ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ʻಶುಭಮನ್‌ ಗಿಲ್‌ ರನ್‌ಔಟ್‌ ಓವಲ್‌ ಟೆಸ್ಟ್‌ ಪಂದ್ಯಕ್ಕೆ ಟರ್ನಿಂಗ್‌ ಪಾಯಿಂಟ್‌ʼ,-ಆಕಾಶ್‌ ಚೋಪ್ರಾ!

ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವಣ ಐದನೇ ಟೆಸ್ಟ್‌ ಪಂದ್ಯ ಕೆನಿಂಗ್ಟನ್‌ ಓವಲ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದ ಮೊದಲನೇ ದಿನ ಭಾರತ ತಂಡ 6 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ನಾಯಕ ಶುಭಮನ್‌ ಗಿಲ್‌ ಅವರು ಅನಗತ್ಯವಾಗಿ ಒಂದು ರನ್ ಪಡೆಯಲು ಯತ್ನಿಸಿ ರನ್‌ಔಟ್‌ ಆದರು. ಈ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಆಕಾಶ್‌ ಚೋಪ್ರಾ ಪ್ರತಿಕ್ರಿಯಿಸಿದ್ದಾರೆ.

ಗಿಲ್‌ ರನ್‌ಔಟ್‌ ಓವಲ್‌ ಟೆಸ್ಟ್‌ಗೆ ಟರ್ನಿಂಗ್‌ ಪಾಯಿಂಟ್‌: ಆಕಾಶ್‌ ಚೋಪ್ರಾ

ಶುಭಮನ್‌ ಗಿಲ್‌ ರನ್‌ಔಟ್‌ ಬಗ್ಗೆ ಆಕಾಶ್‌ ಚೋಪ್ರಾ ಪ್ರತಿಕ್ರಿಯೆ.

Profile Ramesh Kote Aug 1, 2025 4:36 PM

ಲಂಡನ್‌: ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಇಲ್ಲಿನ ಕೆನಿಂಗ್ಟನ್‌ ಓವಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್‌ ಪಂದ್ಯದಲ್ಲಿ (IND vs ENG) ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಭಾರತ ತಂಡ ಮೊದಲನೇ ದಿನವೇ ಆರು ವಿಕೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ ಆರಂಭಿಕ ಆಘಾತವನ್ನು ಅನುಭವಿಸಿತ್ತು. ಈ ಸರಣಿಯಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿರುವ ಭಾರತ ತಂಡದ ನಾಯಕ ಶುಭಮನ್‌ ಗಿಲ್‌ (Shubman Gill) ಅವರು ಕೂಡ ವಿಕೆಟ್‌ ಒಪ್ಪಿಸಿದ್ದಾರೆ. ಅವರು ಅನಗತ್ಯವಾಗಿ ಒಂದು ರನ್‌ ಪಡೆಯಲು ಪ್ರಯತ್ನಿಸಿ ರನ್‌ಔಟ್‌ ಆಗಿದ್ದರು. ಈ ಬಗ್ಗೆ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಆಕಾಶ್‌ ಚೋಪ್ರಾ (Aakash Chopra) ಪ್ರತಿಕ್ರಿಯಿಸಿದ್ದಾರೆ. ಗಿಲ್‌ ರನ್‌ಔಟ್‌ ಆಗಿದ್ದು, ಈ ಪಂದ್ಯಕ್ಕೆ ಟರ್ನಿಂಗ್‌ ಪಾಯಿಂಟ್‌ ಎಂದು ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಪಂದ್ಯದ ಮೊದಲನೇ ದಿನ ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಕ್ಕಿರಲಿಲ್ಲ. ಯಶಸ್ವಿ ಜೈಸ್ವಾಲ್‌ ಹಾಗೂ ಕೆಎಲ್‌ ರಾಹುಲ್‌ ಬಹುಬೇಗ ವಿಕೆಟ್‌ ಒಪ್ಪಿಸಿದ್ದರು. ಒಂದು ಹಂತದಲ್ಲಿ ಸಾಯಿ ಸುದರ್ಶನ್‌ ಹಾಗೂ ಶುಭಮನ್‌ ಗಿಲ್‌ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರುತ್ತಿದ್ದರು. ಆದರೆ, 28ನೇ ಓವರ್‌ನಲ್ಲಿ ಡಿಫೆನ್ಸ್‌ ಮಾಡಿದ ಗಿಲ್‌, ವೇಗವಾಗಿ ಒಂದು ರನ್‌ ಪಡೆಯಲು ಸಾಯಿ ಸುದರ್ಶನ್‌ಗೆ ಕರೆ ನೀಡಿದ್ದರು. ನಂತರ ಸಾಯಿ ಸುದರ್ಶನ್‌ ಸಿಂಗಲ್‌ ಪಡೆಯುವುದನ್ನು ನಿರಾಕರಿಸಿದ್ದರು. ಆ ಮೂಲಕ ಶುಭಮನ್‌ ಗಿಲ್‌ ರನ್‌ಔಟ್‌ ಆಗಿದ್ದರು.‌ ತಮ್ಮ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿರುವ ವಿಡಿಯೊದಲ್ಲಿ ಆಕಾಶ್‌ ಚೋಪ್ರಾ ಪ್ರತಿಕ್ರಿಯೆ ನೀಡಿದ್ದಾರೆ.

