ಟಿ20 ವಿಶ್ವಕಪ್ ಗೆದ್ದಾಯ್ತು, ಭಾರತ ತಂಡದ ಮುಂದಿನ ಗುರಿ ಏನೆಂದು ರಿವೀಲ್ ಮಾಡಿದ ಗೌತಮ್ ಗಂಭೀರ್!
ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಭಾರತ ತಂಡ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದೆ. ಇದೀಗ ಭಾರತ ತಂಡದ ಮುಂದಿನ ಗುರಿ ಏನೆಂದು ಗಂಭೀರ್ ರಿವೀಲ್ ಮಾಡಿದ್ದಾರೆ. 2025-27ರ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಗೆಲ್ಲುವುದು ಎಂದು ಹೇಳಿದ್ದಾರೆ.
ತಮ್ಮ ಮುಂದಿನ ಗುರಿ ಏನೆಂದು ತಿಳಿಸಿದ ಗೌತಮ್ ಗಂಭೀರ್. -
ನವದೆಹಲಿ: ತಮ್ಮ ಮಾರ್ಗದರ್ಶನದಲ್ಲಿ ಭಾರತ ತಂಡಕ್ಕೆ ಟಿ20 ವಿಶ್ವಕಪ್ ಟ್ರೋಫಿ (T20 World Cup 2026) ಗೆದ್ದ ಬಳಿಕ ಹೆಡ್ ಕೋಚ್ ಗೌತಮ್ ಗಂಭೀರ್ (Gautam Gambhir) ತಮ್ಮ ಮಂದಿನ ಗುರಿ 2025-27ರ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ (WTC 2025-27) ಪ್ರಶಸ್ತಿ ಗೆಲ್ಲುವುದು ಎಂದು ಹೇಳಿದ್ದಾರೆ. ಟೆಸ್ಟ್ ಕ್ರಿಕೆಟ್ ತಮ್ಮ ಹೃದಯಕ್ಕೆ ತುಂಬಾ ಹತ್ತಿರವಾದ ಸ್ವರೂಪ ಎಂದು ಅವರು ಬಣ್ಣಿಸಿದ್ದಾರೆ. ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡ, ಮಾರ್ಚ್ 8 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳಿಂದ ಮಣಿಸಿ ಮೂರನೇ ಬಾರಿ ಚಾಂಪಿಯನ್ ಆಗಿತ್ತು.
ಭಾರತ ತಂಡದ ಈ ಜಯ ಐತಿಹಾಸಿಕವಾಗಿದ್ದು, ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಹಲವು ಮೈಲುಗಲ್ಲುಗಳನ್ನು ಸ್ಥಾಪಿಸಿತು. ಭಾರತ ತನ್ನ ನೆಲದಲ್ಲಿ ಟಿ20 ವಿಶ್ವಕಪ್ ಗೆದ್ದ ಮೊದಲ ತಂಡವಾಗಿದ್ದು, 2024ರ ಜಯದ ಬಳಿಕ ಸತತ ಎರಡನೇ ಬಾರಿ ಕಿರೀಟ ಗೆದ್ದ ಮೊದಲ ತಂಡವಾಗಿಯೂ ಹೊರಹೊಮ್ಮಿತು. ಅಲ್ಲದೆ, 2007, 2024 ಮತ್ತು 2026ರಲ್ಲಿ ಪ್ರಶಸ್ತಿ ಗೆದ್ದು ಟಿ20 ವಿಶ್ವಕಪ್ ಅನ್ನು ಮೂರು ಬಾರಿ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಯನ್ನು ಭಾರತ ಪಾತ್ರವಾಗಿದೆ.
ʻನನ್ನ ಅಪ್ಪ ನಿಜವಾದ ಹೀರೋʼ-T20 World Cup ಪದಕವನ್ನು ತಮ್ಮ ತಂದೆಗೆ ಸಮರ್ಪಿಸಿದ ಶಿವಂ ದುಬೇ!
