ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗೌತಮ್‌ ಗಂಭೀರ್‌ ಇಟ್ಟಿರುವ ನಂಬಿಕೆಯಿಂದ ಉತ್ತಮ ಪ್ರದರ್ಶನ ತೋರಲು ಸಾಧ್ಯವಾಯಿತು: ಸಾಯಿ ಸುದರ್ಶನ್‌!

ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯದ ಮೊದಲನೇ ದಿನ 81 ರನ್‌ ಗಳಿಸಿದ ಸಾಯಿ ಸುದರ್ಶನ್‌ ಭಾರತ ತಂಡದ ನಂಬಿಕೆಯನ್ನು ಉಳಿಸಿಕೊಂಡರು. ಮೊದಲನೇ ದಿನದಾಟದ ಅಂತ್ಯಕ್ಕೆ ತಮ್ಮ ಬ್ಯಾಟಿಂಗ್‌ ಪ್ರದರ್ಶನದ ಹಿಂದೆ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಅವರ ಬೆಂಬಲ ಹಾಗೂ ನಂಬಿಕೆ ಇದೆ ಎಂದು ಹೇಳಿಕೊಂಡಿದ್ದಾರೆ.

ತಮ್ಮ ಬ್ಯಾಟಿಂಗ್‌ ಸಕ್ಸಸ್‌ಗೆ ಗಂಭೀರ್‌ ಕಾರಣ ಎಂದ ಸುದರ್ಶನ್!

ಅರ್ಧಶತಕ ಬಾರಿಸಿದ ಸಾಯಿ ಸುದರ್ಶನ್‌ ಬ್ಯಾಟಿಂಗ್‌ ವೈಖರಿ. -

Profile
Ramesh Kote Jun 6, 2026 10:36 PM

ಚಂಡೀಗಢ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ತೋರಿದ ಬ್ಯಾಟಿಂಗ್‌ ಪ್ರದರ್ಶನವನ್ನು ಇದೀಗ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿಯೂ(IND vs AFG) ಸಾಯಿ ಸುದರ್ಶನ್ (Sai Sudarshan) ಮುಂದುವರಿಸಿದ್ದಾರೆ. ಅವರು ಏಕೈಕ ಟೆಸ್ಟ್‌ ಪಂದ್ಯದ ಮೊದಲನೇ ದಿನ 81 ರನ್‌ ಗಳಿಸಿದರು, ಆದರೆ ಶತಕದಂಚಿನಲ್ಲಿ ವಿಕೆಟ್‌ ಒಪ್ಪಿಸಿದರು ಆದರೂ ಅವರು ಬ್ಯಾಟಿಂಗ್‌ ಎಲ್ಲರ ಗಮನವನ್ನು ಸೆಳೆಯಿತು. ಮೊದಲನೇ ದಿನದಾಟದ ಅಂತ್ಯಕ್ಕೆ ಮಾತನಾಡಿದ ಸುದರ್ಶನ್‌, ತಮ್ಮ ಬ್ಯಾಟಿಂಗ್‌ ಸಕ್ಸಸ್‌ಗೆ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ (Gautam Gambhir) ಕಾರಣ ಎಂದು ಹೇಳಿದ್ದಾರೆ.

ಟೆಸ್ಟ್‌ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌, ಭಾರತ ತಂಡದ ಮೂರನೇ ಕ್ರಮಾಂಕದ ಬಗ್ಗೆ ಸುದ್ದಿಗಾರರು ಕೇಳಿದ್ದ ಪ್ರಶ್ನೆಗೆ ಉತ್ತರ ನೀಡಿದ್ದರು. ತಮಿಳುನಾಡು ಮೂಲದ ಬ್ಯಾಟ್ಸ್‌ಮನ್‌ ಸಾಯಿ ಸುದರ್ಶನ್‌ ಅವರನ್ನು ಕೇವಲ ಆರು ಪಂದ್ಯಗಳಿಂದ ನಿರ್ಧರಿಸಲು ಸಾಧ್ಯವಿಲ್ಲ. ಒಬ್ಬ ಆಟಗಾರನ ಸಾಮರ್ಥ್ಯವನ್ನು ನಿರ್ಧರಿಸಬೇಕೆಂದರೆ, ನಾವು ಅವರಿಗೆ ಹೆಚ್ಚಿನ ಪಂದ್ಯಗಳಲ್ಲಿ ಅವಕಾಶವನ್ನು ನೀಡಬೇಕೆಂದು ಹೇಳಿದ್ದರು. ಅದರಂತೆ ಹೆಡ್‌ ಕೋಚ್‌ ಇಟ್ಟಿದ್ದ ನಂಬಿಕೆಯನ್ನು ಸುದರ್ಶನ್‌, ಮೊದಲನೇ ದಿನ ಅರ್ಧಶತಕದ ಮೂಲಕ ಉಳಿಸಿಕೊಂಡರು.

