ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮುಂಬೈನಿಂದ ಬೆಂಗಳೂರಿಗೆ ಹಾರ್ದಿಕ್‌ ಪಾಂಡ್ಯ ಶಿಫ್ಟ್‌ ಆಗಲು ಬಲವಾದ ಕಾರಣ ಇಲ್ಲಿದೆ!

Hardik Pandya: ಗಾಯದಿಂದ ಗುಣಮುಖರಾಗುತ್ತಿರುವ ಭಾರತ ತಂಡದ ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರು ಮುಂಬೈನಿಂದ ಬೆಂಗಳೂರಿಗೆ ಶಿಫ್ಟ್‌ ಆಗಿದ್ದಾರೆ. ಆ ಮೂಲಕ ಬಿಸಿಸಿಐ ಸೆಂಟರ್‌ ಆಫ್‌ ಎಕ್ಸ್‌ಲೆನ್ಸ್‌ ಅನ್ನು ತನ್ನ ವೃತ್ತಿ ಜೀವನದ ಇನ್ನುಳಿದ ಅವಧಿಗೆ ಶಾಶ್ವತ ತರಬೇತಿ ಸ್ಥಳವನ್ನಾಗಿ ರೂಪಿಸಿಕೊಂಡಿದ್ದಾರೆ.

ಮುಂಬೈನಿಂದ ಬೆಂಗಳೂರಿಗೆ ಶಿಫ್ಟ್‌ ಆದ ಹಾರ್ದಿಕ್‌ ಪಾಂಡ್ಯ!

ಮುಂಬೈನಿಂದ ಬೆಂಗಳೂರಿಗೆ ಶಿಫ್ಟ್‌ ಆದ ಹಾರ್ದಿಕ್‌ ಪಾಂಡ್ಯ. -

Profile
Ramesh Kote Jun 30, 2026 9:26 PM

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ (Hardik Pandya) ಅವರು ತಮ್ಮ ವೃತ್ತಿ ಜೀವನದ ಇನ್ನುಳಿದ ಅವಧಿಯ ನಿಮಿತ್ತ ದೊಡ್ಡ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಅವರು ಮುಂಬೈನಿಂದ ಬೆಂಗಳೂರಿಗೆ ಶಿಫ್ಟ್‌ ಆಗಿದ್ದಾರೆ. ಆ ಮೂಲಕ ತಮ್ಮ ವೃತ್ತಿ ಜೀವನದ ಇನ್ನುಳಿದ ಅವಧಿಗೆ ಬಿಸಿಸಿಐ (BCCI) ಸೆಂಟರ್‌ ಆಫ್‌ ಎಕ್ಸ್‌ಲೆನ್ಸ್‌ ಅನ್ನು ತನ್ನ ಶಾಶ್ವತ ತರಬೇತಿ ಸ್ಥಳವನ್ನಾಗಿ ರೂಪಿಸಿಕೊಂಡಿದ್ದಾರೆ. ಬಿಸಿಸಿಐ ಗುತ್ತಿಗೆ ಹೊಂದಿರುವ ಆಟಗಾರರು ಗಾಯಗೊಂಡಾಗ ಮಾತ್ರ ಇಲ್ಲಿಗೆ ಬಂದು ಪುನಶ್ಚೇತನ ಕಾರ್ಯದಲ್ಲಿ ತೊಡಬೇಕಾಗಿತ್ತು. ಆದರೆ, ಇದೇ ಮೊದಲ ಬಾರಿ ಹಾರ್ದಿಕ್‌ ಪಾಂಡ್ಯಗೆ ಬೆಂಗಳೂರು ಸೆಂಟರ್‌ನಲ್ಲಿ ತರಬೇತಿಗೆ ಅವಕಾಶ ಕಲ್ಪಿಸಲಾಗಿದೆ.

