ಕೆಎಸ್ಸಿಎ ಅಂಡರ್-14 ಪಂದ್ಯದಲ್ಲಿ ತ್ರಿಶತಕ ಸಿಡಿಸಿದ ರಾಜ್ವೀರ್ ಪದಮ್ ಮೆಹ್ತಾ, ರಾಜಾಜಿನಗರ ಕ್ರಿಕೆಟರ್ಸ್ಗೆ ಭರ್ಜರಿ ಜಯ!
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಂಡರ್-14 ಅಂತರ ಕ್ಲಬ್ ಟೂರ್ನಿಯ ಪಂದ್ಯವೊಂದರಲ್ಲಿ ರಾಜಾಜಿನಗರ ಕ್ರಿಕೆಟರ್ಸ್ ತಂಡದ ರಾಜ್ವೀರ್ ಪದಮ್ ಮೆಹ್ತಾ ಸ್ಪೋಟಕ ತ್ರಿಶತಕ ಸಿಡಿಸಿದ್ದಾರೆ. ಇವರ ತ್ರಿಶತಕದ ಬಲದಿಂದ ರಾಜಾಜಿನಗರ ತಂಡ, ಕ್ಯಾರವನ್ ಕ್ರಿಕೆಟರ್ಸ್ ಎದುರು 495 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ.
ಕೆಎಸ್ಸಿಎ ಅಂಡರ್-14 ಪಂದ್ಯದಲ್ಲಿ ತ್ರಿಶತಕ ಸಿಡಿಸಿದ ರಾಜ್ವೀರ್ ಪದಮ್ ಮೆಹ್ತಾ. -
ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA) ಅಡಿಯಲ್ಲಿ ನಡೆಯುತ್ತಿರುವ 14ರ ವಯೋಮಿತಿ ಅಂತರ ಕ್ಲಬ್ ಕ್ರಿಕೆಟ್ ಟೂರ್ನಿಯಲ್ಲಿ ರಾಜಾಜಿನಗರ ಕ್ರಿಕೆಟರ್ಸ್ ತಂಡದ ಓಪನರ್ ರಾಜ್ವೀರ್ ಪದಮ್ ಮೆಹ್ತಾ (Rajveer Padam Mehta) ತಮ್ಮ ಭರ್ಜರಿ ಫಾರ್ಮ್ ಮುಂದುವರಿಸಿದ್ದಾರೆ. ನವೆಂಬರ್ 4 ರಂದು ಕ್ಯಾರವನ್ ಕ್ರಿಕೆಟರ್ಸ್ ವಿರುದ್ಧದ ಪಂದ್ಯದಲ್ಲಿ ರಾಜ್ವೀರ್ ಪದಮ್ ಸ್ಪೋಟಕ ತ್ರಿಶತಕ ಬಾರಿಸಿದ್ದಾರೆ ಹಾಗೂ ರಾಜಾಜಿನಗರ ತಂಡದ 495 ರನ್ಗಳ ಭರ್ಜರಿ ಗೆಲುವಿಗೆ ನೆರವಾಗಿದ್ದಾರೆ.
ನವೆಂಬರ್ 4 ರಂದು ಬುಧವಾರ ಇಲ್ಲಿನ ಎನ್ಎಎಲ್ ಮೈದಾನದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ರಾಜಾಜಿನಗರ ಕ್ರಿಕೆಟರ್ಸ್ ತಂಡ, ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ರಾಜ್ವೀರ್ ಮೆಹ್ತಾ ಅವರ ತ್ರಿಶತಕ ಹಾಗೂ ಕಿಶಂತ್ ಅವರ ಶತಕದ ಬಲದಿಂದ ರಾಜಾಜಿನಗರ ಕ್ರಿಕೆಟರ್ಸ್ ತಂಡ, ತನ್ನ ಪಾಲಿನ 50 ಓವರ್ಗಳಿಗೆ 6 ವಿಕೆಟ್ಗಳ ನಷ್ಟಕ್ಕೆ 542 ರನ್ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಕ್ಯಾರವನ್ ಕ್ರಿಕೆಟರ್ಸ್ ತಂಡಕ್ಕೆ 543 ರನ್ಗಳ ಕಠಿಣ ಗುರಿಯನ್ನು ನೀಡಿತು.
IPL 2027: ಸಿಎಸ್ಕೆಗೆ ಲಿಯಾಮ್ ಲಿವಿಂಗ್ಸ್ಟೋನ್ ಎಂಟ್ರಿ; ಎಸ್ಆರ್ಎಚ್ ಜೊತೆ ಚೆನ್ನೈ ಟ್ರೇಡ್ ಡೀಲ್!
ರಾಜ್ವೀರ್ ಪದಮ್ ಮೆಹ್ತಾ ತ್ರಿಶತಕ
ಕಳೆದ ವಾರ ದ್ವಿಶತಕ ಬಾರಿಸಿದ್ದ ರಾಜ್ವೀರ್ ಪದಮ್, ಇತ್ತೀಚಿನ ಪಂದ್ಯದಲ್ಲಿ ತ್ರಿಶತಕವನ್ನು ಬಾರಿಸಿ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಇನಿಂಗ್ಸ್ ಆರಂಭಿಸಿದ ರಾಜ್ವೀರ್, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದರು. ಮೈದಾನದ ಎಲ್ಲಾ ಕಡೆ ಸಿಕ್ಸರ್ ಹಾಗೂ ಬೌಂಡರಿಗಳ ಸುರಿಮಳೆಗೈದರು. ಅವರು ಆಡಿದ 152 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ ಬರೋಬ್ಬರಿ 43 ಬೌಂಡರಿಗಳೊಂದಿಗೆ 311 ರನ್ಗಳನ್ನು ಕಲೆ ಹಾಕಿದರು. ಈ ಟೂರ್ನಿಯಲ್ಲಿ ದಾಖಲಾದ ಮೊದಲ ತ್ರಿಶತಕ ಇದಾಗಿದೆ. ಇದರ ಜೊತೆಗೆ ಮತ್ತೊಬ್ಬ ಆರಂಭಿಕ ಕಿಶಂತ್ ಜೊತೆಗೆ ಮೊದಲನೇ ವಿಕೆಟ್ಗೆ 399 ರನ್ಗಳ ಭರ್ಜರಿ ಜೊತೆಯಾಟವನ್ನು ಕಟ್ಟಿದರು. ಆ ಮೂಲಕ ರಾಜಾಜಿನಗರ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದರು.