ರಾಹುಲ್‌-ಗಿಲ್‌ ಶತಕ; ಮೊದಲ ದಿನವೇ ಹಿಡಿತ ಸಾಧಿಸಿದ ಭಾರತ

ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಸಾಯಿ ಸುದರ್ಶನ್‌, ಸೊಗಸಾಗಿ ಬ್ಯಾಟ್‌ ಮಾಡಿದರು. ಅವರು ಆಡಿದ 104 ಎಸೆತಗಳಲ್ಲಿ 13 ಮನಮೋಹಕ ಬೌಂಡರಿಗಳೊಂದಿಗೆ 81 ರನ್‌ ಗಳಿಸಿದ ಬಳಿಕ ಸಲೀಮ್‌ ಸಫಿಗೆ ವಿಕೆಟ್‌ ಒಪ್ಪಿಸಿದರು. ಅಲ್ಲದೆ ಕೆಎಲ್‌ ರಾಹುಲ್‌ ಜೊತೆಗೆ 139 ರನ್‌ಗಳ ಉಪಯುಕ್ತ ಜೊತೆಯಾಟವನ್ನು ಆಡಿದ್ದರು. ಮೊದಲನೇ ದಿನದಾಟದ ಬಳಿಕ ಮಾತನಾಡಿದ ಅವರು, ನಾಯಕ ಹಾಗೂ ಟೀಮ್‌ ಮ್ಯಾನೇಜ್‌ಮೆಂಟ್‌ ನಂಬಿಕೆಯಿಂದಾಗಿ ನಾನು ಮುಕ್ತವಾಗಿ ಬ್ಯಾಟ್‌ ಮಾಡಲು ಸಾಧ್ಯವಾಯಿತು ಎಂದರು.

ಸಾಯಿ ಸುದರ್ಶನ್‌ ಹೇಳಿದ್ದೇನು?

"ಇದು ಆಟಗಾರನಿಗೆ ಅಪಾರ ಸ್ವಾತಂತ್ರ್ಯವನ್ನು ನೀಡುತ್ತದೆ. ಕೋಚ್, ತಂಡ ಹಾಗೂ ನಾಯಕ ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸಿ, ನಿಮ್ಮ ಮೇಲೆ ವಿಶ್ವಾಸವಿಟ್ಟು, ದೇಶಕ್ಕಾಗಿ ಉತ್ತಮ ಪ್ರದರ್ಶನ ನೀಡಬೇಕೆಂದು ಬಯಸಿದಾಗ ಮಾನಸಿಕವಾಗಿ ದೊಡ್ಡ ಮಟ್ಟದ ಭರವಸೆ ಮತ್ತು ಸ್ಥಿರತೆ ದೊರೆಯುತ್ತದೆ. ತಂಡದ ಯಶಸ್ಸಿಗೆ ನೀವು ಕೊಡುಗೆ ನೀಡಬೇಕು, ಪಂದ್ಯಗಳನ್ನು ಗೆಲ್ಲಿಸಬೇಕು ಎಂಬ ಅವರ ನಂಬಿಕೆ ಮೊದಲಿನಿಂದಲೇ ಒಂದು ದೊಡ್ಡ ಗೌರವವಾಗಿದೆ," ಎಂದು ಸುದರ್ಶನ್ ಹೇಳಿದ್ದಾರೆ.

IND vs AFG: ತಮ್ಮ ತವರು ಅಭಿಮಾನಿಗಳ ಎದುರು 11ನೇ ಟೆಸ್ಟ್‌ ಶತಕ ಪೂರೈಸಿದ ಶುಭಮನ್‌ ಗಿಲ್!