ಹಾರ್ದಿಕ್‌ ಪಾಂಡ್ಯ ಅವರು ಮೂಲತಃ ಗುಜರಾತ್‌ನ ಬರೋಡಾ ಮೂಲದವರು. ಅವರು ಕಳೆದ ಒಂದು ದಶಕದಲ್ಲಿ ಮುಂಬೈನಲ್ಲಿ ನೆಲೆಸಿದ್ದರು ಹಾಗೂ ಮುಂಬೈ ಇಂಡಿಯನ್ಸ್‌ ತಂಡದ ಘನ್ಸೋಲಿಯಲ್ಲಿ ಕ್ರಿಕೆಟ್‌ ತರಬೇತಿಯನ್ನು ಪಡೆಯುತ್ತಿದ್ದರು. 32ನೇ ವಯಸ್ಸಿನ ಆಲ್‌ರೌಂಡರ್‌, ಸದ್ಯ ಗಾಯದಿಂದ ಗುಣಮುಖರಾಗುತ್ತಿದ್ದಾರೆ. ಈ ಕಾರಣದಿಂದಾಗಿ ಅವರು ಇಂಗ್ಲೆಂಡ್‌ ವಿರುದ್ಧದ ವೈಟ್‌ಬಾಲ್‌ ಸರಣಿಗಳಿಂದ ಹೊರಬಿದ್ದಿದ್ದಾರೆ. ಅಂದ ಹಾಗೆ ಕಳೆದ ಆರು ತಿಂಗಳಿಂದ ಅವರು ಬಿಸಿಸಿಐ ಸೆಂಟರ್‌ ಆಫ್‌ ಎಕ್ಸ್‌ಲೆನ್ಸ್‌ನಲ್ಲಿ ಹೆಚ್ಚಿನ ಸಮಯವನ್ನು ಕಳೆದಿದ್ದಾರೆ.

ಇಂಗ್ಲೆಂಡ್‌ ವಿರುದ್ಧ ಆರಂಭಿಕ 2 ಪಂದ್ಯಗಳಿಗೆ ಭಾರತದ ಪ್ಲೇಯಿಂಗ್‌ XI ಆರಿಸಿದ ಕೆ ಶ್ರೀಕಾಂತ್‌!

"ಹಾರ್ದಿಕ್‌ ಪಾಂಡ್ಯ ಶಾಶ್ವತವಾಗಿ ಬೆಂಗಳೂರಿಗೆ ಸ್ಥಳಾಂತರವಾಗಿದ್ದಾರೆ. ನಗರದ ಹೊರವಲಯ ಹಾಗೂ ಬಿಸಿಸಿಐ ಸೆಂಟರ್‌ ಆಫ್‌ ಎಕ್ಸ್‌ಲೆನ್ಸ್‌ನ ಸಮೀಪ ಬಾಡುಗೆ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಹಾರ್ದಿಕ್‌ ತಮ್ಮ ವೃತ್ತಿ ಜೀವನದ ಕೊನೆಯ ಅವಧಿಯಲ್ಲಿ ಸಿಒಇಯನ್ನು ಶಾಶ್ವತ ತರಬೇತಿ ಸ್ಥಳವನ್ನಾಗಿ ಮಾಡಿಕೊಂಡ ಮೊದಲ ಭಾರತೀಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ," ಎಂದು ಬಿಸಿಸಿಐ ಮೂಲಗಳು ಪಿಟಿಐ ಸುದ್ದಿ ಸಂಸ್ಥಗೆ ತಿಳಿಸಿವೆ.

"ಪ್ರತಿದಿನ ತಮ್ಮ ಲೋವರ್ ಪರೇಲ್‌ನ ನಿವಾಸದಿಂದ ತರಬೇತಿಗಾಗಿ ಪ್ರಯಾಣಿಸುವುದು ಕಷ್ಟಕರವಾಗುತ್ತಿದ್ದ ಕಾರಣ, ಹಾರ್ದಿಕ್ ಮುಂಬೈನಿಂದ ಬೇರೆಡೆಗೆ ಸ್ಥಳಾಂತರಗೊಳ್ಳಲು ಬಯಸಿದ್ದರು. ಬಿಸಿಸಿಐನ ಕೇಂದ್ರ ಒಪ್ಪಂದದ ಆಟಗಾರರಾಗಿರುವ ಅವರಿಗೆ ಸೆಂಟರ್ ಆಫ್ ಎಕ್ಸಲೆನ್ಸ್‌ (COE)ನಲ್ಲಿ ಗಾಯಗಳ ನಿರ್ವಹಣೆಯಿಂದ ಹಿಡಿದು ಕೌಶಲ ತರಬೇತಿವರೆಗೆ ಎಲ್ಲಾ ಸೌಲಭ್ಯಗಳಿಗೂ ಪ್ರವೇಶವಿದೆ."

