IND vs ENG: ಶುಭಮನ್ ಗಿಲ್ ನಾಯಕತ್ವದ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಜೋಸ್ ಬಟ್ಲರ್!
Jos Buttler on Shubman Gill Captaincy: ಜೂನ್ 20 (ಶುಕ್ರವಾರ) ರಂದು ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನು ಯುವ ನಾಯಕ ಶುಭಮನ್ ಗಿಲ್ ಮುನ್ನಡೆಸಲಿದ್ದಾರೆ. ಗಿಲ್ ಅವರು ಮಾಜಿ ನಾಯಕರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರ ಕ್ಯಾಪ್ಟನ್ಸಿ ಗುಣ ಹೊಂದಿದ್ದಾರೆ ಎಂದು ಇಂಗ್ಲೆಂಡ್ ಮಾಜಿ ನಾಯಕ ಜೋಸ್ ಬಟ್ಲರ್ ಗುಣಗಾನ ಮಾಡಿದ್ದಾರೆ.

ಶುಭಮನ್ ಗಿಲ್ ನಾಯಕತ್ವವನ್ನು ಶ್ಲಾಘಿಸಿದ ಜೋಸ್ ಬಟ್ಲರ್,

ನವದೆಹಲಿ: ಯುವ ಆಟಗಾರ ಶುಭಮನ್ ಗಿಲ್ (Shubman Gill) ಅವರಲ್ಲಿ ರೋಹಿತ್ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿ (Virat Kohli) ಅವರ ನಾಯಕತ್ವದ ಗುಣ ಅಡಗಿದೆ ಎಂದು ಇಂಗ್ಲೆಂಡ್ ಮಾಜಿ ನಾಯಕ ಜೋಸ್ ಬಟ್ಲರ್ (Jos Buttler) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೂನ್ 20 ರಂದು ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಬಾರಿ ಶುಭಮನ್ ಗಿಲ್ ಟೀಮ್ ಇಂಡಿಯಾದ ನಾಯಕತ್ವ ವಹಿಸಿಕೊಂಡಿದ್ದು, ತಮ್ಮ ಮೊದಲ ಪ್ರಯತ್ನದಲ್ಲೇ ಕಠಿಣ ಸವಾಲನ್ನು ಎದುರಿಸಲಿದ್ದಾರೆ.
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಶುಭಮನ್ ಗಿಲ್ ನಾಯಕತ್ದ ಗುಜರಾತ್ ಟೈಟನ್ಸ್ ತಂಡದ ಪರ ಜೋಸ್ ಬಟ್ಲರ್ ಕೂಡ ಆಡಿದ್ದರು. ಆಗ ಗಿಲ್ ಅವರೊಂದಿಗಿನ ಬಾಂಧವ್ಯ ಹಾಗೂ ನಾಯಕತ್ವವನ್ನು ಬಲು ಹತ್ತಿರದಿಂದ ನೋಡಿದ್ದನ್ನು ಇಂಗ್ಲೆಂಡ್ ಮಾಜಿ ನಾಯಕ ಜೋಸ್ ಬಟ್ಲರ್ ಅವರು ಸ್ಟುವರ್ಟ್ ಬ್ರಾಡ್ ಅವರ ಪಾಡ್ ಕಾಸ್ಟ್ನಲ್ಲಿ ಹಂಚಿಕೊಂಡಿದ್ದಾರೆ.
IND vs ENG Test: ಇಂದು ಭಾರತ ಕ್ರಿಕೆಟ್ ತಂಡ ಸೇರಿಕೊಳ್ಳಲಿರುವ ಕೋಚ್ ಗಂಭೀರ್
ಶುಭಮನ್ ಗಿಲ್ ಪರಿಪೂರ್ಣ ನಾಯಕ: ಬಟ್ಲರ್
"ಇಂಗ್ಲೆಂಡ್ ಹಾಗೂ ಭಾರತ ನಡುವಿನ ಟೆಸ್ಟ್ ಸರಣಿ ಕುರಿತು ಚರ್ಚಿಸಲು ಸಾಕಷ್ಟು ವಿಷಯಗಳಿವೆ. ಇತ್ತೀಚೆಗಷ್ಟೇ ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯಗೊಂಡಿದೆ. ಆದರೆ ಈಗ ಭಾರತ ತಂಡದ ಮುಂದಿನ ನಾಯಕ ಯಾರು ಆಗುತ್ತಾರೆ ಎಂಬುದೇ ತುಂಬಾ ಕುತೂಹಲಕಾರಿ ಸಂಗತಿ ಆಗಿದೆ. ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಶುಭಮನ್ ಗಿಲ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಗುಜರಾತ್ ಟೈಟನ್ಸ್ ತಂಡದಲ್ಲಿ ನಾನು ಅವರ ನಾಯಕತ್ವದಲ್ಲಿ ಆಡಿದ್ದೇನೆ. ಆತ ಸಾಕಷ್ಟು ಪ್ರಭಾವಿ ಹಾಗೂ ಪರಿಪೂರ್ಣ ಆಟಗಾರರಾಗಿದ್ದಾರೆ," ಈ ಎಂದು ಇಂಗ್ಲೆಂಡ್ ಮಾಜಿ ನಾಯಕ ಹೇಳಿದ್ದಾರೆ.
