ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಏಕದಿನ ಕ್ರಿಕೆಟ್ ತಂಡಕ್ಕೆ ಆಯುಷ್ ಬದೋನಿ ಸೆಲೆಕ್ಟ್! ಆಯ್ಕೆ ಸಮಿತಿಯ ಮಾನದಂಡಗಳೇನು?

ಭಾರತ ತಂಡದ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರು ಗಾಯಕ್ಕೆ ತುತ್ತಾದ ಕಾರಣ ಅವರ ಬದಲಿ ಆಟಗಾರನನ್ನಾಗಿ ಆಯ್ಕೆ ಸಮಿತಿ ಆಯುಷ್ ಬದೋನಿ ಅವರಿಗೆ ಮಣೆ ಹಾಕಿದೆ. ಆದರೆ, ಇದೀಗ ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರ ಪಾಡೇನು ಎನ್ನುವ ಪ್ರಶ್ನೆಗಳು ಎದ್ದಿವೆ. ಸೀಮಿತ ಓವರ್ ತಂಡಕ್ಕೆ ಆಯ್ಕೆ ಮಾಡುವಾಗ ಆಯ್ಕೆ ಸಮಿತಿಯ ಮಾನದಂಡಗಳೇನು ಎನ್ನುವ ಗೊಂದಲ ಸೃಷ್ಟಿಯಾಗಿದೆ.

ಭಾರತ ತಂಡಕ್ಕೆ ಆಯುಷ್‌ ಬದೋನಿ ಆಯ್ಕೆಯ ಮಾನದಂಡಗಳೇನು?

ಆಯುಷ್‌ ಬದೋನಿಯ ಆಯ್ಕೆ ನ್ಯಾಯಯುತವಾಗಿದೆಯೇ? -

Profile
Ramesh Kote Jan 15, 2026 6:07 PM

ಅಂಕಣ: ರಂಗನಾಥ್‌, ಚಿತ್ರದುರ್ಗ

ಏಕಲವ್ಯ ಗುರು ದ್ರೋಣಾಚಾರ್ಯರ ಶಿಷ್ಯನಾಗಲು ಅರ್ಹನಾಗಿದ್ದರೂ, ಗುರುಕುಲದ ಅಧಿಕೃತ ಅನುಮತಿ ಇಲ್ಲದ ಕಾರಣಕ್ಕೆ ಅವನ ಪ್ರತಿಭೆ ಮೂಲೆ ಗುಂಪಾಗಿ ಗುರುತಿಸಲ್ಪಡಲಿಲ್ಲ. ಆದರೆ, ಕಾಡಿನಲ್ಲೇ ತನ್ನ ಶ್ರಮದಿಂದ ವಿದ್ಯೆ ಕಲಿತು, ಶಬ್ದವೇದಿ ವಿದ್ಯೆಯಲ್ಲಿ ಶ್ರೇಷ್ಠನಾದರೂ, ಅಂತಿಮವಾಗಿ ಆತನ ಪ್ರತಿಭೆಗೆ ತಕ್ಕ ಅವಕಾಶ ಮತ್ತು ಪ್ರಶಂಸೆ ಸಿಗಲಿಲ್ಲ. ಕಾರಣ ಪ್ರತಿಭೆಯ ಕೊರತೆಯಲ್ಲ, ಗುರುಕುಲದ ಮೆಚ್ಚುಗೆಯ ಕೊರತೆ. ಇದೇ ರೀತಿ ಇಂದು ಭಾರತೀಯ ಕ್ರಿಕೆಟ್‌ನ ಏಕದಿನ ತಂಡದ ಆಯ್ಕೆಗಳನ್ನು ನೋಡಿದಾಗ ಈ ಪುರಾಣದ ನೆನಪು ಮರುಕಳಿಸಿದಂತಿದೆ. ವಿಜಯ ಹಝಾರೆ ಟ್ರೋಫಿಯಲ್ಲಿ ನಿರಂತರ ಪ್ರದರ್ಶನ ನೀಡುವ ಅನೇಕ ‘ಏಕಲವ್ಯರ’ ನಡುವೆ, ಐಪಿಎಲ್‌ ಎಂಬ ಚುಟುಕು ಕ್ರಿಕೆಟ್‌ನಲ್ಲಿ ಗುರುಗಳ ಕಣ್ಣಿಗೆ ಬಿದ್ದ ‘ಅರ್ಜುನರಿಗೆ’ ಮಣೆ ಹಾಕಲಾಗುತ್ತಿದೆ. ಗಾಯಾಳು ವಾಷಿಂಗ್ಟನ್‌ ಸುಂದರ್‌ ಸ್ಥಾನಕ್ಕೆ ಆಯುಷ್‌ ಬದೋನಿಗೆ ಅವಕಾಶ ನೀಡಿರುವ ಬಿಸಿಸಿಐ ನಿರ್ಧಾರವೂ ಅದೇ ಪ್ರಶ್ನೆಯನ್ನು ಮತ್ತೆ ಎಬ್ಬಿಸಿದಂತಿದೆ.