ಕಳೆದ ಎರಡು ವರ್ಷಗಳಲ್ಲಿ ಭಾರತ ಮೂರು ಐಸಿಸಿ ವೈಟ್-ಬಾಲ್ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. 2024ರ ಟಿ20 ವಿಶ್ವಕಪ್, 2025ರ ಚಾಂಪಿಯನ್ಸ್ ಟ್ರೋಫಿ ಮತ್ತು 2026ರ ಟಿ20 ವಿಶ್ವಕಪ್ ಟ್ರೋಫಿಗಳನ್ನು ಭಾರತ ಗೆದಿದೆ. ಆದರೆ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಚೊಚ್ಚಲ ಪ್ರಶಸ್ತಿಗಾಗಿ ಭಾರತ ಎದುರು ನೋಡುತ್ತಿದೆ. ಭಾರತ ತಂಡ ಉದ್ಘಾಟನಾ ಆವೃತ್ತಿಯ ಡಬ್ಲ್ಯುಟಿಸಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಅನುಭವಿಸಿತ್ತು. 2021–2023ರ ಋತುವಿನಲ್ಲಿ ಫೈನಲ್‌ಗೆ ತಲುಪಿದರೂ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು. 2023–2025 ಆವೃತ್ತಿಯಲ್ಲಿ ಭಾರತ ಫೈನಲ್‌ಗೆ ಅರ್ಹತೆ ಪಡೆಯಲು ವಿಫಲವಾಗಿತ್ತು.
ಭಾರತ ತಂಡವನ್ನು ಡಬ್ಲ್ಯುಟಿಸಿ ಫೈನಲ್‌ಗೆ ಮುನ್ನಡೆಸುವುದು ಇದೀಗ ಗೌತಮ್ ಗಂಭೀರ್‌ಗೆ ತನ್ನ ಪ್ರಮುಖ ಗುರಿಯಾಗಿದೆ. ವಿಶೇಷವಾಗಿ ಭಾರತ ತಂಡಕ್ಕೆ ರೆಡ್-ಬಾಲ್ ಕ್ರಿಕೆಟ್ ಅನೇಕ ಸವಾಲುಗಳನ್ನು ನೀಡುತ್ತಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ. ಆದರೂ, ಫೈನಲ್‌ಗೆ ಅರ್ಹತೆ ಪಡೆಯುವ ಪ್ರಯತ್ನದಲ್ಲಿ ಯುವ ಆಟಗಾರರಿಗೆ ತಂಡ ಸಂಪೂರ್ಣ ಬೆಂಬಲ ನೀಡುವುದಾಗಿ ಅವರು ಒತ್ತಿ ಹೇಳಿದ್ದಾರೆ.
ನನ್ನ ಹೃದಯಕ್ಕೆ ಟೆಸ್ಟ್ ಕ್ರಿಕೆಟ್ ಹತ್ತರವಾಗಿದೆ: ಗಂಭೀರ್
“ಟೆಸ್ಟ್ ಕ್ರಿಕೆಟ್ ನನಗೆ ತುಂಬಾ ಹತ್ತಿರವಾಗಿದೆ. ಈ ಸ್ವರೂಪ ನನಗೆ ಅತ್ಯಂತ ಪ್ರಿಯವಾಗಿದೆ. ಮೊದಲನೆಯದಾಗಿ ನಾವು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೆ ಅರ್ಹತೆ ಪಡೆಯಬೇಕು ಎಂಬುದು ನನ್ನ ಆಸೆ. ಇದೇ ಈಗ ನನ್ನ ಮುಂದಿನ ಗುರಿ. ಇನ್ನೂ ನಮಗೆ ಸುಮಾರು ಒಂಬತ್ತು ಟೆಸ್ಟ್ ಪಂದ್ಯಗಳು ಉಳಿದಿವೆ. ನಮ್ಮ ಗಮನ ಅದೇ ಕಡೆ ಇದೆ, ಏಕೆಂದರೆ ರೆಡ್-ಬಾಲ್ ಕ್ರಿಕೆಟ್‌ನಲ್ಲಿ ನಾವು ಒಂದು ಸವಾಲಿನ ಹಂತವನ್ನು ಎದುರಿಸುತ್ತಿದ್ದೇವೆ. ವೈಟ್-ಬಾಲ್ ಕ್ರಿಕೆಟ್‌ಗಿಂತ ಇದು ಯಾವಾಗಲೂ ಹೆಚ್ಚು ಕಠಿಣ,” ಎಂದು ಗಂಭೀರ್ ಎಎನ್‌ಐಗೆ ತಿಳಿಸಿದ್ದಾರೆ.
“ರೆಡ್-ಬಾಲ್ ಕ್ರಿಕೆಟ್‌ನಲ್ಲಿ ನಾವು ಈ ಯುವ ಆಟಗಾರರಿಗೆ ಬೆಂಬಲ ನೀಡುತ್ತಲೇ ಇರುತ್ತೇವೆ, ಏಕೆಂದರೆ ಟೆಸ್ಟ್ ಕ್ರಿಕೆಟ್ ಎಂದಿಗೂ ಸುಲಭವಲ್ಲ. ಆದ್ದರಿಂದ ಮುಂದಿನ ಗುರಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯುವುದಾಗಿದೆ,” ಎಂದು ಅವರು ಹೇಳಿದ್ದಾರೆ.