ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani Editorial: ಚುನಾವಣೆಗೆ ಕಾಲ ಬಂದಿಲ್ಲ

ಹೊಸದಾಗಿ ಮತದಾರರ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆಗೆ ಹೆಚ್ಚಿನ ಸಮಯ ಬೇಕಾಗುವುದರಿಂದ ಹಳೆಯ ಮತದಾರರ ಪಟ್ಟಿಯನ್ನೆ ಆಧರಿಸಿ ಚುನಾವಣೆ ನಡೆಸಲು ಅವಕಾಶ ಕೋರಿದೆ. ಇದು ಎಂದೂ ಮುಗಿಯದ ಪ್ರಹಸನ ಆಗಿಬಿಟ್ಟಿದೆ. ಸ್ಥಳೀಯ ಸಂಸ್ಥೆಗಳು, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್‌ಗಳ ಚುನಾವಣೆಯೂ ಇದೇ ರೀತಿ ಮುಂದೆ ಮುಂದೆ ಹೋಗುತ್ತಲೇ ಇದೆ.

Vishwavani Editorial: ಚುನಾವಣೆಗೆ ಕಾಲ ಬಂದಿಲ್ಲ

-

Profile
Ashok Nayak Nov 19, 2026 9:23 AM

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆಗೆ ಮತ್ತಷ್ಟು ಸಮಯ ನೀಡುವಂತೆ ಕರ್ನಾಟಕ ಸರಕಾರ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದೆ. ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆ ನಡೆಸಲು ನಿಗದಿಪಡಿಸಿರುವ ಕಾಲಮಿತಿಯನ್ನು ವಿಸ್ತರಿಸಬೇಕು. 2026ರ ಡಿಸೆಂಬರ್ ಅಂತ್ಯದೊಳಗೆ ಚುನಾವಣೆ ನಡೆಸುವ ಬದಲಿಗೆ 2027ರ ಜನವರಿ 31ರೊಳಗೆ ಚುನಾವಣೆ ಪೂರ್ಣಗೊಳಿಸಲು ಅನುಮತಿ ನೀಡುವಂತೆ ಸರಕಾರ ಮನವಿ ಮಾಡಿದೆ. ಈ ಹಿಂದೆ ರಾಜ್ಯ ಚುನಾವಣಾ ಆಯೋಗ ಕೂಡ ಕಾಲಾವಕಾಶ ವಿಸ್ತರಣೆಯ ಅರ್ಜಿ ಸಲ್ಲಿಸಿತ್ತು.

ಹೊಸದಾಗಿ ಮತದಾರರ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆಗೆ ಹೆಚ್ಚಿನ ಸಮಯ ಬೇಕಾಗುವುದರಿಂದ ಹಳೆಯ ಮತದಾರರ ಪಟ್ಟಿಯನ್ನೆ ಆಧರಿಸಿ ಚುನಾವಣೆ ನಡೆಸಲು ಅವಕಾಶ ಕೋರಿದೆ. ಇದು ಎಂದೂ ಮುಗಿಯದ ಪ್ರಹಸನ ಆಗಿಬಿಟ್ಟಿದೆ. ಸ್ಥಳೀಯ ಸಂಸ್ಥೆಗಳು, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್‌ಗಳ ಚುನಾವಣೆಯೂ ಇದೇ ರೀತಿ ಮುಂದೆ ಮುಂದೆ ಹೋಗುತ್ತಲೇ ಇದೆ.

