IND vs PAK: ಏಷ್ಯಾ ಕಪ್ ಫೈನಲ್‌ನಲ್ಲಿ ಅರ್ಷದೀಪ್ ಸಿಂಗ್ ಆಡಬೇಕೆಂದ ಇರ್ಫಾನ್ ಪಠಾಣ್!
IND vs PAK: ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಣ 2025ರ ಏಷ್ಯಾ ಕಪ್ ಟೂರ್ನಿಯ ಫೈನಲ್‌ನಲ್ಲಿ ಆಡಲು ಭಾರತ ತಂಡದ ಯುವ ವೇಗಿ ಅರ್ಷದೀಪ್ ಸಿಂಗ್ ಅರ್ಹರು ಎಂದು ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಹೇಳಿದ್ದಾರೆ. ಶ್ರೀಲಂಕಾ ವಿರುದ್ಧದ ಸೂಪರ್-4ರ ಪಂದ್ಯದ ಸೂಪರ್ ಓವರ್‌ನಲ್ಲಿ ಅರ್ಷದೀಪ್ ಸಿಂಗ್ ಪರಿಣಾಮಕಾರಿಯಾಗಿ ಬೌಲ್ ಮಾಡಿದ್ದರು.

ಏಷ್ಯಾ ಕಪ್ ಫೈನಲ್‌ನಲ್ಲಿ ಅರ್ಷದೀಪ್ ಸಿಂಗ್ ಆಡಬೇಕೆಂದ ಇರ್ಫಾನ್ ಪಠಾಣ್. -

ನವದೆಹಲಿ: ಶ್ರೀಲಂಕಾ ವಿರುದ್ಧ ಸೂಪರ್-4ರ ಪಂದ್ಯದಲ್ಲಿ (IND vs SL) ಪರಿಣಾಮಕಾರಿ ಬೌಲ್ ಮಾಡಿ ಯುವ ವೇಗಿ ಅರ್ಷದೀಪ್ ಸಿಂಗ್ (Arshdeep Singh) ಅವರು ಪಾಕಿಸ್ತಾನ ವಿರುದ್ದದ 2025ರ ಏಷ್ಯಾ ಕಪ್ (Asia Cup 2025) ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡದ ಪರ ಆಡಲು ಅರ್ಹರು ಎಂದು ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ (Irfan Pathan) ತಿಳಿಸಿದ್ದಾರೆ. ಭಾನುವಾರ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ಏಷ್ಯಾ ಕಪ್ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ತಂಡಗಳು ಕಾದಾಟ ನಡೆಸಲಿವೆ. ಏಷ್ಯಾ ಕಪ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿ ಭಾರತ ಹಾಗೂ ಪಾಕ್ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿವೆ.
ಪ್ರಸ್ತುತ ನಡೆಯುತ್ತಿರುವ ಏಷ್ಯಾ ಕಪ್ ಟೂರ್ನಿಯಲ್ಲಿ ಅರ್ಷದೀಪ್ ಸಿಂಗ್ ಅವರು ನಿಯಮಿತವಾಗಿ ಆಡುತ್ತಿಲ್ಲ. ಆದರೆ, ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಜಸ್‌ಪ್ರೀತ್ ಬುಮ್ರಾ ಹಾಗೂ ಶಿವಂ ದುಬೆ ವಿಶ್ರಾಂತಿ ಪಡೆದ ಕಾರಣ ಅರ್ಷದೀಪ್ ಸಿಂಗ್ ಹಾಗೂ ಹರ್ಷಿತ್ ರಾಣಾಗೆ ಅವಕಾಶ ಲಭಿಸಿತು. ನಿಗದಿತ 20 ಓವರ್‌ಗಳಲ್ಲಿ ಅರ್ಷದೀಪ್ ಸಿಂಗ್ ದುಬಾರಿಯಾಗಿದ್ದರು. ಅವರು ಬೌಲ್ ಮಾಡಿದ್ದ ನಾಲ್ಕು ಓವರ್‌ಗಳಲ್ಲಿ ಒಂದೇ ಒಂದು ವಿಕೆಟ್ ಪಡೆಯುವ ಮೂಲಕ ಬರೋಬ್ಬರಿ 46 ರನ್‌ಗಳನ್ನು ನೀಡಿದ್ದರು. ಆದರೆ, ಸೂಪರ್ ಓವರ್‌ನಲ್ಲಿ ಅರ್ಷದೀಪ್ ಸಿಂಗ್ ಅವರು ಕೇವಲ 2 ರನ್ ನೀಡಿ ಎರಡು ವಿಕೆಟ್ ಕಿತ್ತಿದ್ದರು. ಆ ಮೂಲಕ ಭಾರತ ತಂಡದ ಗೆಲುವಿಗೆ ನೆರವು ನೀಡಿದ್ದರು.
Asia Cup 2025 final: ನಾಳೆ ಭಾರತ vs ಪಾಕ್ ಫೈನಲ್; ಉಭಯ ತಂಡಗಳ ದಾಖಲೆ ಹೇಗಿದೆ?
ಪಂದ್ಯದ ಬಳಿಕ ಮಾತನಾಡಿದ ಇರ್ಫಾನ್ ಪಠಾಣ್, "ನೋಡಿ, ಮೊದಲನೇಯದಾಗಿ ಅವರು ತುಂಬಾ ತಾಳ್ಮೆ ಹಾಗೂ ಶಾಂತ ಸ್ವರೂಪದ ಹುಡುಗ. ಒತ್ತಡದ ಸನ್ನಿವೇಶದಲ್ಲಿ ಅವರು ಬೌಲ್ ಮಾಡಲು ಬಯಸುತ್ತಾರೆ. ತಂಡಕ್ಕೆ ಅಗತ್ಯವಿದ್ದ ಸಂದರ್ಭದಲ್ಲಿ ಹಾಗೂ ಕೊನೆಯ ಓವರ್‌ನಲ್ಲಿ ಅವರು ಯಾರ್ಕರ್‌ಗಳ ಮೂಲಕ ತಂಡಕ್ಕೆ ನೆರವಾಗುತ್ತಾರೆ. ಅವರು ಯಾವಾಗಲೂ ಸಿದ್ದರಿರುತ್ತಾರೆ. ಜಸ್‌ಪ್ರೀತ್ ಬುಮ್ರಾ ಅವರಿಗೆ ಸರಿ ಸಮನಾಗಿ ಅವರು ಯಾರ್ಕರ್ ಬೌಲ್ ಮಾಡುತ್ತಾರೆ. ಆ ರೀತಿಯ ಗುಣಮಟ್ಟವನ್ನು ಅರ್ಷದೀಪ್ ಸಿಂಗ್ ಹೊಂದಿದ್ದಾರೆ," ಎಂದು ಹೇಳಿದ್ದಾರೆ.
ನನ್ನ ತಂಡದಲ್ಲಿ ಅರ್ಷದೀಪ್ ಯಾವಾಗಲೂ ಇರುತ್ತಾರೆ: ಪಠಾಣ್
ಕಂಡೀಷನ್ಸ್‌ಗೆ ಅನುಗುಣವಾಗಿ ಕೆಲವೊಮ್ಮೆ ಟೀಮ್ ಮ್ಯಾನೇಜ್‌ಮೆಂಟ್ ಹೆಚ್ಚುವರಿ ಬ್ಯಾಟಿಂಗ ಡೆಪ್ತ್‌ಗಾಗಿ ಆಲ್‌ರೌಂಡರ್ ಆಗಿ ಶಿವಂ ದುಬೆ ಅವರನ್ನು ಆಡಿಸುತ್ತದೆ. ಇದರಿಂದಾಗಿ ಅರ್ಷದೀಪ್ ಸಿಂಗ್‌ಗೆ ತಂಡದಲ್ಲಿ ಅವಕಾಶ ಸಿಗುತ್ತಿಲ್ಲ ಎಂದು ಮಾಜಿ ಆಲ್‌ರೌಂಡರ್ ವಿವರಿಸಿದ್ದಾರೆ. ಆದರೆ, ಯುವ ವೇಗಿಗೆ ತಂಡದ ಪ್ಲೇಯಿಂಗ್ XIನಲ್ಲಿ ಅವಕಾಶ ನೀಡಬೇಕೆಂದು ಪಠಾಣ್ ಒತ್ತಾಯಿಸಿದ್ದಾರೆ.
Asia Cup 2025 final: ಫೈನಲ್ ತನಕ ಭಾರತ ಗೆದ್ದು ಬಂದ ಹಾದಿಯ ಇಣುಕು ನೋಟ
"ಮೊದಲನೇ ದಿನದಿಂದಲೂ ನಾನು ಇದನ್ನು ಹೇಳುತ್ತಿದ್ದೇನೆ ಹಾಗೂ ಇವತ್ತಿನ ದಿನ ಅಲ್ಲವೇ ಅಲ್ಲ. ಅವರು ಯಾವಾಗಲೂ ಪ್ಲೇಯಿಂಗ್ XIನಲ್ಲಿ ಇರಬೇಕು. ಏಕೆಂದರೆ ಎರಡೂ ತುದಿಯಲ್ಲಿ ಯಾರ್ಕರ್ ಬೌಲ್ ಮಾಡಬೇಕಾದ ಸನ್ನಿವೇಶ ಎದುರಾಗಿದೆ. ನೀವು ಇವತ್ತಿನ ಪಂದ್ಯವನ್ನು ನೋಡಿದ್ದೀರಿ ಅಷ್ಟೇ, ಅವರು ಯಾವಾಗಲೂ ಆಡಬೇಕಾಗುತ್ತದೆ," ಎಂದು ಇರ್ಫಾನ್ ಪಠಾಣ್ ತಿಳಿಸಿದ್ದಾರೆ.
"ಆದರೆ, ದೀರ್ಘಾವಧಿಗೆ ಬ್ಯಾಟ್ಸ್‌ಮನ್ ಅಗತ್ಯವಿದೆ ಎಂದು ಟೀಮ್ ಮ್ಯಾನೇಜ್‌ಮೆಂಟ್ ಭಾವಿಸುತ್ತಿದೆ. ನಿಮಗೆ ಹೆಚ್ಚುವರಿ ಬ್ಯಾಟ್ಸ್‌ಮನ್ ಅಗತ್ಯವಿದ್ದರೆ, ಶಿವಂ ದುಬೆ ಆಲ್‌ರೌಂಡರ್ ಆಗಿ ಆಡುತ್ತಾರೆ. ಅವರು ಆಡಿದರೆ, ಅರ್ಷದೀಪ್ ಸಿಂಗ್‌ಗೆ ತಂಡದಲ್ಲಿ ಸ್ಥಾನ ಸಿಗುವುದಿಲ್ಲ. ಆದರೆ, ನನ್ನ ತಂಡದಲ್ಲಿ ಅರ್ಷದೀಪ್ ಸಿಂಗ್ ಯಾವಾಗಲೂ ಇದ್ದೇ ಇರುತ್ತಾರೆ. ಮೊದಲನೇ ದಿನದಿಂದಲೂ ನಾನು ಈ ವಿಷಯವನ್ನು ಹೇಳುತ್ತಾ ಬಂದಿದ್ದೇನೆ," ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.