ಏಕದಿನ ಕ್ರಿಕೆಟ್‌ಗೆ ಆಟಗಾರರನ್ನು ಆಯ್ಕೆ ಮಾಡಲು ಇರುವ ಅತ್ಯಂತ ಸೂಕ್ತವಾದ ಮಾನದಂಡ ಅಂದರೆ ಅದು ದೇಶಿ ಟೂರ್ನಿಯಾದ ವಿಜಯ ಹಝಾರೆ ಟ್ರೋಫಿ. ಇಲ್ಲಿ ಆಟಗಾರ 50 ಓವರ್‌ಗಳ ಆಟದಲ್ಲಿ ತನ್ನ ತಾಳ್ಮೆ, ತಂತ್ರ, ನಿರಂತರತೆ ಮತ್ತು ಒತ್ತಡದ ನಿರ್ವಹಣೆಯ ಸಾಮರ್ಥ್ಯವನ್ನು ಸಾಬೀತುಪಡಿಸಬೇಕು. ಆಗ ಮಾತ್ರ ಆತ ನಿಗದಿತ ಓವರ್‌ಗಳ ಸ್ವರೂಪಕ್ಕೆ ಒಗ್ಗಿಕೊಳ್ಳುತ್ತಾನೆ ಎನ್ನುವುದು ಇಂದು ನೆನ್ನೆಯದಲ್ಲ, ಇದು ಮೊದಲಿಂದಲೂ ನಡೆದು ಬಂದಿರುವ ಟ್ರೆಂಡ್. ಅದರಂತೆ ಈ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ತೋರಿದ ಹಲವಾರು ಆಟಗಾರರಿದ್ದರೂ ಅವರನ್ನು ಕಡೆಗಣಿಸಿ, ಐಪಿಎಲ್‌ನಲ್ಲಿ ಹೊಡಿ-ಬಡಿ ಆಟಕ್ಕೆ ಹೆಸರುವಾಸಿಯಾದ ಆಯುಷ್ ಬದೋನಿಗೆ ಅವಕಾಶ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.

2026ರ ಪುಣೆ ಗ್ರ್ಯಾಂಡ್ ಟೂರ್‌ಗೆ ಗುಡ್‌ವಿಲ್ ಅಂಬಾಸಿಡರ್ ಆಗಿ ಎಂಎಸ್ ಧೋನಿ ನೇಮಕ!

