ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs NZ: ಇಶಾನ್‌ ಕಿಶನ್‌ ಸ್ಪೋಟಕ ಶತಕ, ಕಿವೀಸ್‌ ಎದುರು ಐದನೇ ಪಂದ್ಯದಲ್ಲಿಯೂ ಭಾರತಕ್ಕೆ ಭರ್ಜರಿ ಜಯ!

IND vs NZ 5th T20I match Highlights: ಇಶಾನ್‌ ಕಿಶನ್‌ ಸ್ಪೋಟಕ ಶತಕದ ಬಲದಿಂದ ಭಾರತ ತಂಡ, ಐದನೇ ಹಾಗೂ ಟಿ20ಐ ಸರಣಿಯ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ 46 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಐದು ಪಂದ್ಯಗಳ ಟಿ20ಐ ಸರಣಿಯನ್ನು ಟೀಮ್‌ ಇಂಡಿಯಾ 4-1 ಅಂತರದಲ್ಲಿ ಮುಡಿಗೇರಿಸಿಕೊಂಡಿತು.

ನ್ಯೂಜಿಲೆಂಡ್‌ ಎದುರು ಐದನೇ ಪಂದ್ಯದಲ್ಲಿಯೂ ಭಾರತಕ್ಕೆ ಭರ್ಜರಿ ಜಯ!

ನ್ಯೂಜಿಲೆಂಡ್‌ ಎದುರು ಐದನೇ ಪಂದ್ಯವನ್ನೂ ಗೆದ್ದ ಭಾರತ. -

Profile
Ramesh Kote Jan 31, 2026 10:31 PM

ತಿರುವನಂತಪುರಂ: ಇಶಾನ್‌ ಕಿಶನ್‌ (Ishan Kishan) ಸ್ಪೋಟಕ ಶತಕ ಹಾಗೂ ಅರ್ಷದೀಪ್‌ ಸಿಂಗ್‌ (Arshdeep Singh) ಅವರ ಮಾರಕ ಬೌಲಿಂಗ್‌ ದಾಳಿಯ ಸಹಾಯದಿಂದ ಭಾರತ ತಂಡ, ಐದನೇ ಹಾಗೂ ಟಿ20ಐ ಸರಣಿಯ (IND vs NZ) ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ 46 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಐದು ಪಂದ್ಯಗಳ ಟಿ20ಐ ಸರಣಿಯನ್ನು ಟೀಮ್‌ ಇಂಡಿಯಾ 4-1 ಅಂತರದಲ್ಲಿ ಮುಡಿಗೇರಿಸಿಕೊಂಡಿತು. ಇದರೊಂದಿಗೆ ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಭಾರತ ತಂಡ, 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.

ಶನಿವಾರ ಇಲ್ಲಿನ ಗ್ರೀನ್‌ಫೀಲ್ಡ್‌ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಭಾರತ ತಂಡ ನೀಡಿದ್ದ 272 ರನ್‌ಗಳ ಬೃಹತ್‌ ಗುರಿಯನ್ನು ಹಿಂಬಾಲಿಸಿದ ನ್ಯೂಜಿಲೆಂಡ್‌ ತಂಡ, ಫಿನ್‌ ಆಲೆನ್‌ ಸ್ಪೋಟಕ ಅರ್ಧಶತಕದ ಹೊರತಾಗಿಯೂ ಇನ್ನುಳಿದ ಬ್ಯಾಟರ್‌ಗಳ ವೈಫಲ್ಯದಿಂದ ಸೋಲು ಅನುಭವಿಸಿತು. ಕಿವೀಸ್‌ 19.4 ಓವರ್‌ಗಳಿಗೆ 225 ರನ್‌ಗಳಿಗೆ ಆಲ್‌ಔಟ್‌ ಆಯಿತು. ಈ ಸೋಲಿನ ಮೂಲಕ ಭಾರತ ತಂಡದ ವೈಟ್‌ಬಾಲ್‌ ಸರಣಿಗಳನ್ನು ಮುಗಿಸಿತು.

