ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಏಷ್ಯನ್‌ ಗೇಮ್ಸ್‌ ಸ್ಕ್ವ್ಯಾಷ್; ಅವಳಿ ಬಂಗಾರದ ನಿರೀಕ್ಷೆಯಲ್ಲಿ ಭಾರತ; ಫೈನಲ್‌ ಪ್ರವೇಶಿಸಿದ ಅನಾಹತ್, ಅಭಯ್

Asian Games: ಪಾಕಿಸ್ತಾನದ ಮುಹಮ್ಮದ್ ಇರ್ಫಾನ್ ಅವರನ್ನು ಸೋಲಿಸುವ ಮೂಲಕ 28 ವರ್ಷದ ಅಭಯ್ ಸಿಂಗ್ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ಗೆ ಲಗ್ಗೆ ಇಟ್ಟರು. ಏಷ್ಯನ್ ಗೇಮ್ಸ್‌ನ ಪುರುಷರ ಸಿಂಗಲ್ಸ್ ಸ್ಕ್ವ್ಯಾಷ್‌ನಲ್ಲಿ ಇದುವರೆಗೆ ಯಾವುದೇ ಭಾರತೀಯ ಪುರುಷ ಆಟಗಾರ ಚಿನ್ನದ ಪದಕ ಗೆದ್ದಿಲ್ಲ. ಹೀಗಾಗಿ, ಭಾನುವಾರ ಇತಿಹಾಸ ನಿರ್ಮಿಸುವ ಅವಕಾಶ ಅಭಯ್‌ಗೆ ಒದಗಿಬಂದಿದೆ.

ಏಷ್ಯನ್‌ ಗೇಮ್ಸ್‌ ಸ್ಕ್ವ್ಯಾಷ್; ಅವಳಿ ಬಂಗಾರದ ನಿರೀಕ್ಷೆಯಲ್ಲಿ ಭಾರತ

Anahat Singh-Abhay Singh -

Abhilash BC
Abhilash BC Sep 26, 2026 2:33 PM

ನಗೋಯಾ, ಸೆ.26: ವಿಶ್ವ ಜೂನಿಯರ್ ಸ್ಕ್ವ್ಯಾಷ್ ಚಾಂಪಿಯನ್‌ಶಿಪ್ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಎರಡು ತಿಂಗಳ ನಂತರ, 18 ವರ್ಷದ ಅನಾಹತ್ ಸಿಂಗ್ ತಮ್ಮ ವೃತ್ತಿಜೀವನದ ಅತಿದೊಡ್ಡ ಗೆಲುವನ್ನು ದಾಖಲಿಸಿದ್ದಾರೆ. ಶನಿವಾರ ನಡೆದ ಏಷ್ಯನ್ ಗೇಮ್ಸ್‌ನ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ, ಆರಂಭದಲ್ಲಿ ಎರಡು ಗೇಮ್‌ಗಳ ಹಿನ್ನಡೆಯಲ್ಲಿದ್ದರೂ ಅದ್ಭುತವಾಗಿ ಪುಟಿದೆದ್ದ ಅವರು, ಜಪಾನ್‌ನ ವಿಶ್ವದ 6ನೇ ಶ್ರೇಯಾಂಕದ ಆಟಗಾರ್ತಿ ಸತೋಮಿ ವಟನಾಬೆ ಅವರನ್ನು ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟರು.

ಏಷ್ಯನ್ ಗೇಮ್ಸ್‌ನ ಸಿಂಗಲ್ಸ್ ಫೈನಲ್ ತಲುಪಿದ ಇತಿಹಾಸದಲ್ಲೇ ಮೊದಲ ಭಾರತೀಯ ಮಹಿಳಾ ಸ್ಕ್ವ್ಯಾಷ್ ಆಟಗಾರ್ತಿಯಾಗಿ ಅನಾಹತ್ ಹೊರಹೊಮ್ಮಿದರು. ಫೈನಲ್‌ನಲ್ಲಿ ಚಿನ್ನದ ಪದಕ ಗೆದ್ದರೆ 2028ರಲ್ಲಿ ನಡೆಯುವ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅರ್ಹತೆ ಪಡೆಯಲಿದ್ದಾರೆ.

ವೆಸ್ಟ್ ಇಂಡೀಸ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಮುರಿಯಬಹುದಾದ ದಾಖಲೆಗಳು

ಫೈನಲ್‌ನಲ್ಲಿ 9-11, 11-13, 12-10, 11-6, 11-3 ಅಂತರದಲ್ಲಿ ಹಿನ್ನಡೆಯಿಂದ ಚೇತರಿಸಿಕೊಂಡು ಗೆಲುವು ಸಾಧಿಸುವ ಮೂಲಕ ಫೈನಲ್ ತಲುಪಿದರು. ಅನಾಹತ್, ಆರಂಬಿಕ ಎರಡು ಗೇಮ್‌ಗಳನ್ನು ಕಳೆದುಕೊಂಡಾಗ ಸೋಲಿನತ್ತ ಸಾಗುತ್ತಿರುವಂತೆ ಕಂಡುಬಂದರು. ಆದರೆ ಎದೆಗುಂದದೆ, ಮೂರನೇ ಗೇಮ್‌ನಲ್ಲಿ ಎರಡು ಮ್ಯಾಚ್ ಪಾಯಿಂಟ್‌ಗಳನ್ನು ಉಳಿಸಿಕೊಂಡರು.



ಅತ್ಯಂತ ರೋಚಕವಾಗಿದ್ದ ಮೂರನೇ ಗೇಮ್‌ನಲ್ಲಿ 12-10 ಅಂತರದ ಜಯದೊಂದಿಗೆ ಅವರು ಪಂದ್ಯದಲ್ಲಿ ಮರುಹೋರಾಟ ನಡೆಸಿದರು ಮತ್ತು ನಂತರ ನಾಲ್ಕನೇ ಗೇಮ್‌ನಲ್ಲಿ 11-6 ಅಂಕಗಳಿಂದ ಗೆದ್ದು ಸಮಬಲ ಸಾಧಿಸಿದರು. ನಿರ್ಣಾಯಕ ಗೇಮ್‌ ವೇಳೆಗೆ ಪಂದ್ಯದ ಚಿತ್ರಣವೇ ಸಂಪೂರ್ಣವಾಗಿ ಬದಲಾಗಿತ್ತು. ರ‍್ಯಾಲಿಗಳ ಮೇಲೆ ಹಿಡಿತ ಸಾಧಿಸಿದ ಅನಾಹತ್ 11-3 ಅಂಕಗಳಿಂದ ಗೆಲುವು ದಾಖಲಿಸುವ ಮೂಲಕ ಅದ್ಭುತವಾಗಿ ಪುಟಿದೆದ್ದು ಫೈನಲ್‌ಗೆ ಪ್ರವೇಶ ಪಡೆದರು.

ಏತನ್ಮಧ್ಯೆ, ಪಾಕಿಸ್ತಾನದ ಮುಹಮ್ಮದ್ ಇರ್ಫಾನ್ ಅವರನ್ನು ಸೋಲಿಸುವ ಮೂಲಕ 28 ವರ್ಷದ ಅಭಯ್ ಸಿಂಗ್ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ಗೆ ಲಗ್ಗೆ ಇಟ್ಟರು. ಏಷ್ಯನ್ ಗೇಮ್ಸ್‌ನ ಪುರುಷರ ಸಿಂಗಲ್ಸ್ ಸ್ಕ್ವ್ಯಾಷ್‌ನಲ್ಲಿ ಇದುವರೆಗೆ ಯಾವುದೇ ಭಾರತೀಯ ಪುರುಷ ಆಟಗಾರ ಚಿನ್ನದ ಪದಕ ಗೆದ್ದಿಲ್ಲ. ಹೀಗಾಗಿ, ಭಾನುವಾರ ಇತಿಹಾಸ ನಿರ್ಮಿಸುವ ಅವಕಾಶ ಅಭಯ್‌ಗೆ ಒದಗಿಬಂದಿದೆ. ಈ ಚಿನ್ನದ ಪದಕವು ಅವರಿಗೆ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅರ್ಹತೆಯನ್ನೂ ತಂದುಕೊಡಲಿದೆ.