IPL 2025: ಅರ್ಧಶತಕ ಸಿಡಿಸಿ ಗುಜರಾತ್ ಟೈಟನ್ಸ್ ಪರ ನೂತನ ದಾಖಲೆ ಬರೆದ ಶುಭಮನ್ ಗಿಲ್!
Shubman Gill Scored 2000 Runs for GT: ಲಖನೌ ಸೂಪರ್ ಜಯಂಟ್ಸ್ ವಿರುದ್ದದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ನಾಯಕ ಶುಭಮನ್ ಗಿಲ್ ಅರ್ಧಶತಕವನ್ನು ಸಿಡಿಸಿದ್ದಾರೆ. ಆ ಮೂಲಕ ಗುಜರಾತ್ ಟೈಟನ್ಸ್ ಪರ 2000 ರನ್‌ಗಳನ್ನು ಪೂರ್ಣಗೊಳಿಸಿದ ಮೊದಲ ಬ್ಯಾಟ್ಸ್‌ಮ್ ಎನಿಸಿಕೊಂಡಿದ್ದಾರೆ.

ಗುಜರಾತ್ ಟೈಟನ್ಸ್ ಪರ 2000 ರನ್ ಗಳಿಸಿದ ಶುಭಮನ್ ಗಿಲ್.

ಲಖನೌ: ಲಖನೌ ಸೂಪರ್ ಜಯಂಟ್ಸ್ ವಿರುದ್ದದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಗುಜರಾತ್ ಟೈಟನ್ಸ್ (Gujarat Titans) ತಂಡದ ನಾಯಕ ಶುಭಮನ್ ಗಿಲ್ (Shubman Gill) ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ಪರ 2000 ರನ್‌ಗಳನ್ನು ಕಲೆ ಹಾಕಿದ ಮೊದಲ ಬ್ಯಾಟ್ಸ್‌ಮನ್ ಎಂಬ ಸಾಧನೆಗೆ ಶುಭಮನ್ ಗಿಲ್ ಭಾಜನರಾಗಿದ್ದಾರೆ. ಶುಭಮನ್ ಗಿಲ್ ಜೊತೆ ಮತ್ತೊರ್ವ ಆರಂಭಿಕ ಸಾಯಿ ಸುದರ್ಶನ್ ಕೂಡ ಅರ್ಧಶತಕವನ್ನು ಸಿಡಿಸಿದ್ದಾರೆ. ಈ ಇಬ್ಬರು ಮೊದಲನೇ ವಿಕೆಟ್‌ಗೆ 12.1 ಓವರ್‌ಗಳಿಗೆ 120 ರನ್‌ಗಳನ್ನು ಕಲೆ ಹಾಕಿದ್ದರು, ಆ ಮೂಲಕ ಗುಜರಾತ್ ಟೈಟನ್ಸ್ ತಂಡಕ್ಕೆ ಭರ್ಜರಿ ಆರಂಭವನ್ನು ತಂದುಕೊದ್ದರು.
ಇಲ್ಲಿನ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶನಿವಾರ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಗುಜರಾತ್ ಟೈಟನ್ಸ್ ಪರ ಇನಿಂಗ್ಸ್ ಆರಂಭಿಸಿದ ಶುಭಮನ್ ಗಿಲ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಇವರು ಆಡಿದ 38 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ 60 ರನ್‌ಗಳನ್ನು ಸಿಡಿಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಸಾಥ್ ನೀಡಿದ್ದ ಸಾಯಿ ಸುದರ್ಶನ್ ಅವರು 37 ಎಸೆತಗಳಲ್ಲಿ 56 ರನ್‌ಗಳನ್ನು ಬಾರಿಸಿದ್ದರು. ಆ ಮೂಲಕ ಗುಜರಾತ್ ಟೈಟನ್ಸ್ ತಂಡ ತನ್ನ ಪಾಲಿನ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 180 ರನ್‌ಗಳನ್ನು ಕಲೆ ಹಾಕಲು ನೆರವು ನೀಡಿದ್ದರು.
IPL 2025: ಗುಜರಾತ್ ಟೈಟನ್ಸ್‌ಗೆ ಆಘಾತ, ಐಪಿಎಲ್ ಟೂರ್ನಿಯಿಂದ ಗ್ಲೆನ್ ಫಿಲಿಪ್ಸ್ ಔಟ್!