IND vz NZ: ಸ್ಪೋಟಕ ಅರ್ಧಶತಕದ ಮೂಲಕ ವಿಶೇಷ ದಾಖಲೆ ಬರೆದ ಸೂರ್ಯಕುಮಾರ್‌ ಯಾದವ್‌!

ನ್ಯೂಜಿಲೆಂಡ್‌ ಪರ ಇನಿಂಗ್ಸ್‌ ಆರಂಭಿಸಿದ ಫಿನ್‌ ಆಲೆನ್‌ ಹಾಗೂ ಟಿಮ್‌ ಸೀಫರ್ಟ್‌ ಜೋಡಿ ಹೆಚ್ಚುಹೊತ್ತು ಜೊತೆಯಾಗಿ ಆಡಲಿಲ್ಲ. ಕಳೆದ ಪಂದ್ಯದಲ್ಲಿ ಮಿಂಚಿದ್ದ ಸೀಫರ್ಟ್‌ ಈ ಪಂದ್ಯದಲ್ಲಿ ಕೇವಲ 5 ರನ್‌ ಗಳಿಸಿ ಅರ್ಷದೀಪ್‌ಗೆ ಔಟ್‌ ಆದರು. ನಂತರ ಎರಡನೇ ವಿಕೆಟ್‌ಗೆ ಜೊತೆಯಾದ ಆಲೆನ್‌ ಹಾಗೂ ರಚಿನ್‌ ರವೀಂದ್ರ ಕೆಲಕಾಲ ಕ್ರೀಸ್‌ನಲ್ಲಿ ಸಮಯ ಕಳೆದು 100 ರನ್‌ಗಳ ಜೊತೆಯಾಟವನ್ನು ಆಡಿದರು. 17 ಎಸೆತಗಳಲ್ಲಿ 30 ರನ್‌ ಗಳಿಸಿದ ಬಳಿಕ ರಚಿನ್‌ ಔಟ್‌ ಆದರು.



ಫಿನ್‌ ಆಲೆನ್‌ ಸ್ಪೋಟಕ ಅರ್ಧಶತಕ

ಒಂದು ತುದಿಯಲ್ಲಿ ವಿಕೆಟ್‌ಗಳು ನಿರಂತರವಾಗಿ ಉರುಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ದೀರ್ಘಾವಧಿ ಸ್ಪೋಟಕ ಬ್ಯಾಟ್‌ ಮಾಡಿದ ಫಿನ್‌ ಆಲೆನ್‌, 38 ಎಸೆತಗಳಲ್ಲಿ 6 ಸಿಕ್ಸರ್‌ ಹಾಗೂ 8 ಬೌಂಡರಿಗಳೊಂದಿಗೆ 80 ರನ್‌ ಗಳಿಸಿ ಕಿವೀಸ್‌ಗೆ ಸ್ಪೋಟಕ ಆರಂಭ ತಂದುಕೊಟ್ಟಿದ್ದರು. ಆದರೆ, ಅವರನ್ನು ಅಕ್ಷರ್‌ ಪಟೇಲ್‌ ಔಟ್‌ ಮಾಡಿದರು. ಇವರು ವಿಕೆಟ್‌ ಒಪ್ಪಿಸಿದ ಬಳಿಕ ಡ್ಯಾರಿಲ್‌ ಮಿಚೆಲ್‌ (26) ಹಾಗೂ ಇಶ್‌ ಸೋಧಿ (33) ಅಲ್ಪ ಪ್ರತಿರೋಧ ತೋರಿದ್ದು, ಬಿಟ್ಟರೆ ಇನ್ನುಳಿದವರು ವಿಫಲರಾದರು. ಭಾರತ ತಂಡದ ಪರ ಅರ್ಷದೀಪ್‌ ಸಿಂಗ್‌ 5 ವಿಕೆಟ್‌ ಸಾಧನೆ ಮಾಡಿದರೆ, ಅಕ್ಷರ್‌ ಪಟೇಲ್‌ ಮೂರು ವಿಕೆಟ್‌ ಕಿತ್ತರು.



ಇಶಾನ್‌ ಕಿಶನ್‌ ಚೊಚ್ಚಲ ಶತಕ

ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದ ಭಾರತ ತಂಡ, ಸಂಜು ಸ್ಯಾಮ್ಸನ್‌ ಅವರನ್ನು ಬಹುಬೇಗ ಕಳೆದುಕೊಂಡಿತು. 30 ರನ್‌ ಗಳಿಸಿದ ಬಳಿಕ ಅಪಾಯಕಾರಿ ಅಭಿಷೇಕ್‌ ಶರ್ಮಾ ಕೂಡ ಔಟ್‌ ಆದರು. ಆದರೆ, ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಇಶಾನ್‌ ಕಿಶನ್‌, ಸಂಪೂರ್ಣ ವಿಭಿನ್ನವಾಗಿ ಕಂಡರು. ಸ್ಪೋಟಕ ಬ್ಯಾಟ್‌ ಮಾಡಿದ ಇವರು. ಕೇವಲ 42 ಎಸೆತಗಳಲ್ಲಿ ಚೊಚ್ಚಲ ಶತಕವನ್ನು ಸಿಡಿಸಿದರು ಹಾಗೂ ಮೂರನೇ ವಿಕೆಟ್‌ಗೆ ಸೂರ್ಯಕುಮಾರ್‌ ಯಾದವ್‌ ಜೊತೆ 137 ರನ್‌ಗಳನ್ನು ಆಡಿದರು. ಅಂತಿಮವಾಗಿ ಇಶಾನ್‌, 43 ಎಸೆತಗಳಲ್ಲಿ 10 ಭರ್ಜರಿ ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ 103 ರನ್‌ ಗಳಿಸಿ ಔಟ್‌ ಆದರು.



ಸೂರ್ಯಕುಮಾರ್‌ ಯಾದವ್‌ ಅರ್ಧಶತಕ

ಇಶಾನ್‌ ಜೊತೆ ದೀರ್ಘಾವಧಿ ಬ್ಯಾಟ್‌ ಮಾಡಿದ್ದ ಸೂರ್ಯಕುಮಾರ್‌ ಯಾದವ್‌ ಕೂಡ ಅಬ್ಬರಿಸಿದರು. ಇವರು ಆಡಿದ 30 ಎಸೆತಗಳಲ್ಲಿ 6 ಸಿಕ್ಸರ್‌ ಹಾಗೂ 4 ಬೌಂಡರಿಯೊಂದಿಗೆ 63 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಟಿ20ಐ ಕ್ರಿಕೆಟ್‌ನಲ್ಲಿ ವೇಗವಾಗಿ 3000 ರನ್‌ಗಳನ್ನು ಪೂರ್ಣಗೊಳಿಸಿದರು. ಇನ್ನು ಹಾರ್ದಿಕ್‌ ಪಾಂಡ್ಯ ಕೇವಲ 17 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ ಒಂದು ಬೌಂಡರಿಯೊಂದಿಗೆ 42 ರನ್‌ ಗಳಿಸಿದರು. ಅಂತಿಮವಾಗಿ ಭಾರತ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ271 ರನ್‌ಗಳನ್ನು ಕಲೆ ಹಾಕಿತು. ಕಿವೀಸ್‌ ಪರ ಲಾಕಿ ಫರ್ಗ್ಯೂಸನ್‌ ಎರಡು ವಿಕೆಟ್‌ ಕಿತ್ತರು.

ಪಂದ್ಯ ಶ್ರೇಷ್ಠ ಪ್ರಶಸ್ತಿ: ಇಶಾನ್‌ ಕಿಶನ್‌

ಸರಣಿ ಶ್ರೇಷ್ಠ ಪ್ರಶಸ್ತಿ: ಸೂರ್ಯಕುಮಾರ್‌ ಯಾದವ್‌