ʻಒಬ್ಬ ಹಿತೈಷಿ ಎಂದು ತಿಳಿದುಕೊಳ್ಳಿʼ: ಜಸ್‌ಪ್ರೀತ್ ಬುಮ್ರಾಗೆ ಸ್ಪಷ್ಟತೆ ನೀಡಿದ ಮೊಹಮ್ಮದ್ ಕೈಫ್!
ಜಸ್‌ಪ್ರೀತ್ ಬುಮ್ರಾ ಅವರನ್ನು ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಬಳಸಿಕೊಳ್ಳುತ್ತಿರುವ ಬಗ್ಗೆ ಮೊಹಮ್ಮದ್ ಕೈಫ್ ಪ್ರಶ್ನೆ ಮಾಡಿದ್ದರು. ಬಳಿಕ ಜಸ್‌ಪ್ರೀತ್ ಬುಮ್ರಾ ಇದು ತಪ್ಪು ಎಂದು ಹೇಳಿದ್ದರು. ಇದೀಗ ತಮ್ಮ ಪೋಸ್ಟ್ ಬಗ್ಗೆ ಮೊಹಮ್ಮದ್ ಕೈಫ್ ಸ್ಪಷ್ಟನೆ ನೀಡಿದ್ದಾರೆ.

ಜಸ್‌ಪ್ರೀತ್ ಬುಮ್ರಾಗೆ ತಮ್ಮ ಪೋಸ್ಟ್ ಬಗ್ಗೆ ಸ್ಪಷ್ಟನೆ ನೀಡಿದ ಮೊಹಮ್ಮದ್ ಕೈಫ್. -

ನವದೆಹಲಿ: ಭಾರತ (India) ಕ್ರಿಕೆಟ್ ತಂಡದ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ (Jasprit Bumrah) ಅವರ ನಿರ್ವಹಣೆ ಹಾಗೂ ಫಿಟ್‌ನೆಸ್ ಬಗ್ಗೆ ತಾವು ಹಾಕಿದ್ದ ಪೋಸ್ಟ್ ಬಗ್ಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ (Mohammad Kaif) ಸ್ಪಷ್ಟನೆ ನೀಡಿದ್ದಾರೆ. ನಿಮ್ಮ ಬಗ್ಗೆ ನಾನು ನೀಡಿದ ಹೇಳಿಕೆಯನ್ನು ಒಬ್ಬ ಹಿತೈಷಿ ರೂಪದಲ್ಲಿ ತೆಗೆದುಕೊಳ್ಳಿ ಹಾಗೂ ನೀವು ಭಾರತ ತಂಡದ ಪರ ದೊಡ್ಡ ಮ್ಯಾಚ್ ವಿನ್ನರ್ ಹಾಗೂ ನೀವು ಪಂದ್ಯವನ್ನು ಆಡಿದರೆ ಏನು ಮಾಡಬಹುದೆಂದು ನಮಗೆ ತಿಳಿದಿದೆ ಎಂದು ಕೈಫ್ ತಿಳಿಸಿದ್ದಾರೆ.
ಪ್ರಸ್ತುತ ನಡಯುತ್ತಿರುವ 2025ರ ಏಷ್ಯಾ ಕಪ್ ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್ ಅವರ ನಾಯಕತ್ವದಲ್ಲಿ ಜಸ್‌ಪ್ರೀತ್ ಬುಮ್ರಾ ಅವರು ಡೆತ್ ಓವರ್‌ಗಳಲ್ಲಿ ಬೌಲ್ ಮಾಡುವುದನ್ನು ನಿರಾಕರಿಸುತ್ತಿದ್ದಾರೆ. ಇತ್ತೀಚೆಗೆ ಫಿಟ್‌ನೆಸ್ ಸಮಸ್ಯೆಯನ್ನು ಅನುಭವಿಸಿದ್ದ ಬುಮ್ರಾ ಗಾಯದಿಂದ ತಪ್ಪಿಸಿಕೊಳ್ಳಲು ಪವರ್‌ಪ್ಲೇನಲ್ಲಿಯೇ ಮೂರು ಓವರ್‌ಗಳನ್ನು ಮುಗಿಸುತ್ತಿದ್ದಾರೆ. ಇದರಿಂದ ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ಕೋಚ್ ಗೌತಮ್ ಗಂಭೀರ್‌ಗೆ ದೀರ್ಘಾವಧಿಯಲ್ಲಿ ಹೊಡೆತ ಬೀಳಲಿದೆ ಎಂದು ಮೊಹಮ್ಮದ್ ಕೈಫ್ ತಮ್ಮ ಪೋಸ್ಟ್‌ನಲ್ಲಿ ಸೂಚನೆ ನೀಡಿದ್ದಾರೆ.
Asia Cup 2025: ʻನಿಮ್ಮ ಮಾತು ತಪ್ಪುʼ-ಮೊಹಮ್ಮದ್ ಕೈಫ್‌ಗೆ ಜಸ್‌ಪ್ರೀತ್ ತಿರುಗೇಟು!