ಆಯುಷ್‌ ಬದೋನಿ ಒಬ್ಬ ಪ್ರತಿಭಾವಂತ ಕ್ರಿಕೆಟರ್ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಐಪಿಎಲ್‌ ನಲ್ಲಿ ತಂಡದ ಒತ್ತಡದ ಸಂದರ್ಭಗಳಲ್ಲಿ ಆಡಿದ ಕೆಲ ಆಕರ್ಷಕ ಇನಿಂಗ್ಸ್‌ಗಳು ಅವರ ಸಾಮರ್ಥ್ಯ ಮತ್ತು ಆಟದ ಶೈಲಿಯನ್ನು ತೋರಿಸಿವೆ. ಆದರೆ ಐಪಿಎಲ್‌ ಎಂಬುದು ಟಿ20 ಕ್ರಿಕೆಟ್‌. ಏಕದಿನ ಕ್ರಿಕೆಟ್‌ನಲ್ಲಿ ಅದಕ್ಕಿಂತ ಭಿನ್ನವಾದ ಮನೋಭಾವ ಮತ್ತು ಕೌಶಲ ಬೇಕಾಗುತ್ತದೆ. ಟಿ20ಯಲ್ಲಿ 20–30 ಬಾಲ್‌ಗಳಲ್ಲಿ ಅರ್ಧಶತಕದ ಪ್ರದರ್ಶನ ಸಾಕಾಗಬಹುದು. ಆದರೆ ಏಕದಿನದಲ್ಲಿ ಹೆಚ್ಚು ಹೊತ್ತು ಮೈದಾನದಲ್ಲಿ ಬಹಳ ತಾಳ್ಮೆಯ ಆಟ ಆಡಬೇಕಾಗುತ್ತದೆ. ಆದ್ದರಿಂದ ಆಯ್ಕೆ ಸಮಿತಿಯ ಈ ನಿರ್ಧಾರ ಹಲವು ಚರ್ಚೆಗಳಿಗೆ ಆಸ್ಪದ ನೀಡಿದೆ.

ಈ ರೀತಿಯ ಬೆಳವಣಿಗೆಗಳು ಆಗುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಕೆಲವು ವರ್ಷಗಳಲ್ಲಿ ಇಂತಹ ಅನೇಕ ಉದಾಹರಣೆಗಳು ನಡೆದಿವೆ. 2018–19ರ ಅವಧಿಯಲ್ಲಿ ರಣಜಿ ಮತ್ತು ವಿಜಯ ಹಝಾರೆ ಟ್ರೋಫಿಗಳಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದ ಕನ್ನಡಿಗ ಮಯಾಂಕ್‌ ಅಗರ್ವಾಲ್‌ ಅವರನ್ನು ಬಹಳ ದಿನಗಳ ಕಾಲ ಏಕದಿನ ಕ್ರಿಕೆಟ್ ತಂಡದಿಂದ ದೂರವಿಡಲಾಯಿತು. ಆದರೆ ಐಪಿಎಲ್‌ನಲ್ಲಿ ಆಕರ್ಷಕ ಪ್ರದರ್ಶನ ನೀಡಿದ ನಂತರವೇ ಅವರಿಗೆ ಸೀಮಿತ ಓವರ್‌ಗಳ ತಂಡದಲ್ಲಿ ಅವಕಾಶ ನೀಡಲಾಯಿತು. ದೇಶಿ ಟೂರ್ನಿಯ ಪ್ರದರ್ಶನಕ್ಕಿಂತ ಐಪಿಎಲಲ್‌ನಲ್ಲಿ ನೀಡಿದ ಪ್ರದರ್ಶನವನ್ನೇ ಮುಖ್ಯ ಮನದಂಡವಾಗಿರಿಸಿಕೊಂಡು ಏಕದಿನ ಕ್ರಿಕೆಟ್ ನ ಆಯ್ಕೆಯ ಬಾಗಿಲು ತೆರೆಯುತ್ತಿರುವಂತೆ ಕಾಣುತ್ತಿದೆ.

