IPL 2025: ʻಏನಾದರೂ ಬುದ್ದಿ ಇದೆಯಾ?ʼ-ಆರ್ ಅಶ್ವಿನ್ ವಿರುದ್ಧ ಗುಡುಗಿದ ಮನೋಜ್ ತಿವಾರಿ!
Manoj Tiwary slammed R Ashwin: ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಅತ್ಯಂತ ನೀರಸ ಬೌಲಿಂಗ್ ಪ್ರದರ್ಶನ ತೋರಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಟೀಕಿಸಿದ್ದಾರೆ. ಸುನೀಲ್ ನರೇನ್‌ಗೆ ಅರೌಂಡ್ ಬೌಲ್ ಮಾಡುವ ಬದಲು ಓವರ್ ಮಾಡಿದ್ದಕ್ಕೆ ಅಶ್ವಿನ್ ವಿರುದ್ಧ ಕೆಕೆಆರ್ ಮಾಜಿ ಬ್ಯಾಟ್ಸ್‌ಮನ್ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಆರ್ ಅಶ್ವಿನ್ ವಿರುದ್ಧ ಮನೋಜ್ ತಿವಾರಿ ಅಸಮಾಧಾನ.

ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಕೋಲ್ಕತಾ ನೈಟ್ ರೈಡರ್ಸ್(Kolkata Knight Riders) ವಿರುದ್ಧದ ಪಂದ್ಯದಲ್ಲಿ ಕಳಪೆ ಬೌಲಿಂಗ್ ಪ್ರದರ್ಶನ ತೋರಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (R Ashwin) ಅವರನ್ನು ಭಾರತ ತಂಡದ ಮಾಜಿ ಬ್ಯಾಟ್ಸ್‌ಮನ್ ಮನೋಜ್ ತಿವಾರಿ (Manoj Tiwary) ಟೀಕಿಸಿದ್ದಾರೆ. ಸುನೀಲ್ ನರೇನ್ ಅವರ ಎದುರು ಆರ್ ಅಶ್ವಿನ್ ಓವರ್ ದಿ ವಿಕೆಟ್ ಬೌಲ್ ಮಾಡುವುದರ ಬದಲು ಅರೌಂಡ್ ದಿ ವಿಕೆಟ್ ಬೌಲ್ ಮಾಡಬೇಕಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂದ ಹಾಗೆ ಈ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಸಿಎಸ್‌ಕೆ 8 ವಿಕೆಟ್‌ಗಳಿಂದ ಕೆಕೆಆರ್ ಎದುರು ಹೀನಾಯ ಸೋಲು ಅನುಭವಿಸಿತ್ತು.
ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನೀರಸ ಪ್ರದರ್ಶನವನ್ನು ಮುಂದುವರಿಸಿದೆ. ಋತುರಾಜ್ ಗಾಯಕ್ವಾಡ್ ಅವರ ನಾಯಕತ್ವದಲ್ಲಿ ತನ್ನ ಮೊದಲನೇ ಪಂದ್ಯವನ್ನು ಗೆದ್ದಿದ್ದ ಸಿಎಸ್‌ಕೆ, ನಂತರ ಸತತ ನಾಲ್ಕು ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು. ಅಂದ ಹಾಗೆ ಗಾಯಕ್ಕೆ ತುತ್ತಾಗಿದ್ದ ಋತುರಾಜ್ ಗಾಯಕ್ವಾಡ್ ಐಪಿಎಲ್ ಟೂರ್ನಿಯಿಂದ ಹೊರ ಬಿದಿದ್ದಾರೆ. ಈ ಹಿನ್ನೆಲೆಯಲ್ಲಿ ಎಂಎಸ್ ಧೋನಿ 683 ದಿನಗಳ ಬಳಿಕ ಚೆನೈ ಸೂಪರ್ ಕಿಂಗ್ಸ್ ನಾಯಕತ್ವಕ್ಕೆ ಮರಳಿದ್ದರು. ಆದರೂ ಸಿಎಸ್‌ಕೆ ಗೆಲುವಿನ ಲಯಕ್ಕೆ ಮರಳಲಿಲ್ಲ. ಶುಕ್ರವಾರ ಕೋಲ್ಕತಾ ನೈಟ್ ರೈಡರ್ಸ್ ಎದುರು ಚೆನ್ನೈ ಹೀನಾಯವಾಗಿ ಸೋಲು ಅನುಭವಿಸಿತ್ತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಚೆನ್ನೈ, ಬ್ಯಾಟಿಂಗ್ ವೈಫಲ್ಯ ಅನುಭವಿಸಿ 103 ರನ್‌ಗಳಿಗೆ ಸೀಮಿತವಾಗಿತ್ತು.
IPL 2025: ಅರ್ಧಶತಕ ಸಿಡಿಸಿ ಗುಜರಾತ್ ಟೈಟನ್ಸ್ ಪರ ನೂತನ ದಾಖಲೆ ಬರೆದ ಶುಭಮನ್ ಗಿಲ್!
