ಯೋಗರಾಜ್ ಸಿಂಗ್ ಗರಡಿಯಲ್ಲಿ ಕ್ರಿಕೆಟ್ ಅಭ್ಯಾಸ ಆರಂಭಿಸಿದ ಅನಯಾ ಬಾಂಗರ್! ವಿಡಿಯೋ ವೈರಲ್
ಮಾಜಿ ಕ್ರಿಕೆಟಿಗ ಸಂಜಯ್ ಬಾಂಗರ್ ಅವರ ಪುತ್ರಿ ಅನಯಾ ಬಾಂಗರ್ ಯೋಗರಾಜ್ ಸಿಂಗ್ ಮಾರ್ಗದರ್ಶನದಲ್ಲಿ ಕ್ರಿಕೆಟ್ ಅಭ್ಯಾಸ ಆರಂಭಿಸಿದ್ದಾರೆ. ಅವರ ಬ್ಯಾಟಿಂಗ್ ಶೈಲಿಗೆ ಯೋಗರಾಜ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಉತ್ತಮ ಆಟಗಾರ್ತಿಯನ್ನಾಗಿ ರೂಪಿಸುವ ಭರವಸೆ ನೀಡಿದ್ದಾರೆ. 2027ರಿ ಮಾರ್ಚ್‌ನಿಂದ ಆಸ್ಟ್ರೇಲಿಯಾದ ಎಲೈಟ್ ಮಹಿಳಾ ಕ್ರಿಕೆಟ್‌ನಲ್ಲಿ ಆಡುವ ಅರ್ಹತೆಯನ್ನೂ ಅನಯಾ ಪಡೆದಿದ್ದಾರೆ.
ಯೋಗರಾಜ್ ಸಿಂಗ್ ಗರಡಿಯಲ್ಲಿ ಅನಯಾ ಬಾಂಗರ್ ಬ್ಯಾಟಿಂಗ್ ಅಭ್ಯಾಸ. -
ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಬಾಂಗರ್ ಅವರ ಪುತ್ರಿ ಅನಯಾ ಬಾಂಗರ್ (Anaya Bangar) ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳಲು ಸಿದ್ಧತೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಭಾರತದ ಮಾಜಿ ಕ್ರಿಕೆಟಿಗ ಹಾಗೂ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ (Yograj Singh) ಮಾರ್ಗದರ್ಶನದಲ್ಲಿ ಕ್ರಿಕೆಟ್ ಅಭ್ಯಾಸ ಆರಂಭಿಸಿದ್ದಾರೆ. ಇವರಿಬ್ಬರ ಅಭ್ಯಾಸದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.
ನವೆಂಬರ್ 16ರಂದು ಅನಯಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಯೋಗರಾಜ್ ಸಿಂಗ್ ಅವರೊಂದಿಗೆ ಅಭ್ಯಾಸ ಆರಂಭಿಸಿರುವ ಫೋಟೋ ಹಾಗೂ ವಿಡಿಯೊಗಳನ್ನು ಹಂಚಿಕೊಂಡಿದ್ದರು. 'ಯೋಗರಾಜ್ ಸಿಂಗ್ ಸರ್ ಅವರೊಂದಿಗೆ ಅಭ್ಯಾಸ ಆರಂಭವಾಗಿದೆ' ಎಂದು ಅವರು ಬರೆದುಕೊಂಡಿದ್ದರು. ಈ ಪೋಸ್ಟ್‌ಗೆ ಕ್ರಿಕೆಟ್ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಅನಯಾ ಬ್ಯಾಟಿಂಗ್ ಶೈಲಿಗೆ ಯೋಗರಾಜ್ ಮೆಚ್ಚುಗೆ
ಇತ್ತೀಚೆಗೆ ಬಿಡುಗಡೆಯಾಗಿರುವ ಮತ್ತೊಂದು ವಿಡಿಯೊದಲ್ಲಿ ಯೋಗರಾಜ್ ಸಿಂಗ್ ಅವರು ಅನಯಾ ಅವರೊಂದಿಗೆ ಕ್ರಿಕೆಟ್ ತರಬೇತಿ ಕುರಿತು ಮಾತನಾಡುತ್ತಿರುವುದು ಕಂಡುಬಂದಿದೆ. ಅನಯಾ ಅವರನ್ನು ಉತ್ತಮ ಆಟಗಾರ್ತಿಯನ್ನಾಗಿ ರೂಪಿಸುವ ಭರವಸೆ ನೀಡಿರುವ ಯೋಗರಾಜ್, ಅವರ ಬ್ಯಾಟಿಂಗ್ ಶೈಲಿ ಹಾಗೂ ಬ್ಯಾಟ್ ಫ್ಲೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ನಾನು ನಿನ್ನನ್ನು ಸಂಪೂರ್ಣ ವಿಭಿನ್ನ ಆಟಗಾರ್ತಿಯನ್ನಾಗಿ ಮಾಡುತ್ತೇನೆ. ಅಭ್ಯಾಸದ ವೇಳೆ ಸುಸ್ತಾಗಿದೆ ಎಂಬ ನೆಪಗಳನ್ನು ಹೇಳಬಾರದು. ನಿನಗೆ ಏನು ಅನಿಸುತ್ತಿದೆ ಎಂಬುದನ್ನು ಮುಕ್ತವಾಗಿ ಹೇಳಬೇಕು," ಎಂದು ಯೋಗರಾಜ್ ಹೇಳಿದ್ದಾರೆ.