ಇನ್ನೊಂದು ಉದಾಹರಣೆ ಅಂಬಾಟಿ ರಾಯುಡು. ದೇಶಿ ಕ್ರಿಕೆಟ್‌ನಲ್ಲಿ ವರ್ಷಗಳ ಕಾಲ ಸ್ಥಿರ ಪ್ರದರ್ಶನ ನೀಡಿದರೂ, ರಾಷ್ಟ್ರೀಯ ತಂಡದಲ್ಲಿ ಅವರ ಸ್ಥಾನ ಅಸ್ಥಿರವಾಗಿತ್ತು. ಚೆನ್ನೈ ಪರ ಐಪಿಎಲಲ್‌ನಲ್ಲಿ ಮಿಂಚಿದ ಕೂಡಲೇ ಅವರಿಗೆ ಏಕದಿನ ತಂಡದಲ್ಲಿ ನಿರಂತರ ಅವಕಾಶ ಲಭಿಸಿದವು. ಆದರೆ ಆ ಬಳಿಕ ವಿಶ್ವಕಪ್‌ ಆಯ್ಕೆ ವಿವಾದದಲ್ಲಿ ಅವರನ್ನು ಕಡೆಗಣಿಸಿದ ರೀತಿಯೇ ಆಯ್ಕೆ ಪ್ರಕ್ರಿಯೆಯ ಅಸ್ಪಷ್ಟತೆಯನ್ನು ಬಯಲಿಗೆಳೆದವು. ಮತ್ತೊಂದು ಉದಾಹರಣೆ ನೋಡುವುದಾದರೆ, ವಿಜಯ ಹಝಾರೆ ಟ್ರೋಫಿಯಲ್ಲಿ ಆಕರ್ಷಕ ಪ್ರದರ್ಶನ ನೀಡಿದ ಕರುಣ್‌ ನಾಯರ್‌ ಅವರ ಕಥೆ ಇನ್ನೊಂದು ಬಗೆಯದ್ದು. ಟೆಸ್ಟ್‌ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಆಟಗಾರನಾಗಿದ್ದರೂ, ದೇಶಿ ಕ್ರಿಕೆಟ್‌ನಲ್ಲಿನ ಸಾಧನೆಗಳು ರಾಷ್ಟ್ರೀಯ ಆಯ್ಕೆ ಸಮಿತಿಗೆ ಸಾಕಾಗಲಿಲ್ಲ. ಅಂದರೆ, ಐಪಿಎಲ್‌ನಲ್ಲಿ ಗಮನ ಸೆಳೆಯುವ ಪ್ರದರ್ಶನ ಇಲ್ಲದಿದ್ದರೆ ಅವಕಾಶ ಸಿಗುವುದಿಲ್ಲ ಎನ್ನುವುದು ಇಲ್ಲೂ ಕೂಡ ಸ್ಪಷ್ಟವಾಗಿ ಗೋಚರಿಸುವಂತಿದೆ.

ʻಸ್ಥಿರವಾಗಿ ರನ್‌ ಗಳಿಸುತ್ತಿರುವವರು ಏನಾಗಬೇಕು?ʼ: ಆಯುಷ್‌ ಬದೋನಿ ಆಯ್ಕೆಯನ್ನು ಪ್ರಶ್ನೆಸಿದ ಕೆ ಶ್ರೀಕಾಂತ್!

ಇತ್ತೀಚಿನ ವರ್ಷಗಳಲ್ಲಿ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿಯ ಪ್ರದರ್ಶನವೂ ಏಕದಿನ ತಂಡದ ಆಯ್ಕೆಯ ಮೇಲೆ ಪ್ರಭಾವ ಬೀರುತ್ತಿರುವ ಹಾಗೆ ಕಾಣುತ್ತಿದೆ. ಟಿ20ಯಲ್ಲಿ ಆಕ್ರಮಣಕಾರಿ ಆಟ ಆಡಬಲ್ಲವರನ್ನು ಏಕದಿನಕ್ಕೂ ಸೂಕ್ತರೆಂದು ಪರಿಗಣಿಸುವ ಪ್ರವೃತ್ತಿ ಕಳೆದ ಕೆಲವು ದಿನಗಳಿಂದ ಕಂಡು ಬರುತ್ತಿದೆ. ಆದರೆ, ವಿಜಯ ಹಝಾರೆ ಟ್ರೋಫಿಯಲ್ಲಿ ಶತಕಗಳ ಸುರಿಮಳೆಗೈದ ಹಲವಾರು ಆಟಗಾರರು ಅವಕಾಶದ ಹಾದಿಯಲ್ಲಿ ಎದುರು ನೋಡುವಂತಾಗಿದೆ.