IND vs ENG 5th Test: ಪಂದ್ಯ ಆರಂಭಗೊಂಡ ಅರ್ಧ ಗಂಟೆಯಲ್ಲೇ ಭಾರತ ಆಲೌಟ್‌

"ಶುಭಮನ್‌ ಗಿಲ್‌ ರನ್‌ಔಟ್‌ ತುಂಬಾ ನಿರ್ಣಾಯಕವಾಗಿತ್ತು. ಇದು ಅವರೇ ಮಾಡಿಕೊಂಡ ತಪ್ಪು. ಅವರು ಚೆಂಡನ್ನು ಡಿಫೆನ್ಸ್‌ ಮಾಡಿದ ಬಳಿಕ ತ್ವರಿತವಾಗಿ ರನ್‌ಗೆ ಓಡಿದರು. ಇದು ಬಹುತೇಕ ಆತ್ಮಹತ್ಯೆಯಂತಿತ್ತು. ಇಂಥಾ ಪರಿಸ್ಥಿತಿಯಲ್ಲಿ ತಪ್ಪಾಗಿ ನಿರ್ಣಯಿಸಿದ ಆಟಗಾರನೇ ಹೊರಬರಬೇಕು. ಅದೃಷ್ಟವಶಾತ್, ಇಲ್ಲಿಯೂ ಅದೇ ಸಂಭವಿಸಿದೆ," ಎಂದು ಹೇಳಿದ್ದಾರೆ.

ತ್ವರಿತವಾಗಿ ಸಿಂಗಲ್‌ ಪಡೆಯುವ ಶುಭಮನ್‌ ಗಿಲ್‌ ಅವರ ನಿರ್ಧಾರದ ಬಗ್ಗೆ ಆಕಾಶ್‌ ಚೋಪ್ರಾ ಕಳವಳ ವ್ಯಕ್ತಪಡಿಸಿದ್ದಾರೆ. ಏಕೆಂದರೆ, ಪಂದ್ಯದ ಮೊದಲನೇ ದಿನದ ಆರಂಭದಲ್ಲಿ ಪಿಚ್‌ ಅತ್ಯಂತ ಕಠಿಣವಾಗಿತ್ತು. ಈ ಸಂದರ್ಭದಲ್ಲಿ ಗಿಲ್‌ ಅಪಾಯಕಾರಿ ರನ್‌ ಪಡೆಯುವ ಅಗತ್ಯವಿರಲಿಲ್ಲ ಎಂದು ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ಶುಭಮನ್‌ ಗಿಲ್‌ ಅವರ ಸಿಂಗಲ್‌ ಕರೆಗೆ ಸಾಯಿ ಸುದರ್ಶನ್‌ ಪ್ರತಿಕ್ರಿಯೆ ನೀಡಿದ್ದರೆ, ಅವರೇ ರನ್‌ಔಟ್‌ ಆಗುತ್ತಿದ್ದರು, ಇದರಲ್ಲಿ ಯಾವುದೇ ಅನುಮಾನವಿಲ್ಲ. ಇದರಲ್ಲಿ ಶುಭಮನ್‌ ಗಿಲ್‌ ಅವರೇ ರನ್‌ಔಟ್‌ ಆಗಿದ್ದಾರೆ. ಏಕೆಂದರೆ ತಪ್ಪು ಮಾಡಿದ್ದು ಇವರೇ ಹಾಗಾಗಿ ಯಾವುದೇ ತಪ್ಪಿಲ್ಲ," ಎಂದು ಆಕಾಶ್‌ ಚೋಪ್ರಾ ತಿಳಿಸಿದ್ದಾರೆ.

IND vs ENG 5th Test: ಓವಲ್‌ ಟೆಸ್ಟ್‌ನಿಂದ ಹೊರಬಿದ್ದ ಕ್ರಿಸ್‌ ವೋಕ್ಸ್‌

ಶುಭಮನ್‌ ಗಿಲ್‌ ಅವರು ಕೇವಲ 21 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರೂ ನಾಯಕನಾಗಿ ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಅವರ ದಾಖಲೆಯನ್ನು ಮುರಿದಿದ್ದಾರೆ. ಏಕೈಕ ಟೆಸ್ಟ್‌ ಸರಣಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಭಾರತೀಯ ನಾಯಕ ಎಂಬ ದಾಖಲೆಯನ್ನು ಶುಭಮನ್‌ ಗಿಲ್‌ ಬರೆದಿದ್ದಾರೆ. ಸುನೀಲ್‌ ಗವಾಸ್ಕರ್‌ ನಾಯಕನಾಗಿ 732 ರನ್‌ಗಳನ್ನು ಗಳಿಸಿದ್ದರೆ, ಗಿಲ್‌ ಇದೀಗ ನಾಯಕನಾಗಿ743 ರನ್‌ಗಳನ್ನು ಕಲೆ ಹಾಕಿದ್ದಾರೆ.

"ನಿಮ್ಮ ನಾಯಕ ಔಟ್‌ ಆಗುವುದು ನಿಮಗೇ ಬೇಕಾಗಿಲ್ಲ, ಏಕೆಂದರೆ ಅವರು ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಆದರೆ, ಅವರು ತಮ್ಮ ವಿಕೆಟ್‌ ಅನ್ನು ಅವರೇ ಕೈ ಚೆಲ್ಲಿದ್ದಾರೆ. ಪಂದ್ಯದಲ್ಲಿನ ಸಂಗತಿಗಳು ನಿಮ್ಮ ಹಾದಿಯಲ್ಲಿ ನಡೆದಿಲ್ಲವಾದರೆ, ಎಲ್ಲರಿಗೂ ಬೇಸರವಾಗುತ್ತದೆ,"ಎಂದು ಆಕಾಶ್‌ ಚೋಪ್ರಾ ತಿಳಿಸಿದ್ದಾರೆ.