿದ್ದರೆ ಮರಳಿ ಪ್ರತಿಭಟನೆಗೆ ಇಳಿಯುವ ಎಚ್ಚರಿಕೆಯನ್ನೂ ನೀಡಿದ್ದಾರೆ.
ಇದನ್ನೂ ಓದಿ: Vishwavani Editorial: ಬದಲಾವಣೆಯ ಗಾಳಿ
ಕರ್ನಾಟಕದ ಪ್ರಹ್ಲಾದ ಜೋಶಿ ಶಿಕ್ಷಣ ಸಚಿವರಾಗಿದ್ದಾರೆ. ಶಿಕ್ಷಣ ವ್ಯವಸ್ಥೆಯನ್ನು ಅವರು ಹೇಗೆ ಸುಧಾರಿಸುತ್ತಾರೆ ಎಂಬುದನ್ನು ನೋಡಬೇಕಿದೆ. ಈ ಚಳುವಳಿ ಇಷ್ಟಲ್ಲದೇ ಮುಂದಿನ ದಿನಗಳಲ್ಲಿ ವ್ಯಾಪಕ ರಾಜಕೀಯ ಸಂಚಲನಕ್ಕೆ ಕಾರಣವಾಗುವ ಎಲ್ಲ ಸೂಚನೆಗಳೂ ಕಾಣಿಸುತ್ತಿವೆ.
ಮುಖ್ಯವಾಗಿ, ಬಿಜೆಪಿ ಸರಕಾರವನ್ನು ಯಾರೂ ಅಲ್ಲಾಡಿಸಲಾರರು ಎಂಬ ನಂಬಿಕೆ ಅಲುಗಾಡಿದೆ. ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಎಂದೂ ಮಂಕಾಗದು ಎಂಬ ಮಾತೂ ಸುಳ್ಳಾಗಿದೆ. ಈ ಭ್ರಷ್ಟ ವ್ಯವಸ್ಥೆ ಯನ್ನು ಯಾರೂ ಸರಿಪಡಿಸಲಾರರು ಎಂಬ ಹತಾಶೆಯೂ ಹುಸಿಯೆಂದು ರುಜುವಾತಾಗಿದೆ. ಕೇಂದ್ರ ಸರಕಾರ ನೀಟ್ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನೂ ಇನ್ನು ಮುಂದೆ ಯಾವುದೇ ಪ್ರಶ್ನೆ ಪತ್ರಿಕೆ ಸೋರಿಕೆ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಇಲ್ಲದಂತೆ ಬಿಗಿಯಾ ಗಿಸಬೇಕಿದೆ. ತಂತ್ರಜ್ಞಾನ ಇಷ್ಟೊಂದು ಮುಂದುವರಿದಿರುವಾಗ, ಯಾವುದೇ ಪ್ರಶ್ನೆಪತ್ರಿಕೆ ಸೋರಿಕೆ ಸಾಧ್ಯವಿಲ್ಲದಂತೆ ಕಂಪ್ಯೂಟರ್ ಆಧಾರಿತ ಆಗಿಸುವುದು ಸಾಧ್ಯವಿದೆ.
ಸೋರಿಕೆ ತಿಳಿದು ಬಂದಾಗಲೇ ಕೇಂದ್ರ ಸಿಬಿಐ ತನಿಖೆ, ಮರುಪರೀಕ್ಷೆ ಸೇರಿದಂತೆ ಕೆಲವು ಕ್ರಮಗಳನ್ನು ತೆಗೆದುಕೊಂಡಿದ್ದು ನಿಜ. ಆದರೆ ವಿದ್ಯಾರ್ಥಿಗಳೊಂದಿಗೆ ಮಾತುಕತೆಗೆ ಬಾರದ, ಸೋನಂ ವಾಗ್ಚುಕ್ ಸತ್ಯಾಗ್ರಹ ನಿರತರಾಗಿ 20 ದಿನ ಕಳೆದರೂ ಉಸಿರೆತ್ತದ ಕೇಂದ್ರ ಸರಕಾರದ ಮೌನವೇ ಅದಕ್ಕೆ ದುಬಾರಿ ಯಾಗಿಬಿಟ್ಟಿದೆ. ಶಿಕ್ಷಣ ಸುಧಾರಣೆಯ ಅಂಶ ರಾಜ್ಯಗಳು ನಡೆಸುವ ಉನ್ನತ ಪರೀಕ್ಷೆಗಳಿಗೂ ಅನ್ವಯ ಆಗಬೇಕು. ಉದಾಹರಣೆಗೆ ಕರ್ನಾಟಕದಲ್ಲಿ ಕೆಪಿಎಸ್‌ಸಿ ಬ್ರಹ್ಮಾಂಡ ಭ್ರಷ್ಟತೆಯ ಆಡುಂಬೊಲ ವಾಗಿದೆ. ಇಲ್ಲಿ ಅಕ್ರಮ ನಡೆಯದ ಪರೀಕ್ಷೆಗಳೇ ಇಲ್ಲ. ಸ್ವಜನಪಕ್ಷಪಾತ ಹುಟ್ಟಿಕೊಂಡದ್ದೇ ಇಲ್ಲಿಂದ ಎಂದು ಆರೋಪಿಸಬಹುದು. ‘ಜಿರಳೆಗಳು’ ಕೈಯಿಕ್ಕುವ ಮೊದಲೇ ಈ ವ್ಯವಸ್ಥೆಗೆ ಶಸ್ತ್ರಚಿಕಿತ್ಸೆಗೆ ಮುಂದಾಗುವುದು ಒಳ್ಳೆಯದು.