ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG-'ಶುಭಮನ್‌ ಗಿಲ್‌ 430 ರನ್‌ ಗಳಿಸಿದ್ದಾರೆ': ಡ್ಯೂಕ್‌ ಬಾಲ್‌ ಸಿಇಒ ಟೀಕೆಗಳಿಗೆ ತಿರುಗೇಟು!

ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವಣ ಮೂರನೇ ಟೆಸ್ಟ್‌ ಪಂದ್ಯದ ವೇಳೆ ಡ್ಯೂಕ್‌ ಬಾಲ್‌ ಗುಣಮಟ್ಟದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಪಂದ್ಯದ ಎರಡನೇ ದಿನ ಎರಡನೇ ಹೊಸ ಚೆಂಡು ಕೇವಲ 10.4 ಓವರ್‌ಗಳಿಗೆ ತನ್ನ ಸ್ವರೂಪವನ್ನು ಕಳೆದುಕೊಂಡಿತ್ತು. ಇದಾದ ಬಳಿಕ ಡ್ಯೂಕ್‌ ಬಾಲ್‌ ಅನ್ನು ಹಲವರು ಟೀಕಿಸಿದ್ದರು. ಇದೀಗ ಡ್ಯೂಕ್‌ ಬಾಲ್‌ ಸಿಇಒ ಸ್ಪಷ್ಟನೆ ನೀಡಿದ್ದಾರೆ.

ಚೆಂಡು ಸರಿಯಿಲ್ಲ ಎಂದವರಿಗೆ ಡ್ಯೂಕ್‌ ಬಾಲ್‌ ಸಿಇಒ ತಿರುಗೇಟು!

ಡ್ಯೂಕ್‌ ಬಾಲ್‌ ಬಗೆಗಿನ ಟೀಕೆಗಳಿಗೆ ತಿರುಗೇಟು ನೀಡಿದ ಸಿಇಒ ದಿಲೀಪ್‌.

Profile Ramesh Kote Jul 12, 2025 5:53 PM

ನವದೆಹಲಿ: ಪ್ರಸ್ತುತ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಲಂಡನ್‌ ಲಾರ್ಡ್ಸ್‌ ಅಂಗಣದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ ಪಂದ್ಯದಲ್ಲಿ (IND vs ENG) ಕಾದಾಟ ನಡೆಸುತ್ತಿವೆ. ಆದರೆ, ಈ ಪಂದ್ಯದಲ್ಲಿ ಬಳಸುತ್ತಿರುವ ಡ್ಯೂಕ್‌ ಬಾಲ್‌ (Duke ball) ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅದರಲ್ಲಿಯೂ ವಿಶೇಷವಾಗಿ ಪಂದ್ಯದ ಎರಡನೇ ಚೆಂಡು ಬದಲಾವಣೆ ಬಗ್ಗೆ ಹೈಡ್ರಾಮಾ ನಡೆದಿತ್ತು. ಪಂದ್ಯದಲ್ಲಿ ಬಳಸಿದ್ದ ಎರಡನೇ ಹೊಸ ಚೆಂಡು ಕೇವಲ 10.4 ಓವರ್‌ಗಳಿಗೆ ತನ್ನ ಸ್ವರೂಪವನ್ನು ಕಳೆದುಕೊಂಡಿತ್ತು. ಈ ವೇಳೆ ಡ್ಯೂಕ್‌ ಬಾಲ್‌ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ಇದರ ಬೆನ್ನಲ್ಲೆ ಡ್ಯೂಕ್‌ ಬಾಲ್‌ ಕಂಪನಿಯ ಸಿಇಒ ದಿಲಿಪ್‌ ಜಜೋಡಿಯಾ (Dilip Jajodia) ಸ್ಪಷ್ಟನೆ ನೀಡಿದ್ದಾರೆ.

