ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತ ಹಾಕಿ ತಂಡಕ್ಕೆ ದಾಖಲೆಯ 6ನೇ ಏಷ್ಯನ್ ಚಾಂಪಿಯನ್ಸ್ ಟ್ರೋಫಿ; ಜಪಾನ್‌ ವಿರುದ್ಧ 4–1 ಅಂತರದ ಜಯ

Asian Champions Trophy 2026: ಇತ್ತೀಚೆಗೆ ಜಪಾನ್‌ನಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್‌ನಲ್ಲಿ ಚಾಂಪಿಯನ್‌ ಆಗಿದ್ದ ಭಾರತ ಪುರುಷರ ಹಾಕಿ ತಂಡ ಇದೀಗ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿಯೂ ಗೆದ್ದಿದೆ. ಭಾರತ ತಂಡವು 4-1 ಗೋಲುಗಳಿಂದ ಜಪಾನ್‌ ತಂಡವನ್ನು ಸೋಲಿಸುವ ಮೂಲಕ ದಾಖಲೆಯ 6ನೇ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಭಾರತ ಹಾಕಿ ತಂಡಕ್ಕೆ ದಾಖಲೆಯ 6ನೇ ಏಷ್ಯನ್ ಚಾಂಪಿಯನ್ಸ್ ಟ್ರೋಫಿ

ಭಾರತ ಹಾಕಿ ತಂಡ -

Ramesh Ballamoole
Ramesh Ballamoole Nov 5, 2026 11:50 PM

ಚಂಡೀಗಢ, ನ. 5: ಭಾರತದ ಪುರುಷರ ಹಾಕಿ ತಂಡ ಹೊಸದೊಂದು ಇತಿಹಾಸ ಬರೆದಿದೆ. ಪಂಜಾಬ್‌ನ ಮೊಹಾಲಿಯ ಒಲಿಂಪಿಯನ್ ಬಲ್ಬೀರ್ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ (ನವೆಂಬರ್‌ 5) ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ (Asian Champions Trophy 2026) ಭಾರತ ತಂಡವು 4-1 ಗೋಲುಗಳಿಂದ ಗೆಲುವು ಸಾಧಿಸಿದೆ. ಇದರೊಂದಿಗೆ ಭಾರತ ತಂಡವು ದಾಖಲೆಯ 6ನೇ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಆರಂಭದಲ್ಲಿ ಹಿನ್ನಡೆ ಅನುಭವಿಸಿದ ಭಾರತ ಬಳಿಕ ಕಂಬ್ಯಾಕ್‌ ಮಾಡಿತು. ಪಂದ್ಯದ 3ನೇ ನಿಮಿಷದಲ್ಲಿ ಜಪಾನ್‌ನ ಕಜುಮಾಸಾ ಮತ್ಸುಮೊಟೊ ಗೋಲು ಗಳಿಸುವ ಮೂಲಕ ಆತಿಥೇಯ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಸ್ಟ್ರೈಕಿಂಗ್ ಸರ್ಕಲ್‌ನೊಳಗೆ ಭಾರತದ ರಕ್ಷಣಾ ವಿಭಾಗವನ್ನು ಮೀರಿ ಸಾಗಿದ ಮತ್ಸುಮೊಟೊ ಅದ್ಭುತವಾದ 'ರಿವರ್ಸ್ ಫ್ಲಿಕ್' ಮೂಲಕ ಚೆಂಡನ್ನು ಗುರಿ ಸೇರಿಸಿ ಜಪಾನ್‌ಗೆ ಮುನ್ನಡೆ ತಂದುಕೊಟ್ಟರು.

ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಭಾರತ ಹಾಕಿ ತಂಡ:



ಆರಂಭಿಕ ಹಿನ್ನಡೆಯಿಂದ ಕಂಗೆಟ್ಟ ಭಾರತವು ಮೊದ ಮೊದಲು ಜಪಾನ್‌ನ ಶಿಸ್ತುಬದ್ಧ ರಕ್ಷಣಾ ವ್ಯೂಹವನ್ನು ಭೇದಿಸಲು ಪರದಾಡಿತು. ಮೊದಲಾರ್ಧದ ಮುಗಿದರೂ ಭಾರತಕ್ಕೆ ಗೋಲಿನ ಖಾತೆ ತೆರಯಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ 0–1 ಅಂತರದ ಹಿನ್ನಡೆಯೊಂದಿಗೆ ಬ್ರೇಕ್‌ ಸಿಕ್ಕಿತು.

ಮಲೇಷ್ಯಾವನ್ನು ಮಣಿಸಿ ಚಿನ್ನದ ಪದಕ ಗೆದ್ದ ಭಾರತ ಪುರುಷರ ಹಾಕಿ ತಂಡ!

3ನೇ ಕ್ವಾರ್ಟರ್‌ನ ಅಂತಿಮ ಹಂತದಲ್ಲಿ ಪಂದ್ಯಕ್ಕೆ ತಿರುವು ಸಿಕ್ಕಿತು. ಭಾರತ ತನ್ನ ಗೋಲು ಬರವನ್ನು ನೀಗಿಸಿಕೊಂಡಿತು. ಆದಿತ್ಯ ಲಾಲಗೆ 42ನೇ ನಿಮಿಷದಲ್ಲಿ ಶಿಲಾನಂದ ಲಾಕ್ರಾ ಅವರಿಗೆ ರಿವರ್ಸ್ ಪಾಸ್ ನೀಡಿದರು. ಚೆಂಡನ್ನು ಪಡೆದ ಶಿಲಾನಂದ ಅದನ್ನು ಹತ್ತಿರದಿಂದಲೇ ಗೋಲ್ ಪೋಸ್ಟ್‌ನೊಳಗೆ ತಳ್ಳುವ ಮೂಲಕ ಪಂದ್ಯವನ್ನು ಸಮಬಲಗೊಳಿಸಿದರು.

48ನೇ ನಿಮಿಷದಲ್ಲಿ ಹಾರ್ದಿಕ್ ಸಿಂಗ್ ನೀಡಿದ ಪಾಸ್ ಅನ್ನು ಪಡೆದ ದಿಲ್‌ಪ್ರೀತ್ ಸಿಂಗ್ ಚಾಣಾಕ್ಷತನದಿಂದ ಚೆಂಡನ್ನು ಫ್ಲಿಕ್ ಮಾಡುವ ಮೂಲಕ ಭಾರತಕ್ಕೆ ಮತ್ತೊಂದು ಗೋಲು ಗಳಿಸಿ ಮುನ್ನಡೆ ತಂದುಕೊಟ್ಟರು. 53ನೇ ನಿಮಿಷದಲ್ಲಿ ಜುಗರಾಜ್ ಸಿಂಗ್ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಸದುಪಯೋಗಿಸಿಪಡಿಸಿಕೊಂಡರು. ಇದರೊಂದಿಗೆ ಭಾರತ 3-1 ಮುನ್ನಡೆ ಸಾಧಿಸಿತು.

54ನೇ ನಿಮಿಷದಲ್ಲಿ ವಿವೇಕ್ ಸಾಗರ್ ಪ್ರಸಾದ್ ಜಪಾನಿನ ಗೋಲ್‌ಕೀಪರ್‌ನ ಕಾಲುಗಳ ನಡುವಿನಿಂದ ಚೆಂಡನ್ನು ಗೋಲ್‌ಗೆ ತಳ್ಳುವ ಮೂಲಕ ಪಂದ್ಯವನ್ನು ಕಸಿದುಕೊಂಡರು. ಇದರೊಂದಿಗೆ ಭಾರತ 4-1 ಮುನ್ನಡೆಯೊಂದಿಗೆ ಮತ್ತೊಮ್ಮೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಇತ್ತೀಚೆಗೆ ಜಪಾನ್‌ನಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಪುರುಷರ ಹಾಗೂ ಮಹಿಳೆಯರ ಹಾಕಿ ಎರಡೂ ವಿಭಾಗಗಳಲ್ಲಿ ಚಿನ್ನ ಗೆದ್ದಿತ್ತು.