Anil Kumble 10-wicket haul: ಪಾಕ್ ವಿರುದ್ಧ ಕುಂಬ್ಳೆ ಅವಿಸ್ಮರಣೀಯ ಬೌಲಿಂಗ್ ದಾಳಿಗೆ 26 ವರ್ಷ
Anil Kumble 10-wicket haul: ಅಂದಿನ ಪಂದ್ಯದಲ್ಲಿ ಅನಿಲ್ ಕುಂಬ್ಳೆ 26.3 ಓವರ್‌ಗಳಲ್ಲಿ 74 ರನ್ ತೆತ್ತು 10 ವಿಕೆಟ್ ಗಳಿಸಿದ್ದರು. ಇದರಲ್ಲಿ ಒಂಬತ್ತು ಮೇಡನ್ ಓವರ್‌ಗಳು ಸೇರಿದ್ದವು. ಮೊದಲ ಇನಿಂಗ್ಸ್‌ನಲ್ಲಿ ನಾಲ್ಕು ಸೇರಿದಂತೆ ಪಂದ್ಯದಲ್ಲಿ ಒಟ್ಟು 14 ವಿಕೆಟ್ ಪಡೆದಿದ್ದರು.
![Anil Kumble (3)](https://cdn-vishwavani-prod.hindverse.com/media/images/Anil_Kumble_3.max-1280x720.jpg)
![Profile](https://vishwavani.news/static/img/user.png)
ಬೆಂಗಳೂರು: ಸರಿಯಾಗಿ 26 ವರ್ಷಗಳ(ಫೆ.7, 1999) ಹಿಂದೆ, ಜಂಬೋ’ ಅಥವಾ ‘ಜಂಬೋ ಜೆಟ್’ ಎಂದೇ ಖ್ಯಾತಿ ಪಡೆದಿರುವ ಭಾರತ ತಂಡದ ಮಾಜಿ ಸ್ಪಿನ್ನರ್ ಹಾಗೂ ಕನ್ನಡಿಗ ಅನಿಲ್ ಕುಂಬ್ಳೆ(Anil Kumble) ಅವರು ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಇನಿಂಗ್ಸ್ ಒಂದರ 10 ವಿಕೆಟ್(Anil Kumble 10-wicket haul) ಕಿತ್ತು ಮಿಂಚಿದ ದಿನವಿದು. ಈ ಐತಿಹಾಸಿಕ ಕ್ಷಣವನ್ನು ಮತ್ತೊಮ್ಮೆ ಭಾರತೀಯ ಅಭಿಮಾನಿಗಳು ನೆನಪಿಸಿಕೊಂಡಿದ್ದಾರೆ.
ಹೌದು, 1999ರಲ್ಲಿ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದಿದ್ದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅನಿಲ್ ಕುಂಬ್ಳೆ ಎಲ್ಲಾ ಹತ್ತು ವಿಕೆಟ್ ಕಬಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇಂಗ್ಲೆಂಡ್‌ನ ಮಾಜಿ ಬೌಲರ್ ಜಿಮ್ ಲೇಕರ್ ಬಳಿಕ ಈ ಸಾಧನೆ ಮಾಡಿದ ವಿಶ್ವದ ಎರಡನೇ ಬೌಲರ್ ಎನಿಸಿದ್ದರು.
ಎರಡು ಟೆಸ್ಟ್ ಪಂದ್ಯಗಳ ಸರಣಿ ಆಡಲು ಭಾರತಕ್ಕೆ ಬಂದಿದ್ದ ಪಾಕಿಸ್ತಾನ ತಂಡ ಚೆನ್ನೈನಲ್ಲಿ ಮೊದಲ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಮುನ್ನಡೆ ಪಡೆದಿತ್ತು. ಎರಡನೇ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದ್ದ ಟೀಂ ಇಂಡಿಯಾದ ನೆರವಿಗೆ ನಿಂತಿದ್ದು ಕನ್ನಡದ ಹೆಮ್ಮೆ ಅನಿಲ್ ಕುಂಬ್ಳೆ.
ಇದನ್ನೂ ಓದಿ IPL 2025: ವಿರಾಟ್ ಕೊಹ್ಲಿ ಆರ್‌ಸಿಬಿಗೆ ನಾಯಕ? ಬೆಂಗಳೂರು ಫ್ರಾಂಚೈಸಿ ಸಿಒಒ ಹೇಳಿದ್ದಿದು!