ವಿಶೇಷ ದಾಖಲೆ ಬರೆದ ಶುಭಮನ್ ಗಿಲ್
ತಮ್ಮ ಅರ್ಧಶತಕದ ಮೂಲಕ ಶುಭಮನ್ ಗಿಲ್ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ಪರ 2000 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಗುಜರಾತ್ ಟೈಟನ್ಸ್ ಪರ ಈ ದಾಖಲೆ ಬರೆದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. 2022ರ ಮೆಗಾ ಹರಾಜಿಗೂ ಮುನ್ನ ಗುಜರಾತ್ ಟೈಟನ್ಸ್‌ಗೆ ಶುಭಮನ್ ಗಿಲ್ ಸೇರ್ಪಡೆಯಾಗಿದ್ದರು. 2022 ಮತ್ತು 2023ರ ಆವೃತ್ತಿಗಳಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಿದ್ದರು. ಆದರೆ, 2024ರ ಐಪಿಎಲ್‌ಗೂ ಮುನ್ನ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್‌ಗೆ ಮರಳಿದ್ದರು. ಇದಾದ ಬಳಿಕ ಗುಜರಾತ್ ಟೈಟನ್ಸ್ ನಾಯಕತ್ವವನ್ನು ಶುಭಮನ್ ಗಿಲ್‌ಗೆ ನೀಡಲಾಗಿತ್ತು.
2022ರ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ಪರ ಶುಭಮನ್ ಗಿಲ್ ಆಡಿದ್ದ 16 ಪಂದ್ಯಗಳಿಂದ 483 ರನ್‌ಗಳನ್ನು ಕಲೆ ಹಾಕಿದ್ದರು. 2018ರಲ್ಲಿ ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದ ಬಳಿಕ ರಿಷಭ್ ಪಂತ್ ಅವರ ಶ್ರೇಷ್ಠ ಪ್ರದರ್ಶನ ಇದಾಗಿತ್ತು. 2022ರ ಐಪಿಎಲ್ ಟೂರ್ನಿಯ ಫೈನಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ ಗೆಲುವು ಪಡೆಯುವ ಮೂಲಕ ಗುಜರಾತ್ ಟೈಟನ್ಸ್ ತಂಡ ಚೊಚ್ಚಲ ಚಾಂಪಿಯನ್ ಆಗಿತ್ತು.
We love you 2000, skipper 💙 pic.twitter.com/VGIpGzPJTn
— Gujarat Titans (@gujarat_titans) April 12, 2025
2023ರಲ್ಲಿ 890 ರನ್ ಸಿಡಿಸಿದ್ದ ಗಿಲ್
2023ರ ಐಪಿಎಲ್ ಟೂರ್ನಿಯಲ್ಲಿ ಶುಭಮನ್ ಗಿಲ್ ತಮ್ಮ ವೃತ್ತಿ ಜೀವನದ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು. ಅವರು ಈ ಆವೃತ್ತಿಯಲ್ಲಿ 59.33ರ ಸರಾಸರಿಯಲ್ಲಿ 890 ರನ್‌ಗಳನ್ನು ಬಾರಿಸಿದ್ದರು. ಇದರಲ್ಲಿ ಅವರು ಮೂರು ಶತಕಗಳು ಹಾಗೂ 4 ಅರ್ಧಶತಕಗಳನ್ನು ಸಿಡಿಸಿದ್ದರು. ಫೈನಲ್ ಹಣಾಹಣಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಅನುಭವಿಸುವ ಮೂಲಕ ಗುಜರಾತ್ ಟೈಟನ್ಸ್ ರನ್ನರ್ ಅಪ್ ಆಗಿತ್ತು. ಆದರೆ, 2024ರ ಐಪಿಎಲ್ ಟೂರ್ನಿಯಲ್ಲಿ ಆಡಿದ್ದ 12 ಪಂದ್ಯಗಳಿಂದ ಗಿಲ್ 426 ರನ್‌ಗಳನ್ನು ಗಳಿಸಿದ್ದರು. ಇದರ ಪರಿಣಾಮ 2024ರ ಟಿ20 ವಿಶ್ವಕಪ್ ಟೂರ್ನಿಯ ಭಾರತ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ.
ಗುಜರಾತ್ ಟೈಟನ್ಸ್ ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳು
ಶುಭಮನ್ ಗಿಲ್: 2007 ರನ್‌ಗಳು
ಸಾಯಿ ಸುದರ್ಶನ್: 1363 ರನ್‌ಗಳು
ಡೇವಿಡ್ ಮಿಲ್ಲರ್: 950 ರನ್‌ಗಳು
ಹಾರ್ದಿಕ್ ಪಾಂಡ್ಯ: 833 ರನ್‌ಗಳು
ವೃದ್ದಿಮಾನ್ ಸಹಾ: 824 ರನ್‌ಗಳು