"ರೋಹಿತ್ ಶರ್ಮಾ ನಾಯಕತ್ವದ ಅಡಿಯಲ್ಲಿ ಜಸ್‌ಪ್ರೀತ್ ಬುಮ್ರಾ 1, 13, 17 ಮತ್ತು 19 ಓವರ್‌ಗಳನ್ನು ಬೌಲ್ ಮಾಡುತ್ತಿದ್ದರು. ಆದರೆ, ಸೂರ್ಯಕುಮಾರ್ ಯಾದವ್ ಅವರ ನಾಯಕತ್ವದಲ್ಲಿ ಬುಮ್ರಾ ತಮ್ಮ ಮೂರು ಓವರ್‌ಗಳ ಸ್ಪೆಲ್ ಅನ್ನು ಆರಂಭದಲ್ಲಿಯೇ ಮುಗಿಸುತ್ತಿದ್ದಾರೆ. ಗಾಯದಿಂದ ಪಾರಾಗಲು ಬುಮ್ರಾ ದೇಹ ವಾರ್ಮ್‌ಅಫ್ ಆಗಿರುವ ಸಂದರ್ಭದಲ್ಲಿಯೇ ತಮ್ಮ ಓವರ್‌ಗಳನ್ನು ಮುಗಿಸುತ್ತಿದ್ದಾರೆ. ಆ ಮೂಲಕ 14 ಓವರ್‌ಗಳ ಕಾಲ ಬ್ಯಾಟ್ಸ್‌ಮನ್‌ಗಳು ಆರಾಮಾದಾಯಕವಾಗಿದ್ದಾರೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ತಂಡಗಳ ಎದುರು ಭಾರತಕ್ಕೆ ಇದು ಹೊಡೆತ ಬೀಳಲಿದೆ," ಎಂದು ಮೊಹಮ್ಮದ್ ಕೈಫ್ ಟ್ವೀಟ್ ಮಾಡಿದ್ದರು.
Bumrah under Rohit would generally bowl overs 1, 13, 17, 19. Under Surya, in Asia cup, he bowled a three-overs spell at the start. To avoid injury, Bumrah these days, prefers to bowl while his body is warmed up. 1 over of Bumrah in the remaining 14 overs is a huge relief for…
— Mohammad Kaif (@MohammadKaif) September 25, 2025
ಮೊಹಮ್ಮದ್ ಕೈಫ್ ಅವರ ಟ್ವೀಟ್‌ಗೆ ಜಸ್‌ಪ್ರೀತ್ ಬುಮ್ರಾ ಪ್ರತಿಕ್ರಿಯೆ ನೀಡಿದ್ದಾರೆ. "ತಪ್ಪಾಗುವ ಮೊದಲೇ ತಪ್ಪಾಗಿದೆ," ಎಂದು ಹೇಳುವ ಮೂಲಕ ಬುಮ್ರಾ ಮಾಜಿ ಕ್ರಿಕೆಟಿಗನಿಗೆ ತಿರುಗೇಟು ನೀಡಿದ್ದರು. ಇದನ್ನು ಗಮನಿಸಿದ ಮೊಹಮ್ಮದ್ ಕೈಫ್, ತಮ್ಮ ಪೋಸ್ಟ್‌ನ ವಾಸ್ತವ ಏನೆಂದು ಬಹಿರಂಗಪಡಿಸಿದ್ದಾರೆ.
Please take this as a cricketing observation from a well-wisher and an admirer. You are Indian cricket's biggest match-winner and I know what it takes to give it all when on field wearing India colours. https://t.co/FqJh7NgRb9
— Mohammad Kaif (@MohammadKaif) September 26, 2025
ಜಸ್‌ಪ್ರೀತ್ ಬುಮ್ರಾ ಮ್ಯಾಚ್ ವಿನ್ನರ್: ಕೈಫ್
"ದಯವಿಟ್ಟು ಇದನ್ನು ಒಬ್ಬ ಹಿತೈಷಿ ಮತ್ತು ಅಭಿಮಾನಿಯ ಕ್ರಿಕೆಟ್ ವೀಕ್ಷಣೆ ಎಂದು ತೆಗೆದುಕೊಳ್ಳಿ. ನೀವು ಭಾರತೀಯ ಕ್ರಿಕೆಟ್‌ನ ಅತಿದೊಡ್ಡ ಮ್ಯಾಚ್ ವಿನ್ನರ್ ಮತ್ತು ಭಾರತದ ಜೆರ್ಸಿ ಧರಿಸಿ ಮೈದಾನದಲ್ಲಿ ಏನು ಮಾಡಬೇಕೆಂದು ನಿಮಗೆ ತಿಳಿದಿದೆ," ಎಂದು ಮೊಹಮ್ಮದ್ ಕೈಫ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.
ಜಸ್‌ಪ್ರೀತ್ ಬುಮ್ರಾ ಪ್ರಸ್ತುತ ನಡೆಯುತ್ತಿರುವ 2025ರ ಏಷ್ಯಾ ಕಪ್ ಟೂರ್ನಿಯಲ್ಲಿ ಆಡಿದ ನಾಲ್ಕು ಪಂದ್ಯಗಳಿಂದ 5 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಹಾಗಾಗಿ ಶುಕ್ರವಾರ ಶ್ರೀಲಂಕಾ ವಿರುದ್ದದ ಪಂದ್ಯದಲ್ಲಿ ಜಸ್‌ಪ್ರೀತ್ ಬುಮ್ರಾ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ.