ʻಬಾರೋ ಡಾರ್ಕ್ ಚಾಕೊಲೇಟ್ʼ: ನಮ್ಮವರೇ ಜನಾಂಗೀಯ ನಿಂದನೆ ಮಾಡಿದ್ದನ್ನು ನೆನೆದ ಶಿವರಾಮಕೃಷ್ಣನ್!
Shivaramakrishnan: ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಅನುಭವಿಸಿದ ಭೇದ ಭಾವವನ್ನು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಲಕ್ಷ್ಮಣ್ ಶಿವರಾಮಕೃಷ್ಣನ್ ರಿವೀಲ್ ಮಾಡಿದ್ದಾರೆ. ಭಾರತ ತಂಡದಲ್ಲಿ ನಮ್ಮವರೇ ನನ್ನ ಮೇಲೆ ತಾರತಮ್ಯ ಮಾಡಿದ್ದರು ಎಂದು ಹೇಳಿಕೊಂಡಿದ್ದಾರೆ.
ಜನಾಂಗೀಯ ನಿಂದನೆಯ ಬಗ್ಗೆ ಶಿವರಾಮಕೃಷ್ಣನ್ ಹೇಳಿಕೆ. -
ನವದೆಹಲಿ: ಒಂದು ಕಾಲದಲ್ಲಿ ಭಾರತದ (India) ಅತ್ಯಂತ ಸ್ವಾಭಾವಿಕ ಪ್ರತಿಭಾವಂತ ಕ್ರಿಕೆಟಿಗರಲ್ಲಿ ಒಬ್ಬರೆಂದು ಹೊಗಳಲ್ಪಟ್ಟ ಲಕ್ಷ್ಮಣ್ ಶಿವರಾಮಕೃಷ್ಣನ್ (Laxman Shivaramkrishnan) ಅವರಿಗೆ ದೀರ್ಘಾವಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಅವಕಾಶ ಸಿಗಲಿಲ್ಲ. ಲೆಗ್‌ಸ್ಪಿನ್ನರ್ ಆಗಿದ್ದ ಅವರು ಸಲೀಮ್ ಮಾಲಿಕ್ ಮತ್ತು ಇಮ್ರಾನ್ ಖಾನ್ ಮೊದಲಾದ ಮಹಾನ್ ಆಟಗಾರರನ್ನೇ ಗೊಂದಲಕ್ಕೀಡು ಮಾಡಿದ್ದರು. ಆದರೂ, ಅವರು ತಮ್ಮ ಚಿಕ್ಕ ವಯಸ್ಸಿನಲ್ಲಿ ಹುಟ್ಟಿಸಿದ್ದ ನಿರೀಕ್ಷೆಗಳನ್ನು ಪೂರೈಸಲು ಅವರಿಂದ ಸಾಧ್ಯವಾಗಲಿಲ್ಲ. ಇದರಿಂದಾಗಿ ಅವರು ಭಾರಿ ಹಿನ್ನಡೆಯನ್ನು ಅನುಭವಿಸಿದರು.
ಇದಕ್ಕೆ ಕಾರಣ ಅವರ ಪ್ರತಿಭೆಯ ಕೊರತೆಯಲ್ಲ ಅಥವಾ ಉತ್ತಮ ಆರಂಭದ ಬಳಿಕ ಸಾಧನೆ ಮಾಡಲಾಗದಿರುವುದಲ್ಲ ಎಂದು ಅವರು ತಿಳಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತಮ್ಮ ಮನಸ್ಸಿನಲ್ಲಿ ಆಳವಗಿ ಬೇರೂರಿರುವ ಕಾರಣಗಳ ಬಗ್ಗೆ ಅವರು ಮಾತನಾಡಿದ್ದಾರೆ. ವಿಶೇಷವಾಗಿ, ಪದೇ-ಪದೆ ಎದುರಾದ ಜನಾಂಗೀಯ ನಿಂದನೆ ಘಟನೆಗಳು ತಮ್ಮ ಮನಸಿನ ಮೇಲೆ ಗಾಢವಾಗಿ ಪರಿಣಾಮ ಬೀರಿದ್ದವು ಎಂದು ಅವರು ಬಹಿರಂಗಪಡಿಸಿದ್ದಾರೆ.
ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ತನ್ನ ಜೀವನದ ಮೊದಲ ಮಾನಸಿಕ ಗಾಯ ಕೇವಲ 14ನೇ ವಯಸ್ಸಿನಲ್ಲಿ ಸಂಭವಿಸಿತ್ತು ಎಂದು ಹೇಳಿದ್ದಾರೆ. ಚೆಪಾಕ್ ಕ್ರೀಡಾಂಗಣದಲ್ಲಿ ನೆಟ್ ಬೌಲರ್ ಆಗಿ ಭಾರತೀಯ ಶಿಬಿರಕ್ಕೆ ಸೇರಿದ ಅವರು, ಇನ್ನೂ ಯೂನಿಫಾರ್ಮ್‌ನಲ್ಲಿಯೇ ಡ್ರೆಸ್ಸಿಂಗ್ ರೂಮ್‌ಗೆ ಹೋಗುತ್ತಿದ್ದಾಗ, ಒಬ್ಬ ಹಿರಿಯ ಭಾರತೀಯ ಬ್ಯಾಟ್ಸ್‌ಮನ್ ಅವರನ್ನು ಕರೆದಿದ್ದಾರೆ. ಆ ಹಿರಿಯ ಆಟಗಾರ, ಇಲ್ಲಿಗೆ ಬಂದು ತಮ್ಮ ಶೂಗಳನ್ನು ಸ್ವಚ್ಛಗೊಳಿಸಲು ಹೇಳಿದರೆಂದು ಆರೋಪಿಸಿದ್ದಾರೆ.
IPL 2026: ಪಿಎಸ್‌ಎಲ್ ತೊರೆದು ಚೆನ್ನೈ ಸೂಪರ್ ಕಿಂಗ್ಸ್‌ಗೆ ಸೇರ್ಪಡೆಯಾದ ಸ್ಪೆನ್ಸರ್ ಜಾನ್ಸನ್!
ಈ ಮಾತು ಕೇಳಿ ಅಚ್ಚರಿಗೊಂಡ ಶಿವರಾಮಕೃಷ್ಣನ್ ಅವರು ತಮ್ಮ ಪ್ರತಿಕ್ರಿಯಿಸಿದನ್ನು ನೆನಪಿಸಿಕೊಂಡಿದ್ದಾರೆ. “ನಾನು ಅವರತ್ತ ನೋಡಿಕೊಂಡು, ‘ಅದು ನನ್ನ ಕೆಲಸವಲ್ಲ, ನೀವು ನಿಮ್ಮ ಕೆಲಸವನ್ನು ನೀವು ಮಾಡಿಕೊಳ್ಳಿ’ ಎಂದು ಹೇಳಿದೆ.” ಎಂಬುದನ್ನು ರಿವೀಲ್ ಮಾಡಿದ್ದಾರೆ.
ಇದಾದ ಬಳಿಕ ಆ ಹಿರಿಯ ಆಟಗಾರ, ತಾನು ನಿಮ್ಮನ್ನು ಮೈದಾನದ ಸಿಬ್ಬಂದಿ ಎಂದು ತಪ್ಪಾಗಿ ಭಾವಿಸಿದ್ದರೆಂದು ಅವರು ಸ್ಪಷ್ಟಪಡಿಸಿದರು. “ನನಗೆ ಆಗ ಜನಾಂಗೀಯ ನಿಂದನೆ ಅಥವಾ ವರ್ಣಭೇದವೆಂದರೆ ಏನು ಎಂಬುದೇ ಗೊತ್ತಿರಲಿಲ್ಲ. ಈ ವ್ಯಕ್ತಿ ಹೀಗೆ ಏಕೆ ಪ್ರತಿಕ್ರಿಯಿಸಿದರು ಎಂಬುದನ್ನು ನಾನು ಅರ್ಥಮಾಡಿಕೊಳ್ಳಲು ಯತ್ನಿಸುತ್ತಿದ್ದೆ,” ಎಂದು ಅವರು ಹೇಳಿದ್ದಾರೆ.