"ಐಪಿಎಲ್‌ ಟೂರ್ನಿ ಅಥವಾ ರಾಷ್ಟ್ರೀಯ ತಂಡದ ಪಂದ್ಯಗಳು ಅಥವಾ ರಾಜ್ಯ ತಂಡದ ಪಂದ್ಯಗಳು ಇಲ್ಲದ ವೇಳೆ ಅವರು ಬಿಸಿಸಿಐ ಸೆಂಟರ್‌ ಆಫ್‌ ಎಕ್ಸ್‌ಲೆನ್ಸ್‌ ಅನ್ನು ಶಾಶ್ವತ ತರಬೇತಿ ಸ್ಥಳವನ್ನಾಗಿಸಿಕೊಳ್ಳಲಿದ್ದಾರೆ. ಭಾರತದ ಪರ ವೈಟ್‌ ಬಾಲ್‌ ಕ್ರಿಕೆಟ್ ಆಡುತ್ತಿರುವವರೆಗೆ ಬೆಂಗಳೂರಿನಲ್ಲಿಯೇ ನೆಲೆಸಿರಬೇಕೆಂಬುದು ಅವರ ಯೋಜನೆಯಾಗಿದೆ. ಈ ಕಾರಣದಿಂದ ಅವರು ಮುಂಬೈನಿಂದ ಇಲ್ಲಿಗೆ ಸ್ಥಳಾಂತರಗೊಂಡಿದ್ದಾರೆ. ಜೊತೆಗೆ, ಇನ್ನೂ ಕನಿಷ್ಠ ಐದರಿಂದ ಆರು ವರ್ಷಗಳ ಕಾಲ ಭಾರತ ತಂಡದ ಪರ ಆಡಲು ಅವರು ಉದ್ದೇಶಿಸಿದ್ದಾರೆ," ಎಂದು ಮೂಲಗಳು ತಿಳಿಸಿವೆ.

IND vs ENG ಒಡಿಐ ಸರಣಿಗೂ ಮುನ್ನ ರೋಹಿತ್‌ ಶರ್ಮಾಗೆ ಸುನೀಲ್‌ ಗವಾಸ್ಕರ್‌ ವಾರ್ನಿಂಗ್!

"ಕೌಶಲಾಭ್ಯಾಸದ ವೇಳೆ ಸೆಂಟರ್ ಆಫ್ ಎಕ್ಸಲೆನ್ಸ್‌ (COE) ನೇಮಿಸಿರುವ ನೆಟ್ ಬೌಲರ್‌ಗಳ ವಿರುದ್ಧ ಬ್ಯಾಟಿಂಗ್ ಅಭ್ಯಾಸ ನಡೆಸಿದಾಗಲೂ, ಅವರಿಗೆ ನೀಡಬೇಕಾದ ಸಂಭಾವನೆಯನ್ನು ಹಾರ್ದಿಕ್ ತಮ್ಮ ಸ್ವಂತ ಹಣದಿಂದಲೇ ಪಾವತಿಸುತ್ತಾರೆ," ಎಂದು ಮೂಲಗಳು ಮಾಹಿತಿ ನೀಡಿವೆ.

ಹಾರ್ದಿಕ್ ಅವರ ತರಬೇತಿ ವೇಳಾಪಟ್ಟಿಗೆ ನೆರವಾಗಲು, ಸೆಂಟರ್ ಆಫ್ ಎಕ್ಸಲೆನ್ಸ್‌ (COE) ಹೊರತಾಗಿಯೂ ಅವರೊಂದಿಗೆ ವೈಯಕ್ತಿಕ ಫಿಸಿಯೋಥೆರಪಿಸ್ಟ್ ಹಾಗೂ ವೈಯಕ್ತಿಕ ಸ್ಟ್ರೆನ್ತ್‌ ಮತ್ತು ಕಂಡೀಷನಿಂಗ್ ಕೋಚ್ ಇರಲಿದ್ದಾರೆ ಎಂದು ತಿಳಿದುಬಂದಿದೆ.

ಅವರ ಕಮ್‌ಬ್ಯಾಕ್‌ ಬಗ್ಗೆ ಮಾತನಾಡುವುದಾದರೆ, ಹಾರ್ದಿಕ್ ಅವರ ಪುನಶ್ಚೇತನ (ರಿಹ್ಯಾಬಿಲಿಟೇಶನ್) ಪ್ರಕ್ರಿಯೆ ಇನ್ನೂ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ. ವೈಯಕ್ತಿಕ ಕೆಲಸದ ನಿಮಿತ್ತ ಅವರು ಕೆಲವು ದಿನಗಳ ವಿರಾಮ ಪಡೆದಿದ್ದು, ಇನ್ನೊಂದು ಅಥವಾ ಎರಡು ದಿನಗಳಲ್ಲಿ ಮತ್ತೆ ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ಮರಳುವ ನಿರೀಕ್ಷೆಯಿದೆ.

ಆದರೆ, 'ರಿಟರ್ನ್-ಟು-ಪ್ಲೇ' ಪ್ರೋಟೋಕಾಲ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಸಂಪೂರ್ಣ ಫಿಟ್ ಎಂದು ಘೋಷಿಸಲ್ಪಟ್ಟರೂ, ಯುಕೆ ಪ್ರವಾಸದ ತಕ್ಷಣವೇ ನಡೆಯಲಿರುವ ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಗೆ ಅವರನ್ನು ಆಯ್ಕೆ ಮಾಡಲಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.