IND vs AFG: ಗಾಯಾಳು ಜಸ್‌ಪ್ರೀತ್ ಬುಮ್ರಾಗೆ ಬ್ಯಾಕ್ ಅಪ್ ವೇಗಿಯನ್ನು ಆರಿಸಿದ ಬಿಸಿಸಿಐ! ವರದಿ
ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಟಿ20ಐ ಸರಣಿ ಹಾಗೂ 2026ರ ಏಷ್ಯನ್ ಗೇಮ್ಸ್‌ಗಾಗಿ ಭಾರತ ತಂಡದಲ್ಲಿ ಜಸ್‌ಪ್ರೀತ್ ಬುಮ್ರಾ ಸ್ಥಾನವನ್ನು ಪಡೆದಿದ್ದಾರೆ. ಆದರೆ, ಈ ಎರಡೂ ಟೂರ್ನಿಗಳಲ್ಲಿ ಬುಮ್ರಾ ಅವರ ಭಾಗವಹಿಸುವಿಕೆ ಅವರ ಫಿಟ್ನೆಸ್‌ಗೆ ಒಳಪಟ್ಟಿರುತ್ತದೆ. ಅಂತಿಮವಾಗಿ ಅವರು ಪಂದ್ಯಗಳಲ್ಲಿ ಕಣಕ್ಕಿಳಿಯುತ್ತಾರೆಯೇ ಎಂಬುದು ಅವರ ದೈಹಿಕ ಸಾಮರ್ಥ್ಯ ಮತ್ತು ಫಿಟ್ನೆಸ್ ಸ್ಥಿತಿಯನ್ನು ಅವಲಂಬಿಸಿದೆ.
ಜಸ್‌ಪ್ರೀತ್ ಬುಮ್ರಾಗೆ ಪ್ರಿನ್ಸ್ ಯಾದವ್ ಬ್ಯಾಕ್‌ಅಪ್ ಆಯ್ಕೆ. -
ನವದೆಹಲಿ: ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ (Jasprit Bumrah) ಅವರಿಗೆ ಬಿಸಿಸಿಐ ವೈದ್ಯಕೀಯ ತಂಡದಿಂದ ಇನ್ನೂ ಫಿಟ್ನೆಸ್ ಕ್ಲಿಯರೆನ್ಸ್ ಸಿಕ್ಕಿಲ್ಲ. ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಟಿ20ಐ ಸರಣಿ ಹಾಗೂ 2026ರ ಏಷ್ಯಾ ಕ್ರೀಡಾಕೂಟಕ್ಕೆ ಪ್ರಕಟಿಸಲಾದ ಭಾರತ ತಂಡಗಳಲ್ಲಿ ಬುಮ್ರಾ ಸ್ಥಾನ ಪಡೆದಿದ್ದರೂ, ಅವರ ಭಾಗವಹಿಸುವಿಕೆ ಫಿಟ್ನೆಸ್‌ಗೆ ಒಳಪಟ್ಟಿದೆ. ಬುಮ್ರಾ ಕಳೆದ ಹಲವು ದಿನಗಳಿಂದ ಮೊಣಕಾಲಿನ ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ. ಜುಲೈ 16ರಂದು ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಅವರ ಮೊಣಕಾಲಿಗೆ ಮತ್ತೆ ಹೊಡೆತ ಬಿದ್ದಿದ್ದು, ಇದರಿಂದ ಮರುಕಳಿಸಿದ್ದ ಗಾಯ ಉಲ್ಬಣಗೊಂಡಿದೆ ಎಂದು ವರದಿಯಾಗಿದೆ. ಆ ಪಂದ್ಯದ ಬಳಿಕ ಅವರು ಇನ್ನೂ ಬೌಲ್ ಮಾಡಿರಲಿಲ್ಲ. ಸದ್ಯ ಅವರ ಚೇತರಿಕೆ ಪ್ರಕ್ರಿಯೆ ಮುಂದುವರಿದಿದೆ.
ಬುಮ್ರಾ ಭಾರತ ತಂಡಕ್ಕೆ ಯಾವಾಗ ಮರಳುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಆಯ್ಕೆಗಾರರು ಪ್ರಿನ್ಸ್ ಯಾದವ್ ಅವರನ್ನು ‘ಸಂಭಾವ್ಯ ಬ್ಯಾಕಪ್ ಆಯ್ಕೆ’ಯಾಗಿ ಗುರುತಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ.
ವರದಿ ಪ್ರಕಾರ, ಬುಮ್ರಾ ಜೊತೆಗೆ ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್ ಮತ್ತು ಹರ್ಷಿತ್ ರಾಣಾ ಕೂಡ ಒಂದು ವಾರದ ಅವಧಿಯಲ್ಲಿ ಫಿಟ್‌ನೆಸ್ ಟೆಸ್ಟ್‌ಗೆ ಒಳಗಾಗಲಿದ್ದಾರೆ. ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಸೆಪ್ಟೆಂಬರ್ 10ರಂದು ದೆಹಲಿಯಲ್ಲಿ ತಂಡವನ್ನು ಸೇರಲು ಅವರಿಗೆ ಅನುಮತಿ ದೊರೆಯಲಿದೆ.
