Indira Canteen: ಇಂದಿರಾ ಕ್ಯಾಂಟೀನ್ ಹಸಿವು ನೀಗಿಸುವ ಅಕ್ಷಯಪಾತ್ರೆ
ಕ್ಯಾಂಟಿನ್‌ನಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ನುರಿತ ಸಿಬ್ಬಂದಿ ವರ್ಗದವರು ಆಹಾರ ತಯಾರಿಕೆಯಲ್ಲಿ ಕಾಳಜಿ ವಹಿಸುತ್ತಾರೆ. ಪೌಷ್ಟಿಕಾಂಶಯುಕ್ತವಾದ ಭೋಜನವು ನಿತ್ಯವೂ ನೂರಾರು ಜನರನ್ನು ಸೆಳೆಯುತ್ತಿದೆ. ಸರಕಾರಿ ಕಚೇರಿಗಳ ಕೆಲಸಕ್ಕೆಂದು ಬರುವವರು, ದೈನಂದಿನ ಕೂಲಿ ಕಾರ್ಮಿಕರು, ಮತ್ತು ನಗರದ ಬಡಾವಣೆಗಳಲ್ಲಿ ವಾಸಿಸುವ ಕೂಲಿ ಕಾರ್ಮಿಕರಿಗೆ ಇದು ಕೈಗೆಟುಕುವ ಬೆಲೆಯ ಅತ್ಯುತ್ತಮ ಆಯ್ಕೆಯಾಗಿದೆ.
-
ವಿನುತಾ ಹೆಗಡೆ, ಶಿರಸಿ
ಬಡವರಿಗೆ , ಕಾರ್ಮಿಕರಿಗೆ ಐದು ರು.ಗೆ ತಿಂಡಿ,10 ರು.ಗೆ ಊಟ
ಹಸಿವು ಮುಕ್ತ ಸಮಾಜಕ್ಕೆ ಕ್ಯಾಂಟೀನ್‌ಗಳ ಪಾತ್ರ ಹಿರಿದು
ಮಲೆನಾಡಿನ ಮಡಿಲಲ್ಲಿರುವ ಶಿರಸಿಯಂತಹ ನಗರದಲ್ಲಿ, ಬದುಕಿನ ರಥವನ್ನು ಎಳೆಯಲು ದೈನಂದಿನ ಕೂಲಿ ಮಾಡುವವರು, ಕೆಲಸದ ನಿಮಿತ್ತ ದೂರದ ಊರುಗಳಿಂದ ಬರುವವರು ಮತ್ತು ಹಸಿವಿನೊಂದಿಗೆ ನಿತ್ಯವೂ ಹೋರಾಡುವ ಅದೆಷ್ಟೋ ಮಂದಿ ಇದ್ದಾರೆ. ಇಂತಹವರ ಪಾಲಿಗೆ ಇಂದಿರಾ ಕ್ಯಾಂಟೀನ್ ಕೇವಲ ನಾಲ್ಕು ಗೋಡೆಗಳ ಕಟ್ಟಡವಲ್ಲ, ಬದಲಾಗಿ ಹಸಿವು ನೀಗಿಸುವ ಅಕ್ಷಯಪಾತ್ರೆ. ದುಬಾರಿ ಬೆಲೆಯ ಹೋಟೆಲ್ ಊಟದತ್ತ ನೋಡಲೂ ಭಯಪಡುವ ಬಡವರ ಪಾಲಿಗೆ, ಇಲ್ಲಿ ಸಿಗುವ ಹಬೆಯಾಡುವ ಅನ್ನದ ತುತ್ತು ಸಮಾಜದ ಕರುಣೆಯ ಕನ್ನಡಿಯಂತಿದೆ.
ನಗರದ ಹೃದಯಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಕ್ಯಾಂಟಿನ್, ಕೇವಲ ಹಸಿವು ನೀಗಿಸುವ ತಾಣವಲ್ಲ, ಇದು ಸಾಮಾಜಿಕ ಸಮಾನತೆಯ ಸಂಕೇತವೂ ಹೌದು. ಇಲ್ಲಿ ಜಾತಿ, ಮತ, ಪಂಥಗಳ ಭೇದವಿಲ್ಲದೆ ಎಲ್ಲರೂ ಒಂದೇ ಸಾಲಿನಲ್ಲಿ ಕುಳಿತು ಒಂದೇ ರೀತಿಯ ಆಹಾರವನ್ನು ಸವಿಯುತ್ತಾರೆ.
