T20 World Cup 2026: ಭಾರತ ವಿರುದ್ದದ ಪಂದ್ಯವನ್ನು ಆಡಲು ಪಾಕಿಸ್ತಾನ ತಂಡಕ್ಕೆ ಬಾಂಗ್ಲಾದೇಶ!
ಭಾರತದ ವಿರುದ್ಧ ಫೆಬ್ರವರಿ 15 ರಂದು 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯವನ್ನು ಆಡುವಂತೆ ಪಾಕಿಸ್ತಾನ ತಂಡಕ್ಕೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮನವಿ ಮಾಡಿದೆ. ಬಾಂಗ್ಲಾ ಕ್ರಿಕೆಟ್ ಮಂಡಳಿ ಅಧ್ಯಕ್ಷ ಅಮಿನುಲ್ ಇಸ್ಲಾಮ್ ಬುಲ್‌ಬುಲ್ ಅವರು ಲಾಹೋರ್‌ನಲ್ಲಿದ್ದು, ಪಿಸಿಬಿಗೆ ಮನವಿ ಮಾಡಿದ್ದಾರೆ.
ಭಾರತ ವಿರುದ್ಧದ ಪಂದ್ಯವನ್ನು ಆಡಲು ಪಿಸಿಬಿಗೆ ಬಿಸಿಬಿ ಮನವಿ. -
ನವದೆಹಲಿ: ಫೆಬ್ರವರಿ 15 ರಂದು ಭಾನುವಾರ ಬಹುನಿರೀಕ್ಷಿತ 2026ರ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯ ಭಾರತ ವಿರುದ್ಧದ ಪಂದ್ಯದಲ್ಲಿ (IND vs PAK) ಪಾಕಿಸ್ತಾನ ತಂಡ ಆಡಬೇಕೆಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB)ಯನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮನವಿ ಮಾಡಿದೆ. ಪಿಸಿಬಿ ಮತ್ತು ಐಸಿಸಿ ಜೊತಗಿನ ಸಭೆಯಲ್ಲಿ ಬಿಸಿಬಿ ಅಧ್ಯಕ್ಷ ಅಮಿನುಲ್ ಇಸ್ಲಾಮ್ ಬುಲ್‌ಬುಲ್ ಅವರು ಸಾಂಪ್ರದಾಯಿಕ ಎದುರಾಳಿ ನಡುವಣ ಪಂದ್ಯವನ್ನು ಯಶಸ್ವಿಯಾಗಿ ಆಡಿಸಬೇಕೆಂದು ಹೇಳಿದ್ದಾರೆ. ಇದರರ್ಥ ಪಾಕಿಸ್ತಾನ ತನ್ನ ಬಹಿಷ್ಕಾರ ಬೆದರಿಕೆಯನ್ನು ಹಿಂತೆಗೆದುಕೊಳ್ಳಬೇಕು ಎಂಬುವುದಾಗಿದೆ.
ಬಾಂಗ್ಲಾದೇಶಕ್ಕೆ ಬೆಂಬಲವಾಗಿ ಪಾಕಿಸ್ತಾನವು ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಆಡಲು ನಿರಾಕರಿಸಿತು. ಫೆಬ್ರವರಿ 15 ರಂದು ಕೊಲಂಬೊದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ನಡೆಯದಿದ್ದರೆ ಐಸಿಸಿ ದೊಡ್ಡ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಪಿಸಿಬಿ ಜೊತೆ ಮಾತನಾಡಲು ಐಸಿಸಿ ಅಧಿಕಾರಿಗಳನ್ನು ಪಾಕಿಸ್ತಾನಕ್ಕೆ ಕಳುಹಿಸಿತು. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಅಮಿನುಲ್ ಇಸ್ಲಾಂ ಕೂಡ ಆ ಸಭೆಯಲ್ಲಿ ಭಾಗವಹಿಸಿದ್ದರು.
IND vs PAK: ಭಾರತ ವಿರುದ್ಧ ಟಿ20 ವಿಶ್ವಕಪ್ ಪಂದ್ಯವಾಡಲು ಒಪ್ಪಿಗೆ ಸೂಚಿಸಿದ ಪಾಕಿಸ್ತಾನ?