ಇದನ್ನೂ ಓದಿ: BBMP News: ಈ ಪ್ರಮಾಣ ಪತ್ರ ಇದ್ದರೆ ಮಾತ್ರ ಕಟ್ಟಡಗಳಿಗೆ ವಿದ್ಯುತ್‌, ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ- BBMP ಆದೇಶ

ಜಿಬಿಎ ವ್ಯಾಪ್ತಿಯಲ್ಲಿ ಐದು ನಗರ ಪಾಲಿಕೆಗಳನ್ನು ನಿರ್ಮಿಸಿದ ಬಳಿಕ ಚುನಾವಣೆ ಆಗಿಲ್ಲ. ಇಲ್ಲಿ ಜನಪ್ರತಿನಿಧಿಗಳೇ ಇಲ್ಲ. ಎಲ್ಲವೂ ಅಧಿಕಾರಿಗಳದೇ ಆಟ. ಈಗಾಗಲೇ ಆರು ಬಾರಿ ಅವಧಿ ವಿಸ್ತರಣೆಗೆ ಸರಕಾರ ಮೊರೆ ಇಟ್ಟಿದೆ. ಇನ್ನು ಅವಧಿ ವಿಸ್ತರಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಖಡಕ್ಕಾಗಿ ಹೇಳಿದ್ದರೂ ಅದನ್ನು ಸರಕಾರ ಕ್ಯಾರೇ ಎಂದಿಲ್ಲ. ಸ್ಥಳೀಯ ಸಂಸ್ಥೆಗಳದೂ ಇದೇ ಕತೆ. ಅಲ್ಲಿಯೂ ಜನಪ್ರತಿನಿಧಿಗಳಿಲ್ಲ.

ಮತಪಟ್ಟಿ ಪರಿಷ್ಕರಣೆ, ಮತಪೆಟ್ಟಿಗೆ ಅಥವಾ ಬ್ಯಾಲೆಟ್ ಪೇಪರ್ ವಿವಾದ, ಮೀಸಲು ಹಂಚಿಕೆ ಹೀಗೆ ಒಂದಲ್ಲ ಒಂದು ಕಾರಣಗಳನ್ನೊಡ್ಡಿ ಚುನಾವಣೆ ಮುಂದೂಡಲಾಗುತ್ತಿದೆ. ಈ ಚುನಾವಣೆಗಳಲ್ಲಿ ವ್ಯತಿರಿಕ್ತ ಫಲಿತಾಂಶ ಬಂದರೆ ಅದು ವಿಧಾನಸಭೆ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ ಎಂಬ ಭಯ ಆಳುವವರಲ್ಲಿ ಇದ್ದಂತಿದೆ.

ಜನಪ್ರತಿನಿಧಿಗಳು ಬಂದರೆ ತಮ್ಮ ಆಟ ನಡೆಯುವುದಿಲ್ಲ ಎಂಬ ಅರಿವು ಅಧಿಕಾರಿಗಳಿಗೂ ಇದೆ. ಹೀಗಾಗಿ ಅಧಿಕಾರಿಗಳಿಗೂ, ಆಳುವವರಿಗೂ ಚುನಾವಣೆ ನಡೆಸಲು ಯಾವುದೇ ಅವಸರವಿಲ್ಲ. ‘ಒಂದು ದೇಶ ಒಂದು ಚುನಾವಣೆ’ ಪ್ರಸ್ತಾಪ ಇದ್ದಂತೆ ‘ಒಂದು ರಾಜ್ಯ, ಒಂದು ವಿದಾನಸಭೆ ಜಿಬಿಎ ಸ್ಥಳೀಯ ಸಂಸ್ಥೆ ಪಂಚಾಯತ್ ಚುನಾವಣೆ’ ಎಂದು ಮಾಡುವುದೇ ವಿಹಿತ. ಇಲ್ಲವಾದರೆ ಆಳುವ ಸರಕಾರಗಳು ಎಂದೂ ಈ ಸಂಸ್ಥೆಗಳನ್ನು ತಮ್ಮ ಕೈಯಲ್ಲೇ ಇಟ್ಟುಕೊಳ್ಳಲು ಬಯಸುತ್ತವೆಯೇ ಹೊರತು, ಪ್ರಜಾಸತ್ತಾತ್ಮಕ ಚುನಾವಣೆ ನಡೆಸಲು ಸಿದ್ಧವಾಗುವುದಿಲ್ಲ.