ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DC vs LSG: ಸೋಲಿನಂಚಿನಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಗೆಲ್ಲಿಸಿದ ಆಶುತೋಷ್‌ ಶರ್ಮಾ!

DC vs LSG Match Highlights: ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧ ಸೋಲಿನಂಚಿನಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ, ಆಶುತೋಷ್‌ ಶರ್ಮಾ ಹಾಗೂ ವಿಪ್ರಾಜ್‌ ನಿಗಮ್‌ ಬ್ಯಾಟಿಂಗ್‌ ಬಲದಿಂದ ಒಂದು ವಿಕೆಟ್‌ ರೋಚಕ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಅಕ್ಷರ್‌ ಪಟೇಲ್‌ ನಾಯಕತ್ವದ ಡೆಲ್ಲಿ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ.

ಆಶುತೋಷ್‌ ಫಿಫ್ಟಿ, ಲಖನೌ ಎದುರು ಡೆಲ್ಲಿಗೆ ಒಂದು ವಿಕೆಟ್‌ ರೋಚಕ ಜಯ!

ಅರ್ಧಶತಕ ಸಿಡಿಸಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಗೆಲ್ಲಿಸಿ ಸಂಭ್ರಮಿಸಿದ ಆಶುತೋಷ್‌ ಶರ್ಮಾ.

Profile Ramesh Kote Mar 25, 2025 12:15 AM

ವಿಶಾಖಪಟ್ಟಣಂ: ಲಖನೌ ಸೂಪರ್‌ ಜಯಂಟ್ಸ್‌ (LSG) ವಿರುದ್ಧದ ಪಂದ್ಯದಲ್ಲಿ ಸೋಲಿನಂಚಿನಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್‌ (DC) ತಂಡವನ್ನು ಆಶುತೋಷ್‌ ಶರ್ಮಾ ತಮ್ಮ ನಿರ್ಣಾಯಕ ಅರ್ಧಶತಕದ ಬಲದಿಂದ ಒಂದು ವಿಕೆಟ್‌ ರೋಚಕ ಗೆಲುವು ತಂದುಕೊಟ್ಟರು. ಈ ಗೆಲುವಿನೊಂದಿಗೆ ಅಕ್ಷರ್‌ ಪಟೇಲ್‌ ನಾಯಕತ್ವದ ಡೆಲ್ಲಿ ತಂಡ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ಖಾತೆ ತೆರೆದಿದೆ. ಆದರೆ, ಎದುರಾಳಿ ಡೆಲ್ಲಿ ತಂಡದ ಪ್ರಮುಖ 5 ವಿಕೆಟ್‌ಗಳನ್ನು ಬಹುಬೇಗ ಕಬಳಿಸಿ ಸುಲಭ ಗೆಲುವು ಪಡೆಯಬೇಕಿದ್ದ ರಿಷಭ್‌ ಪಂತ್‌ ನಾಯಕತ್ವದ ಲಖನೌ ತಂಡ, ಡೆತ್‌ ಓವರ್‌ಗಳಲ್ಲಿ ಬೌಲಿಂಗ್‌ ವೈಫಲ್ಯದಿಂದ ಕೇವಲ ಒಂದು ವಿಕೆಟ್‌ನಿಂದ ಸೋಲು ಒಪ್ಪಿಕೊಳ್ಳಬೇಕಾಯಿತು.

ಸೋಮವಾರ (ಮಾರ್ಚ್‌ 24) ಇಲ್ಲಿನ ಆಂಧ್ರ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ನಡೆದಿದ್ದ 2025ರ ಐಪಿಎಲ್‌ ಟೂರ್ನಿಯ ನಾಲ್ಕನೇ ಪಂದ್ಯದಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ನೀಡಿದ್ದ 210 ರನ್‌ಗಳ ಸವಾಲಿನ ಗುರಿ ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಶಾರ್ದುಲ್‌ ಠಾಕೂರ್‌ ಎರಡು ವಿಕೆಟ್‌ ಕಿತ್ತು ಆರಂಭಿಕ ಆಘಾತ ನೀಡಿದ್ದರು. ಆ ಮೂಲಕ ಕೇವಲ 7 ರನ್‌ಗಳಿಗೆ ಡೆಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಅಕ್ಷರ್‌ ಪಟೇಲ್‌ (22) ಹಾಗೂ ಫಾಫ್‌ ಡು ಪ್ಲೆಸಿಸ್‌ (29) ಅವರು 43 ರನ್‌ಗಳನ್ನು ಕಲೆ ಹಾಕುವ ಮೂಲಕ ಡಿಸಿಯನ್ನು ಮೇಲೆತ್ತಿದ್ದರು. ಆದರೆ, ದಿಗ್ವೇಶ್‌ ರಾಥಿ ಹಾಗೂ ರವಿ ಬಿಷ್ಣೋಯ್‌ ಕ್ರಮವಾಗಿ ಅಕ್ಷರ್‌ ಪಟೇಲ್‌ ಮತ್ತು ಫಾಫ್‌ ಡುಪ್ಲೆಸಿಸ್‌ ಅವರನ್ನು ಔಟ್‌ ಮಾಡಿದರು ಹಾಗೂ ಡೆಲ್ಲಿ 65 ರನ್‌ಗಳಿಗೆ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನ ಭೀತಿಗೆ ಒಳಗಾಗಿತ್ತು.