ಬೆಳಗಿನ ಉಪಹಾರಕ್ಕೆ ಕೇವಲ ಐದು ರುಪಾಯಿ ಮತ್ತು ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ ಹತ್ತು ರುಪಾಯಿ ನಿಗದಿಪಡಿಸಿರುವುದು ಬಡವರು ಮತ್ತು ಮಧ್ಯಮ ವರ್ಗದವರ ಆರ್ಥಿಕ ಹೊರೆಗೆ ಭಾರಿ ನೆಮ್ಮದಿ ನೀಡಿದೆ.
ಇದನ್ನೂ ಓದಿ: Indira Canteens: ನಿರ್ಮಾಣ ಕಾರ್ಯ ಮುಗಿದ ಇಂದಿರಾ ಕ್ಯಾಂಟೀನ್‌ಗಳನ್ನು ವಾರದೊಳಗೆ ಆರಂಭಿಸಿ: ಸಿಎಂ ಆದೇಶ
ಕ್ಯಾಂಟಿನ್‌ನಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ನುರಿತ ಸಿಬ್ಬಂದಿ ವರ್ಗದವರು ಆಹಾರ ತಯಾರಿಕೆಯಲ್ಲಿ ಕಾಳಜಿ ವಹಿಸುತ್ತಾರೆ. ಪೌಷ್ಟಿಕಾಂಶಯುಕ್ತವಾದ ಭೋಜನವು ನಿತ್ಯವೂ ನೂರಾರು ಜನರನ್ನು ಸೆಳೆಯುತ್ತಿದೆ. ಸರಕಾರಿ ಕಚೇರಿಗಳ ಕೆಲಸಕ್ಕೆಂದು ಬರುವವರು, ದೈನಂದಿನ ಕೂಲಿ ಕಾರ್ಮಿಕರು, ಮತ್ತು ನಗರದ ಬಡಾವಣೆಗಳಲ್ಲಿ ವಾಸಿಸುವ ಕೂಲಿ ಕಾರ್ಮಿಕರಿಗೆ ಇದು ಕೈಗೆಟುಕುವ ಬೆಲೆಯ ಅತ್ಯುತ್ತಮ ಆಯ್ಕೆಯಾಗಿದೆ.
ಈ ಯೋಜನೆಯ ಬಗ್ಗೆ ಸ್ಥಳೀಯರ ಅಭಿಪ್ರಾಯಗಳು ಅತ್ಯಂತ ಸಕಾರಾತ್ಮಕವಾಗಿವೆ. ದೈನಂದಿನ ಕೂಲಿ ಕೆಲಸ ಮಾಡುವ ರಮೇಶ್ ಎಂಬುವವರು ಮಾತನಾಡುತ್ತಾ, ‘ಹೊರಗಡೆ ಒಂದು ಹೊತ್ತಿನ ಊಟಕ್ಕೆ ಅರವತ್ತು-ಎಪ್ಪತ್ತು ರುಪಾಯಿ ಖರ್ಚಾಗುತ್ತದೆ. ಅಂತಹ ಸಂದರ್ಭದಲ್ಲಿ ಇಂದಿರಾ ಕ್ಯಾಂಟೀನ್(Indira Canteen)ನ ಹತ್ತು ರುಪಾಯಿಯ ಊಟ ನಮಗೆ ದೊಡ್ಡ ಆರ್ಥಿಕ ಉಳಿತಾಯ ಮಾಡಿಕೊಟ್ಟಿದೆ. ಈ ಊಟದ ರುಚಿ ಮತ್ತು ಶುಚಿತ್ವ ಮನೆಯ ಅಡುಗೆಯಷ್ಟೇ ಉತ್ತಮವಾಗಿದೆ’ ಎಂದು ತಮ್ಮ ಅನುಭವ ಹಂಚಿಕೊಳ್ಳುತ್ತಾರೆ.
ಹಾಗೆಯೇ, ನಗರಕ್ಕೆ ಕೆಲಸದ ನಿಮಿತ್ತ ಬರುವ ವಿದ್ಯಾರ್ಥಿಯೊಬ್ಬರು, ‘ಕಡಿಮೆ ಹಣದಲ್ಲಿ ಪೌಷ್ಟಿಕ ಆಹಾರ ಸಿಗುತ್ತಿರುವುದರಿಂದ ನಮ್ಮ ಓದಿನ ಖರ್ಚಿನ ಮೇಲೆ ಗಮನ ಹರಿಸಲು ಸಾಧ್ಯವಾಗಿದೆ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ.
ಹಲವು ಸವಾಲುಗಳ ನಡುವೆಯೂ, ಸ್ಥಳೀಯ ಆಡಳಿತದ ಸಹಕಾರದೊಂದಿಗೆ ಈ ಕ್ಯಾಂಟಿನ್ ಸುಗಮವಾಗಿ ನಡೆಯುತ್ತಿದ್ದು, ಶಿರಸಿಯ ನಾಗರಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಇಂದಿರಾ ಕ್ಯಾಂಟೀನ್ʼನ ಯಶಸ್ಸಿನ ಹಿಂದೆ ಸಮರ್ಪಿತ ನಿರ್ವಹಣಾ ವ್ಯವಸ್ಥೆ ಇದೆ. ಪ್ರತಿ ದಿನದ ಊಟದ ಮೆನುವಿನಲ್ಲಿ ವೈವಿಧ್ಯತೆ ಇದೆ.
ಇದು ಕೇವಲ ಹೊಟ್ಟೆ ತುಂಬಿಸುವ ಕೇಂದ್ರವಲ್ಲ, ಬದಲಾಗಿ ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತೇಜಿಸುವ ತಾಣವೂ ಹೌದು. ಹಸಿವು ಮುಕ್ತ ಸಮಾಜದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಇಂತಹ ಕ್ಯಾಂಟೀನ್ ಗಳ ಪಾತ್ರ ಹಿರಿದು. ಜನಸಾಮಾನ್ಯರ ಪಾಲಿನ ಈ ‘ಅನ್ನಪೂರ್ಣೇಶ್ವರಿ’ ಕೇಂದ್ರವು ತನ್ನ ಸೇವಾ ಕಾರ್ಯವನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುವ ಮೂಲಕ ಶಿರಸಿಯ ಜನಜೀವನದಲ್ಲಿ ಹಾಸುಹೊಕ್ಕಾಗಿದೆ.
ಆರ್ಥಿಕವಾಗಿ ಹಿಂದುಳಿದವರಿಗೆ ಕೈಗೆಟುಕುವ ಬೆಲೆಯಲ್ಲಿ ಉತ್ತಮ ಆಹಾರ ನೀಡುವುದು ಒಂದು ಕಲ್ಯಾಣ ರಾಜ್ಯದ ಕರ್ತವ್ಯವಾಗಿದ್ದು, ಶಿರಸಿಯ ಇಂದಿರಾ ಕ್ಯಾಂಟೀನ್ ಈ ನಿಟ್ಟಿನಲ್ಲಿ ಮಾದರಿ ಯಾಗಿ ಕಾರ್ಯನಿರ್ವಹಿಸುತ್ತಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗೌರವಯುತವಾಗಿ ಊಟ ಸಿಗುವಂತಾಗಬೇಕು ಎಂಬ ಮಹತ್ತರ ಉದ್ದೇಶ ಇಲ್ಲಿ ಸಾಕಾರಗೊಳ್ಳುತ್ತಿದೆ.
![]()
ನಾನು ಮೊದಲ ಬಾರಿಗೆ ಇಂದಿರಾ ಕ್ಯಾಂಟಿನ್ʼನಲ್ಲಿ ಊಟ ಮಾಡಿದ್ದೇನೆ. ಯಾವಾಗಲಾದರೂ ಒಮ್ಮೆ ಇಲ್ಲಿ ಊಟ ಮಾಡಬೇಕು ಅಂದಿಕೊಂಡಿದ್ದೆ. ಅಲ್ಲಿ ಏನೆಲ್ಲ ಸಿಗುತ್ತದೆ ಊಟದ ಮೆನುವಿನಲ್ಲಿ ಎಂಬುದೂ ಗೊತ್ತಿರಲಿಲ್ಲ. ಅಲ್ಲಿಯ ಊಟ ಮಾಡುವಾಗ ನನಗೆ ಶಾಲೆಯ ಬಿಸಿ ಊಟದ ನೆನಪಾ ಗಿದ್ದು ನಿಜ. ಹತ್ತು ರುಪಾಯಿಗೆ ಇನ್ನೆಂತ ಊಟ ಕೊಡಬೇಕು ಹಸಿದವರಿಗೆ. ನಿಜಕ್ಕು ಹತ್ತು ರುಪಾಯಿಯ ಊಟ ಚೆನ್ನಾಗಿದೆ.
-ವಿಜೇತಾ ಹೆಗಡೆ