ಅಲ್ಲದೆ, ಮೊದಲು ತಮ್ಮ ನಡುವೆ ತಂದೆ-ಮಗಳ ಬಾಂಧವ್ಯ ಬೆಳೆಸಿಕೊಳ್ಳಬೇಕು. ನಂತರ ಕೋಚ್ ಮತ್ತು ಆಟಗಾರ್ತಿಯ ಸಂಬಂಧ ಮುಂದುವರಿಯಬೇಕು ಎಂದು ತಿಳಿಸಿದ್ದಾರೆ. ಆಟಗಾರರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವುದು ಅವರ ಬೆಳವಣಿಗೆಗೆ ಮುಖ್ಯ ಎಂದು ಯೋಗರಾಜ್ ಅಭಿಪ್ರಾಯಪಟ್ಟಿದ್ದಾರೆ.
2027ರ ಮಾರ್ಚ್‌ನಿಂದ ಆಸ್ಟ್ರೇಲಿಯಾದಲ್ಲಿ ಆಡಲು ಅವಕಾಶ
ಅನಯಾ ಅವರ ಕ್ರಿಕೆಟ್ ಕಮ್‌ಬ್ಯಾಕ್ ಪ್ರಯತ್ನಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾದ ನಿರ್ಧಾರವೂ ಮಹತ್ವದ್ದಾಗಿದೆ. ಕ್ರಿಕೆಟ್ ಆಸ್ಟ್ರೇಲಿಯಾದ ಲಿಂಗ ವೈವಿಧ್ಯತೆ ಮತ್ತು ಟ್ರಾನ್ಸ್‌ಜೆಂಡರ್ ಆಟಗಾರರ ನೀತಿಯಡಿ ಪರಿಶೀಲನೆ ನಡೆಸಿದ ಬಳಿಕ, 2027ರ ಮಾರ್ಚ್ ನಿಂದ ಎಲೈಟ್ ಮಹಿಳಾ ಕ್ರಿಕೆಟ್‌ನಲ್ಲಿ ಆಡುವ ಅರ್ಹತೆಯನ್ನು ಅವರಿಗೆ ನೀಡಲಾಗಿದೆ. ಆದರೆ ಇದಕ್ಕೆ ಸಂಬಂಧಿಸಿದ ನಿಯಮಗಳು ಮತ್ತು ಷರತ್ತುಗಳನ್ನು ಅವರು ಪೂರೈಸಬೇಕಿದೆ.
59 ಎಸೆತಗಳಲ್ಲಿ ಶತಕ ಬಾರಿಸಿ ತನ್ನನ್ನು ರಿಲೀಸ್ ಮಾಡಿದ ಆರ್‌ಸಿಬಿಗೆ ಗ್ರೇಸ್ ಹ್ಯಾರಿಸ್ ತಿರುಗೇಟು!
ದೇಶಿ ಕ್ರಿಕೆಟ್‌ನಲ್ಲೂ ಆಡಿರುವ ಅನಯಾ
ಅನಯಾ ಈ ಹಿಂದೆ ಆರ್ಯನ್ ಬಾಂಗರ್ ಹೆಸರಿನಲ್ಲಿ ಕ್ರಿಕೆಟ್ ಆಡಿದ್ದರು. ಮುಂಬೈನ ಇಸ್ಲಾಂ ಜಿಮ್ಖಾನಾ ಕ್ಲಬ್ ಮೂಲಕ ಕ್ರಿಕೆಟ್ ಆರಂಭಿಸಿದ್ದ ಅವರು, ಇಂಗ್ಲೆಂಡ್‌ನ ಹಿಂಕ್ಲಿ ಕ್ರಿಕೆಟ್ ಕ್ಲಬ್ ಪರವೂ ಆಡಿದ್ದರು. 2019ರಲ್ಲಿ ಪುದುಚೇರಿ ತಂಡದ ಪರ ಕೂಚ್ ಬೆಹಾರ್ ಟ್ರೋಫಿಯಲ್ಲಿ ಆಡಿದ್ದ ಅವರು ಐದು ಪಂದ್ಯಗಳಿಂದ 300 ರನ್ ಗಳಿಸಿದ್ದರು. ಇದರಲ್ಲಿ 150 ರನ್ ಅವರ ಗರಿಷ್ಠ ಸ್ಕೋರ್ ಆಗಿತ್ತು. ಬೌಲಿಂಗ್‌ನಲ್ಲೂ 20 ವಿಕೆಟ್ ಪಡೆದು ಗಮನ ಸೆಳೆದಿದ್ದರು.