IPL 2025: ಸ್ಪೋಟಕ ಬ್ಯಾಟ್ಸ್‌ಮನ್‌ ಇಶಾನ್‌ ಕಿಶನ್‌ರನ್ನು ಕೈ ಬಿಟ್ಟು ತಪ್ಪು ಮಾಡಿತಾ ಮುಂಬೈ ಇಂಡಿಯನ್ಸ್‌?

ವಿಪ್ರಾಜ್‌ ನಿರ್ಣಾಯಕ ಬ್ಯಾಟಿಂಗ್‌

ಈ ವೇಳೆ ಇಂಪ್ಯಾಕ್ಸ್‌ ಪ್ಲೇಯರ್‌ ಆಗಿ ಕ್ರೀಸ್‌ಗೆ ಬಂದ ಆಶುತೋಷ್‌ ಶರ್ಮಾ ಹಾಗೂ ಟ್ರಿಸ್ಟನ್‌ ಸ್ಟಬ್ಸ್‌ ಜೋಡಿ 65 ರನ್‌ಗಳನ್ನು ಕಲೆ ಹಾಕಿ ತಂಡದ ಮೊತ್ತವನ್ನು 110ರ ಗಡಿಯನ್ನು ದಾಟಿಸಿತು. 22 ಎಸೆತಗಳಲ್ಲಿ 34 ರನ್‌ ಗಳಿಸಿದ ಬಳಿಕ ಸ್ಟಬ್ಸ್‌, ಎಂ ಸಿದ್ದಾರ್ಥ್‌ಗೆ ಬೌಲ್ಡ್‌ ಆದರು. ನಂತರ ಕ್ರೀಸ್‌ಗೆ ಬಂದ ವಿಪ್ರಾಜ್‌ ನಿಗಮ್‌ ಕೇವಲ 15 ಎಸೆತಗಳಲ್ಲಿ 39 ರನ್‌ಗಳಿಸಿ ಪಂದ್ಯಕ್ಕೆ ಟರ್ನಿಂಗ್‌ ಪಾಯಿಂಟ್‌ ತಂದುಕೊಟ್ಟರು. ಇವರು ದಿಗ್ವೇಸ್‌ ರಾಥಿಗೆ ಔಟ್‌ ಆದರು. ನಂತರ ಕ್ರಿಸ್‌ಗೆ ಬಂದಿದ್ದ ಮಿಚೆಲ್‌ ಸ್ಟಾರ್ಕ್‌ ಹಾಗೂ ಕುಲ್ದೀಪ್‌ ಯಾದವ್‌ ಹೆಚ್ಚು ಹೊತ್ತು ಕ್ರಿಸ್‌ನಲ್ಲಿ ನಿಲ್ಲಲಿಲ್ಲ. ಈ ವೇಳೆ ಡೆಲ್ಲಿ 192 ಕ್ಕೆ 9 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆ ಮೂಲಕ ಡೆಲ್ಲಿ ಸೋಲುವುದು ಬಹುತೇಕ ಖಚಿತ ಎಂದೇ ಭಾವಿಸಲಾಗಿತ್ತು.