ರೋಹಿತ್, ವಿರಾಟ್ ರವರ ಉತ್ತರಾಧಿಕಾರಿ
ಟೀಮ್ ಇಂಡಿಯಾದ ಯುವ ನಾಯಕ ಶುಭಮನ್ ಗಿಲ್ ಅವರಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರ ನಾಯಕತ್ವದ ಗುಣಗಳು ಅಡಗಿವೆ ಎಂದು ಬಟ್ಲರ್ ತಿಳಿಸಿದ್ದಾರೆ.
"ಅವರು (ಶುಭಮನ್ ಗಿಲ್) ತಾಳ್ಮೆ ಹಾಗೂ ಮಿತಭಾಷಿ ವ್ಯಕ್ತಿ ಆಗಿದ್ದಾರೆ. ಆದರೆ ಮೈದಾನದಲ್ಲಿ ತಮ್ಮ ತಾಳ್ಮೆಯ ಜೊತೆಗೆ ಆಕ್ರಮಣಕಾರಿ ಪ್ರದರ್ಶನ ತೋರುತ್ತಾರೆ. ಶುಭಮನ್ ಗಿಲ್ ಅವರು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರ ಉತ್ತರಾಧಿಕಾರಿ ನಾಯಕ ಎಂಬುದು ನನ್ನ ಅನಿಸಿಕೆ. ವಿರಾಟ್ ಕೊಹ್ಲಿ ಮೈದಾನದಲ್ಲಿ ಆಕ್ರಮಣಕಾರಿ ಹಾಗೂ ಮುಖಾಮುಖಿ ಸ್ಪರ್ಧಾತ್ಮಕ ಗುಣ ತೋರಿದರೆ, ರೋಹಿತ್ ಶರ್ಮಾ ಹೆಚ್ಚು ನಿರಾಳ, ಶಾಂತತೆ ಹಾಗೂ ಸಂಯಮ ಪ್ರದರ್ಶಿಸುತ್ತಾರೆ. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರ ನಾಯಕತ್ವದಡಿ ಆಡಿರುವ ಶುಭಮನ್ ಗಿಲ್, ಈ ಇಬ್ಬರು ದಿಗ್ಗಜರ ಗುಣದೊಂದಿಗೆ ತಮ್ಮ ಸ್ವಂತ ಸ್ವಭಾವವನ್ನು ಹೊಂದಿದ್ದಾರೆ," ಎಂದು ಜೋಸ್ ಬಟ್ಲರ್ ಹೇಳಿದ್ದಾರೆ.
2000 ರನ್ ಹೊಸ್ತಿಲಲ್ಲಿ ಗಿಲ್
ಶುಭಮನ್ ಗಿಲ್ ಅವರು ಈಗಾಗಲೇ ಜಿಂಬಾಬ್ವೆ ವಿರುದ್ಧದ ಟಿ20ಐ ಸರಣಿಯಲ್ಲಿ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಆದರೆ ಟೆಸ್ಟ್ ಕ್ರಿಕೆಟ್ನಲ್ಲಿ ತಂಡದ ಸಾರಥ್ಯ ವಹಿಸಿದ ಅನುಭವವಿಲ್ಲ. ಗಿಲ್ ಇದುವರೆಗೂ ಆಡಿರುವ 32 ಟೆಸ್ಟ್ ಪಂದ್ಯಗಳಿಂದ 35.05ರ ಸರಾಸರಿ ಯಲ್ಲಿ 5 ಶತಕ ಹಾಗೂ 7 ಅರ್ಧಶತಕ ಸಹಿತ 1893 ರನ್ ಬಾರಿಸಿದ್ದು, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 2000 ರನ್ ಗಡಿ ದಾಟುವ ಸನಿಹದಲ್ಲಿದ್ದಾರೆ.
ವಿದೇಶಿ ಪಿಚ್ಗಳಲ್ಲಿ ಶುಭಮನ್ ಗಿಲ್ ಉತ್ತಮ ದಾಖಲೆ ಹೊಂದಿಲ್ಲ. ಇಂಗ್ಲೆಂಡ್ನಲ್ಲಿ ಇದುವರೆಗೂ ಆಡಿರುವ ಮೂರು ಪಂದ್ಯಗಳಿಂದ ಗಿಲ್ ಕೇವಲ 88 ರನ್ ಬಾರಿಸಿದ್ದು, 28 ರನ್ ಇವರ ಗರಿಷ್ಠ ಮೊತ್ತವಾಗಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶುಭಮನ್ ಗಿಲ್ ಆಟಗಾರನಾಗಿ ಅಲ್ಲದೆ ನಾಯಕನಾಗಿಯೂ ದೊಡ್ಡ ಸವಾಲು ಎದುರಿಸಲಿದ್ದಾರೆ.