ವಾಷಿಂಗ್ಟನ್‌ ಸುಂದರ್‌ ಗಾಯದಿಂದ ಹೊರಗುಳಿದಿರುವ ಈ ಸಮಯದಲ್ಲಿ ಆಯ್ಕೆ ಮಾಡಬೇಕಾಗಿರುವುದು ಅವರದ್ದೇ ಸ್ಥಾನ ತುಂಬಬಲ್ಲ ಆಟಗಾರನನ್ನೇ ಹೊರೆತು, ಹೊಡಿ-ಬಡಿ ಆಟಗಾರನನ್ನಲ್ಲ.ಅರ್ಥಾತ್ ಅವರು ಆಲ್‌ರೌಂಡರ್‌ ಆಗಿರುವುದರಿಂದ ಅವರ ಸ್ಥಾನಕ್ಕೆ ಮತ್ತೊಬ್ಬ ಆಲ್‌ರೌಂಡರ್‌ ರೋಲ್ ನಿಭಾಯಿಸ ಬಲ್ಲ ಆಟಗಾರನನ್ನು ಆಯ್ಕೆ ಮಾಡುವ ನಿರೀಕ್ಷೆ ಇತ್ತು. ಆದರೆ ಇದೀಗ ಬ್ಯಾಟ್ಸ್‌ಮನ್‌ ಗೆ ಮಣೆ ಹಾಕಿರುವುದು ಗಂಭೀರ್ ಅವರಿಗೆ ಡೆಲ್ಲಿ ಆಟಗಾರರ ಮೇಲಿನ ವ್ಯಾಮೋಹ ಹೆಚ್ಚಿದಂತಿದೆ ಕಾಣುತ್ತಿದೆ. ಟೆಸ್ಟ್ ಕ್ರಿಕೆಟ್ ನಲ್ಲಿ ಹೀಗೆಯೇ ಯುವ ಆಟಗಾರರಿಗೆ ಮಣೆ ಹಾಕಿ ಐದು ದಿನದ ಟೆಸ್ಟ್ ಪಂದ್ಯಗಳು ಮೂರು ದಿನಕ್ಕೆ ಮುಗಿಯುತ್ತಿವೆ. ಈ ರೀತಿಯ ಆಯ್ಕೆಗಳು ದೇಶೀಯ ಕ್ರಿಕೆಟ್‌ ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಟಗಾರರ ಪ್ರತಿಭೆಯನ್ನು ಮೂಲೆ ಗುಂಪು ಮಾಡಿದಂತಾಗುತ್ತವೆ. ವಿಜಯ ಹಝಾರೆ ಟ್ರೋಫಿಯಲ್ಲಿ ವರ್ಷವಿಡಿ ಶ್ರಮಿಸಿದರೂ ಪ್ರಯೋಜನವಿಲ್ಲ. ಎರಡು ತಿಂಗಳ ಐಪಿಎಲ್ ನ ಹದಿನಾಲ್ಕು ಪಂದ್ಯಗಳಲ್ಲಿ ಮಿಂಚಿ ಮರೆಯಾದರೆ ಸಾಕು ಎನ್ನುವ ಭಾವನೆ ಯುವ ಆಟಗಾರರಲ್ಲಿ ಬೇರೂರುತ್ತದೆ. ಇದರಿಂದ ದೇಶಿ ಕ್ರಿಕೆಟ್ ಮೇಲಿರುವ ಒಲವು ಕಡಿಮೆಯಾಗುತ್ತದೆ.

IND vs NZ: ವಾಷಿಂಗ್ಟನ್‌ ಸುಂದರ್‌ ಔಟ್‌, ಎರಡನೇ ಒಡಿಐಗೆ ಭಾರತ ತಂಡದಲ್ಲಿ ಎರಡು ಬದಲಾವಣೆ ಸಾಧ್ಯತೆ!

