Duleep Trophy: ಪಶ್ಚಿಮ ವಲಯ ತಂಡದಿಂದ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಔಟ್!
2010ರ ದಶಕದಲ್ಲಿ ಭಾರತೀಯ ಟೆಸ್ಟ್ ತಂಡದ ಪ್ರಮುಖ ಆಟಗಾರರಾಗಿದ್ದ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಕಳೆದ ಕೆಲ ವರ್ಷಗಳಿಂದ ಟೆಸ್ಟ್ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಇದೀಗ ದುಲೀಪ್ ಟ್ರೋಫಿ ಟೂರ್ನಿಯ ಪಶ್ಚಿಮ ವಲಯ ತಂಡದಿಂದಲೂ ಇವರನ್ನು ಕೈ ಬಿಡಲಾಗಿದೆ.

ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ ಟೆಸ್ಟ್ ವೃತ್ತಿ ಜೀವನ ಅಂತ್ಯ?

ನವದೆಹಲಿ: ದೇಶಿ ಟೆಸ್ಟ್ ಕ್ರಿಕೆಟ್ ಟೂರ್ನಿಗಳಲ್ಲಿ ಒಂದಾಗಿರುವ ದುಲೀಪ್ ಟ್ರೋಫಿ (Duleep Trophy 2025) ಟೂರ್ನಿಗೆ ಆಗಸ್ಟ್ 28ರಂದು ಅಧಿಕೃತ ಚಾಲನೆ ಸಿಗಲಿದೆ. ಈ ಬಾರಿಯೂ ಈ ಟೂರ್ನಿಯಲ್ಲಿ ಭಾರತ ತಂಡದ 6 ಭೌಗೋಳಿಕ ವಲಯಗಳನ್ನು ಪ್ರತಿನಿಧಿಸುವ ತಂಡಗಳು ಕಣಕ್ಕಿಳಿಯಲಿವೆ. ಈಗಾಗಲೇ ಎಲ್ಲಾ ತಂಡಗಳು ಸಕಲ ಸಿದ್ದತೆ ನಡೆಸುವುದರಲ್ಲಿ ನಿರತವಾಗಿವೆ. ಈ ಬಾರಿ ಶಾರ್ದುಲ್ ಠಾಕೂರ್ ನೇತೃತ್ವದಲ್ಲಿ ಕಣಕ್ಕಿಳಿಯಲಿರುವ ಪಶ್ಚಿಮ ವಲಯ ತಂಡ ಈಗಾಗಲೇ 15 ಆಟಗಾರರ ತಂಡವನ್ನು ಪ್ರಕಟಿಸಿದೆ. ಇದರ ನಡುವೆ ಭಾರತದ ಅನುಭವಿ ಕ್ರಿಕೆಟರ್‌ಗಳಾದ ಚೇತೇಶ್ವರ್ ಪೂಜಾರ (Cheteshwar Pujara) ಮತ್ತು ಅಜಿಂಕ್ಯ ರಹಾನೆ (Ajinkya Rahane) ಅವರನ್ನು ಪಶ್ಚಿಮ ವಲಯ ದುಲೀಪ್ ಟ್ರೋಫಿ ತಂಡದಿಂದ ಕೈ ಬಿಡಲಾಗಿದೆ.
2010ರ ದಶಕದಲ್ಲಿ ಭಾರತೀಯ ಟೆಸ್ಟ್ ತಂಡದ ಪ್ರಮುಖ ಆಟಗಾರರಾಗಿದ್ದ ಪೂಜಾರ ಮತ್ತು ರಹಾನೆ ಕಳೆದ ಕೆಲವು ವರ್ಷಗಳಿಂದ ಅಂತಾರಾಷ್ಟ್ರೀಯ ರೆಡ್ ಬಾಲ್ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಇದೀಗ ಪಶ್ಚಿಮ ವಲಯ ತಂಡ ಇವರನ್ನು ಕೈ ಬಿಟ್ಟಿರುವುದು ಉಭಯ ಆಟಗಾರರ ರೆಡ್ ಬಾಲ್ ಕ್ರಿಕೆಟ್ ವೃತ್ತಿ ಜೀವನಕ್ಕೆ ತೆರೆ ಎಳೆಯಬಹುದಾ ಎನ್ನುವ ಚರ್ಚೆಗಳು ಓಡಾಡುತ್ತಿವೆ. ಈ ಇಬ್ಬರೂ ಆಟಗಾರರು ಕೊನೆಯದಾಗಿ ಕಳೆದ ಋತುವಿನಲ್ಲಿ ರಣಜಿ ಟ್ರೋಫಿ ಟೂರ್ನಿಯಲ್ಲಿ ತಮ್ಮ-ತಮ್ಮ ತಂಡಗಳ ಪರ ಆಡಿದ್ದರು.
IND vs ENG: ಬೆನ್ ಡಕೆಟ್ ಭುಜದ ಮೇಲೆ ಕೈ ಹಾಕಿ ಪೆವಿಲಿಯನ್‌ಗೆ ಕಳುಹಿಸಿಕೊಟ್ಟ ಆಕಾಶ್ ದೀಪ್!
ಏನಿದು ದುಲೀಪ್ ಟ್ರೋಫಿ?