ಪಾಕಿಸ್ತಾನಕ್ಕೆ ಬಿಸಿಬಿ ಮನವಿ
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಈಗ ಹೇಳಿಕೆ ನೀಡಿದೆ. ಅದರಲ್ಲಿ, ಭಾರತದ ವಿರುದ್ಧ ಟಿ20 ವಿಶ್ವಕಪ್ ಪಂದ್ಯವನ್ನು ಆಡುವಂತೆ ಪಾಕಿಸ್ತಾನವನ್ನು ವಿನಂತಿಸಿರುವುದಾಗಿ ಅಮಿನುಲ್ ಇಸ್ಲಾಂ ಹೇಳಿದ್ದಾರೆ. "ಈ ಕಷ್ಟದ ಸಮಯದಲ್ಲಿ ಬಾಂಗ್ಲಾದೇಶವನ್ನು ಬೆಂಬಲಿಸಲು ಪಾಕಿಸ್ತಾನದ ಪ್ರಯತ್ನಗಳಿಂದ ನಾವು ತುಂಬಾ ಪ್ರಭಾವಿತರಾಗಿದ್ದೇವೆ. ನಮ್ಮ ಸಹೋದರತ್ವ ಶಾಶ್ವತವಾಗಿರಲಿ. ನಿನ್ನೆ ಪಾಕಿಸ್ತಾನಕ್ಕೆ ನನ್ನ ಸಣ್ಣ ಭೇಟಿಯ ನಂತರ ನಮ್ಮ ಚರ್ಚೆಗಳ ಸಕಾರಾತ್ಮಕ ಫಲಿತಾಂಶಗಳನ್ನು ಗಮನಿಸಿದರೆ, ಇಡೀ ಕ್ರಿಕೆಟ್ ಪರಿಸರ ವ್ಯವಸ್ಥೆಯ ಪ್ರಯೋಜನಕ್ಕಾಗಿ ಫೆಬ್ರವರಿ 15 ರಂದು ಭಾರತದ ವಿರುದ್ಧ ಐಸಿಸಿ ಟಿ20 ವಿಶ್ವಕಪ್ ಪಂದ್ಯವನ್ನು ಆಡುವಂತೆ ನಾನು ಪಾಕಿಸ್ತಾನವನ್ನು ವಿನಂತಿಸುತ್ತೇನೆ," ಎಂದು ಅಮಿನುಲ್ ತಿಳಿಸಿದ್ದಾರೆ.
ಎನ್‌ಡಿಟಿವಿಗೆ ಈಗಾಗಲೇ ಮೂಲಗಳು ಭಾರತ–ಪಾಕಿಸ್ತಾನ ಪಂದ್ಯ ನಡೆಯಲಿದೆ ಎಂದು ಮಾಹಿತಿ ನೀಡಿವೆ. ಇದೀಗ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಕಳುಹಿಸಿರುವ ಪತ್ರದ ನಂತರ, ಪಾಕಿಸ್ತಾನವೂ ಈ ನಿರ್ಧಾರವನ್ನು ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಹೆಚ್ಚಾಗಿದೆ.
ಅಮಿನುಲ್ ಇಸ್ಲಾಂ ಅವರ ಪತ್ರ ಕ್ರಿಕೆಟ್‌ನ ಹಿತದೃಷ್ಟಿಯಿಂದ ಬಾಂಗ್ಲಾದೇಶ ಉದಾರ ನಿಲುವು ತೆಗೆದುಕೊಂಡಂತೆ ತೋರಿಸಬಹುದಾದರೂ, ವಾಸ್ತವದಲ್ಲಿ ಇದು ಪಾಕಿಸ್ತಾನಕ್ಕೆ ಮುಖ ಉಳಿಸಿಕೊಳ್ಳುವ (ಫೇಸ್‌ಸೇವಿಂಗ್) ಪ್ರಸ್ತಾವನೆಯಂತೆಯೇ ಕಾಣುತ್ತದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲಾಗುತ್ತದೆ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು. ಈಗ ಆ ನಿರ್ಧಾರವನ್ನು ಹಿಂತಿರುಗಿಸಿದರೆ, ಅದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಗೌರವಕ್ಕೆ ಧಕ್ಕೆ ತರುವುದಲ್ಲದೆ ದೇಶದ ಪ್ರತಿಷ್ಠೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಆದ್ದರಿಂದ, ಈ ಪತ್ರವು ಪಾಕಿಸ್ತಾನವು ತನ್ನದೇ ಜನರಿಂದ ಎದುರಾಗಬಹುದಾದ ಟೀಕೆಗಳಿಂದ ತಪ್ಪಿಸಿಕೊಳ್ಳಲು ಸಹಾಯಕವಾಗುವ ರೀತಿಯ ಪ್ರತೀತಿ ಸೃಷ್ಟಿಸುವ ಉದ್ದೇಶ ಹೊಂದಿದೆ ಎಂಬಂತೆ ಕಾಣುತ್ತಿದೆ.
ಪಾಕ್ ಪ್ರಧಾನಿಗೆ ಶ್ರೀಲಂಕಾ ಅಧ್ಯಕ್ಷ ಕರೆ
ಪಾಕಿಸ್ತಾನದ ಮಾಧ್ಯಮ ವರದಿಗಳ ಪ್ರಕಾರ, ಪ್ರಧಾನಿ ಶೆಹಬಾಜ್ ಶರೀಫ್ ಅವರಿಗೆ ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ಅವರಿಂದ ದೂರವಾಣಿ ಕರೆ ಕೂಡ ಬಂದಿದೆ. ಭಾರತ ವಿರುದ್ಧದ ಪಂದ್ಯ ಬಹಿಷ್ಕಾರ ನಿರ್ಧಾರವನ್ನು ಹಿಂಪಡೆಯುವಂತೆ ಅವರು ಶರೀಫ್ ಅವರಿಗೆ ಮನವಿ ಮಾಡಿದರು ಎನ್ನಲಾಗಿದೆ. ಜಿಯೋ ನ್ಯೂಸ್ ವರದಿ ಪ್ರಕಾರ, ಇದಕ್ಕೆ ಪ್ರತಿಕ್ರಿಯಿಸಿದ ಶೆಹಬಾಜ್ ಶರೀಫ್, ಪಾಕಿಸ್ತಾನ ತಂಡವು ಭಾರತ ವಿರುದ್ಧ ಆಡಲಿದೆ ಎಂದು ಭರವಸೆ ನೀಡಿದ್ದಾರೆ.