ಈ ಘಟನೆ ಒಂದೇ ಬಾರಿ ನಡೆದದ್ದಲ್ಲ ಎಂದು ಅವರು ತಿಳಿಸಿದ್ದಾರೆ. ತಮಿಳುನಾಡು ತಂಡದಲ್ಲಿದ್ದಾಗ, ಕೆಲ ಪ್ರಮುಖ ಆಟಗಾರರು ಅವರನ್ನು “ಕರೂಪಾ” ಎಂದು ಕರೆಯುತ್ತಿದ್ದರು. ಮುಂಬೈ, ಚಂಡೀಗಢ ಮತ್ತು ಜಲಂಧರ್‌ನಲ್ಲಿ ಬೌಂಡರಿಯ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಸಂದರ್ಭಗಳಲ್ಲಿ, ಪ್ರೇಕ್ಷಕರು “ಕಾಲಿಯಾ, ತೇರಾ ಕ್ಯಾ ಹೋಗಾ” ಎಂದು ಕೂಗಿ ಅವರ ಚರ್ಮದ ಬಣ್ಣವನ್ನು ಹಾಸ್ಯ ಮಾಡುತ್ತಿದ್ದರು.
IPL 2026: 13,600 ಕೋಟಿ ರುಗೆ ಅಮೆರಿಕಾ ಮೂಲದ ಉದ್ಯಮಿ ಪಾಲಾದ ರಾಜಸ್ಥಾನ್ ರಾಯಲ್ಸ್?
ಇನ್ನೊಂದು ಜನಾಂಗೀಯ ಘಟನೆ ನೆನಪಿಸಿಕೊಂಡ ಅವರು, ತಮ್ಮ 17ನೇ ಹುಟ್ಟುಹಬ್ಬದ ವೇಳೆ ಕೇಕ್ ಕತ್ತರಿಸುವಾಗ, ಒಬ್ಬ ಹಿರಿಯ ಭಾರತೀಯ ಆಟಗಾರ ಅವರ ಚರ್ಮದ ಬಣ್ಣವನ್ನು ಕೇಕ್‌ನ ಬಣ್ಣಕ್ಕೆ ಹೋಲಿಸಿ ಟೀಕಿಸಿದ್ದರು ಎಂದು ಬಹಿರಂಗಪಡಿಸಿದರು. ಆ ಸಂದರ್ಭದಲ್ಲಿ ಸುನೀಲ್ ಗವಾಸ್ಕರ್, ಅವರನ್ನು ಸಮಾಧಾನಪಡಿಸಬೇಕಾಯಿತು.
“ಹೇ ಸನ್ನಿ, ನೀನು ಸರಿಯಾದ ಬಣ್ಣದ ಕೇಕ್ ಆರ್ಡರ್ ಮಾಡಿದ್ದೀಯ. ಈ ಡಾರ್ಕ್ ಚಾಕೊಲೇಟ್ ಕೇಕ್ ಈ ಡಾರ್ಕ್ ಹುಡುಗನಿಗೆ ಸರಿಹೊಂದುತ್ತದೆ,” ಎಂದು ಆ ಹಿರಿಯ ಆಟಗಾರ ಹೇಳಿದ್ದರು ಎಂದು ಲಕ್ಷ್ಮಣ್ ಶಿವರಾಮಕೃಷ್ಣನ್ ಹೇಳಿದ್ದಾರೆ.
“ನಾನು ಅತ್ತುಬಿಟ್ಟೆ ಮತ್ತು ಕೇಕ್ ಕತ್ತರಿಸಲು ನಿರಾಕರಿಸಿದೆ. ಸುನೀಲ್ ಗವಾಸ್ಕರ್ ಅವರು ನನ್ನನ್ನು ಸಮಾಧಾನಪಡಿಸಿದ ನಂತರ, ಕಣ್ಣೀರು ಹಾಕುತ್ತಲೇ ಕೇಕ್ ಕತ್ತರಿಸಿದೆ,” ಎಂದು ಅವರು ನೆನಪಿಸಿಕೊಂಡಿದ್ದಾರೆ.