ಶತಕ ಬಾರಿಸಿದ ಕಿಶಂತ್
ರಾಜ್ವೀರ್ ಜೊತೆಗೆ ದೀರ್ಘಾವಧಿ ಬ್ಯಾಟ್ ಮಾಡಿದ್ದ ಕಿಶಂತ್ ಅದ್ಭುತ ಶತಕವನ್ನು ಬಾರಿಸಿದರು. ಅವರು ಆಡಿದ 104 ಎಸೆತಗಳಲ್ಲಿ15 ಬೌಂಡರಿಗಳೊಂದಿಗೆ 131 ರನ್ಗಳನ್ನು ಕಲೆ ಹಾಕಿದರು. ಆ ಮೂಲಕ ತಮ್ಮ ತಂಡಕ್ಕೆ ಭರ್ಜರಿ ಅಡಿಪಾಯ ಹಾಕಿದ ಬಳಿಕ ವಿಕೆಟ್ ಒಪ್ಪಿಸಿದರು.
ಕೆಎಸ್ಸಿಎ ಅಂಡರ್-14 ಟೂರ್ನಿಯ ಪಂದ್ಯದಲ್ಲಿ ರಾಜ್ವೀರ್ ಪದಂ ಮೆಹ್ತಾ ದ್ವಿಶತಕ, ಕರಣ್ ಗೌಡ ಶತಕ!
ಕೇವಲ 47 ರನ್ಗೆ ಕ್ಯಾರವನ್ ಕ್ರಿಕೆಟರ್ಸ್ ಆಲ್ಔಟ್
ಬಳಿಕ ದಾಖಲೆಯ ದೊಡ್ಡ ಮೊತ್ತವನ್ನು ಗುರಿ ಹಿಂಬಾಲಿಸಿದ ಕ್ಯಾರವನ್ ಕ್ರಿಕೆಟರ್ಸ್ ತಂಡ, ಸ್ಪರ್ಶ್ ಎಸ್ ಅವರ ಮಾರಕ ಬೌಲಿಂಗ್ ದಾಳಿಗೆ ನಲುಗಿತು. ಆ ಮೂಲಕ 22 ಓವರ್ಗಳಿಗೆ ಕೇವಲ 47 ರನ್ಗಳಿಗೆ ಆಲ್ಔಟ್ ಆಯಿತು ಹಾಗೂ ಹೀನಾಯ ಸೋಲಿನ ಮುಖಭಂಗ ಅನುಭವಿಸಿತು. ರಾಜಾಜಿನಗರ ಬೌಲಿಂಗ್ ದಾಳಿಯ ಎದುರು ಕ್ಯಾರವನ್ ತಂಡದ ಯಾವೊಬ್ಬ ಬ್ಯಾಟ್ಸ್ಮನ್ ದೀರ್ಘಾವಧಿ ಬ್ಯಾಟ್ ಮಾಡಲಿಲ್ಲ. ಇದರ ಪರಿಣಾಮವಾಗಿ ಕನಿಷ್ಠ 50 ರನ್ ಕೂಡ ಕಲೆ ಹಾಕಲು ಸಾಧ್ಯವಾಗಲಿಲ್ಲ. 13 ರನ್ ಕಲೆ ಹಾಕಿದ ಜತಿನ್ ಜಿಸಿ ಕ್ಯಾರವನ್ ಪರ ವೈಯಕ್ತಿಕ ಗರಿಷ್ಠ ಸ್ಕೋರರ್ ಆದರು.
5 ವಿಕೆಟ್ ಕಿತ್ತ ಎಸ್ ಸ್ಪರ್ಶ್
ರಾಜಾಜಿನಗರ ಕ್ರಿಕೆಟರ್ಸ್ ತಂಡದ ವೇಗದ ಬೌಲರ್ ಎಸ್ ಸ್ಪರ್ಶ್ ಅವರು ಕ್ಯಾರವನ್ ಕ್ರಿಕೆಟರ್ಸ್ ಇನಿಂಗ್ಸ್ನಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿದರು. ಇವರ ಬೌಲ್ ಮಾಡಿದ 8 ಓವರ್ಗಳಲ್ಲಿ 22 ರನ್ ನೀಡಿ 5 ವಿಕೆಟ್ಗಳನ್ನು ಕಬಳಿಸಿದರು. ಇವರ ಜೊತೆಗೆ ರೋನಿತ್ ಹಾಗೂ ಸಂಕಲ್ಪ್ ಅವರು ಕೂಡ ತಲಾ ಎರಡೆರಡು ವಿಕೆಟ್ಗಳನ್ನು ಕಬಳಿಸಿದರು. ಆ ಮೂಲಕ ಕ್ಯಾರವನ್ ತಂಡದ ಕುಸಿತಕ್ಕೆ ಕಾರಣರಾದರು.