Vishwavani Editorial: ನವಸಂಕಲ್ಪದ ಪರ್ವಕಾಲ ವಾಗಲಿ
ಜೀವನೋಪಾಯ ಮತ್ತು ಆಶ್ರಯಕ್ಕಾಗಿ ಅವರನ್ನೇ ನೆಚ್ಚಿರುವ ಹಿರಿಯ ಜೀವಗಳು ಮನೆಯಲ್ಲಿ ಅವರಿಗಾಗಿ ಕಾಯುತ್ತಿರುತ್ತವೆ
Ashok Nayak
Dec 30, 2024 9:53 AM
ಇವತ್ತಿನ ಜತೆಗೆ ಇನ್ನೊಂದು ದಿನ ಕಳೆದರೆ 2025ರ ಹೊಸವರ್ಷ ಆರಂಭ ವಾಗುತ್ತದೆ. ಭಾರತೀಯರ ಪಾಲಿಗೆ ಯುಗಾದಿ ಹಬ್ಬವು ಹೊಸವರ್ಷದ ಆರಂಭದ ದ್ಯೋತಕವಾಗಿದ್ದರೂ, ‘ಕ್ಯಾಲೆಂಡರ್ ಬದಲಾವಣೆ’ಯ ವರ್ಷವೇ ಈಗ ಬಹುತೇಕರಿಗೆ ಹೊಸವರ್ಷ ಎನಿಸಿಬಿಟ್ಟಿರುವುದರಿಂದ, ಈ ಸಂದರ್ಭವನ್ನೂ ಸಂಭ್ರಮಿಸೋಣ. ಆದರೆ ಹೊಸವರ್ಷ ಎಂದಾಕ್ಷಣ ಒಂದಷ್ಟು ಮಂದಿ ಬೇರೆಯದೇ ಪರಿಕಲ್ಪನೆಗೆ ಒಡ್ಡಿಕೊಳ್ಳುವುದಿದೆ. ಅದರ ಮುನ್ನಾದಿನದ ಮಧ್ಯರಾತ್ರಿಯ ವೇಳೆಗೆ ಕಂಠಮಟ್ಟ ಕುಡಿದು ಅಮಲೇರಿಸಿಕೊಂಡು, ಕೇಕೆಹಾಕುತ್ತಾ ಅವರಿವರ ನೆಮ್ಮದಿಗೆ ಭಂಗ ತರುವುದೇ ಹೊಸವರ್ಷದ ಆಚರಣೆಗಿರುವ ಮಾರ್ಗೋಪಾಯ ಎಂಬುದು ಇಂಥವರ ಗ್ರಹಿಕೆ.
ಈ ಭ್ರಮೆಯ ಪೊರೆಯನ್ನು ಕಳಚಿಕೊಂಡು, ಇದುವರೆಗೂ ಆಗಿರುವ ಸಾಧನೆಯ ಮೌಲ್ಯಮಾಪನ ಮಾಡಿಕೊಂಡು, ಹೊಸ ಸಿದ್ಧಿಗೆ ಸಂಕಲ್ಪಿಸುವುದಕ್ಕೆ ಈ ಹೊಸವರ್ಷದ ದಿನ ಮೀಸಲಾಗಲಿ. ಈ ಮಾತನ್ನು ಇಂದಿನ ಯುವಪೀಳಿಗೆ ಕಟ್ಟುನಿಟ್ಟಾಗಿ ಅನುಸರಿಸಿದರೆ ಒಳಿತು. ಏಕೆಂದರೆ, ದೇಶವೊಂದರ ಭವ್ಯ ಭವಿಷ್ಯಕ್ಕೆ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಚಾಲಕಶಕ್ತಿ ಎನಿಸಿಕೊಳ್ಳಬೇಕಾದವರು ಯುವಜನರೇ; ಆದರೆ, ಸತ್ -ಸಂಕಲ್ಪದ ಹಾದಿಯನ್ನು ಬದಿಗೆ ಸರಿಸಿ, ಹೊಸವರ್ಷದ ಸಂಭ್ರಮಾಚರಣೆಯ ನೆಪದಲ್ಲಿ ಮದ್ಯ ಮತ್ತಿತರ ಅಮಲು ಪದಾರ್ಥಗಳಿಗೆ ಒಡ್ಡಿಕೊಂಡು,ಅದರ ಹುಸಿ-ಹುರುಪಿನಲ್ಲಿ ವಾಹನ ಸವಾರಿಗೂ ಇಳಿದು ಪ್ರಾಣಕ್ಕೇ ಸಂಚಕಾರ ತಂದುಕೊಳ್ಳುವ ಯುವಜನರು ನಮ್ಮ ನಡುವೆ ಸಾಕಷ್ಟಿದ್ದಾರೆ.
ಇನ್ನು ಮುಂದಾದರೂ ಅವರು ಇಂಥ ದಿಕ್ಚ್ಯುತಿಗೆ ಒಡ್ಡಿಕೊಳ್ಳುವುದು ಬೇಡ. ಕಾರಣ, ಜೀವನೋಪಾಯ ಮತ್ತು ಆಶ್ರಯಕ್ಕಾಗಿ ಅವರನ್ನೇ ನೆಚ್ಚಿರುವ ಹಿರಿಯ ಜೀವಗಳು ಮನೆಯಲ್ಲಿ ಅವರಿಗಾಗಿ ಕಾಯುತ್ತಿರುತ್ತವೆ. ಅಮಲುಕಾರಕ ವಸ್ತುಗಳು ಆ ಕ್ಷಣಕ್ಕೆ ನೀಡುವ ತಥಾಕಥಿತ ಉತ್ಸಾಹವು ನಿಜಾರ್ಥದ ಚೈತನ್ಯವಾಗಿರುವುದಿಲ್ಲ ಎಂಬುದು ಸತ್ಯ. ಆದರೆ ಈ ಸತ್ಯವನ್ನು ಸ್ವೀಕರಿಸಲು ಅನೇಕರು ಸಿದ್ಧರಿಲ್ಲ ಎಂಬುದೇ ವಿಪರ್ಯಾಸದ ಸಂಗತಿ. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ? ದೇಹ ಮತ್ತು ಮನಸ್ಸನ್ನು ದಿನಗಳೆದಂತೆ ಹಾಳುಗೆಡಹುತ್ತಾ ಹೋಗುವ ಮದ್ಯ ಮತ್ತಿತರ ಅಮಲು ಕಾರಕ ವಸ್ತುಗಳಿಗೆ ಒಡ್ಡಿಕೊಳ್ಳಲು ಹೊಸವರ್ಷವನ್ನು ನೆಪವಾಗಿಸಿಕೊಳ್ಳುವುದು ಬೇಡ. ಹೊಸವರ್ಷವು ನವಸಂಕಲ್ಪದ ಪರ್ವಕಾಲವಾಗಲಿ…
ಇದನ್ನೂ ಓದಿ: Vishwavani Editorial: ಚೀನಾ ಜಲ ರಾಜಕಾರಣ