Duleep Trophy ಫೈನಲ್‌ಗೂ ಮುನ್ನ ಮೊಹಮ್ಮದ್ ಶಮಿ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಇಶಾನ್ ಕಿಶನ್!
ಜಸ್‌ಪ್ರೀತ್ ಬುಮ್ರಾ ನಿರ್ವಹಣೆ ಬಗ್ಗೆ ಬದ್ರಿನಾಥ್ ಅಸಮಾಧಾನ
ಬುಮ್ರಾ ಅವರ ಗಾಯದ ನಿರ್ವಹಣೆಯನ್ನು ಸರಿಯಾಗಿ ನಿಭಾಯಿಸಿಲ್ಲ ಎಂದು ಮಾಜಿ ಭಾರತ ಬ್ಯಾಟರ್ ಸುಬ್ರಮಣ್ಯಮ್ ಬದ್ರಿನಾಥ್ ಇತ್ತೀಚೆಗೆ ಟೀಮ್ ಮ್ಯಾನೇಜ್‌ಮೆಂಟ್ ಅನ್ನು ಟೀಕಿಸಿದ್ದರು. ಕಳೆದ ವರ್ಷದ ಜನವರಿಯಲ್ಲಿ ಬುಮ್ರಾಗೆ ಬೆನ್ನುನೋವಿನ ಸಮಸ್ಯೆ ಕಾಣಿಸಿಕೊಂಡ ಬಳಿಕ, ಅವರ ಕೆಲಸದ ಹೊರೆ ಮತ್ತು ಫಿಟ್ನೆಸ್‌ನ್ನು ಸೂಕ್ತವಾಗಿ ನಿರ್ವಹಿಸುವತ್ತ ಬಿಸಿಸಿಐ ಗಮನಹರಿಸುತ್ತಿದೆ. ಆದರೆ ಅದರ ಫಲಿತಾಂಶಗಳು ನಿರೀಕ್ಷಿತ ಮಟ್ಟದಲ್ಲಿ ಕಾಣಿಸುತ್ತಿಲ್ಲ ಎಂದು ಬದ್ರಿನಾಥ್ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.
“ಈ ನಿರ್ಧಾರವನ್ನು ಯಾರು ತೆಗೆದುಕೊಂಡರು ಎಂಬುದು ನನಗೆ ಗೊತ್ತಿಲ್ಲ. ಸಿಒಇ (ಸೆಂಟರ್ ಆಫ್ ಎಕ್ಸಲೆನ್ಸ್) ಆಯ್ಕೆ ಮಾಡುವುದಿಲ್ಲ ಅಲ್ಲವೇ? ಆಟಗಾರನ ಸ್ಥಿತಿ ಏನು, ಯಾವ ಪಂದ್ಯಗಳನ್ನು ಆಡಬಹುದು ಮತ್ತು ಅವರ ದೇಹದ ಸ್ಥಿತಿ ಹೇಗಿದೆ ಎಂಬುದನ್ನು ಅವರು ತಿಳಿಸುತ್ತಾರೆ. ಆದರೆ ಅಂತಿಮ ನಿರ್ಧಾರವನ್ನು ನಾಯಕ, ಕೋಚ್ ಮತ್ತು ಆಯ್ಕೆಗಾರರು ತೆಗೆದುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಸಿಒಇ ಕೇವಲ ಮಾಹಿತಿಯನ್ನು ನೀಡುತ್ತದೆ. ಅವರು ಆಯ್ಕೆಗಾರರಲ್ಲ,” ಎಂದು ಬದ್ರಿನಾಥ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದರು.
2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಸಂಜು ಸ್ಯಾಮ್ಸನ್ ಬೇಡ ಎಂದ ವಾಸೀಮ್ ಜಾಫರ್!
ಇತರ ಆಟಗಾರರೂ ಗಾಯದ ಸಮಸ್ಯೆ
ಜಸ್‌ಪ್ರೀತ್ ಬುಮ್ರಾ ಮಾತ್ರವಲ್ಲದೆ, ಭಾರತ ತಂಡ ಇತರ ಪ್ರಮುಖ ಆಟಗಾರರ ಗಾಯದ ಸಮಸ್ಯೆಯನ್ನೂ ಎದುರಿಸುತ್ತಿದೆ. ನಿತೀಶ್ ಕುಮಾರ್ ರೆಡ್ಡಿ, ವೇಗದ ಬೌಲರ್ ಹರ್ಷಿತ್ ರಾಣಾ, ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಮತ್ತು ಬ್ಯಾಟರ್ ಸಾಯಿ ಸುದರ್ಶನ್ ತಮ್ಮ ತಮ್ಮ ಗಾಯಗಳ ಕಾರಣ ಪ್ರಸ್ತುತ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ.