ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup 2025 final: ಫೈನಲ್‌ ತನಕ ಭಾರತ ಗೆದ್ದು ಬಂದ ಹಾದಿಯ ಇಣುಕು ನೋಟ

ಈ ಬಾರಿಯ ಟೂರ್ನಿಯಲ್ಲಿ ಅಜೇಯವಾಗಿ ಫೈನಲ್‌ ಪ್ರವೇಶಿಸಿರುವ ಭಾರತ ತಂಡಕ್ಕೆ ಏಷ್ಯಾಕಪ್‌ನಲ್ಲಿ ಯುಎಇ ಅದೃಷ್ಟದ ತಾಣವೆನಿಸಿದೆ. ಯಾಕೆಂದರೆ ಈ ಹಿಂದೆ 4 ಬಾರಿ ಯುಎಇಯಲ್ಲಿ ನಡೆದ ಏಷ್ಯಾಕಪ್‌ಗಳಲ್ಲಿ 3ರಲ್ಲಿ(1984, 1995, 2018) ಭಾರತವೇ ಪ್ರಶಸ್ತಿ ಗೆದ್ದಿತ್ತು. ಈ ಲೆಕ್ಕಾಚಾರದಲ್ಲಿ ಈ ಬಾರಿಯೂ ಭಾರತಕ್ಕೆ ಪ್ರಶಸ್ತಿ ಒಲಿಯಲಿದೆ ಎಂಬುದು ಅಭಿಮಾನಿಗಳ ನಂಬಿಕೆ.

Asia Cup 2025: ಫೈನಲ್‌ ತನಕ ಭಾರತ ಗೆದ್ದು ಬಂದ ಹಾದಿ ಹೇಗಿದೆ?

-

Abhilash BC Abhilash BC Sep 27, 2025 12:59 PM

ದುಬೈ: ಸತತ 6 ಜಯದೊಂದಿಗೆ ಅಜೇಯವಾಗಿ ಫೈನಲ್​ಗೇರಿರುವ ಭಾರತ ತಂಡ ಮತ್ತು ಏಷ್ಯಾಕಪ್‌ ಟ್ರೋಫಿ(Asia Cup 2025 final) ಗೆಲುವಿನ ನಡುವೆ ಈಗ ಇರುವುದು ಪಾಕಿಸ್ತಾನ(IND vs PAK) ತಂಡ ಮಾತ್ರ! ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಭಾನುವಾರ(ಸೆ. 28) ನಡೆಯಲಿರುವ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಪಾಕ್‌ ಪಡೆಯನ್ನು ಮೂರನೇ ಬಾರಿಗೆ ಬೇಟೆಯಾಡುವ ಮೂಲಕ 9ನೇ ಬಾರಿಗೆ ಟ್ರೋಫಿಗೆ ಮುತ್ತಿಡಲು ಸೂರ್ಯಕುಮಾರ್‌ ಯಾದವ್‌ ಸಾರಥ್ಯದ ಯಂಗ್‌ ಇಂಡಿಯಾ ಸಜ್ಜಾಗಿದೆ. ಇದಕ್ಕೂ ಮುನ್ನ ಈ ಬಾರಿಯ ಟೂರ್ನಿಯಲ್ಲಿ ಭಾರತದ ಪ್ರದರ್ಶನ ಹೇಗಿತ್ತು ಎಂಬ ಇಣುಕು ನೋಟ ಇಲ್ಲಿದೆ.

ಯುಎಇ ವಿರುದ್ಧ ಭರ್ಜರಿ ಜಯ

ಭಾರತ ತಂಡ ಈ ಬಾರಿಯ ಏಷ್ಯಾಕಪ್‌ ಟೂರ್ನಿಯನ್ನು ಯುಎಇ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಿತ್ತು. ಅದರಂತೆ ಈ ಪಂದ್ಯದಲ್ಲಿ ಭಾರತ 9 ವಿಕೆಟ್‌ಗಳ ಅಂತರದ ಜಯ ಸಾಧಿಸಿತ್ತು. ಭಾರತ ಘಾತದ ಬೌಲಿಂಗ್‌ ದಾಳಿಗೆ ನಲುಗಿದ ಯುಎಇ ಕೇವಲ 57 ರನ್‌ಗೆ ಸರ್ವಪತನ ಕಂಡಿತ್ತು. ಭಾರತ ಈ ಮೊತ್ತವನ್ನು 4 ಓವರ್‌ಗಳಲ್ಲಿ ಚೇಸಿಂಗ್‌ ನಡೆಸಿತ್ತು.

ಪಾಕ್‌ ಎದುರು 7 ವಿಕೆಟ್‌ ಗೆಲುವು

ಭಾರತೀಯ ಅಭಿಮಾನಿಗಳ ಭಾರೀ ವಿರೋಧದ ಒತ್ತಡದ ಮಧ್ಯೆಯೂ ಪಾಕಿಸ್ತಾನ ವಿರುದ್ಧ ಕಣಕ್ಕಿಳಿದ್ದ ಭಾರತ ತಂಡ ಪಂದ್ಯವನ್ನು 7 ವಿಕೆಟ್‌ ಅಂತರದಿಂದ ಗೆದ್ದು ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 'ಎ' ಗುಂಪಿನಿಂದ ಬಹುತೇಕ ಸೂಪರ್‌-4ಗೆ ಎಂಟ್ರಿಕೊಟ್ಟಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಪಾಕ್‌, 9 ವಿಕೆಟ್‌ಗೆ 127 ರನ್‌ ಗಳಿಸಲಷ್ಟೇ ಶಕ್ತವಾಯಿತು. ಸಣ್ಣ ಮೊತ್ತವನ್ನು ಬೆನ್ನಟ್ಟಿದ ಭಾರತ 15.5 ಓವರ್‌ಗಳಲ್ಲಿ 3 ವಿಕೆಟ್‌ಗೆ 131 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತ್ತು.

ಓಮಾನ್‌ ವಿರುದ್ಧ ಪ್ರಯಾಸದ ಗೆಲುವು

ಭಾರತ ತನ್ನ ಲೀಗ್‌ ಹಂತದ ಕೊನೆಯ ಪಂದ್ಯವನ್ನು ಕ್ರಿಕೆಟ್‌ ಶಿಶು ಒಮಾನ್‌ ವಿರುದ್ಧ ಆಡಿತ್ತು. ಪಂದ್ಯಕ್ಕೂ ಮುನ್ನ ಅಭಿಮಾನಿಗಳು ಭಾರತ ಈ ಪಂದ್ಯವನ್ನು ಸುಲಭವಾಗಿ ಗೆಲ್ಲಬಹುದು ಎಂದು ನಿರೀಕ್ಷೆ ಮಾಡಿದ್ದರು. ಆದರೆ ಒಮಾನ್‌ ತಂಡದ ದಿಟ್ಟ ಪ್ರದರ್ಶನ ಭಾರತ ತಂಡವನ್ನು ಸೋಲಿನ ಅಂಚಿನ ತನಕ ಸಾಗುವಂತೆ ಮಾಡಿತ್ತು. ಕೊನೆಗೂ ಭಾರತ 21 ರನ್‌ ಅಂತರದ ಪ್ರಯಾಸದ ಗೆಲುವು ಸಾಧಿಸಿತ್ತು.

ಎರಡನೇ ಬಾರಿಗೂ ಪಾಕ್‌ಗೆ ಸೋಲು

ಗುಂಪು ಹಂತದ ಪಂದ್ಯದಲ್ಲಿ ಬದ್ಧವೈರಿ ಪಾಕ್‌ ತಂಡವನ್ನು ಹೊಸಕಿ ಹಾಕಿದ್ದ ಟೀಂ ಇಂಡಿಯಾ, ಸೂಪರ್-4ಪಂದ್ಯದಲ್ಲೂ ಎದುರಾಳಿಯನ್ನು ಚೆಂಡಾಡಿತ್ತು. ಸೂರ್ಯಕುಮಾರ್ ಪಡೆ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು. ಮೊದಲು ಬ್ಯಾಟಿಂಗ್‌ ನಡೆಸಿದ ಪಾಕ್‌ 20 ಓವರಲ್ಲಿ 5 ವಿಕೆಟ್‌ಗೆ ಪಾಕ್ 171 ರನ್ ಗಳಿಸಿತು. ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿ ಭಾರತ, ಅಭಿಷೇಕ್ ಶರ್ಮ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ 7 ಎಸೆತ ಬಾಕಿ ಇರುವಾಗಲೇ ತಂಡ ಗೆಲುವಿನ ದಡ ಸೇರಿತು.

ಬಾಂಗ್ಲಾ ಮಣಿಸಿ ಫೈನಲ್‌ ಎಂಟ್ರಿ

ಸೂಪರ್‌-4 ಹಂತದ ತನ್ನ 2ನೇ ಪಂದ್ಯದಲ್ಲಿ ಭಾರತ, ಬಾಂಗ್ಲಾದೇಶವನ್ನು 41 ರನ್‌ಗಳಿಂದ ಸೋಲಿಸಿ ನಿರಾಯಾಸವಾಗಿ ಪ್ರಶಸ್ತಿ ಸುತ್ತಿಗೇರಿತ್ತು. ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 19.3 ಓವರಲ್ಲಿ 127 ರನ್‌ಗೆ ಸರ್ವಪತನ ಕಂಡಿತ್ತು.

ಇದನ್ನೂ ಓದಿ Asia Cup 2025 final: ಅರಬ್‌ ರಾಷ್ಟ್ರ ಟೀಮ್‌ ಇಂಡಿಯಾಕ್ಕೆ ಅದೃಷ್ಟ!

ಲಂಕಾ ವಿರುದ್ದ 'ಸೂಪರ್‌' ಗೆಲುವು

ಅನೌಪಚಾರಿಕ ಎನಿಸಿದ್ದ ಶ್ರೀಲಂಕಾ ವಿರುದ್ಧದ ಏಷ್ಯಾಕಪ್‌ ಸೂಪರ್‌-4ನ ಅಂತಿಮ ಪಂದ್ಯದಲ್ಲಿ ಭಾರತ ಬೃಹತ್‌ ಮೊತ್ತ ಪೇರಿಸಿದರೂ ಕೊನೆಗೆ ಸೂಪರ್‌ ಓವರ್‌ನಲ್ಲಿ ಗೆಲುವು ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ಭಾರತ 5 ವಿಕೆಟ್‌ಗೆ 202 ರನ್‌ ಕಲೆಹಾಕಿತು. ಬೃಹತ್‌ ಮೊತ್ತ ಬೆನ್ನಟ್ಟಿದ ಲಂಕಾ ತಂಡಕ್ಕೆ ಕೊನೆ 2 ಓವರಲ್ಲಿ ಗೆಲ್ಲಲು 23 ರನ್‌ ಬೇಕಿತ್ತು. 19ನೇ ಓವರಲ್ಲಿ ಅರ್ಶ್‌ದೀಪ್‌ 11 ರನ್‌ ನೀಡಿದರು. ಕೊನೆ ಓವರಲ್ಲಿ 12 ರನ್‌ ಬೇಕಿದ್ದಾಗ ನಿಸ್ಸಾಂಕ ಮೊದಲ ಎಸೆತದಲ್ಲೇ ಔಟಾದರು. ಆದರೂ ಲಂಕಾ ಹಾಗೂ ಹೀಗೂ ಪಂದ್ಯವನ್ನು ಟೈ ಮಾಡಿಕೊಂಡಿತು. ಸೂಪರ್‌ ಓವರ್‌ನ ಮೊದಲ ಎಸೆತದಲ್ಲೇ ಲಂಕಾ ಪೆರೇರಾ ವಿಕೆಟ್‌ ಕಳೆದುಕೊಂಡಿತು. ಅರ್ಶ್‌ದೀಪ್‌ ಲಂಕಾವನ್ನು ಕೇವಲ 2 ರನ್‌ಗೆ ಕಟ್ಟಿಹಾಕಿದರು. ಗಿಲ್‌ ಜೊತೆ ಕಣಕ್ಕಿಳಿದ ಸೂರ್ಯಕುಮಾರ್‌ ಮೊದಲ ಎಸೆತದಲ್ಲೇ 3 ರನ್‌ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.