ಬಿಸಿಸಿಐಗೆ ಆಯ್ಕೆ ಮಾಡಲು ಪ್ರತಿಭೆಗಳ ಕೊರತೆಯಿಲ್ಲ. ಆದರೆ ಆಯ್ಕೆ ಪ್ರಕ್ರಿಯೆಯಲ್ಲಿ ಸ್ಪಷ್ಟ ಮಾನದಂಡಗಳ ಕೊರತೆ ಇದ್ದ ಹಾಗೆ ಕಾಣಿತ್ತಿದೆ. ಟೆಸ್ಟ್‌, ಏಕದಿನ ಮತ್ತು ಟಿ20 ಈ ಮೂರು ಸ್ವರೂಪಗಳಿಗೆ ಮೂರು ವಿಭಿನ್ನ ಮಾನದಂಡಗಳು ಇರಬೇಕು. ಏಕದಿನ ತಂಡಕ್ಕೆ ಆಯ್ಕೆ ಮಾಡುವಾಗ ವಿಜಯ ಹಝಾರೆ ಟ್ರೋಫಿಯ ಪ್ರದರ್ಶನವೇ ಮುಖ್ಯ ಮಾನದಂಡವಾಗಬೇಕು. ಇಲ್ಲವಾದರೆ, ಆಟಗಾರರಿಗೆ ನಾವು ಎಲ್ಲಿ ಗುರುತಿಸಿಕೊಳ್ಳಬೇಕು ಎನ್ನುವ ಗೊಂದಲ ಉಂಟಾಗುತ್ತದೆ. ಏಕದಿನ ಕ್ರಿಕೆಟ್‌ ಭಾರತೀಯ ಕ್ರಿಕೆಟ್ ನ ಒಂದು ದೊಡ್ಡ ಶಕ್ತಿಯಾಗಿದೆ. ಆದರೆ ಆ ಶಕ್ತಿಯ ಬೇರುಗಳು ದೇಶಿ ಕ್ರಿಕೆಟ್‌ನಲ್ಲಿ ಅಡಗಿವೆ. ಆ ಬೇರುಗಳಿಗೆ ಅವಕಾಶ ನೀಡದೆ, ಕೇವಲ ಐಪಿಎಲ್‌ ನಲ್ಲಿ ಮಿಂಚುವ ಆಟಗಾರರ ಮೇಲೆ ನಂಬಿಕೆ ಇಟ್ಟರೆ ಭವಿಷ್ಯದಲ್ಲಿ ಅದರ ಪರಿಣಾಮವನ್ನು ಟೀಮ್ ಇಂಡಿಯಾ ಎದುರಿಸಬೇಕಾಗುತ್ತದೆ. ವಿಶೇಷವಾಗಿ ಐಪಿಎಲ್ ಮತ್ತು ದೇಶೀಯ ಕ್ರಿಕೆಟ್ ನಡುವಿನ ವ್ಯತ್ಯಾಸವನ್ನು ಗೌತಮ್ ಗಂಭೀರ್ ಹಾಗೂ ಆಯ್ಕೆ ಸಮಿತಿ ಅರಿತುಕೊಳ್ಳಬೇಕಿದೆ. ಈ ಎರಡು ಟೂರ್ನಿಗಳ ಪರಿಸ್ಥಿತಿ, ಒತ್ತಡ, ಸನ್ನಿವೇಶ ಸಂಪೂರ್ಣ ವಿಭಿನ್ನವಾಗಿವೆ.

ಐಪಿಎಲ್ ನಲ್ಲಿ ಪ್ರತಿಯೊಬ್ಬ ಆಟಗಾರನ ಪಾತ್ರ ಸ್ಪಷ್ಟವಾಗಿರುತ್ತದೆ. ಪವರ್‌ಪ್ಲೇಯಲ್ಲಿ ಸಿಕ್ಸ್ ಮತ್ತು ಬೌಂಡರಿ ಕಡೆ ಬಾಲ್ ಗೆ ದಾರಿ ತೋರಿಸುವುದು, ಮಿಡಲ್ ಓವರ್‌ಗಳಲ್ಲಿ ವೇಗ ಹೆಚ್ಚಿಸುವುದು ಅಥವಾ ಡೆತ್ ಓವರ್‌ಗಳಲ್ಲಿ ಹೊಡಿ-ಬಡಿ ಆಟ ಆಡುವುದು. ಒಂದು ವೇಳೆ ವಿಫಲವಾದರೂ, ಮುಂದಿನ ಪಂದ್ಯದಲ್ಲಿ ಮತ್ತೊಂದು ಅವಕಾಶ ಸಿಗುತ್ತದೆ. ಇಲ್ಲಿ ತಂಡದ ಗೆಲುವಿಗಿಂತ ಆಟಗಾರನ ಇಂಪ್ಯಾಕ್ಟ್ ಮುಖ್ಯವಾಗುತ್ತದೆ.

ʻಬಿಗ್‌ಬ್ಯಾಷ್‌ ಲೀಗ್‌ನಲ್ಲಿ ಮೊಹಮ್ಮದ್‌ ರಿಝ್ವಾನ್‌ಗೆ ಅವಮಾನʼ: ಕಮ್ರಾನ್‌ ಅಕ್ಮಲ್‌ ಆಕ್ರೋಶ!

