ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸ್ಕ್ವಾಷ್​ನಲ್ಲಿ ಬೆಳ್ಳಿ ಗೆದ್ದ ಅಭಯ್​ ಸಿಂಗ್​; ಒಲಿಂಪಿಕ್ಸ್​ಗೆ ನೇರ ಅರ್ಹತೆ ಮಿಸ್‌

Asian Games 2026 LIVE: 2023ರ ಏಷ್ಯಾಡ್​ ತಂಡ ವಿಭಾಗದಲ್ಲಿ ಚಿನ್ನ ಗೆದ್ದಿದ್ದ 28 ವರ್ಷದ ಅಭಯ್​, ಶನಿವಾರ ನಡೆದಿದ್ದ ಸೆಮೀಸ್​ನಲ್ಲಿ ಪಾಕಿಸ್ತಾನದ ಮುಹಮ್ಮದ್​ ಇರ್ಫಾನ್​ ಎದುರು 3-0ಯಿಂದ ಗೆದ್ದು ಬೀಗಿದ್ದರು. ಆದರೆ ಇದೇ ಲಯವನ್ನು ಫೈನಲ್‌ನಲ್ಲಿ ಮುಂದುವರಿಸಲು ಸಾಧ್ಯವಾಗಲಿಲ್ಲ.

ಏಷ್ಯನ್‌ ಗೇಮ್ಸ್‌; ಸ್ಕ್ವಾಷ್​ನಲ್ಲಿ ಬೆಳ್ಳಿ ಗೆದ್ದ ಅಭಯ್​ ಸಿಂಗ್

Abhay Singh -

Abhilash BC
Abhilash BC Sep 27, 2026 1:37 PM

ನಗೋಯಾ, ಸೆ.27: ಏಷ್ಯಾಡ್​ ಸ್ಕ್ವಾಷ್​ ಸ್ಪರ್ಧೆಯಲ್ಲಿ ಅನುಭವಿ ಆಟಗಾರ ಅಭಯ್​ ಸಿಂಗ್ ಅವರು ಫೈನಲ್‌ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಅವರು ಮಲೇಷ್ಯಾದ ಎನ್​ಜಿ ಈನ್​ ಯೌ ವಿರುದ್ಧ 3-0 ಅಂತರದ ಸೋಲು ಕಂಡರು. ಇದರೊಂದಿಗೆ 2028ರ ಲಾಸ್​ ಏಂಜಲೀಸ್​ ಒಲಿಂಪಿಕ್ಸ್​ಗೆ ನೇರ ಅರ್ಹತೆ ಸಂಪಾದಿಸುವ ಅವಕಾಶವನ್ನೂ ಕಳೆದುಕೊಂಡರು.

ಮೊದಲ ಸುತ್ತಿನಲ್ಲಿ ಎನ್​ಜಿ ಈನ್​ ಯೌ ಅವರು ಅಭಯ್ ಸಿಂಗ್ ವಿರುದ್ಧ 11–9 ಅಂತರದ ಮೇಲುಗೈ ಸಾಧಿಸಿ ಆರಂಭಿಕ ಮುನ್ನಡೆ ಸಾಧಿಸಿದರು. ಎರಡನೇ ಗೇಮ್‌ನಲ್ಲಿಯೂ ಆಕ್ರಮಣಕಾರಿ ಆಟವಾಡಿದ ಎನ್​ಜಿ ಈನ್ 11-5 ಅಂತರದಲ್ಲಿ ಗೆದ್ದು ಅಭಯ್ ಸಿಂಗ್ ಮೇಲೆ ಮತ್ತಷ್ಟು ಒತ್ತಡ ಹೇರಿದರು. ಮೂರನೇ ಸುತ್ತಿನಲ್ಲಿಯೂ ಭಾರತೀಯ ಆಟಗಾರನಿಗೆ ತಿರುಗೇಟು ನೀಡಲು ಸಾಧ್ಯವಾಗದೆ ನೇರ ಗೇಮ್‌ ಅಂತರದಿಂದ ಪರಾಭವಗೊಂಡರು.

2023ರ ಏಷ್ಯಾಡ್​ ತಂಡ ವಿಭಾಗದಲ್ಲಿ ಚಿನ್ನ ಗೆದ್ದಿದ್ದ 28 ವರ್ಷದ ಅಭಯ್​, ಶನಿವಾರ ನಡೆದಿದ್ದ ಸೆಮೀಸ್​ನಲ್ಲಿ ಪಾಕಿಸ್ತಾನದ ಮುಹಮ್ಮದ್​ ಇರ್ಫಾನ್​ ಎದುರು 3-0ಯಿಂದ ಗೆದ್ದು ಬೀಗಿದ್ದರು. ಆದರೆ ಇದೇ ಲಯವನ್ನು ಫೈನಲ್‌ನಲ್ಲಿ ಮುಂದುವರಿಸಲು ಸಾಧ್ಯವಾಗಲಿಲ್ಲ.

ಏಷ್ಯನ್‌ ಗೇಮ್ಸ್‌; 12 ವರ್ಷಗಳ ನಂತರ ವೈಯಕ್ತಿಕ ಬ್ಯಾಡ್ಮಿಂಟನ್ ಪದಕ ಗೆಲ್ಲುವಲ್ಲಿ ಭಾರತ ವಿಫಲ

ಬ್ಯಾಡ್ಮಿಂಟನ್‌ನಲ್ಲಿ ನಿರಾಸೆ

ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್-ಫೈನಲ್ ಪಂದ್ಯಗಳಲ್ಲಿ ಪಿ.ವಿ. ಸಿಂಧು ಮತ್ತು ಉನ್ನತಿ ಹೂಡಾ ಅವರು ತೀವ್ರ ಪೈಪೋಟಿಯ ನಂತರ ಸೋಲನ್ನು ಅನುಭವಿಸಿದ ಬೆನ್ನಲ್ಲೇ, ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ ಬ್ಯಾಡ್ಮಿಂಟನ್ ಅಭಿಯಾನವು ಅಂತ್ಯಗೊಂಡಿತು.

ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ 11ನೇ ಸ್ಥಾನದಲ್ಲಿರುವ ಸಿಂಧು, ವಿಶ್ವದ 4ನೇ ಶ್ರೇಯಾಂಕದ ಆಟಗಾರ್ತಿ ಹಾಗೂ ಟೋಕಿಯೊ 2020ರ ಚಾಂಪಿಯನ್ ಆಗಿರುವ ಚೀನಾದ ಚೆನ್ ಯುಫೇ ವಿರುದ್ಧ 11-21, 21-18, 21-10 ಅಂತರದಲ್ಲಿ ಸೋಲನ್ನಪ್ಪಿದರು.

ಇದಕ್ಕೂ ಮುನ್ನ, ವಿಶ್ವದ 24ನೇ ಶ್ರೇಯಾಂಕಿತ ಆಟಗಾರ್ತಿಯಾದ ಭಾರತದ ಉನ್ನತಿ ಹೂಡಾ, ಮೂರು ಬಾರಿ ವಿಶ್ವ ಚಾಂಪಿಯನ್ ಹಾಗೂ ಮಾಜಿ ವಿಶ್ವದ ನಂ. 1 ಆಟಗಾರ್ತಿಯಾಗಿದ್ದ, ಪ್ರಸ್ತುತ ವಿಶ್ವದ 3ನೇ ಶ್ರೇಯಾಂಕದ ಅಕಾನೆ ಯಮಗುಚಿ ವಿರುದ್ಧ 21-16, 14-21, 21-17 ಅಂತರದಲ್ಲಿ ಸೋಲನುಭವಿಸಿದರು.