ಡೆಲ್ಲಿಗೆ ರೋಚಕ ಜಯ ತಂದುಕೊಟ್ಟ ಆಶುತೋಷ್‌

ಕೊನೆಯ 9 ಎಸೆತಗಳಲ್ಲಿ ಡೆಲ್ಲಿಗೆ 18 ರನ್‌ಗಳ ಅಗತ್ಯವಿತ್ತು ಹಾಗೂ ಉಳಿದಿರುವುದು ಕೇವಲ ಒಂದೇ ಒಂದು ವಿಕೆಟ್‌. ಈ ವೇಳೆ ಮೂರು ಎಸೆತಗಳಲ್ಲಿ ಪ್ರಿನ್ಸ್‌ ಯಾದವ್‌ಗೆ ಆಶುತೋಷ್‌ ಶರ್ಮಾ ಒಂದು ಸಿಕ್ಸರ್‌ ಹಾಗೂ ಒಂದು ಬೌಂಡರಿ ಸೇರಿ 12 ರನ್‌ಗಳನ್ನು ತಂದುಕೊಟ್ಟರು. ಆ ಮೂಲಕ ಕೊನೆಯ ಓವರ್‌ನಲ್ಲಿ 6 ರನ್‌ ಬೇಕಿತ್ತು. ಈ ವೇಳೆ ಬೌಲಿಂಗ್‌ಗೆ ಬಂದ ಶಹಬಾಝ್‌ ಅಹ್ಮದ್‌ ಮೊದಲನೇ ಎಸೆತದಲ್ಲಿ ಮೋಹಿತ್‌ ಶರ್ಮಾ ಅವರನ್ನು ಬೀಟ್‌ ಮಾಡಿದ್ದರು ಹಾಗೂ ರಿಷಭ್‌ ಪಂತ್‌ ಸುಲಭವಾಗಿ ಸ್ಟಂಪ್‌ ಔಟ್‌ ಮಾಡಬಹುದಾದ ಅವಕಾಶವನ್ನು ಕೈಚೆಲ್ಲಿದರು. ಎರಡನೇ ಎಸೆತದಲ್ಲಿ ಮೋಹಿತ್‌, ಆಶುತೋಷ್‌ಗೆ ಸಿಂಗಲ್‌ ತಂದುಕೊಟ್ಟರು. ಮೂರನೇ ಎಸೆತದಲ್ಲಿ ಆಶುತೋಷ್‌ ಶರ್ಮಾ ಸಿಕ್ಸರ್‌ ಬಾರಿಸಿ ಇನ್ನೂ ಮೂರು ಎಸೆತಗಳು ಬಾಕಿ ಇರುವಂತೆಯೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ಒಂದು ವಿಕೆಟ್‌ ರೋಚಕ ಗೆಲುವು ತಂದುಕೊಟ್ಟರು. 31 ಎಸೆತಗಳಲ್ಲಿ ತಲಾ 5 ಸಿಕ್ಸರ್‌ ಹಾಗೂ 5 ಬೌಂಡರಿಯೊಂದಿಗೆ ಆಶುತೋಷ್‌ ಅಜೇಯ 66 ರನ್‌ ಗಳಿಸಿ ಡೆಲ್ಲಿ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.



209 ರನ್‌ ಕಲೆ ಹಾಕಿದ್ದ ಲಖನೌ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಲಖನೌ ಸೂಪರ್‌ ಜಯಂಟ್ಸ್‌ ತಂಡ, ಮಿಚೆಲ್‌ ಮಾರ್ಷ್‌ (72 ರನ್‌) ಹಾಗೂ ನಿಕೋಲಸ್‌ ಪೂರನ್‌ (75) ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 209 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ 210 ರನ್‌ಗಳ ಸವಾಲುದಾಯಕ ಗುರಿಯನ್ನು ನೀಡಿತ್ತು.



ಎಲ್‌ಎಸ್‌ಜಿಗೆ ಭರ್ಜರಿ ಆರಂಭ

ಲಖನೌ ತಂಡದ ಪರ ಮಿಚೆಲ್‌ ಮಾರ್ಷ್‌ ಜೊತೆ ಇನಿಂಗ್ಸ್‌ ಆರಂಭಿಸಿದ್ದ ಏಡೆನ್‌ ಮಾರ್ಕ್ರಮ್‌ 15 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದರು. ಆದರೆ, ಎರಡನೇ ವಿಕೆಟ್‌ಗೆ ಜೊತೆಯಾಗಿದ್ದ ನಿಕೋಲಸ್‌ ಪೂರನ್‌ ಹಾಗೂ ಮಿಚೆಲ್‌ ಮಾರ್ಷ್‌ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದರು. ಈ ಜೋಡಿ ಮುರಿಯದ 87 ರನ್‌ಗಳ ಜೊತೆಯಾಟವನ್ನು ಆಡುವ ಮೂಲಕ ಎಲ್‌ಎಸ್‌ಜಿಗೆ ಭರ್ಜರಿ ಆರಂಭವನ್ನು ತಂದುಕೊಟ್ಟಿತ್ತು.



