IPL 2025: ಉಳಿದ ಐಪಿಎಲ್ ಪಂದ್ಯಗಳಿಗೆ ಚಿಯರ್ ಲೀಡರ್, ಡಿಜೆ ಸಂಗೀತ ರದ್ದು
ಭಾರತ ಹಾಗೂ ಪಾಕಿಸ್ತಾನ ನಡುವೆ ಸಂಘರ್ಷ ಏರ್ಪಟ್ಟಿದ್ದರಿಂದ ಕಳೆದ ಗುರುವಾರ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಪಂದ್ಯ ಅರ್ಧದಲ್ಲೇ ಸ್ಥಗಿತಗೊಂಡ ಬಳಿಕ, ಶುಕ್ರವಾರ ಟೂರ್ನಿಯನ್ನೇ ಒಂದು ವಾರಗಳ ಕಾಲ ಸ್ಥಗಿತಗೊಳಿಸಲಾಗಿತ್ತು.


ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಘರ್ಷ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ 18ನೇ ಆವೃತ್ತಿಯ ಐಪಿಎಲ್(IPL 2025) ಪಂದ್ಯಾವಳಿ ಮೇ 17ರಿಂದ ಪುನಾರಂಭಗೊಳ್ಳಲಿದೆ. ಆದರೆ ಉಳಿದ ಪಂದ್ಯದ ವೇಳೆ ಚಿಯರ್ ಲೀಡರ್‌ಗಳ(cheerleaders) ಕುಣಿತ ಮತ್ತು ಡಿಜೆ ಸಂಗೀತವನ್ನು ಕೈಬಿಟ್ಟು ಶಾಂತ ರೀತಿಯಲ್ಲಿ ಪಂದ್ಯ ನಡೆಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ನಿರ್ಧಾರ ತೆಗೆದುಕೊಳ್ಳಲಿದೆ ಎಂದು ವರದಿಯಾಗಿದೆ. 17 ಪಂದ್ಯಗಳನ್ನು ಚಿಯರ್‌ಲೀಡರ್‌ಗಳು ಮತ್ತು ಡಿಜೆಗಳಿಲ್ಲದೆ ನಡೆಸುವಂತೆ ಸುನಿಲ್ ಗವಾಸ್ಕರ್(Sunil Gavaskar) ಬಿಸಿಸಿಐಗೆ ಒತ್ತಾಯಿಸಿದ ನಂತರ ಬಿಸಿಸಿಐ ಈ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಮೂಲಗಳು ಇಂಡಿಯಾ ಟುಡೇಗೆ ತಿಳಿಸಿವೆ.
ಈ ಹಿಂದೆ ಪಹಲ್ಗಾಮ್ ಉಗ್ರ ದಾಳಿಗೆ 26 ಮಂದಿ ಪ್ರವಾಸಿಗರು ಮೃತಪಟ್ಟ ಸಂದರ್ಭದಲ್ಲಿ ಏ.23 ರಂದು ನಡೆದಿದ್ದ ಮುಂಬೈ ಇಂಡಿಯನ್ಸ್ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ಐಪಿಎಲ್‌ನಲ್ಲಿ ಶೋಕ ಆಚರಿಸಲಾಗಿತ್ತು. ಪಂದ್ಯದ ವೇಳೆ ಚಿಯರ್ ಲೀಡರ್‌ಗಳ ಕುಣಿತ, ಡಿಜೆ ಸಂಗೀತ ಮತ್ತು ಸುಡುಮದ್ದುಗಳ ಪ್ರದರ್ಶನವನ್ನು ರದ್ದುಗೊಳಿಸಲಾಗಿತ್ತು.
ಇದನ್ನೂ ಓದಿ IPL 2025: ಐಪಿಎಲ್ ಪ್ಲೇ-ಆಫ್ ಪಂದ್ಯಗಳಿಗೆ ದಕ್ಷಿಣ ಆಫ್ರಿಕಾ ಆಟಗಾರರು ಅಲಭ್ಯ
ಭಾರತ-ಪಾಕ್ ನಡುವೆ ಯದ್ಧದ ಭೀತಿ ಏರ್ಪಟ್ಟಿದ್ದರಿಂದ ಕಳೆದ ಗುರುವಾರ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಪಂದ್ಯ ಅರ್ಧದಲ್ಲೇ ಸ್ಥಗಿತಗೊಂಡ ಬಳಿಕ, ಶುಕ್ರವಾರ ಟೂರ್ನಿಯನ್ನೇ ಒಂದು ವಾರಗಳ ಕಾಲ ಸ್ಥಗಿತಗೊಳಿಸಲಾಗಿತ್ತು.
ಪರಿಷ್ಕೃತ ವೇಳಾಪಟ್ಟಿಯಂತೆ ಉಳಿದ ಲೀಗ್ ಪಂದ್ಯಗಳು 6 ನಗರಗಳಲ್ಲಿ ನಡೆಯಲಿವೆ. ಬೆಂಗಳೂರಿನಲ್ಲಿ 2, ಜೈಪುರಲ್ಲಿ 3, ಲಖನೌದಲ್ಲಿ 2, ಮುಂಬೈನಲ್ಲಿ 1, ಅಹಮದಾಬಾದ್‌ನಲ್ಲಿ 2, ನವದೆಹಲಿಯಲ್ಲಿ 3 ಪಂದ್ಯಗಳು ನಿಗದಿಯಾಗಿದೆ. ಪ್ಲೇ-ಆಫ್, ಫೈನಲ್ ಪಂದ್ಯಕ್ಕೆ ಇನ್ನೂ ಸ್ಥಳ ನಿಗದಿಯಾಗಿಲ್ಲ.