"ನಿಸ್ಸಂಶಯವಾಗಿ, ಇದು ನಿಮ್ಮನ್ನು ಮುಕ್ತವಾಗಿ ಬ್ಯಾಟ್‌ ಮಾಡಲು ಹಾಗೂ ನಿಮ್ಮ ಅತ್ಯುತ್ತಮ ಸಾಮರ್ಥ್ಯವನ್ನು ಪ್ರದರ್ಶಿಸಲು ಅವಕಾಶ ನೀಡುತ್ತದೆ. 'ಮುಂದಿನ ಪಂದ್ಯದಲ್ಲಿ ನಾನು ಆಡುತ್ತೇನೆಯೇ ಇಲ್ಲವೇ?' ಎಂಬ ಚಿಂತೆ ಅಥವಾ ಅಂತಹ ಆಲೋಚನೆಗಳಲ್ಲಿ ಮುಳುಗುವ ಅಗತ್ಯವಿರುವುದಿಲ್ಲ. ಯಾಕೆಂದರೆ ತಂಡದಿಂದ ನಿಮಗೆ ಸಂಪೂರ್ಣ ಸ್ವಾತಂತ್ರ್ಯ ಮತ್ತು ಬೆಂಬಲ ದೊರೆತಿರುತ್ತದೆ. ಆದ್ದರಿಂದ ಅಂಥ ಅನುಮಾನಗಳು ಮನಸ್ಸಿಗೆ ಬರುವುದೇ ಇಲ್ಲ. ನನ್ನ ದೃಷ್ಟಿಯಲ್ಲಿ ಇದು ಅತ್ಯಂತ ಸಂತೋಷಕರ ಅನುಭವ," ಎಂದು ಅವರು ತಿಳಿಸಿದ್ದಾರೆ.

ರಾಹುಲ್‌ ಜೊತೆಗಿನ ಸಂವಹನದ ಬಗ್ಗೆ ಬೆಳಕು‌ ಚೆಲ್ಲಿದ ಎಡಗೈ ಬ್ಯಾಟರ್

ರನ್‌ ಗಳಿಸುವ ಜವಾಬ್ದಾರಿಯನ್ನು ಯಾರು ಹೊತ್ತುಕೊಳ್ಳಬೇಕು ಎಂಬುದಕ್ಕಿಂತಲೂ, ಪಂದ್ಯದ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳುವುದು ಹಾಗೂ ಬೌಲರ್‌ಗಳಿಗಿಂತ ಒಂದು ಹೆಜ್ಜೆ ಮುಂದೆ ಇರಲು ಹೇಗೆ ಸಾಧ್ಯ ಎಂಬುದರ ಕುರಿತಾಗಿ ತಮ್ಮ ಮತ್ತು ರಾಹುಲ್ ನಡುವೆ ಚರ್ಚೆ ನಡೆದಿತ್ತು ಎಂದು ಸುದರ್ಶನ್‌ ಹೇಳಿದ್ದಾರೆ.

IND vs AFG: ತಮ್ಮ 12ನೇ ಟೆಸ್ಟ್‌ ಶತಕ ಸಿಡಿಸಿ ಸಂಭ್ರಮಿಸಿದ ಕನ್ನಡಿಗ ಕೆಎಲ್‌ ರಾಹುಲ್‌!

"ನಮ್ಮ ಸಂಭಾಷಣೆ ಮುಖ್ಯವಾಗಿ ಪಂದ್ಯದಲ್ಲಿ ಏನು ನಡೆಯುತ್ತಿದೆ, ಪಿಚ್ ಹೇಗೆ ವರ್ತಿಸುತ್ತಿದೆ ಹಾಗೂ ಯಾವ ಬೌಲರ್ ಯಾವ ರೀತಿಯ ಬೌಲ್‌ ಮಾಡುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರ ಕುರಿತಾಗಿತ್ತು. ಕೆಎಲ್ ಭಾಯ್‌ ಬಗ್ಗೆ ಹೇಳುವುದಾದರೆ, ಅವರು ಅಪಾರ ಸಮಚಿತ್ತತೆಯನ್ನು ನೀಡುತ್ತಾರೆ. ನಾನು ಅವರೊಂದಿಗೆ ಬ್ಯಾಟ್‌ ಮಾಡುವಾಗ ತುಂಬಾ ಆತ್ಮವಿಶ್ವಾಸ ಮತ್ತು ಭರವಸೆ ಸಿಗುತ್ತದೆ. ಇದು ಒಬ್ಬ ಬ್ಯಾಟರ್‌ಗೆ ಬಹಳ ಸಹಾಯವಾಗುತ್ತದೆ. ಅವರು ಪಂದ್ಯವನ್ನು ಅತ್ಯುತ್ತಮವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಹಾಗಾಗಿ ಪಂದ್ಯದಲ್ಲಿ ಉಪಯೋಗಿಸಬಹುದಾದ ಅನೇಕ ಮಹತ್ವದ ಸೂಚನೆಗಳು ಮತ್ತು ಸಲಹೆಗಳನ್ನು ಅವರು ನೀಡುತ್ತಾರೆ," ಎಂದು ಅವರು ವಿವರಿಸಿದ್ದಾರೆ.