ಆದರೆ, ದೇಶಿ ಕ್ರಿಕೆಟ್, ವಿಶೇಷವಾಗಿ ವಿಜಯ ಹಝಾರೆ ಟ್ರೋಫಿ ಒಂದು ವಿಭಿನ್ನ ಮತ್ತು ವಿಶಿಷ್ಟ ಕ್ರಿಕೆಟ್ ಮಾದರಿ. ಇಲ್ಲಿ ಆಟಗಾರ 50 ಓವರ್‌ಗಳ ಆಟವನ್ನು ಅರ್ಥ ಮಾಡಿಕೊಳ್ಳಬೇಕು, ಪರಿಸ್ಥಿತಿಗೆ ತಕ್ಕಂತೆ ಆಟ ಬದಲಿಸಬೇಕು, ಆರಂಭಿಕ ವಿಕೆಟ್‌ಗಳು ಬಿದ್ದರೂ ಇನ್ನಿಂಗ್ಸ್‌ ಕಟ್ಟಬೇಕು. ಒಂದು ಪಂದ್ಯವೇ ಕೆಲವೊಮ್ಮೆ ಆಯ್ಕೆಯ ಭವಿಷ್ಯ ನಿರ್ಧರಿಸುತ್ತದೆ. ಹಾಗಾಗಿ ಇಲ್ಲಿ ಸ್ಥಿರತೆಯೇ ಮಾನದಂಡ. ಇಂತಹ ಎರಡು ವಿಭಿನ್ನ ವೇದಿಕೆಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ಎಷ್ಟು ಸರಿ? ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ತೋರಿದವರು ಏಕದಿನಕ್ಕೂ ತಯಾರಾಗಿದ್ದಾರೆ ಎನ್ನುವ ನಿರ್ಧಾರ ತಪ್ಪಾಗಬಹುದು. ಅದೇ ರೀತಿ, ದೇಶಿ ಕ್ರಿಕೆಟ್‌ನಲ್ಲಿ ವರ್ಷಗಳ ಕಾಲ ಶ್ರಮದ ಬೆವರು ಹರಿಸಿದವರು ರಾಷ್ಟ್ರೀಯ ತಂಡಕ್ಕೆ ಅನರ್ಹರಾಗಿದ್ದಾರೆ ಎಂದರ್ಥವಲ್ಲ.

ಆಯ್ಕೆ ಪ್ರಕ್ರಿಯೆಯಲ್ಲಿ ಈ ವ್ಯತ್ಯಾಸವನ್ನು ಸ್ಪಷ್ಟವಾಗಿ ಗುರುತಿಸದಿದ್ದರೆ, ದೇಶಿ ಕ್ರಿಕೆಟ್‌ನ ಅಸ್ತಿತ್ವವೇ ಕುಂದುತ್ತದೆ. ಐಪಿಎಲ್ ಸಾಕು ಎಂಬ ಸಂದೇಶ ಬಲವಾದಂತೆ, ವಿಜಯ ಹಝಾರೆ ಟ್ರೋಫಿ ಬಗ್ಗೆ ತಾತ್ಸರ ಬಂದು ಬಿಡಬಹುದು. ಇದೆಲ್ಲವನ್ನು ನೋಡಿದಾಗ ಆಯುಷ್‌ ಬದೋನಿ ಅವಕಾಶವನ್ನು ಬಳಸಿಕೊಂಡು ತಂಡದಲ್ಲಿ ತನ್ನ ಸ್ಥಾನವನ್ನು ಸ್ಥಿರಗೊಳಿಸಿಕೊಂಡರೆ ಅದು ಅವರ ವೈಯಕ್ತಿಕ ಸಾಧನೆಯಾಗಬಹುದು. ಆದರೆ, ಆಯ್ಕೆ ಪ್ರಕ್ರಿಯೆಯ ಮಾನದಂಡಗಳ ಕುರಿತು ಎದ್ದಿರುವ ಪ್ರಶ್ನೆಗಳಿಗೆ ಉತ್ತರವೇನು?