ಪಂದ್ಯದ ಎರಡನೇ ದಿನ ಇಂಗ್ಲೆಂಡ್‌ ತಂಡದ ಪ್ರಥಮ ಇನಿಂಗ್ಸ್‌ ವೇಳೆ ಎರಡನೇ ಹೊಸ ಚೆಂಡು ಕೇವಲ 11ನೇ ಓವರ್‌ನಲ್ಲಿ ತನ್ನ ಸ್ವರೂಪವನ್ನು ಕಳೆದುಕೊಂಡಿತ್ತು. ಈ ವೇಳೆ ಭಾರತ ತಂಡದ ನಾಯಕ ಶುಭಮನ್‌ ಗಿಲ್‌, ಚೆಂಡನ್ನು ಅಂಪೈರ್‌ ಬಳಿ ತೋರಿಸಿದ್ದರು. ಈ ವೇಳೆ ಅಂಪೈರ್‌ ಪರಿಶೀಲಿಸಿದ ಬಳಿಕ ಬೇರೆ ಚೆಂಡನ್ನು ಪಡೆದರು. ಆದರೆ, ಈ ಚೆಂಡಿನ ಬಗ್ಗೆ ಗಿಲ್‌ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಇದು 10 ಓವರ್‌ ಬಳಿಸಿದ ಚೆಂಡು ಅಲ್ಲ, ಬೇರೆ ಚೆಂಡು ನೀಡಬೇಕೆಂದು ಮನವಿ ಮಾಡಿದ್ದರು. ಆದರೆ, ಅಂಪೈರ್‌ ಇದನ್ನು ನಿರಾಕರಿಸಿದ್ದರು. ಇದರಿದ ಗಿಲ್‌ ಜೊತೆಗೆ ಸಿರಾಜ್‌ ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು.

IND vs ENG: ಅರ್ಧಶತಕ ಬಾರಿಸಿದ ಬಳಿಕ ಸರ್ಫರಾಝ್‌ ಖಾನ್‌ ದಾಖಲೆ ಮುರಿದ ಜೇಮಿ ಸ್ಮಿತ್‌!

ಬಳಿಕ ಡ್ಯೂಕ್‌ ಬಾಲ್‌ ಗುಣಮಟ್ಟದ ಭಾರತೀಯ ಮಾಜಿ ಆಟಗಾರರು ಸೇರಿದಂತೆ ಮಾಧ್ಯಮಗಳು ಕೂಡ ಟೀಕಿಸಿದ್ದವು. ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌, ಇಂಗ್ಲೆಂಡ್‌ ಮಾಜಿ ವೇಗಿ ಸ್ಟುವರ್ಟ್‌ ಬ್ರಾಡ್‌ ಅವರು ಕೂಡ ಚೆಂಡಿನ ಗುಣಮಟ್ಟದ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಇದೀಗ ಡ್ಯೂಕ್‌ ಬಾಲ್‌ ಸಿಇಒ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ. ಪಿಟಿಐ ಜೊತೆ ಮಾತನಾಡಿದ ಅವರು, ತಮ್ಮ ಚೆಂಡಿನ ಗುಣಮಟ್ಟವನ್ನು ಸಮರ್ಥಿಸಿಕೊಂಡರು ಹಾಗೂ ಆಟಗಾರರಿಗೆ ಈ ರೀತಿಯ ಹೇಳಿಕೆಗಳನ್ನು ನೀಡದಂತೆ ಮನವಿ ಮಾಡಿಕೊಂಡಿದ್ದಾರೆ.

"ವಿಶ್ವ ಕ್ರಿಕೆಟ್‌ನಲ್ಲಿ ಕೇವಲ ಮೂರು ಮಾನ್ಯತೆ ಪಡೆದ ತಯಾರಕರು ಇದ್ದಾರೆ. ಡ್ಯೂಕ್ಸ್, ಎಸ್‌ಜಿ ಮತ್ತು ಕೂಕಬುರ್ರಾ. ಕ್ರಿಕೆಟ್ ಚೆಂಡನ್ನು ತಯಾರಿಸುವುದು ಸುಲಭವಲ್ಲ. ಹಾಗಿದ್ದಿದ್ದರೆ, ಪ್ರಪಂಚದಾದ್ಯಂತ ನೂರಾರು ತಯಾರಕರು ಇರುತ್ತಿದ್ದರು" ಎಂದು ಹೇಳಿದ ಅವರು, "ನಾವು ಏನೂ ಮಾಡದೆ ಸುಮ್ಮನೆ ಕುಳಿತಿಲ್ಲ ಎಂದು ಆಟಗಾರರು ಅರಿತುಕೊಳ್ಳಬೇಕು. ಸಮಸ್ಯೆ ಇದ್ದರೆ, ನಾವು ಅದನ್ನು ಪರಿಶೀಲಿಸುತ್ತೇವೆ ಮತ್ತು ಅದು ಚರ್ಮದ ದೋಷವೋ ಅಥವಾ ಇನ್ನೇನಾದರೂ ದೋಷವೋ ಎಂದು ಗುರುತಿಸುತ್ತೇವೆ. ಆದರೆ ಜನರು ಟೀಕೆಗಳ ಬಗ್ಗೆ ಜಾಗರೂಕರಾಗಿರಬೇಕು. ಇದು ನನಗೆ ಮಾತ್ರವಲ್ಲ, ಇದರಿಂದ ಉದ್ಯೋಗಗಳು ಕೂಡ ಅಪಾಯಕ್ಕೆ ಒಳಗಾಗಬಹುದು," ಎಂದು ಡ್ಯೂಕ್‌ ಬಾಲ್‌ ಸಿಇಒ ದಿಲಿಪ್‌ ಜಜೋಡಿಯಾ ತಿಳಿಸಿದ್ದಾರೆ.