ಅಬ್ಬರಿಸಿದ ಮಾರ್ಷ್‌-ಪೂರನ್‌

ಇನಿಂಗ್ಸ್‌ ಆರಂಭಿಸಿದ್ದ ಮಿಚೆಲ್‌ ಮಾರ್ಷ್‌ 200ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿದ್ದು, ಡೆಲ್ಲಿ ಬೌಲರ್‌ಗಳಿಗೆ ಬೆವರಿಳಿಸಿದ್ದರು. ಅವರು ಆಡಿದ್ದ 36 ಎಸೆತಗಳಲ್ಲಿ 6 ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ 72 ರನ್‌ ಸಿಡಿಸಿ ಲಖನೌಗೆ ಭದ್ರ ಬುನಾದಿ ಹಾಕಿ ಮುಖೇಶ್‌ ಕುಮಾರ್‌ಗೆ ವಿಕೆಟ್‌ ಒಪ್ಪಿಸಿದ್ದರು. ಮಾರ್ಷ್‌ ಔಟ್‌ ಆದ ಬಳಿಕ ಸ್ಪೋಟಕ ಬ್ಯಾಟಿಂಗ್‌ಗೆ ಕೈ ಹಾಕಿದ ನಿಕೋಲಸ್‌ ಪೂರನ್‌, 250ರ ಸ್ಟ್ರೈಕ್‌ರೇಟ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಬೌಲರ್‌ಗಳಿಗೆ ನುಡುಕ ಉಂಟು ಮಾಡಿದ್ದರು. ಇವರು ಆಡಿದ್ದ ಕೇವಲ 30 ಎಸೆತಗಳಲ್ಲಿ 7 ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ 75 ರನ್‌ ಚಚ್ಚಿದ್ದರು. ಅಂತಿಮವಾಗಿ ಅವರು ಮಿಚೆಲ್‌ ಸ್ಟಾರ್ಕ್‌ ಬೌಲಿಂಗ್‌ನಲ್ಲಿ ಕ್ಲೀನ್‌ ಬೌಲ್ಡ್‌ ಆದರು. ಕೊನೆಯವರೆಗೂ ಬ್ಯಾಟ್‌ ಬೀಸಿದ್ದ ಡೇವಿಡ್‌ ಮಿಲ್ಲರ್‌ 19 ಎಸೆತಗಳಲ್ಲಿ ಅಜೇಯ 27 ರನ್‌ಗಳ ಕೊಡುಗೆಯನ್ನು ತಂಡಕ್ಕೆ ನೀಡಿದರು.

ಡೆಲ್ಲಿ ಕ್ಯಾಪಿಟಲ್ಸ್‌ ಪರ ಮಿಚೆಲ್‌ ಸ್ಟಾರ್ಕ್‌ 3 ವಿಕೆಟ್‌ ಪಡೆದಿದ್ದರೆ, ಕುಲ್ದೀಪ್‌ ಯಾದವ್‌ ಎರಡು ವಿಕೆಟ್‌ ಕಿತ್ತಿದ್ದರು.

IPL 2025: ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಬಾಲ್‌ ಟ್ಯಾಂಪರಿಂಗ್‌ ಆರೋಪ! ವಿಡಿಯೊ

ಸ್ಕೋರ್‌ ವಿವರ

ಲಖನೌ ಸೂಪರ್‌ ಜಯಂಟ್ಸ್‌: 20 ಓವರ್‌ಗಳಿಗೆ 209-8 (ಮಿಚೆಲ್‌ ಮಾರ್ಷ್‌ 72, ನಿಕೋಲಸ್‌ ಪೂರನ್ 75‌, ಡೇವಿಡ್‌ ಮಿಲ್ಲರ್‌ 27*; ಮಿಚೆಲ್‌ ಸ್ಟಾರ್ಕ್‌ 42ಕ್ಕೆ 3, ಕುಲ್ದೀಪ್‌ ಯಾದವ್‌ 20ಕ್ಕೆ 2)

ಡೆಲ್ಲಿ ಕ್ಯಾಪಿಟಲ್ಸ್:‌ 19.3 ಓವರ್‌ಗಳಿಗೆ 211-9 (ಆಶುತೋಷ್‌ ಶರ್ಮಾ 66*, ವಿಪ್ರಾಝ್‌ ನಿಗಮ್‌ 39, ಟ್ರಿಸ್ಟನ್‌ ಸ್ಟಬ್ಸ್‌ 34; ಶಾದುಲ್‌ ಠಾಕೂರ್‌ 22 ಕ್ಕೆ 2, ಎಂ ಸಿದ್ದಾರ್ಥ್‌ 39ಕ್ಕೆ 2, ದಿಗ್ವೇಶ್‌ ರಾಥಿ 31 ಕ್ಕೆ 2)

ಪಂದ್ಯ ಶ್ರೇಷ್ಠ: ಆಶುತೋಷ್‌ ಶರ್ಮಾ