ದೆಹಲಿಯಲ್ಲಿ ನಡೆದಿದ್ದ ಈ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ 252ಕ್ಕೆ ಆಲೌಟ್ ಆಗಿತ್ತು. ನಾಯಕ ಮೊಹಮ್ಮದ್ ಅಜರುದ್ದೀನ್ 67 ಹಾಗೂ ಸಡಗೋಪನ್ ರಮೇಶ್ 60 ರನ್ ಗಳಿಸಿದ್ದರು. ಕುಂಬ್ಳೆ ಮತ್ತು ಹರ್ಭಜನ್ ದಾಳಿಗೆ ನಲುಗಿದ್ದ ಪಾಕ್ ಮೊದಲ ಇನ್ನಿಂಗ್ಸ್ ನಲ್ಲಿ 172 ರನ್ ಗೆ ಆಲ್ ಔಟ್ ಆಗಿತ್ತು. ಕುಂಬ್ಳೆ 4 ಮತ್ತು ಹರ್ಭಜನ್ ಸಿಂಗ್ ಮೂರು ವಿಕೆಟ್ ಪಡೆದಿದ್ದರು. ಭಾರತ ಮೊದಲ ಇನಿಂಗ್ಸ್‌ನಲ್ಲಿ 80 ರನ್‌ಗಳ ಮುನ್ನಡೆ ಗಳಿಸಿತ್ತು.
ಎರಡನೇ ಇನ್ನಿಂಗ್ಸ್‌ನಲ್ಲಿ ಸದಗೋಪನ್ ರಮೇಶ್ ಅವರ 96 ರನ್ ನೆರವಿನಿಂದ ಭಾರತ 339 ರನ್ ಗಳಿಸಿತು. ಮೊದಲ ಇನಿಂಗ್ಸ್‌ನ ಮುನ್ನಡೆಯೊಂದಿಗೆ ಪಾಕ್ ಗೆಲುವಿಗೆ 420 ರನ್ ಗುರು ನೀಡಿತು. ಎರಡು ದಿನಗಳ ಆಟ ಬಾಕಿ ಇತ್ತು.
#OnThisDay in 1999, #TeamIndia spin legend @anilkumble1074 became the first Indian bowler and second overall to scalp all the 10 wickets in a Test innings. 👏👏
— BCCI (@BCCI) February 7, 2021
Watch that fantastic bowling display 🎥👇 pic.twitter.com/OvanaqP4nU
ಬ್ಯಾಟಿಂಗ್ ಅರಂಭಿಸಿದ ಪಾಕ್‌ಗೆ ಸಯೀದ್ ಅನ್ವರ್ ಮತ್ತು ಶಾಹಿದ್ ಅಫ್ರಿದಿ ಮೊದಲ ವಿಕೆಟ್ ಗೆ 101 ರನ್ ಜತೆಯಾಟ ನೀಡಿದರು. ಕ್ರೀಸ್‌ನಲ್ಲಿ ಬೇರೂರಿ ನಿಂತಿದ್ದ ಈ ಜೋಡಿಯನ್ನು ಕುಂಬ್ಳೆ ಬೇರ್ಪಡಿಸುವ ಮೂಲಕ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ನಯನ್ ಮೊಂಗಿಯಾ ಹಿಡಿದ ಉತ್ತಮ ಕ್ಯಾಚ್‌ಗೆ ಅಫ್ರಿದಿ ಔಟಾದರು. ನಂತರ ಆರಂಭವಾಗಿದ್ದು ಕುಂಬ್ಳೆ ಜಾದೂ. ಕುಂಬ್ಳೆ ಜಾದೂ ಮುಂದೆ ಪಾಕ್ ಆಟಗಾರರ ಬಳಿ ಉತ್ತರವೇ ಇರಲಿಲ್ಲ. ಅಂತಿಮವಾಗಿ 207 ರನ್ನಿಗೆ ತನ್ನೆಲ್ಲ ವಿಕಟ್‌ಗಳನ್ನು ಕಳೆದುಕೊಂಡಿತ್ತು.
ಅನಿಲ್ ಕುಂಬ್ಳೆ 26.3 ಓವರ್‌ಗಳಲ್ಲಿ 74 ರನ್ ತೆತ್ತು 10 ವಿಕೆಟ್ ಗಳಿಸಿದ್ದರು. ಇದರಲ್ಲಿ ಒಂಬತ್ತು ಮೇಡನ್ ಓವರ್‌ಗಳು ಸೇರಿದ್ದವು. ಮೊದಲ ಇನಿಂಗ್ಸ್‌ನಲ್ಲಿ ನಾಲ್ಕು ಸೇರಿದಂತೆ ಪಂದ್ಯದಲ್ಲಿ ಒಟ್ಟು 14 ವಿಕೆಟ್ ಪಡೆದಿದ್ದರು.