IND vs ENG: ಚೆಂಡು ಬದಲಾಯಿಸಿದ ಅಂಪೈರ್‌ ಜೊತೆ ಶುಭಮನ್‌ ಗಿಲ್‌ ವಾಗ್ವಾದ! ವಿಡಿಯೊ

ಚೆಂಡು ಸ್ವರೂಪ ಕಳೆದುಕೊಳ್ಳಲು ಕಾರಣ ತಿಳಿಸಿದ ದಿಲೀಪ್

ಚೆಂಡು ಬಹುಬೇಗ ತನ್ನ ಸ್ವರೂಪವನ್ನು ಕಳೆದುಕೊಳ್ಳಲು ಕಾರಣವೇನೆಂದು ಕೂಡ ಅವರು ವಿವರಿಸಿದ್ದಾರೆ. "ಈಗಿನ ಆಟಗಾರರ ಸಾಮರ್ಥ್ಯ, ಕ್ರಿಕೆಟ್‌ನ ವಿಧಾನ, ಆಟದ ಕಂಡೀಷನ್ಸ್‌ ಹಾಗೂ ಹವಾಮಾನ ಇಲ್ಲಿ ಹೆಚ್ಚಿನ ಪ್ರಾಬಲ್ಯವನ್ನು ಬೀರುತ್ತದೆ. ಆಧುನಿಕ ಕಾಲದ ಬ್ಯಾಟ್‌ಗಳು ಶಕ್ತಿಯುತವಾಗಿವೆ ಹಾಗೂ ಚೆಂಡು ಬೌಂಡರಿ ಹೊರಗಡೆ ಗಟ್ಟಿಯಾದ ವಸ್ತುಗಳಿಗೆ ತಗುಲಿದ ಬಳಿಕ ಅದು ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಚೆಂಡು 80 ಓವರ್‌ಗಳವರೆಗೂ ಇರುವುದು ಪವಾಡ," ಎಂದು ಅವರು ಹೇಳಿದ್ದಾರೆ.

ಶುಭಮನ್‌ ಗಿಲ್‌ಗೆ ಜಜೋಡಿಯಾ ಪ್ರತಿಕ್ರಿಯೆ

"ಭಾರತ ತಂಡ ಕೊನೆಯ ಪಂದ್ಯದಲ್ಲಿ ಗೆಲುವು ಪಡೆದಿದೆ ಹಾಗೂ ಇದನ್ನು ನಾನು ಗೌರವಿಸುತ್ತೇನೆ. ಪ್ರವಾಸಿ ತಂಡದ ನಾಯಕ ಅತಿ ಹೆಚ್ಚು ರನ್‌ಗಳನ್ನು ಗಳಿಸಿದ್ದಾರೆ. ಇಬ್ಬರು ಬೌಲರ್‌ಗಳು ತಲಾ ಆರು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆದರೆ, ಅನಾನುಕೂಲಕ್ಕಾಗಿ ನಾನು ಕ್ಷಮೆ ಕೇಳುತ್ತಿದೇನೆ," ಎಂದು ಅವರು ತಿಳಿಸಿದ್ದಾರೆ.