ದೇಶಿ ಟೆಸ್ಟ್ ಕ್ರಿಕೆಟ್‌ನಲ್ಲಿ ದುಲೀಪ್ ಟ್ರೋಫಿ ಕೂಡ ಪ್ರಮುಖ ಟೂರ್ನಿಯಾಗಿದೆ. 1961-62 ರಲ್ಲಿ ಶುರುವಾದ ಈ ಟೂರ್ನಿಗೆ ಮಾಜಿ ಆಟಗಾರ ದುಲೀಪ್ ಅವರ ಹೆಸರನ್ನು ಇಡಲಾಗಿದೆ. ಭಾರತದ ವಿವಿಧ ಭೌಗೋಳಿಕ ವಲಯಗಳನ್ನು ಪ್ರತಿನಿಧಿಸುವ ತಂಡಗಳು ಈ ಟೂರ್ನಿಯಲ್ಲಿ ಕಣಕ್ಕಿಳಿಯುತ್ತವೆ. ಆರಂಭಿಕ ವರ್ಷದಲ್ಲಿ ನಾಲ್ಕು ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಿದ್ದವು. ಇದು ವಲಯವಾರು ಆಟಗಾರರಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತದೆ. ಆದ್ದರಿಂದ ಎಲ್ಲಾ ಆಟಗಾರರಿಗೆ ಮುಕ್ತ ಅವಕಾಶ ನೀಡಲು ಬಿಸಿಸಿಐ ವಲಯ ಸ್ವರೂಪವನ್ನು ತರಲು ನಿರ್ಧರಿಸಿತು.
ವಿಶೇಷವಾಗಿ 2024-25ರ ಆವೃತ್ತಿಯ ಟೂರ್ನಿಯಲ್ಲಿ ಭಾರತ ಎ, ಭಾರತ ಬಿ, ಭಾರತ-ಸಿ, ಮತ್ತು ಭಾರತ ಡಿ ಎನ್ನುವ ನಾಲ್ಕು ತಂಡಗಳು ಭಾಗವಹಿಸಿದ್ದವು. ಕಳೆದ ಆವೃತ್ತಿಯಲ್ಲಿ ಮೂರು ಪಂದ್ಯಗಳನ್ನಾಡಿ ಎರಡರಲ್ಲಿ ಜಯ ಸಾಧಿಸಿ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನ ಗಳಿಸಿದ್ದ ಮಯಾಂಕ್ ಅಗರ್ವಾಲ್ ನೃತೃತ್ವದ ಭಾರತ ಎ ತಂಡ ಚಾಂಪಿಯನ್ಸ್ ಆಗಿ ಹೊರ ಹೊಮ್ಮಿತ್ತು.
IND vs ENG: ಐದನೇ ಟೆಸ್ಟ್ ಆಡದ ಜಸ್‌ಪ್ರೀತ್ ಬುಮ್ರಾ ವಿರುದ್ದ ಬಿಸಿಸಿಐ ಅಸಮಾಧಾನ!
ಪಶ್ಚಿಮ ವಲಯ ತಂಡ
ಶಾರ್ದುಲ್ ಠಾಕೂರ್ (ನಾಯಕ), ಯಶಸ್ವಿ ಜೈಸ್ವಾಲ್, ಆರ್ಯ ದೇಸಾಯಿ, ಹಾರ್ವಿಕ್ ದೇಸಾಯಿ (ವಿ.ಕೀ), ಶ್ರೇಯಸ್ ಅಯ್ಯರ್, ಸರ್ಫರಾಜ್ ಖಾನ್, ಋತುರಾಜ್ ಗಾಯಕ್ವಾಡ್, ಜಯಮೀತ್ ಪಟೇಲ್, ಮನನ್ ಹಿಂಗ್ರಾಜಿಯಾ, ಸೌರಭ್ ನವಾಲೆ (ವಿ.ಕೀ) ಶ್ಯಾಮ್ಸ್ ಮುಲಾನಿ, ತನುಷ್ ಜಡೇಜಾ, ಧರ್ಮೇಂದ್ರ ದೇಶಪಾಂಡೆ, ತುಷಾರ್ ದೇಶಪಾಂಡೆ, ಅರ್ಝಾನ್ ನಾಗವಾಸವಾಲ
ದುಲೀಪ್ ಟ್ರೋಫಿಯಲ್ಲಿ ಭಾಗವಹಿಸುವ ವಲಯವಾರು ರಾಜ್ಯಗಳ ವಿವರ
ದಕ್ಷಿಣ ವಲಯ : ಹೈದರಾಬಾದ್ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ಗೋವಾ, ತಮಿಳುನಾಡು ಮತ್ತು ಪಾಂಡಿಚೇರಿ.
ಕೇಂದ್ರ ವಲಯ : ಉತ್ತರಾಖಂಡ, ಉತ್ತರ ಪ್ರದೇಶ, ವಿದರ್ಭ ಛತ್ತೀಸ್‌ಗಢ, ಮಧ್ಯಪ್ರದೇಶ, ರೈಲ್ವೆ ಮತ್ತು ರಾಜಸ್ಥಾನ
ಪೂರ್ವ ವಲಯ : ಒಡಿಶಾ ತ್ರಿಪುರಾ, ಅಸ್ಸಾಂ, ಬಿಹಾರ, ಬಂಗಾಳ, ಮತ್ತು ಜಾರ್ಖಂಡ್
ಈಶಾನ್ಯ ವಲಯ : ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಣಿಪುರ ಮತ್ತು ಸಿಕ್ಕಿಂ
ಪಶ್ಚಿಮ ವಲಯ : ಮಹಾರಾಷ್ಟ್ರ, ಮುಂಬೈ, ಬರೋಡಾ, ಗುಜರಾತ್, ಮತ್ತು ಸೌರಾಷ್ಟ್ರ
ಉತ್ತರ ವಲಯ : ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಚಂಡೀಗಢ, ದೆಹಲಿ, ಹರಿಯಾಣ, ಹಿಮಾಚಲ ಪ್ರದೇಶ
ಬರಹ: ಕೆಎನ್ ರಂಗು, ಚಿತ್ರದುರ್ಗ