ಬಳಿಕ ಗುರಿ ಹಿಂಬಾಲಿಸಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡ, ಸುನೀಲ್ ನರೇನ್ (44 ರನ್, 17 ಎಸೆತಗಳು) ಅವರ ಸ್ಪೋಟಕ ಬ್ಯಾಟಿಂಗ್ ಮೂಲಕ 10.1 ಓವರ್‌ಗಳಿಗೆ ಚೇಸ್ ಮಾಡಿತು. ಈ ಪಂದ್ಯದಲ್ಲಿ ಆರ್ ಅಶ್ವಿನ್ ಅವರು ಬೌಲ್ ಮಾಡಿದ್ದ ಮೂರು ಓವರ್‌ಗಳಲ್ಲಿ 10ರ ಸರಾಸರಿಯಲ್ಲಿ 30 ರನ್‌ಗಳನ್ನು ನೀಡಿದ್ದರು. ಆ ಮೂಲಕ ಇವರಿಂದ ಕನಿಷ್ಠ ಒಂದು ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ. ಕ್ರಿಕ್‌ಬಝ್ ಜೊತೆ ಮಾತನಾಡಿದ್ದ ಮನೋಜ್ ತಿವಾರಿ, ಸುನೀಲ್ ನರೇನ್‌ಗೆ ಆರ್ ಅಶ್ವಿನ್ ಅನುಸರಿಸಿದ ಬೌಲಿಂಗ್ ತಂತ್ರ ಸರಿ ಇಲ್ಲ ಹಾಗೂ ಎಂಎಸ್ ಧೋನಿ ಕೂಡ ಅವರಿಗೆ ಸರಿಯಾಗಿ ಮಾರ್ಗದರ್ಶನ ನೀಡಿಲ್ಲ ಎಂದು ಹೇಳಿದ್ದಾರೆ.
"ಪಂದ್ಯಕ್ಕೂ ಮುನ್ನ ಅವರು ಡ್ರಾಯಿಂಗ್ ರೂಂಗೆ ಏಕೆ ಹೋಗಿಲ್ಲ? ನನ್ನ ಪ್ರಕಾರ, ಸೋಲಿನ ನಂತರ ನೀವು ಮರು ಮೌಲ್ಯಮಾಪನ ಮಾಡುವುದು ಸ್ಪಷ್ಟ. ಆದರೆ ನಡೆಯುತ್ತಿರುವ ಕೆಲವು ವಿಷಯಗಳು ನನ್ನ ತಿಳುವಳಿಕೆಯನ್ನು ಮೀರಿವೆ. ಆರ್ ಅಶ್ವಿನ್ ಅವರು ಎಲ್ಲಾ ಎಡಗೈ ಬ್ಯಾಟ್ಸ್‌ಮನ್‌ಗಳಿಗೆ ಅರೌಂಡ್ ದಿ ವಿಕೆಟ್ ಬೌಲ್ ಮಾಡಿದ್ದರು, ಆದರೆ, ಇಂದು(ಶುಕ್ರವಾರ) ಅವರು ಓವರ್ ದಿ ಸ್ಟಂಪ್ಸ್ ಬೌಲ್ ಮಾಡಿದ್ದಾರೆ. ಇದು ಸುನೀಲ್ ನರೇನ್‌ಗೆ ತುಂಬಾ ಸುಲಭವಾಗಿತ್ತು. ಇಂಥಾ ಅನುಭವಿ ಆಟಗಾರ ಹಾಗೂ ವಿಕೆಟ್ ಕೀಪರ್ ಇದ್ದರೆ, ಇವೆಲ್ಲವೂ ಸಣ್ಣ ವಿಷಯಗಳಾಗಿರುತ್ತವೆ. ಈ ವೇಳೆ ಇವರ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸಿತ್ತೆ?" ಎಂದು ಮನೋಜ್ ತಿವಾರಿ ಪ್ರಶ್ನೆ ಮಾಡಿದ್ದಾರೆ.
CSK vs KKR: ಕೋಲ್ಕತಾ ನೈಟ್ ರೈಡರ್ಸ್‌ಗೆ ಸುಲಭವಾಗಿ ಶರಣಾದ ಚೆನ್ನೈ ಸೂಪರ್ ಕಿಂಗ್ಸ್!
ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ವೈಫಲ್ಯ
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ರಚಿನ್ ರವೀಂದ್ರ, ಡೆವೋನ್ ಕಾನ್ವೆ, ರಾಹುಲ್ ತ್ರಿಪಾಠಿ, ರವೀಂದ್ರ ಜಡೇಜಾ, ಆರ್ ಅಶ್ವಿನ್, ದೀಪಕ್ ಹೂಡ ಹಾಗೂ ಎಂಎಸ್ ಧೋನಿ ವೈಫಲ್ಯ ಅನುಭವಿಸಿದ್ದರು. ಆದರೆ, ಕೊನೆಯವರೆಗೂ ಹೋರಾಟ ನಡೆಸಿದ್ದ ಶಿವಂ ದುಬೆಗೆ ಮತ್ತೊಂದು ತುದಿಯಲ್ಲಿ ಯಾರೂ ಸಾಥ್ ನೀಡಲಿಲ್ಲ. ಅವರು ಅಜೇಯ 31 ರನ್ ಗಳಿಸಿದ್ದರು. ಆ ಮೂಲಕ 100ರ ಒಳಗೆ ಆಲ್‌ಔಟ್ ಆಗುತ್ತಿದ್ದ ಸಿಎಸ್‌ಕೆಯನ್ನು 100ರ ಗಡಿ ದಾಟಿಸಿದ್ದರು. ಅಂತಿಮವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ, 103 ರನ್‌ಗಳನ್ನು ಕಲೆ ಹಾಕಿತ್ತು. ಒಟ್ಟು 6 ಪಂದ್ಯಗಳನ್ನು ಆಡಿರುವ ಸಿಎಸ್‌ಕೆ ಕೇವಲ ಒಂದು ಪಂದ್ಯದಲ್ಲಿ ಸೋತು, ಇನ್ನುಳಿದ ಐದು ಪಂದ್ಯಗಳಲ್ಲಿ ಸೋಲು ಅನುಭವಿಸಿತು. ಆ ಮೂಲಕ ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ.