IPL 2027: ಡಿಸೆಂಬರ್ 16ರ ಮಿನಿ ಹರಾಜಿನಲ್ಲಿ ಭಾಗವಹಿಸಲು ಬೆನ್ ಸ್ಟೋಕ್ಸ್‌ಗೆ ಬಿಸಿಸಿಐ ಅನುಮತಿ!
ಇಂಗ್ಲೆಂಡ್‌ನ ಆಲ್‌ರೌಂಡರ್ ಬೆನ್ ಸ್ಟೋಕ್ಸ್‌ಗೆ 2027ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮಿನಿ ಹರಾಜಿನಲ್ಲಿ ಭಾಗವಹಿಸಲು ಬಿಸಿಸಿಐ ವಿಶೇಷ ಅನುಮತಿ ನೀಡಿದೆ. ಡಿಸೆಂಬರ್ 16ರಂದು ಗೋವಾದಲ್ಲಿ ನಡೆಯಲಿರುವ ಹರಾಜಿನಲ್ಲಿ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಹೆಸರು ನೋಂದಾಯಿಸಿಕೊಂಡಿರುವ ಸ್ಟೋಕ್ಸ್, ಐಪಿಎಲ್‌ಗೆ ಮರಳಲು ಸಜ್ಜಾಗಿದ್ದಾರೆ.
2027ರ ಐಪಿಎಲ್ ಮಿನಿ ಹರಾಜಿನ ಅಖಾಡಕ್ಕೆ ಇಳಿದ ಬೆನ್ ಸ್ಟೋಕ್ಸ್. -
ನವದೆಹಲಿ: ಇಂಗ್ಲೆಂಡ್‌ನ ಅನುಭವಿ ಆಲ್‌ರೌಂಡರ್ ಬೆನ್ ಸ್ಟೋಕ್ಸ್ (Ben Stokes) 2027ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮಿನಿ ಹರಾಜಿನಲ್ಲಿ ಪಾಲ್ಗೊಳ್ಳಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ವಿಶೇಷ ಅನುಮತಿ ನೀಡಿದೆ. ಡಿಸೆಂಬರ್ 16ರಂದು ಗೋವಾದಲ್ಲಿ ನಡೆಯಲಿರುವ ಮಿನಿ ಹರಾಜಿಗೆ ಹೆಸರು ನೋಂದಾಯಿಸಿಕೊಳ್ಳಲು ಸ್ಟೋಕ್ಸ್‌ಗೆ ಅವಕಾಶ ಕಲ್ಪಿಸಲಾಗಿದೆ. 2025ರ ಮೆಗಾ ಹರಾಜಿನಲ್ಲಿ ಅವರು ಹೆಸರು ನೋಂದಾಯಿಸಿಕೊಳ್ಳದ ಕಾರಣ, ಬಿಸಿಸಿಐನ ಸಾಮಾನ್ಯ ನಿಯಮದ ಪ್ರಕಾರ ಮುಂದಿನ ವರ್ಷದ ಮಿನಿ ಹರಾಜಿನಲ್ಲೂ ಭಾಗವಹಿಸಲು ಅರ್ಹತೆ ಹೊಂದಿರಲಿಲ್ಲ. ಆದರೆ, ಇದೀಗ ಅವರಿಗೆ ವಿಶೇಷ ವಿನಾಯಿತಿ ನೀಡಲಾಗಿದೆ.
35ರ ವಯಸ್ಸಿನ ಬೆನ್ ಸ್ಟೋಕ್ಸ್ ತಮ್ಮ ಮೂಲ ಬೆಲೆಯನ್ನು ಗರಿಷ್ಠ ಮೊತ್ತ ಎರಡು ಕೋಟಿ ರು.ಗೆ ನಿಗದಿಪಡಿಸಿಕೊಂಡಿದ್ದಾರೆ. ಒಟ್ಟು 1,220 ಆಟಗಾರರ ನೋಂದಣಿ ಪಟ್ಟಿಯಲ್ಲಿ 30 ಆಟಗಾರರು ಇದೇ ಮೂಲ ಬೆಲೆ ಹೊಂದಿದ್ದಾರೆ. ಈ ಮೂಲಕ ಐಪಿಎಲ್‌ಗೆ ಮರಳಲು ಸ್ಟೋಕ್ಸ್ ಸಜ್ಜಾಗಿದ್ದಾರೆ.
2025ರ ಮೆಗಾ ಹರಾಜಿನ ಸಂದರ್ಭದಲ್ಲಿ ಬಿಸಿಸಿಐ ಜಾರಿಗೆ ತಂದಿದ್ದ ನಿಯಮದ ಪ್ರಕಾರ, ಮೆಗಾ ಹರಾಜಿನಲ್ಲಿ ಹೆಸರು ನೋಂದಾಯಿಸಿಕೊಳ್ಳದ ವಿದೇಶಿ ಆಟಗಾರರು ಮುಂದಿನ ವರ್ಷದ ಮಿನಿ ಹರಾಜಿನಲ್ಲಿ ಪಾಲ್ಗೊಳ್ಳುವಂತಿರಲಿಲ್ಲ. ಸ್ಟೋಕ್ಸ್ 2025ರ ಮೆಗಾ ಹರಾಜಿನಿಂದ ದೂರ ಉಳಿದಿದ್ದರು. ಹೀಗಾಗಿ ಸಾಮಾನ್ಯ ನಿಯಮದಂತೆ ಅವರು 2027ರ ಹರಾಜಿನಲ್ಲೂ ಭಾಗವಹಿಸುವ ಅವಕಾಶ ಕಳೆದುಕೊಂಡಿದ್ದರು. ಆದರೆ, ಬಿಸಿಸಿಐ ವಿಶೇಷ ಅನುಮತಿ ನೀಡುವ ಮೂಲಕ ಮತ್ತೆ ಹರಾಜಿನ ಕಣಕ್ಕೆ ಇಳಿಯಲು ಅವಕಾಶ ಕಲ್ಪಿಸಿದೆ.
IPL 2027: ಲಖನೌ ಸೂಪರ್ ಜಯಂಟ್ಸ್‌ನ ಮುಂದಿನ ನಾಯಕನ ಬಗ್ಗೆ ಸುಳಿವು ನೀಡಿದ ದಿಗ್ವೇಶ್ ರಾಠಿ!
ಇದೇ ವೇಳೆ, ಆಟಗಾರರ ಲಭ್ಯತೆಗೆ ಸಂಬಂಧಿಸಿದಂತೆ ಬಿಸಿಸಿಐ ಕಟ್ಟುನಿಟ್ಟಿನ ನಿಯಮವನ್ನೂ ಹೊಂದಿದೆ. ಹರಾಜಿನಲ್ಲಿ ಹೆಸರು ನೋಂದಾಯಿಸಿಕೊಂಡು, ಫ್ರಾಂಚೈಸಿಯೊಂದಕ್ಕೆ ಆಯ್ಕೆಯಾದ ಬಳಿಕ ಟೂರ್ನಿ ಆರಂಭಕ್ಕೂ ಮುನ್ನ ಆಡಲು ಅಲಭ್ಯರಾದರೆ ಅಂತಹ ಆಟಗಾರನಿಗೆ ಎರಡು ಸೀಸನ್‌ಗಳ ಕಾಲ ಐಪಿಎಲ್ ಟೂರ್ನಿ ಮತ್ತು ಹರಾಜಿನಲ್ಲಿ ಭಾಗವಹಿಸದಂತೆ ನಿಷೇಧ ಹೇರಲಾಗುತ್ತದೆ.
"ಯಾವುದೇ ಆಟಗಾರ ಹರಾಜಿನಲ್ಲಿ ಹೆಸರು ನೋಂದಾಯಿಸಿಕೊಂಡು, ಹರಾಜಿನಲ್ಲಿ ಆಯ್ಕೆಯಾದ ಬಳಿಕ ಟೂರ್ನಿಯ ಆರಂಭಕ್ಕೂ ಮುನ್ನ ಆಡಲು ಅಲಭ್ಯರಾದರೆ, ಅಂತಹ ಆಟಗಾರನಿಗೆ ಎರಡು ಸೀಸನ್‌ಗಳ ಕಾಲ ಟೂರ್ನಿ ಹಾಗೂ ಆಟಗಾರರ ಹರಾಜಿನಲ್ಲಿ ಭಾಗವಹಿಸುವುದನ್ನು ನಿಷೇಧಿಸಲಾಗುತ್ತದೆ," ಎಂದು ಬಿಸಿಸಿಐ ನಿಯಮದಲ್ಲಿ ಉಲ್ಲೇಖಿಸಲಾಗಿದೆ.
IPL 2027: ಮಿನಿ ಹರಾಜಿಗೆ ಬಿಡುಗಡೆಯಾದ ಟಾಪ್ 10 ಸ್ಟಾರ್ ಆಟಗಾರರ ವಿವರ!
ಸ್ಟೋಕ್ಸ್‌ಗೆ ಐಪಿಎಲ್ ಹರಾಜಿನಲ್ಲಿ ಮತ್ತೆ ಅವಕಾಶ ಸಿಕ್ಕಿದ್ದೇಕೆ?
ಬೆನ್ ಸ್ಟೋಕ್ಸ್ 2024ರಲ್ಲಿ ಟಿ20 ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಅದೇ ವರ್ಷ ನಡೆದ ದಿ ಹಂಡ್ರೆಡ್ ಟೂರ್ನಿಯಲ್ಲೂ ಅವರು ಆಡಿರಲಿಲ್ಲ. ನಿರಂತರವಾಗಿ ಕಾಡುತ್ತಿದ್ದ ಸ್ನಾಯು ಸೆಳೆತದ ಗಾಯದ ಸಮಸ್ಯೆ ಇದಕ್ಕೆ ಪ್ರಮುಖ ಕಾರಣವಾಗಿತ್ತು. 2025ರ ಆರಂಭದಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯವೊಂದರಲ್ಲಿ ಗಾಯಗೊಂಡಿದ್ದ ಸ್ಟೋಕ್ಸ್, ಇದೇ ಸಮಸ್ಯೆಯಿಂದಾಗಿ ಎಂಐ ಕೇಪ್‌ಟೌನ್ ತಂಡದ ಎಸ್‌ಎ20 ಅಭಿಯಾನದಿಂದಲೂ ಹೊರಗುಳಿದಿದ್ದರು.
ಇನ್ನು 2026ರ ಬೇಸಿಗೆಯಲ್ಲಿ ಸ್ಟೋಕ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಇದರಿಂದ ಇಂಗ್ಲೆಂಡ್ ತಂಡದ ಪರ ಆಡುವ ವೇಳಾಪಟ್ಟಿಯ ಒತ್ತಡವಿಲ್ಲದೆ ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಭಾಗವಹಿಸಲು ಅವರಿಗೆ ಅವಕಾಶ ಸಿಕ್ಕಂತಾಗಿದೆ. ಆದರೆ, ವಿದೇಶಿ ಆಟಗಾರರ ನೋಂದಣಿಗೆ ಸಂಬಂಧಿಸಿದ ಬಿಸಿಸಿಐ ನಿಯಮ ಸ್ಪಷ್ಟವಾಗಿದ್ದು, ಅದರಂತೆ 2025ರ ಮೆಗಾ ಹರಾಜಿನಲ್ಲಿ ಭಾಗವಹಿಸದ ಸ್ಟೋಕ್ಸ್ 2027ರ ಮಿನಿ ಹರಾಜಿನಲ್ಲಿ ಪಾಲ್ಗೊಳ್ಳುವಂತಿರಲಿಲ್ಲ. ಹೀಗಾಗಿ ಅವರಿಗೆ ನೀಡಿರುವ ವಿಶೇಷ ವಿನಾಯಿತಿಯ ಹಿಂದಿನ ಅಧಿಕೃತ ಪ್ರಕ್ರಿಯೆ ಅಥವಾ ಕಾರಣವನ್ನು ಬಿಸಿಸಿಐ ಸಾರ್ವಜನಿಕವಾಗಿ ಸ್ಪಷ್ಟಪಡಿಸಿಲ್ಲ.